Goat Movie Collection: 13 ದಿನಗಳಲ್ಲಿ ದಳಪತಿ ವಿಜಯ್ ಅಭಿನಯದ ಗೋಟ್ ಸಿನಿಮಾ ಕಲೆಕ್ಷನ್ ಮಾಡಿದ್ದೆಷ್ಟು?
ಸೆಪ್ಟೆಂಬರ್ 5 ರಂದು ತೆರೆ ಕಂಡಿದ್ದ ದಳಪತಿ ವಿಜಯ್ ಅಭಿನಯದ ಗೋಟ್ ಸಿನಿಮಾ 13 ದಿನಗಳಲ್ಲಿ 413 ಕೋಟಿ ರೂ ಸಂಗ್ರಹಿಸಿದೆ. ಈ ವಿಚಾರವನ್ನು ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಅರ್ಚನಾ ಕಲ್ಪಾತಿ, ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ.
ವೆಂಕಟ್ ಪ್ರಭು ನಿರ್ದೇಶನದಲ್ಲಿ ದಳಪತಿ ವಿಜಯ್ ಅಭಿನಯದ ಗೋಟ್ ಸಿನಿಮಾ ಸೆಪ್ಟೆಂಬರ್ 5 ರಂದು ತೆರೆ ಕಂಡಿತ್ತು. ಸಿನಿಮಾ, ಮೊದಲ ದಿನ ಬಹಳ ನಿರೀಕ್ಷೆ ಮೂಡಿಸಿತ್ತು. ಆದರೆ ಕ್ರಮೇಣ ಬಾಕ್ಸ್ ಆಫೀಸಿನಲ್ಲಿ ಕಲೆಕ್ಷನ್ ಡಲ್ ಆಗಿದೆ. ಇದುವರೆಗೂ ಸಿನಿಮಾ ವಿಶ್ವಾದ್ಯಂತ ಒಟ್ಟು 413 ಕೋಟಿ ರೂ. ಸಂಗ್ರಹಿಸಿರುವುದಾಗಿ ಮಾಹಿತಿ ದೊರೆತಿದೆ.
13 ದಿನಗಳ ಕಲೆಕ್ಷನ್ ಮಾಹಿತಿ ಹಂಚಿಕೊಂಡ ನಿರ್ಮಾಪಕ
ನಿರ್ಮಾಪಕಿ ಅರ್ಚನಾ ಕಲ್ಪಾತಿ, ತಮ್ಮ ಎಕ್ಸ್‌ನಲ್ಲಿ ಈ ವಿಚಾರದ ಬಗ್ಗೆ ಬರೆದುಕೊಂಡಿದ್ದಾರೆ. ಗೋಟ್ ಸಿನಿಮಾ ಕೇವಲ 13 ದಿನಗಳಲ್ಲಿ ಸಿನಿಮಾ 413 ಕೋಟಿ ರೂ. ಸಂಗ್ರಹಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಲೋಕೇಶ್ ಕನಕರಾಜ್ ನಿರ್ದೇಶನದ ವಿಜಯ್ ಅವರ ಹಿಂದಿನ ಚಿತ್ರ ಲಿಯೋ ಮೊದಲ ವಾರದಲ್ಲಿ ವಿಶ್ವಾದ್ಯಂತ ₹ 461 ಕೋಟಿ ಗಳಿಸಿತ್ತು. ಸಿನಿಮಾ 400 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, 13 ದಿನಗಳಿಗೆ, ಹಾಕಿದ ಬಂಡವಾಳವನ್ನು ಹಿಂಪಡೆದಿದೆ. ಸಿನಿಮಾ 800 ಕೋಟಿ ರೂ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡು ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಸಿನಿಮಾಗೆ ಹೇಳಿಕೊಳ್ಳುವಂತ ಪ್ರತಿಕ್ರಿಯೆ ದೊರೆತಿಲ್ಲ. ಇದೇ ಕಾರಣಕ್ಕೆ ಕಲೆಕ್ಷನ್‌ನಲ್ಲಿ ಸಿನಿಮಾ ಬಹಳ ಹಿಂದುಳಿದಿದೆ.
ತಂದೆ-ಮಗ ದ್ವಿಪಾತ್ರದಲ್ಲಿ ನಟಿಸಿರುವ ವಿಜಯ್
ಗೋಟ್ ಚಿತ್ರದಲ್ಲಿ ವಿಜಯ್, ತಂದೆ ಮತ್ತು ಮಗನಾಗಿ ದ್ವಿಪಾತ್ರಗಳಲ್ಲಿ ನೋಡುತ್ತದೆ. ಚಿತ್ರವು ಮೂಲ ಭಾಷೆ ತಮಿಳಿನ ಹೊರತಾಗಿ ತೆಲುಗು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಶಾಂತ್, ಪ್ರಭುದೇವ, ಮೋಹನ್, ಅಜ್ಮಲ್ ಅಮೀರ್, ಜಯರಾಮ್, ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ , ವೈಭವ್, ಯೋಗಿ ಬಾಬು, ಯುಗೇಂದ್ರನ್ ಮತ್ತು ವಿಟಿವಿ ಗಣೇಶ್ ನಟಿಸಿದ್ದಾರೆ. ಒಂದು ಹಾಡಿಗೆ ತ್ರಿಷಾ ಕೃಷ್ಣನ್ ಹೆಜ್ಜೆ ಹಾಕಿದ್ದಾರೆ. ಯುವನ್ ಶಂಕರ್ ರಾಜಾ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವೆಂಕಟ್ ಪ್ರಭು ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಎಜಿಎಸ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿ ಕಲ್ಪತಿ ಅಗೋರಂ, ಕಲ್ಪತಿ ಗಣೇಶ್ ಹಾಗೂ ಕಲ್ಪತಿ ಸುರೇಶ್ ಜೊತೆ ಸೇರಿ ಸಿನಿಮಾ ನಿರ್ಮಿಸಿದ್ದಾರೆ.
ವಿಜಯ್ ಕೊನೆಯ ಸಿನಿಮಾ ಯಾವುದು?
ವಿಜಯ್ ರಾಜಕೀಯಕ್ಕೆ ಪ್ರವೇಶಿಸಿದ್ದು ಅದರಲ್ಲೇ ಫುಲ್ ಟೈಮ್ ಬ್ಯುಸಿಯಾಗಲು ಪ್ಲ್ಯಾನ್ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮದೇ ಆದ ತಮಿಳಗ ವೆಟ್ರಿ ಕಳಗಂ ಹೆಸರಿನ ಪಕ್ಷವನ್ನು ಸ್ಥಾಪಿಸಿ ಪಕ್ಷದ ಚಿಹ್ನೆಯನ್ನು ಬಿಡುಗಡೆಗೊಳಿಸಿದ್ದರು. ಗೋಟ್ ಸಿನಿಮಾವೇ ಅವರ ಕೊನೆಯ ಸಿನಿಮಾ ಇರಬಹುದು ಎನ್ನಲಾಗಿತ್ತು. ಆದರೆ ವಿಜಯ್ , ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಅವರ 69 ನೇ ಚಿತ್ರವನ್ನು ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಲಿದೆ ಮತ್ತು ಎಚ್ ವಿನೋತ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಅನಿರುದ್ಥ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.