Shamanth Gowda: ಕನ್ನಡದ ಮೊದಲ ಜಾಂಬಿ ಚಿತ್ರಕ್ಕೆ ಹೀರೋ ಆದ ಬ್ರೋ ಗೌಡ; ಶಮಂತ್ ಈಗ ನಟ ಮಾತ್ರ ಅಲ್ಲ, ನಿರ್ಮಾಪಕನೂ ಹೌದು
ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಶಮಂತ್ ಗೌಡ, ಈಗ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ. ಕನ್ನಡದ ಮೊದಲ ಜಾಂಬಿ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ನಟ ಮಾತ್ರನಲ್ಲದೆ ಈ ಬಾರಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.

ಕಿರುತೆರೆ ಜನಪ್ರಿಯ ಧಾರಾವಾಹಿಯಾದ ‘ಲಕ್ಷ್ಮೀ ಬಾರಮ್ಮ’ದಲ್ಲಿ ವೈಷ್ಣವ್ ಪಾತ್ರಧಾರಿ ಮತ್ತು ‘ಬಿಗ್ ಬಾಸ್ - ಸೀಸನ್ 8’ರ ಖ್ಯಾತಿಯ ಶಮಂತ್ ಅಲಿಯಾಸ್ ಬ್ರೋ ಗೌಡ, ಇದೀಗ ಸಿನಿಮಾದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶಮಂತ್ ಅಭಿನಯದ ಹೊಸ ಚಿತ್ರದ ಅಧಿಕೃತ ಘೋಷಣೆ ಸಂಕ್ರಾಂತಿ ಹಬ್ಬದಂದು ಆಗಿದೆ.
ಕನ್ನಡದ ಮೊದಲ ಜಾಂಬಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರಕ್ಕೆ ಆನಂದ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಅನಿರುದ್ಧ್ ಅಭಿನಯದ ‘ಚೆಫ್ ಚಿದಂಬರ’ ಮತ್ತು 2023ರಲ್ಲಿ ಬಿಡುಗಡೆಯಾಗಿದ್ದ ವಿಜಯ್ ರಾಘವೇಂದ್ರ ಅಭಿನಯದ ‘ರಾಘು’ ಚಿತ್ರಗಳನ್ನು ಇವರು ನಿರ್ದೇಶನ ಮಾಡಿದ್ದರು.
ನಟ ಹಾಗೂ ನಿರ್ಮಾಪಕನಾದ ಬ್ರೋ ಗೌಡ
ಇನ್ನೂ ಹೆಸರಿಡದ ಈ ಚಿತ್ರಕ್ಕೆ ಬ್ರೋ ಗೌಡ ಬರೀ ನಾಯಕನಷ್ಟೇ ಅಲ್ಲ, ನಿರ್ಮಾಪಕರೂ ಹೌದು. ಬ್ರೋ ಮೀಡಿಯಾ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿರುವ ಶಮಂತ್, ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸನ್‍ರೈಸ್ ಸಿನಿಮಾಸ್ ಎಂಬ ಸಂಸ್ಥೆ ಸಹ ಚಿತ್ರ ನಿರ್ಮಾಣದಲ್ಲಿ ಕೈಜೋಡಿಸಿದರೆ. ಏಪ್ರಿಲ್ 2025ರಿಂದ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದೆ.
ಇದೊಂದು ಹಾರರ್ ಸಿನಿಮಾ
ಇದೊಂದು ಹಾರರ್ ಚಿತ್ರವಾಗಿದ್ದು, ಉದಯ್ ಲೀಲಾ ಅವರ ಛಾಯಾಗ್ರಹಣ ಮತ್ತು ವಿಜೇತ್ ಚಂದ್ರ ಸಂಕಲನ ಈ ಚಿತ್ರಕ್ಕಿದೆ. ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಈ ಚಿತ್ರಕ್ಕಾಗಿ ಶಮಂತ್ ಸಾಕಷ್ಟು ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶಮಂತ್ ಗೌಡ, ಯೂಟ್ಯೂಬ್‍ನ ತಮ್ಮ ಚಾನಲ್‍ನಲ್ಲಿ ‘ವರ್ಜಿನ್ ಬಾಯ್ಸ್’ ಎಂಬ ವೆಬ್‍ಸರಣಿ ನಿರ್ಮಿಸಿ-ನಿರ್ದೇಶಿಸಿದ್ದರು. ಅಷ್ಟೇ ಅಲ್ಲ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಡಿದ್ದರು. ಈ ಸರಣಿಯುದ್ದಕ್ಕೂ ಬ್ರೋ, ಬ್ರೋ ಎಂದು ಕರೆಯುವ ಶಮಂತ್‍ಗೆ, ಕೊನೆಗೆ ಅದೇ ಹೆಸರು ಖಾಯಂ ಆಯಿತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯವಾದ ಅವರು, ಆ ನಂತರ ‘ಬಿಗ್ ಬಾಸ್’ ಸ್ಪರ್ಧಿಯಾದರು. ಅಲ್ಲಿಂದ ಹೊರಬಂದು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ವೈಷ್ಣವ್ ಪಾತ್ರದಲ್ಲಿ ಜನಪ್ರಿಯರಾದರು. ಈಗ ಶಮಂತ್, ಕನ್ನಡದ ಮೊದಲ ಜಾಂಬಿ ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ ಹೀರೋ
ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಅವರಿಗೆ ಕನ್ನಡ ಕಿರುತೆರೆಯಲ್ಲಿ ಅವಕಾಶ ಸಿಕ್ಕಿತು. ಅಂದಿನಿಂದ ಇಂದಿನವರೆಗೂ ಅಂದರೆ ಧಾರಾವಾಹಿ ಆರಂಭವಾದಾಗಿನಿಂದಲೂ ಲಕ್ಷ್ಮೀ ಬಾರಮ್ಮದಲ್ಲಿ ಅಭಿನಯಿಸುತ್ತಲೇ ಇದ್ದಾರೆ. ನಾಯಕ ನಟ ವೈಷ್ಣವ್ ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಇಬ್ಬರು ಹುಡುಗಿಯರನ್ನು ಪ್ರೀತಿಸಿ ಆದರೆ ಯಾರ ಪ್ರೀತಿಯನ್ನೂ ಪಡೆದುಕೊಳ್ಳಲಾಗದ ರೀತಿಯಲ್ಲಿ ವೈಷ್ಣವ್ ಇರುತ್ತಾನೆ ಇದು ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಕಥೆ.
ವರದಿ: ಚೇತನ್ ನಾಡಿಗೇರ್
ಇದನ್ನೂ ಓದಿ: OTT Release This Week: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು; ಸಾಲು ಸಾಲು ಕ್ರೈಂ ಥ್ರಿಲ್ಲರ್ ಚಿತ್ರ ಬಿಡುಗಡೆ
