15ನೇ ವಯಸ್ಸಿಗೆ ಗರ್ಭಿಣಿಯಾಗಿದ್ದ ಮೀನಾ! ‘ಪುಟ್ನಂಜ’ ನಟಿಯ ಬಗ್ಗೆ ವೇದಿಕೆ ಮೇಲೆಯೇ ಹಿರಿಯ ಕಲಾವಿದನ ಮಾತು
ಸಿನಿ ದುನಿಯಾ ತಮ್ಮದೇ ಆದ ನೇಮು ಫೇಮು ಗಿಟ್ಟಿಸಿಕೊಂಡವರು ನಟಿ ಮೀನಾ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಇದೀಗ 40 ವರ್ಷಕ್ಕೆ ಕಾಲಿರಿಸಿದ್ದಾರೆ. ಈ ನಿಮಿತ್ತ ವಿಶೇಷ ಅಭಿನಂದನಾ ಸಮಾರಂಭವೂ ನಡೆದಿದೆ. ಇದೇ ವೇಳೆ ಮೀನಾ ಕುರಿತು ಅಚ್ಚರಿಯ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ ಹಿರಿಯ ನಟ ರವಿಕಿರಣ್.
Actress Meena: ಬಹುಭಾಷಾ ನಟಿ ಮೀನಾ ಬಾಲನಟಿಯಾಗಿ ಭಾರತೀಯ ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡವರು. ಸೂಪರ್‌ಸ್ಟಾರ್ ನಟರ ಜತೆಗೆ ತೆರೆಹಂಚಿಕೊಂಡು ಸ್ಟಾರ್ ನಾಯಕಿ ಎಂಬ ಪಟ್ಟವನ್ನೂ ಗಿಟ್ಟಿಸಿಕೊಂಡಿದ್ದರು ಈ ಸುಂದರಿ. ಕೇವಲ 4ನೇ ವಯಸ್ಸಿನಿಂದ ಶುರುವಾದ ನಟನಾವೃತ್ತಿ ಇದೀಗ 40 ವರ್ಷ ಪೂರೈಸಿ, ಮುಂದಡಿ ಇರಿಸಿದೆ. ಅಂದರೆ, ಬಣ್ಣದ ಲೋಕದಲ್ಲಿ ಬರೋಬ್ಬರಿ 40 ವಸಂತಗಳನ್ನು ಕಳೆದಿದ್ದಾರೆ ಈ ನಟಿ.
ಸ್ಯಾಂಡಲ್‌ವುಡ್‌ನಲ್ಲಿ ಹತ್ತಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮೀನಾ, ಕನ್ನಡಿಗರಿಗೂ ಚಿರಪರಿಚಿತ. ಪುಟ್ನಂಜ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ಈ ನಟಿ, ಅದಾದ ಬಳಿಕ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು. ನಟನೆ ಮತ್ತು ಕೆಲಸದ ವಿಚಾರದಲ್ಲಿ ಅಪಾರ ಬದ್ಧತೆ ಹೊಂದಿರುವ ಮೀನಾ, ಬಾಲನಟಿಯಾದಾಗಿನಿಂದ ಈವರೆಗೂ ಅದೇ ಗುಣವನ್ನು ಕಾಯ್ದುಕೊಂಡು ಬಂದಿದ್ದಾರೆ. ಹೀಗಿರುವ ಈ ನಟಿಯ ಬಗ್ಗೆ ಹರಿದಾಡಿದ ವದಂತಿಗಳೂ ಒಂದೆರಡಲ್ಲ!
ಗಾಸಿಪ್ ಮೂಲಕವೇ ಸದ್ದು
ಪತಿ ನಿಧನದ ಬಳಿಕ ಇದೇ ನಟಿಯ ಬಗ್ಗೆ ಬಗೆಬಗೆ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ಮೀನಾ ಎರಡನೇ ಮದುವೆ ಆಗಲಿದ್ದಾರೆ, ಧನುಷ್ ಜತೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಪುಕಾರು ಹಬ್ಬಿತ್ತು. ಅದೆಲ್ಲದಕ್ಕೂ ತಲೆ ಕೆಡಿಸಿಕೊಳ್ಳದ ಮೀನಾ, ತಾವಾಯ್ತು, ತಮ್ಮ ಮಗಳ ಭವಿಷ್ಯವಾಯ್ತು ಎಂದಷ್ಟೇ ಮುಂದುವರಿದಿದ್ದರು. ಈ ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹೇಳಿಕೊಂಡು, ಗಾಸಿಪ್‌ಗಳಿಗೆ ತೆರೆ ಎಳೆದಿದ್ದರು. ಈಗ ಇದೇ ನಟಿಯ ಬಗ್ಗೆ ತಮಿಳಿನ ಖ್ಯಾತ ನಟ ರಾಜ್‌ಕಿರಣ್ ಒಂದಷ್ಟು ವಿಚಾರ ಹೇಳಿಕೊಂಡಿದ್ದಾರೆ.
ಮೀನಾ ಬಗ್ಗೆ ಹೇಳಿಕೊಳ್ಳಲೆಂದೇ ಮೀನಾ@40 ವಿಶೇಷ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಶೇಷ ಸಮಾರಂಭದಲ್ಲಿ ಸಿನಿಮಾ ಏಳುಬೀಳಿನ ಬಗ್ಗೆ ಸಾಕಷ್ಟು ಗಣ್ಯರು ಮಾತನಾಡಿದ್ದರು. ಆ ಪೈಕಿ ಹಿರಿಯ ನಟ ರವಿ ಕಿರಣ್, ಮೀನಾ ಅವರ ಆರಂಭದ ದಿನಗಳ ಬಗ್ಗೆ, ಕೆಲಸದ ಮೇಲಿನ ಅವರ ಅಪಾರ ನಿಷ್ಠೆಯ ಬಗ್ಗೆಯೂ ಹೇಳಿಕೊಂಡಿದ್ದಾರೆ.
15 ವಯಸ್ಸಿಗೆ ಗರ್ಭಿಣಿ ಪಾತ್ರಕ್ಕೆ ಸೈ ಎಂದ ಮೀನಾ
1991ರಲ್ಲಿ ಕಾಲಿವುಡ್‌ನಲ್ಲಿ ಕಸ್ತೂರಿ ರಾಜ ನಿರ್ದೇಶನದಲ್ಲಿ ಎನ್ ರಾಸವಿನ್ ಮನಸಿಲೇ ಸಿನಿಮಾಕ್ಕೆ ನಾಯಕಿಯ ಹುಡುಕಾಟ ನಡೆದಿತ್ತು. ಅದಾಗಲೇ ಮುದ್ದು ಮುಖದ ಮೂಲಕವೇ ಎಲ್ಲರ ಗಮನ ಸೆಳೆದಿದ್ದರು ಮೀನಾ. ಜತೆಗೆ ಮ್ಯಾಗಜೀನ್‌ವೊಂದರ ಮುಖಪುಟದಲ್ಲೂ ಅವರ ಫೋಟೋ ಬಂದಿತ್ತು. ಆ ಫೋಟೋ ನೋಡಿಯೇ ಮೀನಾ ಅವರನ್ನು ಸೆಲೆಕ್ಟ್ ಮಾಡಲಾಗಿತ್ತು. ಆದರೆ ಆ ಸಿನಿಮಾದಲ್ಲಿ ಮೀನಾ ಗರ್ಭಿಣಿ ಪಾತ್ರ ಮಾಡಬೇಕಿತ್ತು. ಇದು ಆಕೆಯಿಂದ ಸಾಧ್ಯವಾ? ಎಂದು ನಿರ್ದೇಶಕರಿಗೆ ನಾನು ಪ್ರಶ್ನಿಸಿದ್ದೆ. ಆದರೆ, ಆಕೆಯೇ ಈ ಪಾತ್ರಕ್ಕೆ ಸೂಕ್ತ. ಅವಳು ಗರ್ಭಿಣಿ ಪಾತ್ರ ಮಾಡ್ತಾಳೆ ಎಂದಿದ್ದರು ನಿರ್ದೇಶಕರು.
ನಿರ್ದೇಶಕರು ಮೀನಾಳ ಮೇಲಿಟ್ಟಿದ್ದ ಭರವಸೆ ಹುಸಿಯಾಗಲಿಲ್ಲ. ಅಂದುಕೊಂಡಂತೆ ಚಿಕ್ಕವಯಸ್ಸಿನಲ್ಲಿಯೇ ಗರ್ಭಿಣಿ ಪಾತ್ರವನ್ನು ನಿಭಾಯಿಸಿ ಎಲ್ಲರ ಗಮನ ಸೆಳೆದಿದ್ದರು ಮೀನಾ. ಸಿನಿಮಾ ಕೂಡ ಸೂಪರ್ ಹಿಟ್ ಪಟ್ಟಕ್ಕೇರಿತ್ತು. ಈ ಮೂಲಕ ಮೀನಾ 15 ವರ್ಷ ವಯಸ್ಸಿನಲ್ಲಿದ್ದಾಗಿನ ಪಾತ್ರ ನಿಭಾಯಿಸಿದ ರೀತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ರವಿಕಿರಣ್.
ಇಂದಿನಂತೆ ಆಗಿನ ಕಾಲದಲ್ಲಿ ಕ್ಯಾರವಾನ್‌ಗಳಿರಲಿಲ್ಲ. ಒಂದೇ ದಿನದಲ್ಲಿ ಹಾಡನ್ನು ಶೂಟ್ ಮಾಡಬೇಕಾದರೆ ಐದಾರು ಲೊಕೇಶನ್ ಜೊತೆಗೆ ಬಟ್ಟೆ ಬದಲಿಸಬೇಕಾದ ಪರಿಸ್ಥಿತಿ ಇತ್ತು. ಕಾರನ್ನು ನಿಲ್ಲಿಸಿ, ಅದರ ಹಿಂದೆ ಮರೆಮಾಡಿ ಬಟ್ಟೆಗಳನ್ನು ಬದಲಾಯಿಸಲಾಗುತ್ತಿತ್ತು. ಮೀನಾ ಅವರಿಗೆ ವೃತ್ತಿಯ ಮೇಲಿನ ಈ ಶ್ರದ್ಧೆ, ಸಮರ್ಪಣೆಗೆ ಅವರ ತಾಯಿಯ ಬೆಂಬಲವೂ ಶಕ್ತಿಯಾಗಿತ್ತು ಎನ್ನುತ್ತಾರೆ ರವಿಕಿರಣ್.