Crime Comedy OTT: ಒಟಿಟಿಯಲ್ಲಿ ಕ್ರೈಮ್ ಕಾಮಿಡಿ ಸೀಕ್ವೆಲ್ ಸಿನಿಮಾ ಬಿಡುಗಡೆ, ಎರಡು ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್
Crime Comedy OTT: ತಮಿಳಿನ ಹೊಸ ಸೀಕ್ವೆಲ್ ಸಿನಿಮಾ ಸೂಧು ಕವ್ವಂ 2 (Soodhu Kavvum 2) ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಅಪರಾಧ ಹಾಸ್ಯ ಥ್ರಿಲ್ಲರ್ ಚಿತ್ರವು ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಆಹಾ ತಮಿಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸೂಧು ಕವ್ವಂ 2 ಚಿತ್ರದಲ್ಲಿ ಮಿರ್ಚಿ ಶಿವ ನಾಯಕನಾಗಿ ನಟಿಸಿದ್ದಾರೆ.

Crime Comedy OTT: ವಿಜಯ್ ಸೇತುಪತಿ ನಟಿಸಿದ ತಮಿಳು ಸೂಧು ಕವ್ವಂ ಕ್ರೈಮ್ ಕಾಮಿಡಿ ಸಿನಿಮಾವು ಸೂಪರ್‌ಹಿಟ್ ಆಗಿತ್ತು. ಈ ಬ್ಲಾಕ್‌ಬಸ್ಟರ್ ಚಿತ್ರದ ಮುಂದುವರಿದ ಭಾಗ ಸೂಧು ಕವ್ವಂ 2. ಈ ಸೀಕ್ವೆಲ್ ಚಿತ್ರದಲ್ಲಿ ಮಿರ್ಚಿ ಶಿವ ನಾಯಕನಾಗಿ ನಟಿಸಿದ್ದರು. ಕರುಣಾಕರನ್, ಹರೀಶ ಮತ್ತು ರಾಧಾ ರವಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಸ್ ಜೆ ಅರ್ಜುನ್ ನಿರ್ದೇಶನವಿದೆ.
ಹೇಗಿದೆ ಸೂಧು ಕವ್ವಂ 2?
ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ವೇಳೆ ಈ ಸಿನಿಮಾದ ಕುರಿತು ಮಿಶ್ರ ವಿಮರ್ಶೆಗಳು ಬಂದಿದ್ದವು. ಈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದು ಒಂದೇ ದಿನ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಯಿತು. ಅಮೆಜಾನ್ ಪ್ರೈಮ್ ಹಾಗೂ ಆಹಾ ತಮಿಳು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಹಾಸ್ಯ ಮತ್ತು ತಿರುವುಗಳು
ನಿರ್ದೇಶಕ ಎಸ್.ಜೆ. ಅರ್ಜುನ್ ಈ ಚಿತ್ರವನ್ನು ರಾಜಕೀಯ ಕಥೆಗೆ ಹಾಸ್ಯದ ಅಂಶಗಳನ್ನು ಸೇರಿಸಿ ನಿರ್ಮಿಸಿದ್ದಾರೆ. ಸೂಧು ಕವ್ವಂ ಚಿತ್ರಕ್ಕೆ ಎಡ್ವಿನ್ ಲೂಯಿಸ್ ವಿಶ್ವನಾಥ್ ಮತ್ತು ಹರಿ ಎಸ್ಆರ್ ಸಂಗೀತ ನೀಡಿದ್ದಾರೆ. ಈ ಚಿತ್ರದ ಮುಂದುವರಿದ ಭಾಗವು ಮೊದಲ ಭಾಗದಂತೆ ಯಶಸ್ಸನ್ನು ಗಳಿಸುವಲ್ಲಿ ವಿಫಲವಾಯಿತು. ಹಾಸ್ಯದ ಜೊತೆಗೆ ಉತ್ತಮ ತಿರುವುಗಳು ಇರದೆ ಇರುವುದು ಮೈನಸ್ ಆಗಿ ಪರಿಣಮಿಸಿದೆ. ಡಿಸೆಂಬರ್ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ನಿಖರವಾಗಿ ಒಂದು ತಿಂಗಳ ನಂತರ ಒಟಿಟಿಗೆ ಆಗಮಿಸಿದೆ.
ಸೂಧು ಕವ್ವಂ 2 ಚಿತ್ರದಲ್ಲಿ ಅಶೋಕ್ ಸೆಲ್ವನ್, ರಮೇಶ್ ತಿಲಕ್, ಬಾಬಿ ಸಿಂಹ ಮತ್ತು ವಿಜಯ್ ಸೇತುಪತಿ ಅವರೊಂದಿಗೆ ಮೊದಲ ಭಾಗದಲ್ಲಿ ನಟಿಸಿದ್ದ ಸಂಚಿತಾ ಶೆಟ್ಟಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಹಣಕಾಸು ಸಚಿವರ ಅಪಹರಣ
ಈ ಚಿತ್ರದ ಕಥೆಯನ್ನು ಕೆಲವು ವಾಕ್ಯಗಳಲ್ಲಿ ಹೀಗೆ ತಿಳಿಸಬಹುದು. ರಾಜ್ಯ ಹಣಕಾಸು ಸಚಿವರು (ಕರುಣಾಕರನ್) ಅಕ್ರಮ ವಿಧಾನಗಳ ಮೂಲಕ ವಿಧಾನಸಭಾ ಚುನಾವಣೆಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಯೋಜಿಸುತ್ತಿದ್ದಾರೆ. ಆದರೆ ಅವನ ಇಡೀ ಯೋಜನೆಯನ್ನು ಗುರುನಾಥ್ ಅಲಿಯಾಸ್ ಗುರು (ಮಿರ್ಚಿ ಶಿವ) ಉಲ್ಟಾ ಮಾಡುತ್ತಾನೆ. ಗುರು ಗ್ಯಾಂಗ್ ಹಣಕಾಸು ಸಚಿವರನ್ನು ಅಪಹರಿಸಲು ಕಾರಣವೇನು? ಹಣಕಾಸು ಸಚಿವರ ಕೋಪಕ್ಕೆ ಕಾರಣವೇನು? ಇತ್ಯಾದಿಗಳನ್ನು ತಿಳಿಯಲು ಸಿನಿಮಾ ನೋಡಬಹುದು.
ರೇಡಿಯೋ ಜಾಕಿಯಾಗಿ
ರೇಡಿಯೋ ಜಾಕಿಯಾಗಿ ವೃತ್ತಿಜೀವನ ಆರಂಭಿಸಿದ ಮಿರ್ಚಿ ಶಿವ, ನಂತರ ನಾಯಕ ನಟನಾಗಿ ತಮಿಳುಚಿತ್ರರಂಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರು ಚೆನ್ನೈ 600028, ತಮಿಜ್ ಪದಂ, ಮತ್ತು ಕಲಕಲಪ್ಪು ಸೇರಿದಂತೆ ಹಲವು ಹಾಸ್ಯ ಚಿತ್ರಗಳ ಮೂಲಕ ಯಶಸ್ಸು ಪಡೆದರು. ನಾಯಕ ಪಾತ್ರದ ಜತೆಗೆ ಬರಹಗಾರ, ಗೀತರಚನೆಕಾರ ಮತ್ತು ಗಾಯಕನಾಗಿಯೂ ಜನಪ್ರಿಯತೆ ಪಡೆದಿದ್ದಾರೆ.
