ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಶತ ದಿನೋತ್ಸವದ ಸಂಭ್ರಮ: ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ನಟ ಗಣೇಶ್, ನಿರ್ದೇಶಕ ಶ್ರೀನಿವಾಸ್ ರಾಜು
Krishnam Pranaya Sakhi 100 Days: ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಗಣೇಶ್ ಹಾಗೂ ಮಾಳವಿಕಾ ನಾಯರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ ಶತ ದಿನೋತ್ಸವ ಆಚರಿಸುತ್ತಿದೆ. ಸಿನಿಮಾ ಇದೇ ವರ್ಷ ಆಗಸ್ಟ್ 15 ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು.
Krishnam Pranaya Sakhi 100 Days: ಗೋಲ್ಡನ್ ಸ್ಟಾರ್ ಗಣೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾ 100 ದಿನಗಳನ್ನು ಪೂರೈಸಿದೆ. ಕೆಲವು ವರ್ಷಗಳಿಂದ ಬ್ರೇಕ್‌ಗಾಗಿ ಕಾಯುತ್ತಿದ್ದ ಗಣೇಶ್‌ಗೆ ಈ ಸಿನಿಮಾ ಇನ್ನಷ್ಟು ಹೆಸರು ತಂದುಕೊಟ್ಟಿದೆ. ಸಿನಿಮಾ ಮಾತ್ರವಲ್ಲದೆ, ಚಿತ್ರದ ಹಾಡುಗಳು ಕೂಡಾ ಸೂಪರ್ ಹಿಟ್ ಆಗಿದೆ. ಸಿನಿಮಾ ಗೆಲ್ಲಿಸಿದಕ್ಕಾಗಿ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಸಿನಿಮಾಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ಆಗಸ್ಟ್ 15 ರಂದು ತೆರೆ ಕಂಡಿದ್ದ ಸಿನಿಮಾ
ಕರ್ನಾಟಕದ ಕೆಲವೆಡೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಶತ ದಿನೋತ್ಸವ ಪೂರೈಸಿದ್ದು ಈಗಲೂ ಪ್ರದರ್ಶನವಾಗುತ್ತಿದೆ. ಇದೇ ವರ್ಷ ಆಗಸ್ಟ್ 15 ರಂದು ಕೃಷ್ಣಂ ಪ್ರಣಯ ಸಖಿ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಚಿತ್ರವನ್ನು ತ್ರಿಶೂಲ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿದ್ದು ಶಿವಸಾಯಿ ಕಥೆ ಬರೆದು ಶ್ರೀನಿವಾಸ್ ರಾಜು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ, ಈ ಸಿನಿಮಾ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಗಣೇಶ್, ಮಾಳವಿಕಾ ನಾಯರ್, ಶ್ರುತಿ, ರಾಮಕೃಷ್ಣ, ಸಾಧು ಕೋಕಿಲ, ರಂಗಾಯಣ ರಘು, ಅವಿನಾಶ್, ಶಶಿಕುಮಾರ್, ಅಶೋಕ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಸೋಷಿಯಲ್ ಮೀಡಿಯಾ ಧೂಳೆಬ್ಬಿಸಿದ ದ್ವಾಪರ ಹಾಡು
ಈ ಸಿನಿಮಾದ ಎಲ್ಲಾ ಹಾಡುಗಳು ಕೇಳುಗರಿಗೆ ಇಷ್ಟವಾಗಿತ್ತು. ಆದರೆ ಅದರಲ್ಲಿ ಜೇನ ದನಿಯೋಳೆ..ಮೀನ ಕಣ್ಣೋಳೆ ಹಾಡಂತೂ ಎಲ್ಲಾ ವಯೋಮಾನದವರಿಗೆ ಮೋಸ್ಟ್ ಫೇವರೆಟ್ ಹಾಡಾಗಿದೆ. ಯಾರ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ವಾಟ್ಸಾಪ್ ನೋಡಿದರೂ ಈ ಹಾಡು ಹಾಡು, ರೀಲ್ಸ್, ಡ್ಯಾನ್ಸ್ ಕಾಣಸಿಗುತ್ತಿದೆ. ಅಷ್ಟರ ಮಟ್ಟಿಗೆ ಈ ಹಾಡು ಎಲ್ಲರಿಗೂ ಇಷ್ಟವಾಗಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿರುವ ಈ ಹಾಡನ್ನು ಸರಿಗಮಪ ಖ್ಯಾತಿಯ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಆನಂದ್ ಆಡಿಯೋದಲ್ಲಿ ಲಭ್ಯವಿರುವ ಈ ಚಿತ್ರದ ಲಿರಿಕಲ್ ಹಾಡು ಇದುವರೆಗೂ 68 ಮಿಲಿಯನ್ ವ್ಯೂವ್ಸ್ ಕಂಡಿದೆ. 2 ತಿಂಗಳ ಹಿಂದೆ ಬಿಡುಗಡೆಯಾಗಿರುವ ಫುಲ್ ವಿಡಿಯೋ ಹಾಡು 9.8 ವ್ಯೂವ್ಸ್ ಗಳಿಸಿದೆ.
ಸ್ಯಾಟಲೈಟ್, ಡಿಜಿಟಲ್ ಹಕ್ಕು ಖರೀದಿಸಿದ ಸನ್ ನೆಕ್ಸ್ಟ್
ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಯಲ್ಲಿ ಯಾವಾಗ ಸ್ಟ್ರೀಮ್ ಆಗಬಹುದು ಎಂದು ಸಿನಿಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ. ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತದೆ ಎನ್ನಲಾಗಿತ್ತು. ಆದರೆ ಸಿನಿಮಾ ರಿಲೀಸ್ ಆಗಿ 100 ದಿನಗಳ ನಂತರವೂ ಸಿನಿಮಾ ಸ್ಟ್ರೀಮ್ ಆಗಿಲ್ಲ. ಆದರೆ ಈಗ ಅಮೆಜಾನ್ ಪ್ರೈಮ್ ಬದಲಿಗೆ ಸನ್ ನೆಕ್ಸ್ಟ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ ಎಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಕೃಷ್ಣಂ ಪ್ರಣಯ ಸಖಿ ಚಿತ್ರದ ಸ್ಯಾಟಲೈಟ್ ಹಕ್ಕನ್ನು ಉದಯ ಟಿವಿ ಪಡೆದುಕೊಂಡಿದ್ದು ಈ ಸಿನಿಮಾ ಸನ್ ನೆಕ್ಸ್ಟ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸ್ಯಾಟಲೈಟ್ ರೈಟ್ಸ್ ಜೊತೆಗೆ ಸನ್ ನೆಕ್ಸ್ಟ್, ಈ ಚಿತ್ರವನ್ನು ಒಳ್ಳೆಯ ಮೊತ್ತ ಕೊಟ್ಟು ಡಿಜಿಟಲ್ ಪ್ರಸಾರದ ಹಕ್ಕನ್ನು ಕೂಡಾ ಖರೀದಿಸಿದೆ ಎನ್ನಲಾಗುತ್ತಿದೆ. ಬಹುಶಃ ಈಗ ಸಿನಿಮಾ, 100 ದಿನಗಳನ್ನು ಪೂರೈಸಿದ್ದು ಶೀಘ್ರದಲ್ಲೇ ಚಿತ್ರತಂಡ ಒಟಿಟಿ ಸ್ಟ್ರೀಮಿಂಗ್ ದಿನಾಂಕ ಅನೌನ್ಸ್ ಮಾಡುವ ಸಾಧ್ಯತೆ ಇದೆ.