ಒಟಿಟಿಗೆ ಬಂತು 262 ಕೋಟಿ ಕಲೆಕ್ಷನ್ ಮಾಡಿದ ಬ್ಲಾಕ್ಬಸ್ಟರ್ ಸಿನಿಮಾ; ಕನ್ನಡ ಸಹಿತ ನಾಲ್ಕು ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
ಮಲಯಾಳಂನಲ್ಲಿ ದೊಡ್ಡ ಯಶಸ್ಸು ಕಂಡ ರಾಜಕೀಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಎಲ್2 ಎಂಪುರಾನ್ ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಸೂಪರ್ಸ್ಟಾರ್ ಮೋಹನ್ಲಾಲ್ ಅಭಿನಯದ ಈ ಸಿನಿಮಾ ನಾಲ್ಕು ಭಾಷೆಗಳಲ್ಲಿ ಲಭ್ಯವಿದೆ. ಎಲ್2 ಎಂಪುರಾನ್ ಒಟಿಟಿ ವಿವರಗಳು ಇಲ್ಲಿವೆ.

ಇತ್ತೀಚಿನ ದಿನಗಳಲ್ಲಿ ಮಲಯಾಳಂ ಸಿನಿಮಾಗಳು ದೊಡ್ಡ ಯಶಸ್ಸು ಕಾಣುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಕಳೆದ ತಿಂಗಳು ಬಿಡುಗಡೆಯಾಗಿ ಮಲಯಾಳಂ ಚಿತ್ರರಂಗದಲ್ಲಿ ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದ ಸಿನಿಮಾ ʻಎಲ್2 ಎಂಪುರಾನ್ʼ. 2019ರಲ್ಲಿ ಸೂಪರ್ ಹಿಟ್ ಆಗಿದ್ದ ಲೂಸಿಫರ್ ಸಿನಿಮಾದ ಮುಂದುವರಿದ ಭಾಗವಾಗಿ ಇದು ಮೂಡಿಬಂದಿತ್ತು.
ʻಎಂಪುರಾನ್ʼ ಎಂದರೆ ದೇವರಿಗಿಂತ ಕಡಿಮೆ, ಚಕ್ರವರ್ತಿಗಿಂತ ಹೆಚ್ಚು ಎಂಬ ಅರ್ಥ. ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾವನ್ನು ಮತ್ತೊಬ್ಬ ಮಲಯಾಳಿ ಹೀರೋ ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಿದ್ದಾರೆ. ರಾಜಕೀಯ ಆಕ್ಷನ್ ಥ್ರಿಲ್ಲರ್ ಆಗಿ ಎಲ್2 ಎಂಪುರಾನ್ ಸಿನಿಮಾ ನಿರ್ಮಾಣವಾಗಿದೆ. ಡ್ರಗ್ಸ್, ಅಂತಾರಾಷ್ಟ್ರೀಯ ಮಾಫಿಯಾ, ಕುಟುಂಬ ಭಾವನೆಗಳು, ರಾಜಕೀಯ ಇತ್ಯಾದಿ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
2019ರಲ್ಲಿ ಲೂಸಿಫರ್ ಸೂಪರ್ ಹಿಟ್ ಆದ ನಂತರ ಈ ಸಿನಿಮಾದ ಮುಂದುವರಿದ ಭಾಗದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದವು. ಎಲ್2 ಎಂಪುರಾನ್ ಘೋಷಣೆಯಾದಾಗಲೇ ಅದಕ್ಕೆ ಭಾರಿ ಕುತೂಹಲ ಮೂಡಿತ್ತು. ಅದರಂತೆ ಮಾರ್ಚ್ 27ರಂದು ವಿಶ್ವದಾದ್ಯಂತ ಮಲಯಾಳಂ, ತೆಲುಗು, ಹಿಂದಿ, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಎಲ್2 ಎಂಪುರಾನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆಯಿತು.
ಎಂಪುರಾನ್ ಬಜೆಟ್, ಕಲೆಕ್ಷನ್ ಮಾಹಿತಿ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಎಲ್2 ಎಂಪುರಾನ್ ಮಲಯಾಳಂನ ಈ ವರ್ಷದ ದೊಡ್ಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಪಟ್ಟಿಗೆ ಸೇರಿದೆ. ಸುಮಾರು 180 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವದಾದ್ಯಂತ 262.75 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಭಾರತದಲ್ಲಿ 121.7 ಕೋಟಿ ರೂಪಾಯಿ ಮತ್ತು ವಿದೇಶಗಳಲ್ಲಿ 142 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮಲಯಾಳಂನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ದಾಖಲೆಯನ್ನು ಎಲ್2 ಎಂಪುರಾನ್ ತನ್ನದಾಗಿಸಿಕೊಂಡಿದೆ.
ಆದರೆ, ಮಲಯಾಳಂನಲ್ಲಿ ದೊಡ್ಡ ಯಶಸ್ಸು ಕಂಡ ʻಎಲ್2 ಎಂಪುರಾನ್ʼ ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡಲಿಲ್ಲ. ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೇ ಕೇಳಿಬಂದವು. ಸಿನಿಮಾ ತುಂಬಾ ನಿಧಾನವಾಗಿದೆ ಎಂಬ ಟಾಕ್ಗಳು ಕೇಳಿಬಂದವು. ಇಂದು (ಏಪ್ರಿಲ್ 24) ಎಲ್2 ಎಂಪುರಾನ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಿದೆ ಮೋಹನ್ಲಾಲ್ ಅಭಿನಯದ ಎಲ್2 ಎಂಪುರಾನ್.
ಎಲ್2 ಎಂಪುರಾನ್ ಒಟಿಟಿ
ಜಿಯೋ ಹಾಟ್ಸ್ಟಾರ್ ಒಟಿಟಿಯಲ್ಲಿ ʻಎಲ್2 ಎಂಪುರಾನ್ʼ ಸಿನಿಮಾ ಬಿಡುಗಡೆ ಆಗಿದೆ. ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಎಲ್2 ಎಂಪುರಾನ್ ಸ್ಟ್ರೀಮಿಂಗ್ ಆಗುತ್ತಿದೆ. ಎಲ್2 ಎಂಪುರಾನ್ ಕಥೆಯ ಬಗ್ಗೆ ಹೇಳುವುದಾದರೆ, ಐಯುಎಫ್ ಪಕ್ಷದಲ್ಲಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ ಸ್ಟೀಫನ್ ನೆಡುಂಪಲ್ಲಿ (ಮೋಹನ್ಲಾಲ್) ಅಜ್ಞಾತಕ್ಕೆ ಹೋಗುತ್ತಾನೆ. ಪಕ್ಷದ ಅಧಿಕಾರ ತನ್ನ ಕೈಗೆ ಬಂದ ನಂತರ ಜತಿನ್ ರಾಮ್ದಾಸ್ (ಟೊವಿನೋ ಥಾಮಸ್) ಭ್ರಷ್ಟಾಚಾರದಲ್ಲಿ ಮುಳುಗುತ್ತಾನೆ. ತನ್ನ ಸಹೋದರನ ಭ್ರಷ್ಟಾಚಾರವನ್ನು ಎದುರಿಸಲು ಸ್ಟೀಫನ್ ಮತ್ತೆ ರಾಜಕೀಯರಂಗಕ್ಕೆ ಬರುತ್ತಾನೆ. ಇದರಿಂದ ಅಣ್ಣ-ತಮ್ಮಂದಿರ ನಡುವೆ ರಾಜಕೀಯ ಯುದ್ಧ ಆರಂಭವಾಗುತ್ತದೆ. ಇದು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗುತ್ತದೆ.
ಎಲ್2 ಎಂಪುರಾನ್ನಲ್ಲಿ ಏನಿದೆ?
ಲೂಸಿಫರ್ ರಾಜಕೀಯ ಆಕ್ಷನ್ ಥ್ರಿಲ್ಲರ್ ಆಗಿದ್ದರೆ, ಎಲ್2 ಎಂಪುರಾನ್ ರಾಜಕೀಯದ ಜೊತೆಗೆ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾವನ್ನು ಸಹ ತೋರಿಸುತ್ತದೆ. ಕುಟುಂಬ ಭಾವನೆಗಳು, ರಾಜಕೀಯ ತಂತ್ರಗಳು, ಉಗ್ರವಾದ ಇತ್ಯಾದಿ ವಿಷಯಗಳನ್ನು ಸಹ ಈ ಸಿನಿಮಾದಲ್ಲಿ ತೋರಿಸಲಾಗಿದೆ. 262 ಕೋಟಿ ರೂಪಾಯಿ ಸಂಗ್ರಹಿಸಿರುವ ಈ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಎಲ್2 ಎಂಪುರಾನ್ ಒಟಿಟಿಯಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆಯುತ್ತದೆ ಎಂದು ನೋಡಬೇಕಿದೆ.