Krishnam Pranaya Sakhi OTT: ಕೃಷ್ಣಂ ಪ್ರಣಯ ಸಖಿ ಒಟಿಟಿ ಬಿಡುಗಡೆ ದಿನಾಂಕ ಖಚಿತ; ಕಾದು ಕುಳಿತ ಅಭಿಮಾನಿಗಳ ನಿರೀಕ್ಷೆಗೆ ಇಲ್ಲಿದೆ ಉತ್ತರ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ನಿಗದಿಯಾಗಿದೆ. ನವೆಂಬರ್ 29ರಂದು ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಎಲ್ಲಿ ವೀಕ್ಷಣೆ ಮಾಡಬಹುದು ಎಂಬ ಮಾಹಿತಿ ಇಲ್ಲೇ ಇದೆ ಗಮನಿಸಿ.
ಹಲವಾರು ದಿನಗಳಿಂದ ಜನರನ್ನು ಕಾಡುತ್ತಿದ್ದ ಪ್ರಶ್ನೆ ಎಂದರೆ ಅದು ಕೃಷ್ಣಂ ಒಟಿಟಿ ರಿಲೀಸ್ ಡೇಟ್. ಕನ್ನಡ ಸಿನಿರಸಿಕರು ಈ ವರ್ಷ ತುಂಬಾ ದಿನ ಸರ್ಚ್ ಮಾಡಿದ ಕನ್ನಡ ಸಿನಿಮಾ ಇದು. ಈ ಹಿಂದೆ ಸಾಕಷ್ಟು ಬಾರಿ ಕೃಷ್ಣಂ ಪ್ರಣಯ ಸಖಿ ಒಟಿಟಿಗೆ ಬರಲಿದೆ ಎಂದು ಸುದ್ದಿಯಾಗಿತ್ತು. ಆದರೆ ಒಟಿಟಿಗೆ ಮಾತ್ರ ಬಂದಿರಲಿಲ್ಲ. ಆದರೆ ಈಗ ಪಕ್ಕಾ ದಿನಾಂಕವನ್ನೇ ಸೂಚಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ ಒಟಿಟಿಗೆ ಬರಲಿದೆ. ನವೆಂಬರ್ 29ರಂದು ನೀವು ನಿಮ್ಮ ಮನೆಯಲ್ಲೇ ಕುಳಿತು ಈ ಸಿನಿಮಾ ನೋಡಬಹುದಾಗಿದೆ.
ದ್ವಾಪರ ದಾಟಲು ಸೇರಿದಂತೆ ವಿವಿಧ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟುಹಾಕಿರುವ ಕೃಷ್ಣಂ ಪ್ರಣಯ ಸಖಿ ವೀಕ್ಷಕರಿಂದ ಪಾಸಿಟಿವ್ ಟಾಕ್ ಪಡೆದುಕೊಂಡಿದೆ. ಗೋಲ್ಡನ್ ಸ್ಟಾರ್ ನಟನೆಯ ಈ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆ, ಮೆಚ್ಚುಗೆಯ ಸುರಿಮಳೆ ಮೂಡಿತ್ತು. ಕೆಲವರು ಇದು ಸಾಕಷ್ಟು ಸಿನಿಮಾಗಳನ್ನು ಒಂದೆಡೆ ಸೇರಿಸಿ ಮಾಡಿದ ಒಂದು ಕಥೆ ಎಂದೂ ಸಹ ಹೇಳಿದ್ದರೂ. ಆದರೂ ನೋಡುಗರಲ್ಲಿನ ಕುತೂಹಲ ಮಾತ್ರ ತಣಿದಿರಲಿಲ್ಲ.
ಹೇಗಿದೆ ಸಿನಿಮಾ?
ಸಿನಿಮಾದ ಕಥೆ ತುಂಬಾ ಹೊಸತು ಎಂದಲ್ಲ. ಆದರೆ, ಸಿನಿಮಾವನ್ನು ಪ್ರಸ್ತುತಪಡಿಸಿದ ರೀತಿ ಇಷ್ಟವಾಗುತ್ತದೆ. ಮೊದಲಾರ್ಥ ತುಸು ಗೊಜಲುಗೊಜಲಾಗಿದೆ. ಇಂಟರ್‌ವಲ್‌ನಿಂದ ಸಿನಿಮಾ ಮುಗಿಯೋ ತನಕ ಚಿತ್ರ ತುಂಬಾ ಇಷ್ಟವಾಗುತ್ತದೆ. ಇಂಟರ್‌ವಲ್ ಮುಗಿಯುವಾಗ ಸಾಕಷ್ಟು ಉತ್ತರವಿಲ್ಲದ ಪ್ರಶ್ನೆಗಳು, ಗೊಂದಲಗಳು ಉಳಿಯುತ್ತವೆ. ಆದರೆ, ದ್ವಿತೀಯಾರ್ಧ ಆರಂಭವಾದ ಬಳಿಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೊರಕುತ್ತದೆ. ಇದು ಸಂಪೂರ್ಣವಾಗಿ ಕಾಮಿಡಿ ರೋಲರ್ ಕೋಸ್ಟರ್ ಸಿನಿಮಾ. ನನಗೆ ಮತ್ತು ನನ್ನ ಸುತ್ತಮುತ್ತ ಇದ್ದ ಸಾಕಷ್ಟು ಜನರಿಗೆ ಈ ಸಿನಿಮಾ ಇಷ್ಟವಾಗಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ ನಿರೀಕ್ಷೆ ಮಾಡುವಂತೆ ಇದ್ದರೂ ತೃಪ್ತಿ ನೀಡುತ್ತದೆ. ಕೆಲವೊಂದು ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕದೆ ಸಿನಿಮಾ ಸಡನ್ ಕೊನೆಗೊಂಡಂತೆ ಭಾಸವಾಗುತ್ತದೆ.
ಕೃಷ್ಣ ಪ್ರಣಯ ಸಖಿ ಸಿನಿಮಾ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಟ್ರೇಲರ್ ಬಿಡುಗಡೆ ಮಾಡದೇ ಕೇವಲ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದಿತ್ತು ಈ ಸಿನಿಮಾ. ಇತ್ತೀಚಿನ ಕೆಲ ದಿನಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪೈಕಿ, ಕೃಷ್ಣ ಪ್ರಣಯ ಸಖಿ ಸಿನಿಮಾ ಒಳ್ಳೆಯ ಕಲೆಕ್ಷನ್ ಜತೆಗೆ ಜನಮೆಚ್ಚುಗೆಯನ್ನೂ ಪಡೆದು ಇದೀಗ ಓಟಿಟಿಯಲ್ಲೂ ನಿಮ್ಮ ವೀಕ್ಷಣೆಗೆ ಲಭ್ಯವಾಗಲಿದೆ.
ಒಟಿಟಿ ವಿವರ
ಕೃಷ್ಣಂ ಪ್ರಣಯ ಸಖಿ ಸಿನಿಮಾ ನವೆಂಬರ್ 29ರಂದು ಒಟಿಟಿಗೆ ಬರಲಿದೆ. ಸನ್‌ನೆಕ್ಸ್ಟ್‌ನಲ್ಲಿ ನೀವು ಈ ಸಿನಿಮಾ ನೋಡಬಹುದು.
ಸಿನಿಮಾದ ಹೆಸರು: ಕೃಷ್ಣಂ ಪ್ರಣಯ ಸಖಿ
ನಿರ್ದೇಶಕರು: ಶ್ರೀನಿವಾಸ ರಾಜು
ತಾರಾಗಣ: ಗೋಲ್ಡನ್ ಸ್ಟಾರ್ ಗಣೇಶ, ಮಾಲವಿಕ ನಾಯರ್, ಶರಣ್ಯ ಶೆಟ್ಟಿ, ಶಶಿ ಕುಮಾರ್, ಗಿರೀಶ್ ಶಿವಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಕುರಿ ಪ್ರತಾಪ್ ಮುಂತಾದವರು
ಸಂಗೀತ: ಅರ್ಜುನ್ ಜನ್ಯ
ನಿರ್ಮಾಪಕರು: ಪ್ರಶಾಂತ್ ಜಿ ರುದ್ರಪ್ಪ