ಮಲಯಾಳಂ ಬ್ಲಾಕ್ ಬಸ್ಟರ್ ʻಎಲ್ 2; ಎಂಪುರಾನ್ʼ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಎಲ್ಲಿ, ಯಾವಾಗಿನಿಂದ ವೀಕ್ಷಣೆ?
ಮಲಯಾಳಂನ ಆ್ಯಕ್ಷನ್ ಥ್ರಿಲ್ಲರ್ ಚಿತ್ರ, ಎಲ್2: ಎಂಪುರಾನ್ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಮಾಲಿವುಡ್‌ನಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿಈ ಸಿನಿಮಾ ದಾಖಲೆ ಬರೆದಿದೆ. ಇನ್ನೇನು ಮುಂದಿನ ವಾರದಿಂದ ಈ ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದೆ.

ಮಲಯಾಳಂ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎಂಬ ಖ್ಯಾತಿ ಪಡೆದಿದೆ ಎಲ್2; ಎಂಪುರಾನ್. ಕಾಂಟ್ರವರ್ಸಿ ವಿಚಾರವಾಗಿಯೂ ಈ ಚಿತ್ರ ಹೆಚ್ಚು ಸದ್ದು ಮಾಡಿತ್ತು. ಇದಷ್ಟೇ ಅಲ್ಲ ಬಾಕ್ಸ್ ಆಫೀಸ್‌ನಲ್ಲಿ 262 ಕೋಟಿ ಕಲೆಕ್ಷನ್ ಮಾಡಿರುವ ಈ ಸಿನಿಮಾ ಇದೀಗ ಒಟಿಟಿಗೆ ಆಗಮಿಸುತ್ತಿದೆ. ಅಧಿಕೃತವಾಗಿ ಈ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ನಿಗದಿಯಾಗಿದೆ.
ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡುವುದರ ಜತೆಗೆ ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದರು. ಮೋಹನ್‌ಲಾಲ್ ನಾಯಕನಾಗಿ ನಟಿಸಿರುವ ಈ ಸಿನಿಮಾ, ಮಾರ್ಚ್ 27ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು. ಮಲಯಾಳಂ ಜತೆಗೆ ಕನ್ನಡ, ತೆಲುಗು, ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾ ಸದ್ದಿಲ್ಲದೆ ಒಟಿಟಿ ದಿನಾಂಕ ಘೋಷಣೆ ಮಾಡಿದೆ.
ಎಂಪುರಾನ್ ಚಿತ್ರ ಯಾವಾಗ, ಎಲ್ಲಿ ವೀಕ್ಷಣೆ?
ಬಾಕ್ಸ್ ಆಫೀಸ್‌ನಲ್ಲಿ 262 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿದ ಈ ಚಿತ್ರ, ಮುಂದಿನ ಗುರುವಾರ (ಏಪ್ರಿಲ್ 24) ರಿಂದ ಜಿಯೋಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಮೂಲಕ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಒಂದೇ ತಿಂಗಳೊಳಗೆ ಒಟಿಟಿಗೆ ಆಗಮಿಸುತ್ತಿದೆ. 2019ರಲ್ಲಿ ಬಂದ ಲೂಸಿಫರ್ ಚಿತ್ರದ ಸೀಕ್ವೆಲ್ ರೂಪದಲ್ಲಿ ಎಲ್2 ಎಂಪುರಾನ್ ತೆರೆಗೆ ಬಂದಿತ್ತು. 2002ರ ಗುಜರಾತ್‌ನ ಗೋದ್ರಾ ಗಲಭೆಯನ್ನು ಚಿತ್ರದಲ್ಲಿ ತೋರಿಸಿದ್ದಕ್ಕೆ ಕಾಂಟ್ರವರ್ಸಿಗೂ ಆಹಾರವಾಯ್ತು. ಈ ಸಂಬಂಧ ನಟ ಮೋಹನ್‌ಲಾಲ್ ಕ್ಷಮೆಯಾಚಿಸಬೇಕಾಯಿತು.
ಮಂಜುಮ್ಮೆಲ್ ಬಾಯ್ಸ್ ದಾಖಲೆ ಪುಡಿ
ವಿವಾದ ಭುಗಿಲೆದ್ದ ಬೆನ್ನಲ್ಲೇ ಎಂಪುರಾನ್ ಸಿನಿಮಾದಲ್ಲಿನ 24 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಯಿತು. ಇಷ್ಟೆಲ್ಲ ಅಡೆತಡೆ ಮೀರಿ ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಉತ್ತಮ ಗಳಿಕೆ ಮಾಡಿರುವ ಈ ಸಿನಿಮಾ, ಹೊಸ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಮಂಜುಮ್ಮೆಲ್ ಬಾಯ್ಸ್ ಸೃಷ್ಟಿಸಿದ ದಾಖಲೆಯನ್ನು ಎಂಪುರಾನ್ ಸಿನಿಮಾ ಮುರಿದಿದೆ. ಚಿತ್ರಮಂದಿರದಲ್ಲಿ ಗೆದ್ದ ಈ ಸಿನಿಮಾ, ಒಟಿಟಿಯಲ್ಲಿ ಹೇಗೆ ಸದ್ದು ಮಾಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಬಹುತಾರಾಗಣದ ಸಿನಿಮಾ
ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಮತ್ತು ಸ್ಟಾರ್ ಹೀರೋ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್ L2: ಎಂಪುರಾನ್ ಸಿನಿಮಾ ಲೂಸಿಫರ್ ಚಿತ್ರದ ಮುಂದುವರಿದ ಭಾಗ. ಈ ಸಿನಿಮಾದಲ್ಲಿ ಮಂಜು ವಾರಿಯರ್, ಟೋವಿನೋ ಥಾಮಸ್, ಅಭಿಮನ್ಯು ಸಿಂಗ್, ಸಾಯಿಕುಮಾರ್, ಸೂರಜ್ ವೆಂಜರಾಮಡು, ಫಾಜಿಲ್, ಸಚಿನ್ ಖೇಡ್ಕರ್, ಸಾನಿಯಾ ಅಯ್ಯಪ್ಪನ್ ಮತ್ತು ಗೇಮ್ ಆಫ್ ಥ್ರೋನ್ಸ್ ಖ್ಯಾತಿಯ ಜೆರೋಮ್ ಫ್ಲಿನ್ ಮುಂತಾದವರು ನಟಿಸಿದ್ದಾರೆ.
ಶ್ರೀ ಗೋಕುಲಂ ಮೂವೀಸ್, ಆಶೀರ್ವಾದ್ ಸಿನಿಮಾಸ್ ಪ್ರೈವೇಟ್ ಲಿಮಿಟೆಡ್ ಮತ್ತು ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಆಂಟೋನಿ ಪೆರುಂಬವೂರ್ ಮತ್ತು ಗೋಕುಲಂ ಗೋಪಾಲನ್ ಜಂಟಿಯಾಗಿ ಎಂಪುರಾನ್ ಚಿತ್ರವನ್ನು ನಿರ್ಮಿಸಿದ್ದಾರೆ. ಸುಜಿತ್ ವಾಸುದೇವ್ ಛಾಯಾಗ್ರಹಣ ಮತ್ತು ದೀಪಕ್ ದೇವ್ ಸಂಗೀತ ಚಿತ್ರಕ್ಕಿದೆ.