ವಿಕ್ರಮ್ ನಟನೆಯ ವೀರ ಧೀರ ಸೂರನ್ ಸಿನಿಮಾಕ್ಕೆ ಸಂಕಷ್ಟ; ಶೋ ಕ್ಯಾನ್ಸಲ್, 7 ಕೋಟಿ ಠೇವಣಿ ಇಡಲು ಸೂಚಿಸಿದ ಕೋರ್ಟ್
Veera Dheera Sooran Movie: ವಿಕ್ರಮ್ ನಟನೆಯ ವೀರ ಧೀರ ಸೂರನ್ ಸಿನಿಮಾಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಈ ಸಿನಿಮಾದ ಗುರುವಾರದ ಶೋ ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Veera Dheera Sooran Movie: ನಟ ವಿಕ್ರಮ್ ಅವರ ಬಹುನಿರೀಕ್ಷಿತ ಸಿನಿಮಾ ವೀರ ಧೀರ ಸೂರನ್. ಇಂದು (ಗುರುವಾರ) ಈ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕಿತ್ತು. ಅಭಿಮಾನಿಗಳು ಈ ಸಿನಿಮಾ ನೋಡಿ ಹಬ್ಬ ಮಾಡಲು ಕಾಯುತ್ತಿದ್ದರು. ಆದರೆ, ಈ ಸಿನಿಮಾಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ಹೀಗಾಗಿ, ಈ ಸಿನಿಮಾದ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ನಿರ್ಮಾಣ ಸಂಸ್ಥೆಯಾದ ಎಚ್‌ಆರ್ ಪಿಕ್ಚರ್ಸ್‌ನೊಂದಿಗಿನ ತಮ್ಮ ಸಮಸ್ಯೆಗಳು ಬಗೆಹರಿಯುವವರೆಗೆ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸುವಂತೆ ಬಿ4ಯು ಬುಧವಾರ ದೆಹಲಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಗುರುವಾರವಾದ ಇಂದು ಈ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಅತ್ಯುತ್ತಮವಾಗಿ ಗಳಿಕೆ ಮಾಡಿತ್ತು. ಪಿವಿಆರ್ ಮತ್ತು ಸಿನೆಪೊಲಿಸ್ ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ಮಧ್ಯಾಹ್ನದ ಶೋಗಳು ಆರಂಭವಾಗುವ ನಿರೀಕ್ಷೆಯಿದೆ. ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಮೊದಲು ಚಿತ್ರದ ಒಟಿಟಿ ಹಕ್ಕುಗಳನ್ನು ಮಾರಾಟ ಮಾಡುವ ಒಪ್ಪಂದವನ್ನು ಗೌರವಿಸದ ಆರೋಪದ ಮೇಲೆ ಚಿತ್ರದ ನಿರ್ಮಾಪಕಿ ರಿಯಾ ಶಿಬು ಅವರಿಂದ ಬಿ4ಯು ಪರಿಹಾರವನ್ನು ಬಯಸಿದೆ.
ದೆಹಲಿ ಹೈಕೋರ್ಟ್ ಗುರುವಾರ ಬೆಳಿಗ್ಗೆ 10:30ರವರೆಗೆ ಚಿತ್ರದ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ವರದಿಯಾಗಿದೆ. ಅಂದರೆ ಬೆಳಿಗ್ಗೆ 9 ಗಂಟೆಯ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ನಿರ್ಮಾಪಕರು ತಕ್ಷಣವೇ 7 ಕೋಟಿ ರೂಪಾಯಿಗಳನ್ನು ಠೇವಣಿ ಇಡಬೇಕು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು 48 ಗಂಟೆಗಳ ಒಳಗೆ ಸಲ್ಲಿಸಬೇಕು ಎಂದು ಕೋರ್ಟ್ ಸೂಚಿಸಿದೆ ಎಂದು ಸನ್ ನ್ಯೂಸ್ ವರದಿ ಮಾಡಿದೆ . ಈ ಕಾನೂನು ತೊಡಕುಗಳಿಂದಾಗಿ ಅಮೆರಿಕದಲ್ಲಿ ಚಿತ್ರದ ಪ್ರೀಮಿಯರ್ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು 123 ತೆಲುಗು ತಾಣವು ವರದಿ ಮಾಡಿದೆ .
ವೀರ ಧೀರ ಸೂರನ್ ಸಿನಿಮಾದ ಕುರಿತು
ವೀರ ಧೀರ ಸೂರನ್: ಭಾಗ 2 ಸಿನಿಮಾಖ್ಕೆ ಎಸ್‌ಯು ಅರುಣ್ ಕುಮಾರ್ ನಿರ್ದೇಶನವಿದೆ. ಭಾಗ 1 ಸಿನಿಮಾ ನಂತರ ಬರಲಿದೆ. ಭಾಗ 2 ಸಿನಿಮಾ ಈಗ ಬಿಡುಗಡೆಯಾಗುತ್ತದೆ. ಈ ಸಿನಿಮಾಖ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ. ಇದರಲ್ಲಿ ಎಸ್‌ಜೆ ಸೂರ್ಯ , ಸೂರಜ್ ವೆಂಜರಮೂಡು (ತಮಿಳಿನ ಚೊಚ್ಚಲ ಚಿತ್ರ), ದುಶಾರ ವಿಜಯನ್ ಮತ್ತು ಸಿದ್ದಿಕ್ ಕೂಡ ನಟಿಸಿದ್ದಾರೆ.
ಈ ಚಿತ್ರವು ಭಾಗ 1 ಎಂಬ ಪೂರ್ವಭಾವಿ ಕಥೆಯನ್ನು ಹೊಂದಿದ್ದು, ಅದು ಇನ್ನೂ ಸೆಟ್ಟೇರಬೇಕಿದೆ. ಬಿಡುಗಡೆಗೂ ಮುನ್ನ ವಿಕ್ರಮ್ ಚಿತ್ರಕ್ಕೆ ವ್ಯಾಪಕ ಪ್ರಚಾರ ನೀಡಿದ್ದರಿಂದ ಬೆಳಗಿನ ಪ್ರದರ್ಶನಕ್ಕೆ ಅಡ್ವಾನ್ಸಡ್ ಟಿಕೆಟ್ ಬುಕ್ ಮಾಡಿದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ವೀರ ಧೀರ ಸೂರನ್ ತಂಡವು ಚಿತ್ರ ರದ್ದಾಗಿರುವ ವಿಷಯವನ್ನು ಸಾರ್ವಜನಿಕವಾಗಿ ಪ್ರಕಟಿಸಿಲ್ಲ.
