ಮಲಯಾಳಂ ಚಿತ್ರೋದ್ಯಮದಲ್ಲಿ L2: Empuraan ಹೊಸ ರೆಕಾರ್ಡ್! ಬಿಡುಗಡೆಯಾದ ಮೊದಲ ದಿನವೇ ದಾಖಲೆಯ ಕಲೆಕ್ಷನ್
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ L2: ಎಂಪುರಾನ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ ಕಮಾಲ್ ಮಾಡಿದೆ. ಈ ವರೆಗೂ ಬೇರಾವ ಮಲಯಾಳಂ ಸಿನಿಮಾ ಮಾಡದ ದಾಖಲೆಯೊಂದನ್ನು ತನ್ನದಾಗಿಸಿಕೊಂಡಿದೆ ಈ ಸಿನಿಮಾ.

L2: Empuraan Box office Day 1 Collection: ಭಾರೀ ನಿರೀಕ್ಷೆಗಳ ನಡುವೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ (ಮಾ. 27), ಮೋಹನ್ ಲಾಲ್ ನಟನೆಯ ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ L2: ಎಂಪುರಾನ್. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ, ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಇದು ಭಾರತದಲ್ಲಿ ಮೊದಲ ದಿನವೇ 21 ಕೋಟಿ ಗಳಿಕೆ ಮಾಡಿದ ಮಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಈ ವರೆಗೂ ಬೇರಾವ ಮಲಯಾಳಂ ಚಿತ್ರಕ್ಕೂ ಸಾಧ್ಯವಾಗಿರಲಿಲ್ಲ. ಅಂಥದ್ದೊಂದು ಹೊಸ ರೆಕಾರ್ಡ್ ಮಾಡಿದೆ ಎಂಪುರಾನ್ ಸಿನಿಮಾ.
ಕಡಿಮೆ ಬಜೆಟ್, ಅತ್ಯಧಿಕ ಗಳಿಕೆ; ಇದು ಮಲಯಾಳಂ ಸಿನಿಮಾಗಳ ಗುಣ. ದಶಕಗಳಿಂದಲೂ ಇದು ಚಾಲ್ತಿಯಲ್ಲಿದೆ. ಆಫ್‌ಬೀಟ್ ಸಿನಿಮಾಗಳ ಸಂಖ್ಯೆಯೇ ಅಲ್ಲಿ ಅಧಿಕ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಎಲ್ಲ ಗಡಿಯನ್ನು ದಾಟಿ, ಕಮರ್ಷಿಯಲ್ ಮೇಕಿಂಗ್‌ನತ್ತಲೂ ಮಲಯಾಳಿಗಳು ಹೊರಳಿದ್ದಾರೆ. ಕೋಟಿ ಕೋಟಿ ಹಣ ಹಾಕಿ ಸಿನಿಮಾ ಮಾಡುತ್ತ, ನೂರಾರು ಕೋಟಿ ಬಾಚಿಕೊಳ್ಳುತ್ತಿದ್ದಾರೆ. ಅದರಂತೆ, ಇದೀಗ ಬಹುಕೋಟಿ ವೆಚ್ಚದಲ್ಲಿ ತಯಾರಾದ ಎಂಪುರಾನ್ ಸಿನಿಮಾ ಸಹ ಮೊದಲ ದಿನವೇ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿದೆ.
ಮೊದಲ ದಿನವೇ ಹೊಸ ದಾಖಲೆ
L2: ಎಂಪುರಾನ್ ಚಿತ್ರವು ಭಾರತದಲ್ಲಿ ಮೊದಲ ದಿನ ರೂ. 21 ಕೋಟಿ ಕಲೆಕ್ಷನ್ ಮಾಡಿದೆ. ಕಳೆದ ವರ್ಷ ಪ್ರಥ್ವಿರಾಜ್ ಸುಕುಮಾರನ್ ಅಭಿನಯದ ದಿ ಗೋಟ್ ಲೈಫ್ ಸಿನಿಮಾ ಕೇವಲ 8.9 ಕೋಟಿ ಗಳಿಕೆ ಮಾಡಿತ್ತು. ಇದೀಗ ಆ ದಾಖಲೆಯನ್ನು ಈ ಸಿನಿಮಾ ಇದು ಮುರಿದಿದೆ. ಇದಕ್ಕೂ ಮೊದಲು ಇದೇ ಎಂಪುರಾನ್ ಚಿತ್ರದ ಮೊದಲ ಭಾಗ ಲೂಸಿಫರ್ ಚಿತ್ರ ಮೊದಲ ದಿನ 6.1 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ಆ ದಾಖಲೆಗಳು ಪುಡಿ ಪುಡಿಯಾಗಿವೆ. ಟ್ರೇಡ್ ಟ್ರ್ಯಾಕರ್ Sacnilk ಪ್ರಕಾರ, ಮೊದಲ ದಿನ ಮಲಯಾಳಂನಲ್ಲಿ L2: ಎಂಪುರಾನ್ ಸಿನಿಮಾ 60% ಪ್ರೇಕ್ಷಕರಿಂದ ಆಕ್ಯುಪೆನ್ಸಿ ಪಡೆದಿತ್ತು. ಕೊಚ್ಚಿ, ಕೋಝಿಕೋಡ್‌ನಂತಹ ಪ್ರದೇಶಗಳಲ್ಲಿ 90% ಆಕ್ಯುಪೆನ್ಸಿ ದಾಖಲಾಗಿದೆ.
200 ಕೋಟಿ ತಲುಪುತ್ತಾ ಎಂಪುರಾನ್?
ಕಳೆದ ಕೆಲವು ದಶಕಗಳಿಂದ ಮಲಯಾಳಂ ಚಿತ್ರಗಳು ಕಂಟೆಂಟ್ ವಿಚಾರದಲ್ಲಿ ಇತರ ಭಾಷೆಯ ಪ್ರೇಕ್ಷಕರನ್ನೂ ಆಕರ್ಷಿಸುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಗಳಿಸದಿದ್ದರೂ, ವಿಮರ್ಶೆ ಮತ್ತು ಗಟ್ಟಿ ಕಥೆಯ ಮೂಲಕ ಯಶಸ್ಸು ಕಂಡ ಉದಾಹರಣೆಗಳು ಸಾಕಷ್ಟಿವೆ. 2019 ರವರೆಗೆ ಒಂದೇ ಒಂದು ಮಲಯಾಳಂ ಚಿತ್ರವೂ ರೂ.100 ಕೋಟಿ ಕಲೆಕ್ಷನ್ ಮಾಡಿರಲಿಲ್ಲ. ಲೂಸಿಫರ್ ಆ ದಾಖಲೆಯನ್ನು ಮುರಿದಿತ್ತು. ಅದಾದ ಮೇಲೆ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ರೂ. 200 ಕೋಟಿ ಗುರಿ ತಲುಪಿತ್ತು. ಈಗ ಆ 200 ಕೋಟಿಯ ಗುರಿ ಮುಟ್ಟುತ್ತಾ ಎಂಪುರಾನ್ ಸಿನಿಮಾ? ಕಾದು ನೋಡಬೇಕು.
ಪ್ಯಾನ್ ಇಂಡಿಯಾ ಸಿನಿಮಾ
ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ L2: ಎಂಪುರಾನ್ ಮಲಯಾಳಂ ಜೊತೆಗೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆಯಾಗಿದೆ. 2019ರಲ್ಲಿ ಬಿಡುಗಡೆಯಾದ ಲೂಸಿಫರ್ ಚಿತ್ರದ ಎರಡನೇ ಭಾಗ. ಮೂರನೇ ಭಾಗವೂ ಬರಬೇಕಿದೆ ಎಂಬ ಟಾಕ್ ಇದೆ. ಆದರೆ ಲೂಸಿಫರ್ ಚಿತ್ರಕ್ಕೆ ಸಿಕ್ಕಷ್ಟು ಪಾಸಿಟಿವ್ ಪ್ರತಿಕ್ರಿಯೆ ಎಂಪುರಾನ್‌ಗೆ ಸಿಕ್ಕಿಲ್ಲ. ಎಂಪುರಾನ್ ಚಿತ್ರದಲ್ಲಿ ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರನ್, ಟೊವಿನೊ ಥಾಮಸ್, ಅಭಿಮನ್ಯು ಸಿಂಗ್, ಇಂದ್ರಜಿತ್ ಸುಕುಮಾರನ್, ಮಂಜು ವಾರಿಯರ್ ಮುಂತಾದವರು ನಟಿಸಿದ್ದಾರೆ.
ಶ್ರೀ ಗೋಕುಲಂ ಮೂವೀಸ್, ಆಶೀರ್ವಾದ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಮತ್ತು ಗೋಕುಲಂ ಗೋಪಾಲನ್ ಜಂಟಿಯಾಗಿ ಎಂಪುರಾನ್ ಚಿತ್ರವನ್ನು ನಿರ್ಮಿಸಿದ್ದಾರೆ.
