ಕಂಗುವ ಸಿನಿಮಾಕ್ಕೆ ಕಟು ವಿಮರ್ಶೆ; ಸೂರ್ಯನ ಪತ್ನಿ ಎಂಬುದನ್ನು ಬದಿಗಿಟ್ಟು ಓರ್ವ ಪ್ರೇಕ್ಷಕಿಯಾಗಿ ಮಾತನಾಡಿದ ಜ್ಯೋತಿಕಾ
Kanguva Movie: ತಮಿಳಿನ ಕಂಗುವ ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆ ಕೇಳಿ ಬರುತ್ತಿದ್ದಂತೆ, ಸೂರ್ಯ ಅವರ ಪತ್ನಿ ಜ್ಯೋತಿಕಾ, ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
Kanguva Movie: ಸೂರ್ಯ ಅಭಿನಯದ ಕಂಗುವ ಸಿನಿಮಾ ಸದ್ಯ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿದೆ. ಕೆಲವರಿಗೆ ಸಿನಿಮಾ ಹಿಡಿಸಿದರೆ, ಇನ್ನು ಕೆಲವರಿಗೆ ಬೋರ್ ಹೊಡೆಸಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ವ್ಯಾಪಕ ಟೀಕೆಗಳೂ ಕೇಳಿ ಬರುತ್ತಿವೆ. ಈಗ ಇದೇ ಸಿನಿಮಾದ ಬಗ್ಗೆ ಸೂರ್ಯ ಅವರ ಪತ್ನಿ ಜ್ಯೋತಿಕಾ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹ ಹಂಚಿಕೊಂಡು, ಚಿತ್ರದ ಬಗ್ಗೆ ನೆಗೆಟಿವಿಟಿ ಹರಡುತ್ತಿರುವವರಿಗೆ ಕಿವಿ ಹಿಂಡಿದ್ದಾರೆ. ಹೀಗಿದೆ ಜ್ಯೋತಿಕಾ ಮಾತು.
ಜ್ಯೋತಿಕಾ ಹೇಳಿದ್ದೇನು?
“ನಾನು ಈ ಟಿಪ್ಪಣಿಯನ್ನು ಜ್ಯೋತಿಕಾ ಮತ್ತು ಸಿನಿಮಾ ಪ್ರೇಮಿಯಾಗಿ ಬರೆದಿದ್ದೇನೆ ಹೊರತು ನಟ ಸೂರ್ಯ ಅವರ ಪತ್ನಿಯಾಗಿ ಅಲ್ಲ. ಸೂರ್ಯ, ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ಚಿತ್ರದ ಮೊದಲ ಅರ್ಧ ಗಂಟೆ ವರ್ಕೌಟ್ ಆಗಿರಲಿಲ್ಲ ನಿಜ. ಚಿತ್ರಕ್ಕೆ ಕೆಲವು ಲೋಪದೋಷಗಳಿರುವುದು ಸಹಜ ಮತ್ತು ಕಂಗುವಾದಂತಹ ವಿಶಿಷ್ಟವಾದ ಕೃತಿಯು ಕೆಲವು ದೋಷಗಳನ್ನು ಹೊಂದಿರುವುದು ಸಹಜ. ಕಂಗುವ ವಾಸ್ತವವಾಗಿ ಒಂದು ದೊಡ್ಡ ಕೃತಿ. ಅದಕ್ಕೆ ಇಷ್ಟು ಕಟು ಟೀಕೆಗಳು ಬರುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ” ಎಂದಿದ್ದಾರೆ.
“ಕಂಗುವಾ ಚಿತ್ರದಲ್ಲಿನ ಲೋಪದೋಷಗಳನ್ನು ಟೀಕಿಸುವವರು ಚಿತ್ರದ ಪಾಸಿಟಿವ್ ಅಂಶಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಕೆಲವು ಬಿಗ್ ಬಜೆಟ್ ಚಿತ್ರಗಳು ಹಳೆಯ ಕಥೆಯನ್ನೇ ಇಟ್ಟುಕೊಂಡು ಡಬಲ್ ಮೀನಿಂಗ್ ಡೈಲಾಗ್ ಗಳನ್ನು ಹೇಳಿ ನಾಯಕಿಯನ್ನು ಫಾಲೋ ಮಾಡುವ ದೃಶ್ಯಗಳನ್ನು ಚಿತ್ರೀಕರಿಸುತ್ತಾರೆ. ಆದರೆ ಅಂತಹ ಕಟು ಟೀಕೆಗಳು ಕಂಗುವ ಸಿನಿಮಾಕ್ಕೆ ಬಂದಿಲ್ಲ” ಎಂದು ಜ್ಯೋತಿಕಾ ಹೇಳಿದ್ದಾರೆ.
“ಮಾಧ್ಯಮಗಳು ಮತ್ತು ಕೆಲವರ ನೆಗೆಟಿವ್ ವಿಮರ್ಶೆಗಳಿಂದ ನಾನು ಅಚ್ಚರಿಗೊಳಗಾಗಿದ್ದೇನೆ. ಏಕೆಂದರೆ ನಾನು ಈ ಹಿಂದೆ ನೋಡಿದ ತಲೆಬುಡವಿಲ್ಲದ ದೊಡ್ಡ ಬಜೆಟ್ ಚಿತ್ರಗಳಿಗೆ ಹೋಲಿಕೆ ಮಾಡಿದರೆ, ಕಂಗುವ ಎಷ್ಟೋ ಪಾಲು ಬೆಟರ್. ಹಾಗಾದರೆ ಕಂಗುವ ಚಿತ್ರದ ಬಗ್ಗೆ ಪಾಸಿಟಿವ್ ಏನಿದೆ? 2ನೇ ಭಾಗದಲ್ಲಿ ಮಹಿಳೆಯರ ಆಕ್ಷನ್ ಸೀಕ್ವೆನ್ಸ್ ಮತ್ತು ಯುವಕನ ಪ್ರೀತಿ.. ಇದನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಟೀಕೆ ಮಾಡುವವರು ಇಂಥ ಉತ್ತಮ ಭಾಗಗಳನ್ನು ಮರೆತಿದ್ದಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
"3Dಯಲ್ಲಿ ಈ ಸಿನಿಮಾವನ್ನು ಹೊರತಂದ ತಂಡದ ಪ್ರಯತ್ನವನ್ನು ಶ್ಲಾಘಿಸಬೇಕು. ಆದರೆ ಮೊದಲ ದಿನದಂದು ಕಂಗುವ ಬಗ್ಗೆ ಇಷ್ಟೊಂದು ನೆಗೆಟಿವ್ ಹರಡಿದ್ದು ತುಂಬ ಬೇಸರವಾಯ್ತು. ಕೆಟ್ಟ ಕಾಮೆಂಟ್ ಮಾಡುವವರು ಅದನ್ನೇ ಮಾಡುತ್ತಿದ್ದಾರೆ. ನೀವು ಒಳ್ಳೆಯ ಸಿನಿಮಾವನ್ನೇ ಕೊಟ್ಟಿದ್ದೀರಿ. ಇದು ಹೆಮ್ಮೆಯ ವಿಷಯ ಟೀಮ್ ಕಂಗುವ" ಎಂದು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.
ಆ ಸಿನಿಮಾ ಹುಡುಕಾಟಕ್ಕಿಳಿದ ನೆಟ್ಟಿಗರು
ಜ್ಯೋತಿಕಾ ಪೋಸ್ಟ್ ಬೆನ್ನಲ್ಲೇ, ಅವರು ಹೇಳಿರುವ ಬಿಗ್ ಬಜೆಟ್ ಚಿತ್ರಗಳು ಯಾವುವು ಎಂದು ನೆಟ್ಟಿಗರು, ಹುಡುಕಲಾರಂಭಿಸಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಜ್ಯೋತಿಕಾ ಹೇಳಿದ ಮಾತು ಸಾಕಷ್ಟು ಸಂಚಲನ ಮೂಡಿಸಿದೆ. ತೆಲುಗಿನಲ್ಲಿ ತಯಾರಾದ ಕೆಲವು ಪ್ಯಾನ್- ಇಂಡಿಯನ್ ಚಿತ್ರಗಳ ಬಗ್ಗೆ ಜ್ಯೋತಿಕಾ ಬಹುಶಃ ಹೀಗೆ ಹೇಳಿರಬಹುದು ಎಂದೂ ಕೆಲವರು ಮಾತನಾಡುತ್ತಿದ್ದಾರೆ.