ಸಿದ್ದೇಗೌಡನನ್ನು ಚುನಾವಣೆಗೆ ನಿಲ್ಲಿಸುವಂತೆ ಕಾರ್ಯಕರ್ತರ ಮನವಿ, ಅತ್ತೆ ಬಳಿ ಚಾಡಿ ಹೇಳಿದ ನೀಲು; ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 28ರ ಎಪಿಸೋಡ್‌ನಲ್ಲಿ ಸಿದ್ದೇಗೌಡನನ್ನು ಯೂತ್ ಪ್ರೆಸಿಡೆಂಟ್ ಸ್ಥಾನಕ್ಕೆ ನಿಲ್ಲಿಸುವಂತೆ ಪಕ್ಷದ ಕಾರ್ಯಕರ್ತರು ಜವರೇಗೌಡ ಬಳಿ ಮನವಿ ಮಾಡುತ್ತಾರೆ. ಆದರೆ ನೀಲು, ರೇಣುಕಾಗೆ ಇದು ಇಷ್ಟವಾಗುವುದಿಲ್ಲ.
Lakshmi Nivasa Serial: ಖುಷಿ, ಮನೆಯಲ್ಲಿ ಇದ್ದರೆ ಖರ್ಚು ಹೆಚ್ಚು ಎಂಬ ಕಾರಣದಿಂದ ಸಂತೋಷ್ ಪಿತೂರಿ ಮಾಡುತ್ತಾನೆ. ಸೌಪರ್ಣಿಕಾ ಹಾಗೂ ರವಿ ಪೊಲೀಸರೊಂದಿಗೆ ಬಂದು ಖುಷಿಯನ್ನು ತಮ್ಮೊಂದಿಗೆ ಕರೆದೊಯ್ಯುತ್ತಾರೆ. ವಿಚಾರ ತಿಳಿದ ಶ್ರೀನಿವಾಸ್ ಬೇಸರಗೊಳ್ಳುತ್ತಾನೆ. ಇತ್ತೀಚೆಗೆ ಮನೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ನೆನೆದು ಲಕ್ಷ್ಮೀ ಕೂಡಾ ಕಣ್ಣೀರಿಡುತ್ತಾಳೆ.
ಸಿದ್ದೇಗೌಡನ ವಿರುದ್ಧ ಅತ್ತೆಗೆ ಚಾಡಿ ಹೇಳಿದ ನೀಲು
ಇತ್ತ ಜವರೇಗೌಡನಿಗೆ ಕರೆ ಮಾಡುವ ಪಕ್ಷದ ಕಾರ್ಯಕರ್ತರು, ಸಿದ್ದೇಗೌಡನನ್ನು ಯೂತ್ ಪ್ರೆಸಿಡೆಂಟ್ ಚುನಾವಣೆಗೆ ನಿಲ್ಲಿಸುವಂತೆ ಹೇಳುತ್ತಾರೆ. ಅದರೆ ಜವರೇಗೌಡ ಅದಕ್ಕೆ ಒಪ್ಪುವುದಿಲ್ಲ, ಅವನು ಮಾಡಿರುವ ಕೆಲಸಕ್ಕೆ ಅವನು ಖಂಡಿತ ಗೆಲ್ಲುವುದಿಲ್ಲ ಎನ್ನುತ್ತಾನೆ. ವಿಚಾರ ತಿಳಿದು ಮರೀಗೌಡ ಕೂಡಾ ಖುಷಿಯಾಗುತ್ತಾನೆ. ಆದರೆ ಇದು ನೀಲುಗೆ ಖುಷಿ ನೀಡುವುದಿಲ್ಲ. ಗಂಡ ಬೆಳೆಯಬೇಕು ಎಂದು ಆಸೆ ಪಡುತ್ತಿದ್ದರೆ, ಅವರಿಗೆ ಒಲಿದ ಎಲ್ಲಾ ಅವಕಾಶವನ್ನು ತಮ್ಮನಿಗೆ ಬಿಟ್ಟುಕೊಡುತ್ತಿದ್ದಾರೆ ಎಂದು ಬೇಸರಗೊಳ್ಳುತ್ತಾಳೆ. ಸಿದ್ದು ಚುನಾವಣೆಗೆ ನಿಂತು ಗೆದ್ದರೆ ಮಾವನಿಗೂ ಅವನ ಬಗ್ಗೆ ಖುಷಿಯಾಗುತ್ತದೆ, ಆಗ ಅವರು ಮನೆ ಬಿಟ್ಟು ಹೋಗಲು ಅವಕಾಶವಾಗುವುದಿಲ್ಲ, ಇಲ್ಲೇ ಉಳಿದುಕೊಳ್ತಾರೆ ಎಂದು ಅತ್ತೆ ಕಿವಿ ಚುಚ್ಚುತ್ತಾಳೆ.
ನೀಲು ಮಾತನ್ನು ಕೇಳಿ ರೇಣುಕಾ ಸಿಟ್ಟಾಗುತ್ತಾಳೆ. ಸಿದ್ದುವನ್ನು ಚುನಾವಣೆಗೆ ನಿಲ್ಲಿಸಲು ನಾನು ಬಿಡುವುದಿಲ್ಲ ಎಂದು ಜವರೇಗೌಡ ಬಳಿ ಬಂದು ಮರೀಗೌಡನನ್ನು ಎಲೆಕ್ಷನ್‌ಗೆ ನಿಲ್ಲಿಸುವಂತೆ ಹೇಳುತ್ತಾಳೆ. ಸಿದ್ದು ಜೊತೆ ಮನೆಯವರನ್ನು ಜವರೇಗೌಡ ಮಾತನಾಡಲು ಕರೆಯುತ್ತಾನೆ. ಭಾವನಾಗೆ ಕೂಡಾ ಚುನಾವಣೆ ವಿಚಾರ ತಿಳಿಯುತ್ತದೆ. ಪಕ್ಷದ ಕಾರ್ಯಕರ್ತರು ಸಿದ್ದೇಗೌಡನ ಪರ ಒಲವು ತೋರಿಸುತ್ತಿದ್ದಾರೆ ಎಂದು ಜವರೇಗೌಡ ಹೇಳುತ್ತಾನೆ. ಹೌದು, ಸಿದ್ದು ಜನರ ಪ್ರೀತಿ ಗಳಿಸಿದ್ದಾನೆ. ನೀವು ಚುನಾವಣೆಯಲ್ಲಿ ಗೆಲ್ಲಲು ಕೂಡಾ ಅವನೆ ಕಾರಣ, ನಾನು ಎಲೆಕ್ಷನ್‌ಗೆ ನಿಲ್ಲುವುದಕ್ಕಿಂತ ಅವನೇ ನಿಂತರೆ ಸರಿ ಎನ್ನುತ್ತಾನೆ. ಸಿದ್ದು ಏನೂ ಮಾತನಾಡದೆ ಸುಮ್ಮನಾಗುತ್ತಾನೆ.
ನಾನು ನಿಮ್ಮನ್ನು ಬಿಟ್ಟು ಬೇರೆ ಏನೂ ಬಯಸಲಿಲ್ಲ ಎಂದು ಭಾವನಾಗೆ ಹೇಳಿದ ಸಿದ್ದು
ಗಂಡನ ಮೌನ ನೋಡಿದ ಭಾವನಾ, ನಿಮ್ಮ ತಂದೆ ಅಷ್ಟೆಲ್ಲಾ ಮಾತನಾಡುತ್ತಿದ್ದರೂ ನೀವು ಏಕೆ ಮೌನವಾಗಿ ಕುಳಿತುಕೊಂಡಿದ್ದೀರಿ? ನಿಮಗೆ ಚುನಾವಣೆಯಲ್ಲಿ ಭಾಗವಹಿಸಲು ಇಷ್ಟವಿಲ್ಲವೇ ಎಂದು ಕೇಳುತ್ತಾಳೆ. ನಾನು ಹಾಗೂ ಅಣ್ಣ ಇದುವರೆಗೂ ಏನೇ ಮಾಡಿದ್ದರೂ, ಅದು ಅಪ್ಪನಿಗಾಗಿ, ಅವರ ರಾಜಕೀಯ ಭವಿಷ್ಯಕ್ಕಾಗಿ , ನನಗೆ ಯಾವ ಪದವಿಯ ಆಸೆಯೂ ಇಲ್ಲ, ನಾನು ಜೀವನದಲ್ಲಿ ಬೇಕು ಅಂತ ಇಷ್ಟಪಟ್ಟಿದ್ದು ನಿಮ್ಮನ್ನು ಮಾತ್ರ ಎನ್ನುತ್ತಾನೆ. ಅದನ್ನು ಕೇಳಿ ಭಾವನಾಗೆ ಏನು ಹೇಳಬೇಕೆಂದು ತಿಳಿಯುವುದಿಲ್ಲ.
ಇತ್ತ ಮನೆಗೆ ಬಂದ ಸ್ನೇಹಿತನ ಬಳಿ ಜಯಂತ್, ಮನೆಯವರ ಮುಂದೆ ನಾವು ಒಟ್ಟಿಗೆ ಅನಾಥಾಶ್ರಮದಲ್ಲಿ ಬೆಳೆದ ವಿಚಾವನ್ನು ಹೇಳದಿರುವಂತೆ ತಿಳಿಸುತ್ತಾನೆ. ಆದರೆ ಜಯಂತ್ ಹೀಗೇಕೆ ಹೇಳುತ್ತಿದ್ದಾನೆ ಎಂದು ಅವನಿಗೆ ಅರ್ಥವಾಗುವುದಿಲ್ಲ, ನಿನ್ನ ಹೆಂಡತಿ ಬಳಿ ಏನಾದರೂ ಮುಚ್ಚಿಡುತ್ತಿದ್ದೀಯ? ಮುಂದೆ ಅವರಿಗೆ ವಿಚಾರ ಗೊತ್ತಾದರೆ ಬೇಜಾರು ಮಾಡಿಕೊಳ್ಳುತ್ತಾರೆ ಎನ್ನುತ್ತಾನೆ. ಆದರೆ ಜಯಂತ್, ಸ್ನೆಹಿತನಿಗೆ ನಾವು ಒಟ್ಟಿಗೆ ಅನಾಥಾಶ್ರಮದಲ್ಲಿ ಬೆಳೆದದದ್ದು ಎಂಬ ವಿಚಾರವನ್ನು ಹೇಳಕೂಡದು ಎಂದು ಕಂಡಿಷನ್ ಮಾಡುತ್ತಾನೆ.
ಪಕ್ಷದ ಕಾರ್ಯಕರ್ತರ ಆಸೆಯಂತೆ ಸಿದ್ದೇಗೌಡ ಎಲೆಕ್ಷನ್‌ನಲ್ಲಿ ಭಾಗವಹಿಸುತ್ತಾನಾ? ಜಯಂತ್ ಸ್ನೇಹಿತ ಜಾಹ್ನವಿ ಬಳಿ ಎಲ್ಲಾ ಸತ್ಯ ಹೇಳುತ್ತಾನಾ? ಕಾದು ನೋಡಬೇಕು.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
ವಿಭಾಗ