Vijayakanth Movies: ಇಂದು ನಿಧನರಾದ ನಟ ರಾಜಕಾರಣಿ ವಿಜಯಕಾಂತ್ ನಟಿಸಿರುವ 5 ಜನಪ್ರಿಯ ಚಲನಚಿತ್ರಗಳಿವು
Vijayakanth top 5 films: ತಮಿಳು ಚಿತ್ರರಂಗದ ಜನಪ್ರಿಯ ನಟರಾಗಿದ್ದ, ಡಿಎಂಡಿಕೆ ಪಕ್ಷದ ಸ್ಥಾಪಕ ವಿಜಯಕಾಂತ್ ಇಂದು (ಡಿ. 28) ತನ್ನ 71ನೇ ವಯಸ್ಸಿನಲ್ಲಿ ನಿಧನರಾದರು. ಈ ಸಂದರ್ಭದಲ್ಲಿ ವಿಜಯಕಾಂತ್ ನಟಿಸಿರುವ 5 ಪ್ರಮುಖ ಚಲನಚಿತ್ರಗಳನ್ನು ನೆನಪಿಸಿಕೊಳ್ಳೋಣ.
ವಿಜಯಕಾಂತ್ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ಚಲನಚಿತ್ರ ನಟರಾಗಿ ಜನಪ್ರಿಯರಾಗಿದ್ದರು. ಸಿನಿಮಾರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ಸಂದರ್ಭದಲ್ಲಿಯೇ ರಾಜಕಾರಣದ ಕುರಿತು ಆಸಕ್ತಿ ಹೊಂದಿ ಡಿಎಂಕೆ ಪಕ್ಷ ಸ್ಥಾಪಿಸಿದ್ದರು. ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ನ್ಯುಮೋನಿಯಾಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ್ದ ವಿಜಯಕಾಂತ್ ಇಂದು ನಿಧನರಾಗಿದ್ದಾರೆ. ತಮಿಳುನಾಡಿನ ರಾಜಕಾರಣದಲ್ಲಿ ಸಕ್ರೀಯ ರಾಜಕಾರಣಿಯಾಗಿದ್ದ ಇವರು ದೇಶಿಯ ಮುರ್ಪೊಕ್ಕು ಡ್ರಾವಿಡ ಕಳಗಂ (ಡಿಎಂಡಿಕೆ)ನ ಅಧ್ಯಕ್ಷರಾಗಿದ್ದರು. ರಾಜಕಾರಣಕ್ಕೆ ಪ್ರವೇಶಿಸುವ ಮುನ್ನ ತಮಿಳು ಸಿನಿಮಾರಂಗದಲ್ಲಿ ಜನಪ್ರಿಯ ನಟರಾಗಿದ್ದರು.
ವಿಜಯಕಾಂತ್ ಅವರು 1979ರಲ್ಲಿ ಇನಿಕ್ಕುಂ ಇಲಾಮೈ ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದ್ದರು. ಬಳಿಕ ಇವರು ನೂರಾರು ಸಿನಿಮಾಗಳಲ್ಲಿ ನಟಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು. ಇವರು ನಟಿಸಿರುವ ನೂರಾರು ಚಿತ್ರಗಳಲ್ಲಿ ಪ್ರಮುಖವೆನಿಸಿದ ಐದು ಚಿತ್ರಗಳ ವಿವರ ಇಲ್ಲಿದೆ.
ರಾಮಣ್ಣ
ಇದು ಎಆರ್ ಮುರುಗದಾಸ್ ನಿರ್ದೇಶನದ ಸಾಹಸ ಪ್ರಧಾನ ಚಿತ್ರ. ಈ ಚಿತ್ರದಲ್ಲಿ ವಿಜಯಕಾಂತ್ ಮತ್ತು ಅಶೀಮಾ ಭಾಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ 2015ರಲ್ಲಿ ಹಿಂದಿ ಭಾಷೆಗೆ ಮರ್ ಮಿತೆಂಗೆ 3 ಹೆಸರಿನಲ್ಲಿ ಡಬ್ ಆಗಿತ್ತು.
ಓಮೈ ವಿಝಾಗಲ್
ಈ ಸಿನಿಮಾದಲ್ಲಿ ವಿಜಯಕಾಂತ್ ಅವರು ಡಿಎಸ್‌ಪಿ ದೀನದಯಾಳನ್ ಆಗಿ ನಟಿಸಿದ್ದರು. ಈ ಸಿನಿಮಾದಲ್ಲಿ ವಿಜಯಕಾಂತ್ ಮಾತ್ರವಲ್ಲದೆ ಅರುಣ್ ಪಾಂಡ್ಯನ್, ಚಂದ್ರಶೇಖರ್, ಜೈಶಂಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 1986ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಆರ್ ಅರವಿಂದ ರಾಜ್ ನಿರ್ದೇಶನ ಮಾಡಿದ್ದರು.
ಅಮ್ಮಾನ್ ಕೋಯಿಲ್ ಕಿಝಕ್ಕಲೈ
ಇದು ಆರ್ ಸುಂದರ್‌ರಾಜನ್ ನಿರ್ದೇಶನದ ಸಿನಿಮಾ. ಇದರಲ್ಲಿ ವಿಜಯಕಾಂತ್ ಮತ್ತು ರಾಧಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರದ ನಟನೆಗಾಗಿ ವಿಜಯಕಾಂತ್ ಅವರಿಗೆ ಫಿಲ್ಮ್‌ಫೇರ್ ಬೆಸ್ಟ್ ಆಕ್ಟರ್- ತಮಿಳು ಪ್ರಶಸ್ತಿ ದೊರಕಿತ್ತು.
ವಾನಾಥೈಪ್ಪೊಲಾ
ಈ ಸಿನಿಮಾದಲ್ಲಿ ವಿಜಯಕಾಂತ್ ಅವರು ಡಬಲ್ ಆಕ್ಟಿಂಗ್ ಮಾಡಿದ್ದರು. ಇದು ಕೂಡ ವಾಣಿಜ್ಯಿಕವಾಗಿ ಯಶಸ್ಸು ತಂದುಕೊಟ್ಟ ಚಲನಚಿತ್ರ. ಈ ಸಿನಿಮಾಕ್ಕೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿತ್ತು.
ಕ್ಯಾಪ್ಟನ್ ಪ್ರಭಾಕರನ್
ವಿಜಯಕಾಂತ್ ಈ ಚಿತ್ರದಲ್ಲಿ ಐಎಫ್‌ಎಸ್ ಅಧಿಕಾರಿಯಾಗಿ ಮಿಂಚಿದ್ದರು. ಅಂದರೆ, ಭಾರತೀಯ ಅರಣ್ಯ ಸೇವಾ ಅಧಿಕಾರಿಯಾಗಿ ನಟಿಸಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ಇದು ವಿಜಯಕಾಂತ್ ಅವರ ನೂರನೇ ಸಿನಿಮಾವಾಗಿತ್ತು.
ಹೀಗೆ ನೂರಾರು ಚಲನಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದ ವಿಜಯಕಾಂತ್ ಬಳಿಕ ಡಿಎಂಡಿಕೆ ಪಕ್ಷವನ್ನು ಸ್ಥಾಪಿಸಿ ರಾಜಕಾರಣದಲ್ಲೂ ಹೆಸರು ಮಾಡಿದ್ದರು.