Krishnam Pranaya Sakhi OTT: ಒಟಿಟಿಗೆ ಎಂಟ್ರಿಕೊಟ್ಟ ಕೃಷ್ಣಂ ಪ್ರಣಯ ಸಖಿ; ಈ ವೇದಿಕೆಯಲ್ಲಿ ನೋಡಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಚಿತ್ರ
ಕನ್ನಡ ಸುದ್ದಿ  /  ಮನರಂಜನೆ  /  Krishnam Pranaya Sakhi Ott: ಒಟಿಟಿಗೆ ಎಂಟ್ರಿಕೊಟ್ಟ ಕೃಷ್ಣಂ ಪ್ರಣಯ ಸಖಿ; ಈ ವೇದಿಕೆಯಲ್ಲಿ ನೋಡಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಚಿತ್ರ

Krishnam Pranaya Sakhi OTT: ಒಟಿಟಿಗೆ ಎಂಟ್ರಿಕೊಟ್ಟ ಕೃಷ್ಣಂ ಪ್ರಣಯ ಸಖಿ; ಈ ವೇದಿಕೆಯಲ್ಲಿ ನೋಡಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಚಿತ್ರ

Krishnam Pranaya sakhi OTT: ಗೋಲ್ಸನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಕೃಷ್ಣ ಪ್ರಣಯ ಸಖಿ ಕೊನೆಗೂ ಒಟಿಟಿ ಅಂಗಳ ಪ್ರವೇಶಿಸಿದೆ. ಚಿತ್ರಮಂದಿಗಳಲ್ಲಿ ಬರೋಬ್ಬರಿ ನೂರು ದಿನಗಳ ಸಂಭ್ರಮದ ಬಳಿಕವೇ ಈ ಒಟಿಟಿಗೆ ಆಗಮಿಸಿದೆ.

ಒಟಿಟಿಗೆ ಎಂಟ್ರಿಕೊಟ್ಟ ಕೃಷ್ಣಂ ಪ್ರಣಯ ಸಖಿ;
ಒಟಿಟಿಗೆ ಎಂಟ್ರಿಕೊಟ್ಟ ಕೃಷ್ಣಂ ಪ್ರಣಯ ಸಖಿ; (Sun nxt)

Krishnam Pranaya sakhi OTT: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡಿದೆ. ಕಲೆಕ್ಷನ್‌ ವಿಚಾರದಲ್ಲಿಯೂ ಈ ಸಿನಿಮಾ ಒಳ್ಳೆಯ ಗಳಿಕೆ ಕಂಡಿದೆ. ಆದರೆ, ಒಟಿಟಿಗೆ ಮಾತ್ರ ಈ ಸಿನಿಮಾ ಬರಲು ತುಂಬ ಸತಾಯಿಸಿದೆ. ಒಟಿಟಿ ವೀಕ್ಷಕ ಕಾದಿದ್ದೇ ಬಂತು, ಆ ಒಟಿಟಿ, ಈ ಒಟಿಟಿ, ಆವಾಗ, ಇವಾಗ ಎಂದೆಲ್ಲ ಸಾಕಷ್ಟು ಸುದ್ದಿಗಳು ಹರಿದಾಡಿದವೇ ಹೊರತು, ಅಷ್ಟು ಬೇಗ ವೀಕ್ಷಣೆಗೆ ಸಿಗಲಿಲ್ಲ ಈ ಸಿನಿಮಾ. ಈಗ ಸುದೀರ್ಘ 107 ದಿನಗಳ ಬಳಿಕ ಒಟಿಟಿಗೆ ಅಂಗಳಕ್ಕೆ ಬಂದಿದೆ ಕೃಷ್ಣಂ ಪ್ರಣಯ ಸಖಿ.

ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕೃಷ್ಣಂ ಪ್ರಣಯ ಸಖಿ ಸಿನಿಮಾ, ನೋಡುಗರಿಂದ ಪಾಸಿಟಿವ್‌ ಪ್ರತಿಕ್ರಿಯೆ ಪಡೆದುಕೊಂಡು, ವಿಮರ್ಶೆ ದೃಷ್ಟಿಯಿಂದಲೂ ಮೆಚ್ಚುಗೆ ಪಡೆದಿತ್ತು. ಫ್ಯಾಮಿಲಿ ಪ್ರೇಕ್ಷಕರ ಮನಗೆದ್ದು, ಬಾಕ್ಸ್‌ ಆಫೀಸ್‌ನಲ್ಲೂ ಮೋಡಿ ಮಾಡಿತ್ತು ಗಣೇಶ್‌ ನಟನೆಯ ಈ ಸಿನಿಮಾ. ಇದೀಗ ಇದೇ ಸಿನಿಮಾ 100 ದಿನಗಳನ್ನು ಪೂರೈಸಿದೆ. ಗೋಲ್ಡನ್‌ ಸ್ಟಾರ್‌ ಗಣೇಶ್‌ಗೂ ಈ ಸಿನಿಮಾ ಯಶಸ್ಸು ತಂದುಕೊಟ್ಟಿದೆ. ನಿರ್ದೇಶಕ ಶ್ರೀನಿವಾಸ್‌ ರಾಜು ಸಹ ಈ ಸಿನಿಮಾ ಮೂಲಕ ಗೆದ್ದಿದ್ದಾರೆ. ಈಗ ಇದೇ ಸಿನಿಮಾ ಚಿತ್ರಮಂದಿರದ ಬಳಿಕ ಒಟಿಟಿಯಲ್ಲೂ ಕಮಾಲ್‌ ಮಾಡುತ್ತಿದೆ.

ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಶುರು

ಸಹಜವಾಗಿ ಒಂದು ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾದ 30ರಿಂದ 40 ದಿನಗಳ ಬಳಿಕ ಒಟಿಟಿ ಅಂಗಳಕ್ಕೆ ಬರಬೇಕು. ಆದರೆ, ಕೃಷ್ಣ ಪ್ರಣಯ ಸಖಿ ಸಿನಿಮಾ ವಿಚಾರದಲ್ಲಿ ಮಾತ್ರ ಅದು ಸಾಧ್ಯವಾಗಲಿಲ್ಲ. ಮಹಾನವಮಿಗೆ ಒಟಿಟಿ ಪ್ರವೇಶಿಸಲಿದೆ, ದೀಪಾವಳಿಗೆ ಬರಲಿದೆ ಎಂದೇ ಸುದ್ದಿ ಓಡಾಡಿತು. ಆ ದಿನ ಸಿನಿಮಾ ಒಟಿಟಿಗೆ ಬರಲಿಲ್ಲ. ಈ ನಡುವೆ ಇದೇ ಸಿನಿಮಾದ ಡಿಜಿಟಲ್‌ ಹಕ್ಕುಗಳನ್ನು ಸನ್‌ ನೆಟ್‌ವರ್ಕ್‌ ಪಡೆದುಕೊಂಡಿದೆ. ಇದೀಗ ಇಂದು (ನ. 29) ಈ ಚಿತ್ರ ಗ್ರ್ಯಾಂಡ್‌ ಆಗಿಯೇ ಸನ್‌ ನೆಕ್ಸ್ಟ್‌ (Sun Nxt OTT) ಒಟಿಟಿಗೆ ಎಂಟ್ರಿಕೊಟ್ಟಿದೆ.

ಟಿವಿಯಲ್ಲಿ ಯಾವಾಗ ಪ್ರಸಾರ?

ಅಷ್ಟೇ ಅಲ್ಲದೆ, ಇದೇ ಸಿನಿಮಾದ ಸ್ಯಾಟಲೈಟ್‌ ಹಕ್ಕುಗಳನ್ನು ಉದಯ ಟಿವಿ ಪಡೆದುಕೊಂಡಿದೆ. ಅದರಂತೆ, ಸದ್ಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಒಟಿಟಿಗೆ ಬಂದ ಬಳಿಕ, ಟೆಲಿವಿಷನ್‌ ಪ್ರೀಮಿಯರ್‌ ಆಗಲಿದೆ. ಸದ್ಯದ ಮೂಲಗಳ ಪ್ರಕಾರ, ಸಂಕ್ರಾಂತಿಗೆ ಈ ಸಿನಿಮಾ ಉದಯ ಟಿವಿಯಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ.

ಬಹುತಾರಾಗಣದ ಸಿನಿಮಾ

ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಚಿತ್ರದ ಹಾಡಿನ ಮೂಲಕವೇ ಈ ಸಿನಿಮಾ ಹಿಟ್‌ ಪಟ್ಟ ಪಡೆದುಕೊಂಡಿದೆ. ವೆಂಕಟ್‌ ರಾಮ್‌ ಪ್ರಸಾದ್‌ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಸಂಕಲನ, ವಿಜ್‌ ಈಶ್ವರ್‌ ಸಂಭಾಷಣೆ, ಮೋಹನ್‌ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ಶ್ರೀನಿವಾಸರಾಜು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ನಟಿಸಿದ್ದಾರೆ. ಇನ್ನುಳಿದಂತೆ ಶಶಿಕುಮಾರ್, ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ಶ್ರುತಿ ಸೇರಿ ಹಲವರು ನಟಿಸಿದ್ದಾರೆ.

Whats_app_banner