ನಿಮ್ಮನ್ನು ಯಾವತ್ತಿಗೂ ಗಂಡ ಎಂದು ಒಪ್ಪಿಕೊಳ್ಳುವುದಿಲ್ಲ, ಸಿದ್ದೇಗೌಡ ಬಗ್ಗೆ ಕೋಪಗೊಂಡ ಭಾವನಾ; ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ನಿಮ್ಮನ್ನು ಯಾವತ್ತಿಗೂ ಗಂಡ ಎಂದು ಒಪ್ಪಿಕೊಳ್ಳುವುದಿಲ್ಲ, ಸಿದ್ದೇಗೌಡ ಬಗ್ಗೆ ಕೋಪಗೊಂಡ ಭಾವನಾ; ಲಕ್ಷ್ಮೀ ನಿವಾಸ ಧಾರಾವಾಹಿ

ನಿಮ್ಮನ್ನು ಯಾವತ್ತಿಗೂ ಗಂಡ ಎಂದು ಒಪ್ಪಿಕೊಳ್ಳುವುದಿಲ್ಲ, ಸಿದ್ದೇಗೌಡ ಬಗ್ಗೆ ಕೋಪಗೊಂಡ ಭಾವನಾ; ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 6ರ ಎಪಿಸೋಡ್‌ನಲ್ಲಿ ಸಿದ್ದೇಗೌಡ-ಭಾವನಾಳನ್ನು ಜವರೇಗೌಡ ದೇವಸ್ಥಾನಕ್ಕೆ ಕಳಿಸುತ್ತಾನೆ. ಅರ್ಚಕರ ಸೂಚನೆಯಂತೆ ಸಿದ್ದು ಭಾವನಾ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸುತ್ತಾನೆ. ನಿಮ್ಮನ್ನು ಗಂಡ ಅಂತ ಒಪ್ಪಿಕೊಳ್ಳುವುದಿಲ್ಲ ಎಂದು ಭಾವನಾ ಸಿದ್ದುಗೆ ಹೇಳುತ್ತಾಳೆ.

 ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 6ರ ಎಪಿಸೋಡ್‌
ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 6ರ ಎಪಿಸೋಡ್‌ (PC: Zee Kannada Facebook)

Lakshmi Nivasa Serial: ಸ್ವಾಮೀಜಿ ಹೇಳಿದ ಮಾತುಗಳನ್ನು ಕೇಳಿ ಜವರೇಗೌಡ ಖುಷಿಯಾಗಿದ್ದಾನೆ. ಸೊಸೆ ಮನೆಯಲ್ಲಿದ್ದರೆ ರಾಜಕೀಯ ಜೀವನದಲ್ಲಿ ತಾನು ಎತ್ತರಕ್ಕೆ ಬೆಳೆಯಬಹುದು ಎಂಬ ಕಾರಣಕ್ಕೆ ಜವರೇಗೌಡ, ಸಿದ್ದು ಹಾಗೂ ಭಾವನಾಳನ್ನು ಮನೆಯಿಂದ ಹೊರ ಕಳಿಸದೆ ಉಳಿಸಿಕೊಂಡಿದ್ದಾನೆ. ರೇಣುಕಾ ಎಷ್ಟೇ ಹೇಳಿದರೂ ಜವರೇಗೌಡ ಅವಳ ಮಾತನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ.

ಸಿದ್ದು-ಭಾವನಾಳನ್ನು ದೇವಸ್ಥಾನಕ್ಕೆ ಕಳಿಸುವ ಜವರೇಗೌಡ

ಹೊರಗಿನಿಂದ ಮನೆಗೆ ಬರುವ ಜವರೇಗೌಡ ಹಿರಿಯ ಮಗ ಮರೀಗೌಡನನ್ನು ಕರೆದು ನಮ್ಮ ಮನೆಯಲ್ಲಿ ಇಬ್ಬರು ಮಹಾನುಭಾವರಿದ್ದಾರಲ್ಲ ಅವರನ್ನು ಕರೆದುಕೊಂಡು ಬಾ ಎನ್ನುತ್ತಾನೆ. ಅಪ್ಪನ ಮಾತು ಕೇಳಿ ಮರೀಗೌಡ ಗಾಬರಿಯಾದರೆ ನೀಲು ಖುಷಿಯಾಗುತ್ತಾಳೆ. ಇನ್ನು ಸಿದ್ದು ಹಾಗೂ ಭಾವನಾಗೆ ಈ ಮನೆಯಲ್ಲಿ ಇದೇ ಕೊನೆಯ ದಿನ ಎನ್ನುವಂತೆ ನೀಲು ಯೋಚನೆ ಮಾಡುತ್ತಾಳೆ. ಮರೀಗೌಡ, ಭಾವನಾ ಸಿದ್ದುವನ್ನು ಕರೆತರುತ್ತಾನೆ. ಅಪ್ಪ ಏನು ಹೇಳುತ್ತಾರೋ ಎಂದು ಕಾಯುತ್ತಿದ್ದ ಸಿದ್ದುವಿಗೆ ಅವರ ಮಾತು ಕೇಳಿ ಖುಷಿಯಾಗುತ್ತದೆ. ನಮ್ಮ ಊರಿನ ದೇವಸ್ಥಾನದಲ್ಲಿ ಅಭಿಷೇಕಕ್ಕೆ ಕೊಟ್ಟಿದ್ದೆ, ಇಬ್ಬರೂ ಹೋಗಿ ಪೂಜೆ ಮಾಡಿಸಿ ಬನ್ನಿ ಎಂದಾಗ ಸಿದ್ದುವಿಗೆ ಖುಷಿಯಾಗುತ್ತದೆ. ಭಾವನಾಳನ್ನು ಕೂಡಾ ಮಾತನಾಡಿಸುವ ಜವರೇಗೌಡ, ಹೋಗವ್ವ ಅವನ ಜೊತೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಾ ಎಂದಾಗ ಭಾವನಾಗೆ ಆಶ್ಚರ್ಯವಾಗುತ್ತದೆ. ಮರೀಗೌಡನೂ ಇದರಿಂದ ಖುಷಿಯಾಗುತ್ತಾನೆ. ಆದರೆ ನೀಲು ಮಾತ್ರ, ತನ್ನ ಪ್ಲ್ಯಾನ್‌ ಎಲ್ಲಾ ಉಲ್ಟಾ ಹೊಡೆಯುತ್ತಿದೆ ಎಂದು ಬೇಸರಗೊಳ್ಳುತ್ತಾಳೆ.

ನಿಮ್ಮನ್ನು ಗಂಡ ಅಂತ ಒಪ್ಪಿಕೊಳ್ಳುವುದಿಲ್ಲವೆಂದು ಸಿದ್ದುಗೆ ಹೇಳಿದ ಭಾವನಾ

ಭಾವನಾ ಹಾಗೂ ಸಿದ್ದು ಇಬ್ಬರೂ ದೇವಸ್ಥಾನಕ್ಕೆ ಹೋಗುತ್ತಾರೆ. ಅರ್ಚಕರು ಸಿದ್ದುವನ್ನು ಕರೆದು ಮಾತನಾಡಿಸುತ್ತಾರೆ. ಸಿದ್ದೇಗೌಡ, ಭಾವನಾ ಹೆಸರಿಗೆ ಅರ್ಚನೆ ಮಾಡಿಸುತ್ತಾನೆ. ಅರ್ಚಕರು ಮಂಗಳಾರತಿ ತಂದು ಭಾವನಾಗೆ ಕುಂಕುಮ ಹಚ್ಚಿ, ಹೂ ಮುಡಿಸುವಂತೆ ಹೇಳುತ್ತಾರೆ. ಭಾವನಾ ಮುಜುಗರಿಂದ ಸುಮ್ಮನಿದ್ದರೆ, ಸಿದ್ದು ಮಾತ್ರ ಖುಷಿಯಿಂದಲೇ ಅರ್ಚಕರು ಹೇಳಿದ್ದನ್ನೆಲ್ಲಾ ಮಾಡುತ್ತಾನೆ. ಪೂಜೆ ಮುಗಿಸಿ ಹೊರ ಬರುವ ಭಾವನಾ, ಮನೆಯಲ್ಲಿ ನಿಮ್ಮ ಕಷ್ಟ ಸುಖ ವಿಚಾರಿಸಲು ಯಾರೂ ಇಲ್ಲ ಎಂಬ ಕಾರಣಕ್ಕೆ ನಾನು ನಿಮ್ಮ ಜೊತೆ ಮಾತನಾಡುತ್ತಿದ್ದೇನೆ. ನಿಮ್ಮ ಜೊತೆ ಮಾತನಾಡಿದ ಮಾತ್ರಕ್ಕೆ, ನಿಮ್ಮ ಮನೆಯಲ್ಲಿ ಇರುವ ಮಾತ್ರಕ್ಕೆ ನಿಮ್ಮನ್ನು ಗಂಡ ಎಂದು ನಾನು ಯಾವತ್ತಿಗೂ ಒಪ್ಪಿಕೊಳ್ಳುವುದಿಲ್ಲ ಎನ್ನುತ್ತಾಳೆ.

ಸಿದ್ದು ಹಾಗೂ ಗೌಡ್ರು ಇಬ್ಬರೂ ಒಂದೇ ಎಂದ ನಿಜ ಲಕ್ಷ್ಮೀಗೆ ಗೊತ್ತಾಯ್ತು

ಚೆಲ್ವಿ-ವೆಂಕಿಯನ್ನು ನೋಡಲು ಹೋಗಿದ್ದ ಲಕ್ಷ್ಮೀ ಅಲ್ಲಿಂದ ದೇವಸ್ಥಾನಕ್ಕೆ ಬರುತ್ತಾಳೆ. ಅಲ್ಲಿ ಮಗಳನ್ನು ನೋಡಿ ಖುಷಿಯಾಗುತ್ತಾಳೆ. ಕೋಪಗೊಂಡ ಭಾವನಾಳನ್ನು ಸಮಾಧಾನಮಾಡುವ ಸಲುವಾಗಿ ಸಿದ್ದೇಗೌಡ, ಗೌಡ್ರು ನಂಬರ್‌ನಿಂದ ಮಾತನಾಡೋಣ ಎಂದು ಬೇರೆ ನಂಬರ್‌ನಿಂದ ಭಾವನಾಗೆ ಕರೆ ಮಾಡುತ್ತಾನೆ. ಗೌಡ್ರು ಕರೆ ಮಾಡಿದ್ದಕ್ಕೆ ಖುಷಿಯಾದ ಭಾವನಾ ಅವನೊಂದಿಗೆ ಮಾತಿನಲ್ಲಿ ನಿರತಳಾಗುತ್ತಾಳೆ. ನೀನು ಮಾತನಾಡುತ್ತಿರು ನಾನು ದೇವರ ದರ್ಶನ ಮಾಡಿಬರುತ್ತೇನೆ ಎಂದು ಲಕ್ಷ್ಮೀ ಅಲ್ಲಿಂದ ಹೊರಡುತ್ತಾಳೆ. ಅಷ್ಟರಲ್ಲಿ ಶ್ರೀನಿವಾಸ್‌ ಖುಷಿಯನ್ನು ಸ್ಕೂಲ್‌ನಿಂದ ಕರೆತಂದು ಲಕ್ಷ್ಮೀ ಬಳಿ ಬಿಟ್ಟು ಹೋಗುತ್ತಾನೆ. ಸಿದ್ದೇಗೌಡ ಹಾಗೂ ಭಾವನಾ ದೂರ ನಿಂತು ಮಾತನಾಡುತ್ತಿದ್ದನ್ನು ನೋಡಿ ಲಕ್ಷ್ಮೀ ಆಶ್ಚರ್ಯಗೊಳ್ಳುತ್ತಾಳೆ. ಸಿದ್ದು ಎಂದರೆ ಭಾವನಾ ಕೋಪಗೊಳ್ಳುತ್ತಾಳೆ, ಅಂತದ್ದರಲ್ಲಿ ಫೋನಿನಲ್ಲಿ ಇಷ್ಟು ಚೆನ್ನಾಗಿ ಮಾತನಾಡುತ್ತಿದ್ದಾಳೆ , ಏನೂ ಅರ್ಥವಾಗದೆ ಗೊಂದಲಕ್ಕೆ ಒಳಗಾಗುತ್ತಾಳೆ. ಮತ್ತೇನು ಸಂಚು ಮಾಡಬೇಕೆಂದುಕೊಂಡಿದ್ದೀಯ ಎಂದು ಕೋಪದಿಂದ ಸಿದ್ದುವನ್ನು ಕೇಳುತ್ತಾಳೆ. ಸಿದ್ದು, ವಿಧಿ ಇಲ್ಲದೆ ಲಕ್ಷ್ಮೀ ಅತ್ತೆ ಬಳಿ ಎಲ್ಲವನ್ನೂ ಹೇಳಿಬಿಡುತ್ತಾನೆ. ಭಾವನಾಗೆ ನಾನೇ ಗೌಡ್ರು ಅಂತ ಗೊತ್ತಿಲ್ಲ ಎನ್ನುತ್ತಾನೆ.

ಸಿದ್ದು, ಗೌಡ್ರು ಇಬ್ಬರೂ ಒಂದೇ ಅಂತ ಭಾವನಾಗೆ ಲಕ್ಷ್ಮೀ ಹೇಳುತ್ತಾಳಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner