ಕುಲದಲ್ಲಿ ಕೀಳ್ಯಾವುದೋ ಸಿನಿಮಾ ವಿಮರ್ಶೆ: ಉತ್ತರವಿಲ್ಲದ ಪ್ರಶ್ನೆ; ಸಾಮಾಜಿಕ ಕಳಕಳಿಯ ಜೊತೆಗೊಂದು ಸಂದೇಶ
ಕುಲದಲ್ಲಿ ಕೀಳ್ಯಾವುದೋ ಸಿನಿಮಾ ವಿಮರ್ಶೆ: ‘ಕುಲದಲ್ಲಿ ಕೀಳ್ಯಾವುದೋ’ ಎಂಬ ಶೀರ್ಷಿಕೆಯಲ್ಲೇ ಒಂದು ಪ್ರಶ್ನೆ ಇದೆ. ಈ ಪ್ರಶ್ನೆಗೆ ತಲತಲಾಂತರದಿಂದ ಉತ್ತರ ಕಂಡುಹಿಡಿಯುವ ಪ್ರಯತ್ನವನ್ನು ಹಲವು ಚಿತ್ರಗಳ ಮೂಲಕ ಮಾಡಲಾಗುತ್ತಿದೆ. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವೂ ಅಂಥದ್ದೇ ಒಂದು ಪ್ರಯತ್ನ. (ಚಿತ್ರ ವಿಮರ್ಶೆ: ಚೇತನ್ ನಾಡಿಗೇರ್)

ಕುಲದಲ್ಲಿ ಕೀಳ್ಯಾವುದೋ ಸಿನಿಮಾ ವಿಮರ್ಶೆ: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರು ಮನು ಅಭಿನಯದ ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವು ಇಂದು ಬಿಡುಗಡೆಯಾಗಿದೆ. ಕಿರುತೆರೆಯಲ್ಲಿ ತಮ್ಮ ಪ್ರತಿಭೆಯಿಂದ ಗಮನಸೆಳೆದಿದ್ದ ಮನು ಅಭಿನಯದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿತ್ತು. ಇಷ್ಟಕ್ಕೂ ಚಿತ್ರದ ಕಥೆ ಏನು? ಎಂದು ನೀವೇ ಮುಂದೆ ಓದಿ ...
ಚಿತ್ರದ ಕಥೆ ಏನು?
ಊರಿನಲ್ಲಿ ಮೇಲು-ಕೀಳುಗಳ ಹಿಂಸೆ ತಡೆಯಲಾರದೆ ಅದೆಷ್ಟೋ ವರ್ಷಗಳ ಹಿಂದೆ ಮುತ್ತರಸ (ಯೋಗರಾಜ್ ಭಟ್) ಊರು ಬಿಟ್ಟು ಬಂದು ಕಾಡು ಸೇರುತ್ತಾನೆ. ಕ್ರಮೇಣ ಕಾಡಿನ ಮಧ್ಯೆ ತನ್ನದೇ ತಾಂಡ ಕಟ್ಟುತ್ತಾನೆ. ಅವನ ನಂತರದ ತಲೆಮಾರಿನವರನ್ನು ಅರಣ್ಯ ಇಲಾಖೆಯವರು ಅವರಿದ್ದ ಸ್ಥಳವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿ, ಊರಿಗೆ ಕಳುಹಿಸುತ್ತಾರೆ. ಹೀಗೆ ತನ್ನ ಜನರೊಂದಿಗೆ ನಾಡು ಸೇರುವ ಮುತ್ತರಸನ ವಂಶಜ ಮುತ್ತರಸ (ಮಡೆನೂರು ಮನು), ತನ್ನವರನ್ನು ವಾಪಸ್ಸು ಕಾಡಿಗೆ ಸೇರಿಸಲು ಹಲವು ಹೋರಾಟಗಳನ್ನು ಮಾಡುತ್ತಾನೆ. ಈ ಹಿನ್ನೆಲೆಯಲ್ಲಿ ಏನೇಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥೆ.
ಹೇಗಿದೆ ಚಿತ್ರ?
‘ಕುಲದಲ್ಲಿ ಕೀಳ್ಯಾವುದೋ’ ಎಂಬ ಶೀರ್ಷಿಕೆಯಲ್ಲೇ ಒಂದು ಪ್ರಶ್ನೆ ಇದೆ. ಈ ಪ್ರಶ್ನೆಗೆ ತಲತಲಾಂತರದಿಂದ ಉತ್ತರ ಕಂಡುಹಿಡಿಯುವ ಪ್ರಯತ್ನವನ್ನು ಹಲವು ಚಿತ್ರಗಳ ಮೂಲಕ ಮಾಡಲಾಗುತ್ತಿದೆ. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವೂ ಅಂಥದ್ದೇ ಒಂದು ಪ್ರಯತ್ನ. ಇಲ್ಲೂ ಮೇಲ್ಜಾತಿ ಮತ್ತು ಕೆಳಜಾತಿಯ ನಡುವೆ ಒಂದು ಸಂಘರ್ಷವಿದೆ. ಜಾತಿ, ಕುಲ ಹೆಸರಿನಲ್ಲಿ ಮೇಲ್ಜಾತಿಯವರು ಹೇಗೆಲ್ಲಾ ಕೆಳಜಾತಿಯವರನ್ನು ತುಳಿಯುತ್ತಾರೆ ಮತ್ತು ಕೆಳಜಾತಿಯವರು ಏನೆಲ್ಲಾ ಎದುರಿಸುತ್ತಿದ್ದಾರೆ ಎಂಬ ವಿಷಯವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನವನ್ನು ನಿರ್ದೇಶಕ ರಾಮನಾರಾಯಣ್ ಮಾಡಿದ್ದಾರೆ. ಇದುವರೆಗೂ ಹೆಚ್ಚಾಗಿ ಕಮರ್ಷಿಯಲ್ ಚಿತ್ರಗಳನ್ನೇ ಮಾಡಿದ್ದ ಅವರಿಗೆ, ಇದೊಂದು ಬೇರೆ ಹೆಜ್ಜೆ. ಕಮರ್ಷಿಯಲ್ ಅಂಶಗಳನ್ನು ಇಟ್ಟುಕೊಂಡು ಸಾಮಾಜಿಕ ಕಳಕಳಿ ಮೆರೆವ ಪ್ರಯತ್ನ ಇಲ್ಲಿ ಮಾಡಿದ್ದಾರೆ.
ಈಗಾಗಲೇ ಈ ತರಹದ ಸಾಕಷ್ಟು ಚಿತ್ರಗಳು ಬಂದಿರುವುದರಿಂದ ಈ ಚಿತ್ರವು ಪ್ರೇಕ್ಷಕರಿಗೆ ವಿಶೇಷ ಅಥವಾ ವಿಭಿನ್ನ ಎಂದನಿಸದಿರುವ ಸಾಧ್ಯತೆ ಹೆಚ್ಚಿದೆ. ಕಥೆ ಹಳೆಯದಾದರೂ, ಒಂದಿಷ್ಟು ತಿರುವುಗಳ ಮೂಲಕ ಪ್ರೇಕ್ಷಕರಿಗೆ ಅಲ್ಲಲ್ಲಿ ಸರ್ಪ್ರೈಸ್ ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಜೊತೆಗೆ ಪ್ರೇಕ್ಷಕರನ್ನು ಭಾವುಕವಾಗಿ ತಟ್ಟುವ ಪ್ರಯತ್ನ ಮಾಡಿದ್ದಾರೆ. ಆದರೆ, ನಿಧಾನ ನಿರೂಪಣೆ ಜೊತೆಗೆ ಒಂದಿಷ್ಟು ಸುಧೀರ್ಘವೆನಿಸುವ ದೃಶ್ಯಗಳು ಚಿತ್ರವನ್ನು ಎಳೆದಂತಾಗಿಸಿವೆ. ಚಿತ್ರವನ್ನು ಇನ್ನಷ್ಟು ಚುರುಕು ಮಾಡಿದ್ದರೆ ಪ್ರೇಕ್ಷಕರಿಗೆ ಚಿತ್ರ ಇನ್ನಷ್ಟು ಆಪ್ತವಾಗುತ್ತಿತ್ತೇನೋ? ಇದೆಲ್ಲವನ್ನೂ ಹೊರತುಪಡಿಸಿದರೆ, ಚಿತ್ರದಲ್ಲೊಂದು ಒಳ್ಳೆಯ ಸಂದೇಶವಿದೆ. ಹುಟ್ಟಿಸಾಯುವ ಹಾಳು ಮನುಸ ಮನುಸಾನ ಮಧ್ಯೆ ಕೀಳ್ಯಾವ್ದು ಮೇಲ್ಯಾವುದೋ ಎಂಬ ಪ್ರಶ್ನೆಯನ್ನು ಎತ್ತಲಾಗಿದೆ. ಇನ್ನಾದರೂ ಈ ಮೇಲು-ಕೀಳುಗಳನ್ನು ಬಿಟ್ಟು ಸಹಬಾಳ್ವೆ ನಡೆಸಿ ಎಂಬ ಸಂದೇಶವನ್ನು ನೀಡಲಾಗಿದೆ.
ಗಮನಸೆಳೆಯುವ ಪೋಷಕ ಕಲಾವಿದರು
ಮಡೆನೂರು ಮನು ಈ ಚಿತ್ರದ ತುಂಬಾ ಆವರಿಸಿಕೊಂಡಿದ್ದಾರೆ. ಹೊಡೆದಾಟದಲ್ಲಿ ಅವರು ಸಲೀಸಾಗಿ ತಮ್ಮ ಪ್ರತಿಭೆಯನ್ನು ಮೆರೆದಿದ್ದರೂ, ನಟನೆಯಲ್ಲಿ ಇನ್ನೂ ದೂರ ಸಾಗಬೇಕಿದೆ. ಮೌನ ಗುಡ್ಡೆಮನೆ ಮುದ್ದಾಗಿ ಕಾಣಿಸುತ್ತಾರೆ. ನಾಯಕ-ನಾಯಕಿಗಿಂತ ಚಿತ್ರದಲ್ಲಿ ಹೆಚ್ಚಾಗಿ ಗಮನಸೆಳೆಯುವುದು ಪೋಷಕ ಕಲಾವಿದರು. ಶರತ್ ಲೋಹಿತಶ್ವ, ಕರಿಸುಬ್ಬು ಮತ್ತು ತಬಲಾ ನಾಣಿ ಮೂವರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಮನೋಮೂತ್ತಿ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ.
ಸಿನಿಮಾ ಎಂದರೆ ಬರೀ ಮನರಂಜನೆಯಷ್ಟೇ ಅಲ್ಲ, ಸಾಮಾಜಿಕ ಕಳಕಳಿಯೂ ಬಹಳ ಮುಖ್ಯ ಎನ್ನುವವರು ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರವನ್ನು ನೋಡಬಹುದು.
ಸಿನಿಮಾ: ಕುಲದಲ್ಲಿ ಕೀಳ್ಯಾವುದೋ
ಜಾನರ್: ಸೋಷಿಯಲ್ ಡ್ರಾಮಾ
ನಿರ್ದೇಶನ: ಕೆ. ರಾಮನಾರಾಯಣ್
ನಿರ್ಮಾಣ: ಸಂತೋಷ್ ಕುಮಾರ್ ಮತ್ತು ವಿದ್ಯಾ
ಸಂಗೀತ: ಮನೋಮೂರ್ತಿ
ಛಾಯಾಗ್ರಹಣ: ಮನು ಬಿ.ಕೆ
ಸಿನಿಮಾದ ಅವಧಿ: 138 ನಿಮಿಷಗಳು
ಎಚ್‍ಟಿ ಕನ್ನಡ ರೇಟಿಂಗ್: 2.5/5
- ವಿಮರ್ಶಕರು: ಚೇತನ್ ನಾಡಿಗೇರ್