ನಿಮ್ಮ ಸೊಸೆ ಈ ಮನೆಯ ಅದೃಷ್ಟ ದೇವತೆ, ಭಾವನಾ ಬಗ್ಗೆ ಗುರುಗಳು ಹೇಳಿದ ಮಾತು ಕೇಳಿ ಆಶ್ಚರ್ಯಗೊಂಡ ಜವರೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ನಿಮ್ಮ ಸೊಸೆ ಈ ಮನೆಯ ಅದೃಷ್ಟ ದೇವತೆ, ಭಾವನಾ ಬಗ್ಗೆ ಗುರುಗಳು ಹೇಳಿದ ಮಾತು ಕೇಳಿ ಆಶ್ಚರ್ಯಗೊಂಡ ಜವರೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

ನಿಮ್ಮ ಸೊಸೆ ಈ ಮನೆಯ ಅದೃಷ್ಟ ದೇವತೆ, ಭಾವನಾ ಬಗ್ಗೆ ಗುರುಗಳು ಹೇಳಿದ ಮಾತು ಕೇಳಿ ಆಶ್ಚರ್ಯಗೊಂಡ ಜವರೇಗೌಡ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 27ರ ಎಪಿಸೋಡ್‌ನಲ್ಲಿ ಭಾವನಾ ಈ ಮನೆಯ ಅದೃಷ್ಟ ದೇವತೆ, ಅವಳು ಕಾಲು ಇಟ್ಟ ಕಡೆ ಗೆಲುವು ದೊರೆಯುತ್ತದೆ ಎಂದು ಗುರುಗಳು ಹೇಳಿದ ಮಾತು ಕೇಳಿ ಜವರೇಗೌಡ ಆಶ್ಚರ್ಯ ವ್ಯಕ್ತಪಡಿಸುತ್ತಾನೆ.

ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 27ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್‌ 27ರ ಎಪಿಸೋಡ್‌ (PC: Zee Kannada)

Lakshmi Nivasa Serial: ವೆಂಕಿ ಮನೆ ಬಿಟ್ಟು ಹೋಗಿ ಚೆಲ್ವಿಯ ಮನೆಯಲ್ಲಿ ಉಳಿದುಕೊಂಡಿದ್ದಾನೆ. ಎಲ್ಲರಿಂದ ದೂರವಾಗಿ ವೆಂಕಿ ಹಾಗೂ ಚೆಲ್ವಿ ಕಣ್ಣೀರಿಡುತ್ತಿದ್ದಾರೆ. ಸಂತೋಷ್‌, ದೊಡ್ಡಣ್ಣನನ್ನು ಮನೆಯಿಂದ ಹೊರ ಕಳಿಸಿರುವ ವಿಚಾರ ಕೇಳಿ ಭಾವನಾ, ಜಾಹ್ನವಿ ಕೂಡಾ ಶಾಕ್‌ ಆಗಿದ್ದಾರೆ. ನಾನು ವೆಂಕಿಯನ್ನು ನೋಡಲೇಬೇಕು ಎಂದು ಜಾಹ್ನವಿ, ಜಯಂತ್‌ ಬಳಿ ಹಟ ಹಿಡಿದು ಕುಳಿತಿದ್ದಾಳೆ. ಜಾಹ್ನವಿ ಅಳುವುದನ್ನು ನೋಡಲಾಗದೆ ಜಯಂತ್‌, ಅವಳ ಮನೆಯವರನ್ನು ಬೈದುಕೊಳ್ಳುತ್ತಾನೆ.

ವೆಂಕಿ ಅಣ್ಣನನ್ನು ನೋಡಲು ಹಂಬಲಿಸುತ್ತಿರುವ ಜಾಹ್ನವಿ

ಜಾಹ್ನವಿ ತಾಯಿ ಆಗುತ್ತಿರುವ ವಿಚಾರ ತಿಳಿದು ಲಕ್ಷ್ಮೀ ಖುಷಿಯಾಗಿದ್ದಾಳೆ. ಈ ಸಿಹಿಸುದ್ದಿಯನ್ನು ಮನೆಯಲ್ಲಿ ಎಲ್ಲರೊಂದಿಗೂ ಹಂಚಿಕೊಂಡಿದ್ದಾಳೆ. ಮನೆಯಲ್ಲಿ ವೀಣಾ ಸಿಹಿ ತಯಾರಿಸಿದ್ದಾಳೆ. ಈ ವಿಚಾರವನ್ನು ಹೇಗಾದರೂ ಮಾಡಿ ವೆಂಕಿಗೆ ತಿಳಿಸಬೇಕೆಂದು ಲಕ್ಷ್ಮೀ ಪ್ರಯತ್ನಿಸುತ್ತಾಳೆ. ಆದರೆ ಸಂತೋಷ್‌ ಮಾತ್ರ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.‌ ಶ್ರೀನಿವಾಸ್‌, ವೆಂಕಿ ಮನೆಗೆ ಬರುತ್ತಾನೆ. ಅಪ್ಪನನ್ನು ಕಂಡು ವೆಂಕಿಗೆ ಬಹಳ ಖುಷಿಯಾಗುತ್ತದೆ. ಅವನನ್ನು ನೋಡಿ ಅಪ್ಪಿಕೊಂಡು ಸಂತೋಷ ವ್ಯಕ್ತಪಡಿಸುತ್ತಾನೆ. ಮಾವ ಬಂದಿದ್ದಕ್ಕೆ ಚೆಲ್ವಿ ಕೂಡಾ ಖುಷಿಯಾಗುತ್ತಾಳೆ. ವೆಂಕಿ ಅಪ್ಪನಿಗೂ ತನ್ನ ಕೈಯಾರೆ ಊಟ ತಿನ್ನಿಸುತ್ತಾನೆ, ಶ್ರೀನಿವಾಸ್‌ ಕೂಡಾ ಮಗನಿಗೆ ಕೈ ತುತ್ತು ಕೊಡುತ್ತಾರೆ.

ಮತ್ತೊಂದೆಡೆ ಜವರೇಗೌಡ ಚುನಾವಣೆಯಲ್ಲಿ ಗೆದ್ದಿದ್ದಾನೆ. ಭಾವನಾಳನ್ನು ಮನೆಯಿಂದ ಹೊರ ಕಳಿಸುವಂತೆ ರೇಣುಕಾ, ಜವರೇಗೌಡನಿಗೆ ಹೇಳುತ್ತಾಳೆ. ಸ್ವಲ್ಪ ಸಮಯ ಕೊಡು ಈಗಷ್ಟೇ ಚುನಾವಣೆಯಲ್ಲಿ ಗೆದ್ದಿದ್ದೇನೆ, ಎಲ್ಲರ ಕಣ್ಣು ನನ್ನ ಮೇಲಿರುತ್ತದೆ ಎಂದು ಜವರೇಗೌಡ ಹೇಳುತ್ತಾನೆ. ಅಷ್ಟರಲ್ಲಿ ಮನೆಗೆ ಗುರುಗಳು ಬರುತ್ತಾರೆ. ಗುರುಗಳನ್ನು ಜವರೇಗೌಡ ಒಳಗೆ ಬರಮಾಡಿಕೊಂಡು ಭಕ್ತಿಯಿಂದ ಕೈ ಮುಗಿದು ಕೂರುತ್ತಾನೆ. ಈ ಮನೆಯಲ್ಲಿ ಸಮಸ್ಯೆ ಇದೆ, ಭೂತಕಾಲ ನಿಮ್ಮ ಮನಸ್ಸನ್ನು ಘಾಸಿ ಮಾಡಿದ್ದು ಭವಿಷ್ಯ ಹೇಗೋ ಎಂಬ ಚಿಂತಿಯಲ್ಲಿದ್ದೀರಿ. ಈ ಎಲ್ಲಾ ಸಮಸ್ಯೆಗಳಿಗೆ ನೀವು ಮಾಡಿದ ಕರ್ಮಗಳೇ ಕಾರಣ ಎನ್ನುತ್ತಾರೆ. ಅದನ್ನು ಕೇಳಿ ಜವರೇಗೌಡ ತಾನು ಮಾಡಿದ ಆಕ್ಸಿಡೆಂಟ್‌ ನೆನಪಿಸಿಕೊಳ್ಳುತ್ತಾನೆ.

ಭಾವನಾ ಈ ಮನೆಯ ಅದೃಷ್ಟಲಕ್ಷ್ಮೀ ಎಂದ ಗುರುಗಳು

ಮಗಳು ಹೊಸ್ತಿಲು ದಾಟಿ ತವರು ಮನೆಗೆ ಬಂದಿದ್ದಾಳೆ. ನೀವು ನಿಮ್ಮ ಮಗಳಿಗೆ ಬುದ್ಧಿ ಹೇಳಿದರೆ ಅವಳ ಬಾಳು ಬಂಗಾರವಾಗುತ್ತದೆ ಎಂದಾಗ ಜವರೇಗೌಡ ಸರಿ ಗುರುಗಳೇ ಎನ್ನುತ್ತಾನೆ. ಮರೀಗೌಡನ ಕಡೆ ನೋಡುವ ಗುರುಗಳು, ಶುಧ್ಧವಾದ ಮನಸ್ಸು ತಂದೆ ತಾಯಿ ಮಾತಿಗೆ ತಲೆ ಬಾಗುತ್ತಿದೆ. ಆದರೆ ಪಕ್ಕದಲ್ಲೇ ತಲೆ ತೆಗೆಯುವ ಯೋಜನೆಗಳೂ ಇದೆ. ಅದರೆ ಅದೆಲ್ಲಾ ಎಂದಿಗೂ ಫಲಿಸುವುದಿಲ್ಲ ಎಂದು ಮರೀಗೌಡನ ಹೆಂಡತಿ ಬಗ್ಗೆ ಹೇಳುತ್ತಾರೆ. ಅಷ್ಟರಲ್ಲಿ ಭಾವನಾ ಹಾಗೂ ಸಿದ್ದೇಗೌಡ ಅಲ್ಲಿಗೆ ಬರುತ್ತಾರೆ.

ಮೋಸದಿಂದ ಮದುವೆ ಆದರೂ ಆ ಉದ್ದೇಶ ಒಳ್ಳೆಯದಾಗಿತ್ತು, ಮುಂದಿನ ದಿನಗಳಲ್ಲಿ ಖಂಡಿತ ಒಳ್ಳೆಯದಾಗುತ್ತದೆ. ಈ ಮಗುವಿನ ಮುಖದಲ್ಲಿ ದೈವಿ ಕಳೆ ಇದೆ. ಈ ಹುಡುಗಿ ಹುಟ್ಟಿದ್ದು, ಬೆಳೆದದ್ದು ಕಷ್ಟಗಳ ಮಡುವಿನಲ್ಲಾದರೂ ಕಾಲಿಟ್ಟ ಮನೆಗೆ ಕನಕಧಾರೆಯಾಗುತ್ತಾಳೆ. ಇವಳ ಬದುಕೆಲ್ಲಾ ಸೋಲು ಕಂಡಿದ್ದರೂ ಇವಳು ಹೋದ ಕಡೆ ಗೆಲುವಿನ ಬುತ್ತಿ, ಈಕೆ ನಿಮ್ಮ ಮನೆಗೆ ಅದೃಷ್ಟ ತಂದಿದ್ದಾಳೆ. ಇಂದು ನೀವು ಚುನಾವಣೆಯಲ್ಲಿ ಗೆಲ್ಲಲು ಇವಳೇ ಕಾರಣ, ನಿಮ್ಮ ಸೊಸೆಯ ಕಾಲು ಗುಣದಿಂದ ನಿಮ್ಮ ರಾಜಕೀಯ ಭವಿಷ್ಯ ಉಜ್ವಲವಾಗುತ್ತದೆ, ಒಂದು ವೇಳೆ ಇವಳು ಮನೆ ಬಿಟ್ಟು ಹೋದರೆ ಆ ಕ್ಷಣದಿಂದಲೇ ನಿಮ್ಮ ಮುಂದೆ ನತದೃಷ್ಟ ಬಂದು ನಿಲ್ಲುತ್ತೆ ಎಚ್ಚರ ಇದು ಸತ್ಯ ಎಂದು ಹೇಳಿ ಗುರುಗಳು ಮಾತನಾಡಿ ಅಲ್ಲಿಂದ ಹೊರಡುತ್ತಾರೆ.

ಗುರುಗಳು ಹೇಳಿದ ಮಾತು ನಿಜವಾಗುತ್ತಾ? ಭಾವನಾಳನ್ನು ಜವರೇಗೌಡ ಮನೆಯಲ್ಲೇ ಉಳಿಸಿಕೊಳ್ಳುತ್ತಾನಾ? ಜಾಹ್ನವಿ ವೆಂಕಿಯನ್ನು ಭೇಟಿ ಮಾಡಲು ಜಯಂತ್‌ ಅವಕಾಶ ಮಾಡಿಕೊಡುತ್ತಾನಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner