ಬೆಂಗಳೂರು ಕೋರಮಂಗಲದಲ್ಲಿ ಅಮರನ್ ಸಿನಿಮಾ ತಂಡ; ನಮ್ಮ ಚಿತ್ರವನ್ನು ಬೆಂಬಲಿಸಿ ಎಂದ ತಮಿಳು ನಟ ಶಿವಕಾರ್ತಿಕೇಯನ್
ಸಾಯಿ ಪಲ್ಲವಿ, ಶಿವಕಾರ್ತಿಕೇಯನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಮೇಜರ್ ಮುಕುಂದ್ ವರದರಾಜನ್ ಬಯೋಗ್ರಫಿ ಅಮರನ್ ಸಿನಿಮಾ ಗುರುವಾರ ಬಿಡುಗಡೆ ಆಗುತ್ತಿದೆ. ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿದ್ದು ಚಿತ್ರತಂಡ ಕೋರಮಂಗಲದ ನೆಕ್ಸಸ್ ಮಾಲ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ತಮಿಳು ನಟ ಶಿವಕಾರ್ತಿಕೇಯನ್ ಅಭಿನಯದ ಅಮರನ್ ಸಿನಿಮಾ ದೀಪಾವಳಿಗೆ ರಿಲೀಸ್ ಆಗುತ್ತಿದೆ. ಇದರ ಜೊತೆಗೆ ಸಿನಿಮಾ ಪ್ರಚಾರ ಕಾರ್ಯ ಕೂಡ ವೇಗ ಪಡೆದುಕೊಂಡಿದೆ. ಭಯೋತ್ಪಾದಕರ ಜೊತೆಗಿನ ಹೋರಾಟದಲ್ಲಿ ವೀರ ಮರಣ ಅಪ್ಪಿದ ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತ ಸಿನಿಮಾವಾಗಿದ್ದು ಅಕ್ಟೋಬರ್ 31 ರಂದು ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಸಿನಿಮಾ ಪ್ರಚಾರಕ್ಕಾಗಿ ತಮಿಳು ನಟ ಶಿವಕಾರ್ತಿಕೇಯನ್ ಮಂಗಳವಾರ ಬೆಂಗಳೂರಿಗೆ ಆಗಮಿಸಿದ್ದರು.
ಕೋರಮಂಗಲದ ನೆಕ್ಸಸ್ ಮಾಲ್ನಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯ
ದಕ್ಷಿಣ ಭಾರತದ ಬಹುಭಾಷಾ ನಟಿ, ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಹಾಗೂ ನಟ ಶಿವಕಾರ್ತಿಕೇಯನ್ ಜೋಡಿಯಾಗಿ ಅಮರನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿರುವ ಅಮರನ್ ಚಿತ್ರ ನೋಡಲು ಫ್ಯಾನ್ಸ್ ಕಾತುರದಲ್ಲಿದ್ದಾರೆ. ಇದರ ಮಧ್ಯೆ ಈ ಸಿನಿಮಾ ಪ್ರಚಾರಕ್ಕಾಗಿ ನಟ ಶಿವಕಾರ್ತಿಕೇಯನ್ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್ನಲ್ಲಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದಲ್ಲಿ ಶಿವಕಾರ್ತಿಕೇಯನ್ ಭಾಗಿಯಾಗಿದ್ದರು. ಬಳಿಕ ಕನ್ನಡದಲ್ಲಿಯೇ ನಮಸ್ಕಾರ ಹೇಳಿ ಬೆಂಗಳೂರಿನ ನಂಟಿನ ಬಗ್ಗೆ ವಿವರಿಸಿದ ಶಿವಕಾರ್ತಿಕೇಯನ್ ಅಮರನ್ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ನಿಮ್ಮ ಬೆಂಬಲ ನಮ್ಮ ಸಿನಿಮಾ ಮೇಲಿರಲಿ ಎಂದರು.
ಮೇಜರ್ ಮುಕುಂದ್ ವರದರಾಜನ್ ಬಯೋಗ್ರಫಿ
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಮುಕುಂದ್ ವರದರಾಜನ್ ಜೀವನಾಧಾರಿತವೇ ಅಮರನ್ ಸಿನಿಮಾದ ಕಥೆ. ದೀಪಾವಳಿಯಂದು ಭರ್ಜರಿ ಓಪನಿಂಗ್ ಪಡೆಯುವ ಸೂಚನೆ ಕೊಟ್ಟಿದೆ. ಅಮರಾನ್ ಸಿನಿಮಾವನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿದ್ದು, ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ, ಸಿಎಚ್ ಸಾಯಿ ಅವರ ಛಾಯಾಗ್ರಹಣ ಮತ್ತು ಆರ್ ಕಲೈವನನ್ ಅವರ ಸಂಕಲನ ಚಿತ್ರಕ್ಕಿದೆ. ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ಇಂಟರ್‌ನ್ಯಾಷನಲ್ ಜಂಟಿಯಾಗಿ ನಿರ್ಮಾಣ ಮಾಡಿದೆ. ಅಮರನ್ ಸಿನಿಮಾ ಅಕ್ಟೋಬರ್ 31, ಗುರುವಾರ ತೆಲುಗು, ತಮಿಳು ಜೊತೆ ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
2 ವರ್ಷಗಳ ಗ್ಯಾಪ್ ನಂತರ ಸಾಯಿ ಪಲ್ಲವಿ ಕಮ್ ಬ್ಯಾಕ್
ಈ ಸಿನಿಮಾ ಪಾತ್ರಕ್ಕಾಗಿ ತಾವು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾಗಿ ಶಿವಕಾರ್ತಿಕೇಯನ್ ಹಾಗೂ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದು ಸಾಯಿ ಪಲ್ಲವಿ ಅಭಿನಯದ ಮೊದಲ ಬಯೋಪಿಕ್ ಸಿನಿಮಾ. ಅಮರನ್ ಸಿನಿಮಾದಲ್ಲಿ ನಟಿಸುವ ಮುನ್ನ ರೆಬೆಕಾಳನ್ನು ಭೇಟಿಯಾಗಿದ್ದ ಸಾಯಿ ಪಲ್ಲವಿ ಅವರೊಂದಿಗೆ ಕೆಲವು ದಿನ ಕಾಲ ಕಳೆದಿದ್ದಾಗಿ ಹೇಳಿದ್ದಾರೆ. 2 ವರ್ಷಗಳ ಹಿಂದೆ ತೆಲುಗಿನ ಗಾರ್ಗಿ ಸಿನಿಮಾದಲ್ಲಿ ನಟಿಸಿದ್ದ ಸಾಯಿ ಪಲ್ಲವಿ, ಆ ಸಿನಿಮಾ ಸೋಲಿನ ನಂತರ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಪ್ರೇಮಂ, ಫಿದಾ ಸಿನಿಮಾಗಳ ಮೂಲಕ ಹುಡುಗರ ಮನ ಕದ್ದ ಸಾಯಿ ಪಲ್ಲವಿ ಈಗ ದಕ್ಷಿಣದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರದಲ್ಲಿ ನಟಿಸುತ್ತಿದ್ದಾರೆ.