Jailer 2: ಮತ್ತೆ ತೆರೆ ಮೇಲೆ ಮಾಸ್ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್; ಸಂಕ್ರಾಂತಿ ಸಂಭ್ರಮಕ್ಕೆ ಜೊತೆಯಾಯ್ತು ಜೈಲರ್ 2 ಟೀಸರ್
ಸಂಕ್ರಾಂತಿ ಸಂಭ್ರಮದಲ್ಲಿದ್ದ ರಜನಿಕಾಂತ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಡೋ ಸುದ್ದಿಯೊಂದು ಸಿಕ್ಕಿದೆ. ರಜನಿ ಅಭಿನಯದ ಸಿನಿಮಾಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ಬರ್ತಿದ್ದಾರೆ ಸೂಪರ್‌ಸ್ಟಾರ್. ಮಕರ ಸಂಕ್ರಾಂತಿ ದಿನವೇ ಬಿಡುಗಡೆಯಾಗಿದೆ ಜೈಲರ್ 2 ಸಿನಿಮಾದ ಟೀಸರ್, ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ರಜನಿ.

2023ರಲ್ಲಿ ಬಿಡುಗಡೆಯಾಗಿದ್ದ ರಜನಿಕಾಂತ್ ಅಭಿನಯದ ‘ಜೈಲರ್‘ ಸಿನಿಮಾ ಸೂಪರ್ ಹಿಟ್ ಆಗಿ, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳು ಕಳೆದ ನಂತರ ಇದೀಗ ಜೈಲರ್ ಸೀಕ್ವೆಲ್ ಬರುವುದು ಖಾತ್ರಿಯಾಗಿದೆ. ಮಕರ ಸಂಕ್ರಾಂತಿ ಶುಭ ಸಂದರ್ಭದಲ್ಲಿ ‘ಜೈಲರ್ 2‘ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾವನ್ನು ಅಧಿಕೃತ ಘೋಷಣೆ ಮಾಡಿದೆ ಚಿತ್ರತಂಡ.
ಮಕರ ಸಂಕ್ರಾಂತಿ ಹಿನ್ನೆಲೆ ‘ಜೈಲರ್ 2‘ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ರಜನಿಕಾಂತ್ ಅಭಿಮಾನಿಗಳ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ ಚಿತ್ರತಂಡ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಮತ್ತೆ ಆ್ಯಕ್ಷನ್ ಹೀರೊವಾಗಿ ಕಾಣಿಸಿಕೊಳ್ಳಲಿದ್ದಾರೆ ಸೂಪರ್‌ಸ್ಟಾರ್ ರಜನಿಕಾಂತ್.
ಈ ಟೀಸರ್ ಅನ್ನು ಹಂಚಿಕೊಂಡಿರುವ ಸಿನಿಮಾ ನಿರ್ಮಾಣ ಸಂಸ್ಥೆ ‘ಸೂಪರ್‌ಸ್ಟಾರ್ @rajinikanth ನಟಿಸಿರುವ #Jailer2 ಅನ್ನು ಸನ್ ಪಿಕ್ಚರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತದೆ. ಅಲಪ್ಪರೈ ಕೆಲಪ್ಪುರೋಮ್, ತಲೈವರ್ ನೇರಂಧರಂ‘ ಎಂದು ಬರೆದುಕೊಂಡಿದೆ.
ಜೈಲರ್ ಪ್ರಿಕ್ವೆಲ್‌ಗೆ ಆ್ಯಕ್ಷನ್ ಕಟ್ ಹೇಳಿದ್ದ ನೆಲ್ಸನ್ ಸೀಕ್ವೆಲ್‌ಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಅನಿರುದ್ಧ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಟೀಸರ್‌ನಲ್ಲೇ ಚಂಡಮಾರುತ, ಮಾಸ್ ಎಂಟ್ರಿ
ಈ ಟೀಸರ್‌ನ ಆರಂಭದಲ್ಲಿ ಅನಿರುದ್ಧ ಹಾಗೂ ನೆಲ್ಸನ್ ಗೋವಾ ಬೀಚ್‌ನಲ್ಲಿ ಕುಳಿತು ತಮಾಷೆಯಾಗಿ ಮಾತನಾಡುತ್ತಿರುತ್ತಾರೆ. ಬಿರುಗಾಳಿ ಬಗ್ಗೆ ಮಾತನಾಡುತ್ತಿರುವಾಗಲೇ ಬಿರುಗಾಳಿಗೆ ತೂರಿ ಬರುವಂತೆ ಒಬ್ಬೊಬ್ಬರೇ ರೌಡಿಗಳು ಆ ರೂಮ್ ಒಳಗೆ ಬಂದು ಬೀಳುತ್ತಾರೆ. ಮೈ ಮೇಲೆ ರಕ್ತ ಸಿಡಿದಿರುವುದು ನೋಡಿ ಹೆದರಿ ಒಂದು ಮೂಲೆಗೆ ಹೋಗಿ ನಿಲ್ಲುತ್ತಾರೆ ನೆಲ್ಸನ್, ಅನಿರುದ್ಧ್. ಒಬ್ಬೊಬ್ಬರೇ ರೌಡಿಗಳು ರಕ್ತಸಿಕ್ತವಾಗಿ ರೂಮ್‌ನಲ್ಲಿ ಬಂದು ಬೀಳುತ್ತಿರುತ್ತಾರೆ. ಆಗ ರಕ್ತಸೋರುವ ಬಾಗಿಲಿನ ಕಿಂಡಿಯಿಂದ ರಜನಿ ತನ್ನದೇ ಸ್ಟೈಲ್‌ನಲ್ಲಿ ಎಂಟ್ರಿ ಕೊಡುತ್ತಾರೆ. ರಜನಿಕಾಂತ್ ನೋಡಿ ಅನಿರುದ್ಧ, ನೆಲ್ಸನ್ ಕಂಬಳಿ ಹೊದ್ದು ಅಡಗಿಕೊಳ್ಳಲು ನೋಡುತ್ತಾರೆ, ಕಂಬಳಿಯನ್ನು ಕಾಲಿನಲ್ಲೇ ಎಳೆಯುವ ರಜನಿ ರೌಡಿಗಳು ಎಲ್ಲಿ ಹೋದ್ರು ಅಂತ ಸನ್ನೆಯಲ್ಲೇ ಕೇಳುತ್ತಾರೆ. ಆ ಕಡೆ ಎಂದು ತೋರಿಸುತ್ತಾರೆ ಮಾಡಿ ತೋರಿಸುತ್ತಾರೆ ಅನಿರುದ್ಧ ಹಾಗೂ ನೆಲ್ಸನ್. ಹೋಗುವಾಗ ಬಾಂಬ್ ಎಸೆದುಹೋಗುತ್ತಾರೆ. ರಜನಿ ಹೊರ ಹೋದಾಗ ಮನೆಯೊಳಗೆ ಬಾಂಬ್ ಬ್ಲಾಸ್ಟ್ ಆಗುತ್ತದೆ. ಇತ್ತ ರಜನಿ ಎದುರಿಗೆ ಮೂರ್ನ್ಕಾಲು ಜೀಪ್‌ನಲ್ಲಿ ರೌಡಿಗಳು ಬಂದು ಶೂಟ್ ಮಾಡಲು ನೋಡುತ್ತಾರೆ. ಆದರೆ ಕನ್ನಡ ತೋರಿಸಿಯೇ ರೌಡಿಗಳ ದ್ವಂಸ ಮಾಡಿ ಎಂದಿನಂತೆ ತನ್ನ ಸ್ಟೈಲ್‌ನಲ್ಲಿ ಕನ್ನಡಕ ಹಾಕಿಕೊಂಡು ಪೋಸ್ ಕೊಡುತ್ತಾ ಸ್ಟೈಲ್ ಆಗಿ ನಡೆದು ಬರುತ್ತಾರೆ ರಜನಿ.
ಬಹಳ ಅದ್ಭುತವಾಗಿ, ಮಾಸ್ ಆಗಿ ತೋರಿಸಿರುವ ಜೈಲರ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಿ 14 ಗಂಟೆಗಳಲ್ಲಿ 14 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಜೈಲರ್ 2 ಸಿನಿಮಾವು ಪ್ರಿಕ್ವೆಲ್‌ನಂತೆ ಸಾಕಷ್ಟು ಆಕ್ಷನ್, ಫೈಟ್ ಹೊಂದಿರುತ್ತದೆ ಎಂಬುದು ಟೀಸರ್ ನೋಡಿದ್ರೆ ಖಾತ್ರಿಯಾಗುತ್ತದೆ. ಜೈಲರ್ ಸಿನಿಮಾವು ವಿಶ್ವದಾದ್ಯಂತ 650 ಕೋಟಿ ರೂ. ಗಳಿಸಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು.
ಸಕಾರಾತ್ಮಕ ವಿಮರ್ಶೆಗಳೊಂದಿಗೆ ಬಿಡುಗಡೆಯಾದ ಜೈಲರ್ ಸಿನಿಮಾವು ಉತ್ತಮ ಆರಂಭವನ್ನು ಪಡೆದ್ದಿತ್ತು. ವಾಸ್ತವವಾಗಿ, ಚಿತ್ರದ ವಿದೇಶಿ ವಿತರಕ ಆಯಂಗರನ್ ಇಂಟರ್ನ್ಯಾಷನಲ್ ಈ ಚಿತ್ರವು ತನ್ನ ಮೊದಲ ದಿನವೇ 33 ಕೋಟಿ ಗಳಿಸಿದೆ ಎಂದು ದೃಢಪಡಿಸಿತು. ಇದು ಸೂಪರ್ ಸ್ಟಾರ್ ರಜನಿಕಾಂತ್ ಅವರ ವೃತ್ತಿಜೀವನದಲ್ಲಿ ಅತ್ಯಧಿಕವಾಗಿದೆ. ಇದೀಗ ಜೈಲರ್ ಪ್ರಿಕ್ವೆಲ್ ಬರುವುದು ಖಚಿತವಾಗಿರುವುದು ರಜನಿ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
