ಅಪ್ಪನ ದುಡ್ಡು ಕದಿಯಲು ಸಂತೋಷ್, ಹರೀಶ್ ತಂತ್ರ; ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದ ಲಕ್ಷ್ಮೀ: ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಪ್ಪನ ದುಡ್ಡು ಕದಿಯಲು ಸಂತೋಷ್, ಹರೀಶ್ ತಂತ್ರ; ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದ ಲಕ್ಷ್ಮೀ: ಲಕ್ಷ್ಮೀ ನಿವಾಸ ಧಾರಾವಾಹಿ

ಅಪ್ಪನ ದುಡ್ಡು ಕದಿಯಲು ಸಂತೋಷ್, ಹರೀಶ್ ತಂತ್ರ; ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದ ಲಕ್ಷ್ಮೀ: ಲಕ್ಷ್ಮೀ ನಿವಾಸ ಧಾರಾವಾಹಿ

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಶ್ರೀನಿವಾಸ್ ಮಕ್ಕಳಾದ ಸಂತೋಷ್ ಮತ್ತು ಹರೀಶ್ ಇಬ್ಬರೂ ಅಪ್ಪನ ಬಳಿ ಇರುವ ಸ್ವಲ್ಪ ದುಡ್ಡನ್ನು ಹೇಗಾದರೂ ಮಾಡಿ ಲಪಟಾಯಿಸಬೇಕು ಎಂದು ಸಂಚು ರೂಪಿಸುತ್ತಿದ್ದಾರೆ. ಇತ್ತ ಲಕ್ಷ್ಮೀ ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದಿದ್ದಾಳೆ.

ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರ ಫೆಬ್ರುವರಿ 10ರ ಸಂಚಿಕೆ
ಲಕ್ಷ್ಮೀ ನಿವಾಸ ಧಾರಾವಾಹಿ ಸೋಮವಾರ ಫೆಬ್ರುವರಿ 10ರ ಸಂಚಿಕೆ (Zee Kannada)

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಭಾವನಾ ಜೊತೆ ಸಿದ್ದೇಗೌಡ್ರು ಆತ್ಮೀಯವಾಗಿ ಮಾತನಾಡಿದ್ದಾರೆ. ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಮಾತನಾಡಿಕೊಂಡಿದ್ದು, ಭಾವನಾ ಮನೆಯ ಪರಿಸ್ಥಿತಿ ಹೀಗಾಗಿರುವುದಕ್ಕೆ ಸಿದ್ಧೇಗೌಡ ಬೇಸರ ವ್ಯಕ್ತಪಡಿಸಿದ್ದಾನೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ, ನೀವೇನೂ ಚಿಂತಿಸಬೇಡಿ ಮೇಡಂ ಎಂದು ಸಿದ್ದೇಗೌಡ ಭಾವನಾಗೆ ಧೈರ್ಯ ತುಂಬಿದ್ದಾನೆ. ಅವನ ಮಾತು ಕೇಳಿ ಭಾವನಾಗೆ ಕೊಂಚ ಸಮಾಧಾನವಾಗಿದೆ. ಬಳಿಕ ಸಿದ್ದೇಗೌಡ, ಮೇಡಂ ನೀವು ತಪ್ಪು ತಿಳಿಯದಿದ್ದರೆ ನಾನೊಂದು ಮಾತು ಹೇಳುವೆ ಎನ್ನುತ್ತಾನೆ. ಅದಕ್ಕೆ ಭಾವನಾ ಏನು ಎಂದಾಗ, ನಾವಿಬ್ಬರೂ ಜತೆಯಾಗಿ ಹೊರಗಡೆ ಹೋಗಿ ತುಂಬಾ ದಿನಗಳಾದವು, ಹೊರಗಡೆ ಹೋಗಿ ಸುತ್ತಾಡಿ ಬರೋಣ ಎನ್ನುತ್ತಾನೆ. ಭಾವನಾ ಅದಕ್ಕೆ ನಸುನಕ್ಕು ಒಪ್ಪಿಗೆ ಸೂಚಿಸುತ್ತಾಳೆ.

ಅಪ್ಪನ ದುಡ್ಡು ಕದಿಯಲು ಮಕ್ಕಳ ತಂತ್ರ

ಇತ್ತ ಮನೆಯನ್ನು ಭಾಗ ಮಾಡಿ, ಕಚ್ಚಾಡಿಕೊಂಡಿರುವ ಹರೀಶ್ ಮತ್ತು ಸಂತೋಷ್, ಮನೆಯ ಹಿಂಭಾಗದಲ್ಲಿ ಮತ್ತೆ ಭೇಟಿಯಾಗುತ್ತಾರೆ. ಇಬ್ಬರೂ ಸಿಗರೇಟ್ ಸೇದುತ್ತಾ ಮಾತುಕತೆ ಮುಂದುವರಿಸುತ್ತಾರೆ. ನಾವಿಬ್ಬರೂ ಬೇರೆಯಾದರೆ, ಬದುಕು ಅಷ್ಟೊಂದು ಸುಲಭವಾಗಿರುವುದಿಲ್ಲ. ಕಷ್ಟ ಬರುತ್ತದೆ, ಅದನ್ನು ನಿರ್ವಹಿಸಬೇಕು, ಅದಕ್ಕೆಲ್ಲಾ ದುಡ್ಡು ಬೇಕು ಎಂದು ಸಂತೋಷ್ ಹೇಳುತ್ತಾನೆ. ಹರೀಶ್ ಕೂಡ ನಿನ್ನೆ ಗಲಾಟೆಯಲ್ಲಿ ನಾವಿಬ್ಬರೂ ಸ್ವಲ್ಪ ಹೆಚ್ಚೇ ಮಾತನಾಡಿಕೊಂಡೆವು ಎಂದು ಹೇಳುತ್ತಾನೆ. ಆದರೆ ಅಪ್ಪನ ಬಳಿ ಇನ್ನೂ ಸ್ವಲ್ಪ ದುಡ್ಡು ಇದೆ, ಅದನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದಾರೆ. ಅದನ್ನು ನಾವಿಬ್ಬರೂ ತೆಗೆದುಕೊಂಡು, ಹಂಚಿಕೊಳ್ಳಬೇಕು, ಅದಕ್ಕಾಗಿ ಏನಾದರೂ ಪ್ಲ್ಯಾನ್ ಮಾಡಬೇಕು ಎಂದು ಯೋಚಿಸುತ್ತಾರೆ.

ಎಚ್ಚರ ತಪ್ಪಿ ಬಿದ್ದ ಲಕ್ಷ್ಮೀ

ಇತ್ತ ಮನೆಯ ಪರಿಸ್ಥಿತಿ ಕಂಡು ಲಕ್ಷ್ಮೀ ಅತ್ಯಂತ ಬೇಸರ ಪಟ್ಟುಕೊಂಡಿದ್ದಾಳೆ. ವೀಣಾ ಅವಳನ್ನು ಸಮಾಧಾನ ಮಾಡಿ ಕೂರಿಸುತ್ತಾಳೆ. ನಂತರ ವೀಣಾ ಅಡುಗೆ ಮಾಡಲು ಹೋಗುತ್ತಾಳೆ. ಅಡುಗೆ ಮಾಡುತ್ತಿರುವಾಗಲೇ, ಇದ್ದಕ್ಕಿದ್ದಂತೆ ಲಕ್ಷ್ಮೀ ಕುಸಿದು ಬೀಳುತ್ತಾಳೆ. ವೀಣಾ ಕೂಡಲೇ ಮಾವ ಶ್ರೀನಿವಾಸ್ ಅವರನ್ನು ಕರೆಯುತ್ತಾಳೆ. ಮಾವ ಕೂಡಲೇ ವೈದ್ಯರನ್ನು ಮನೆಗೆ ಕರೆದುಕೊಂಡು ಬರುತ್ತಾರೆ. ವೈದ್ಯರು ಲಕ್ಷ್ಮೀಯನ್ನು ಪರಿಶೀಲಿಸಿ, ಬಿಪಿ ಸ್ವಲ್ಪ ವ್ಯತ್ಯಾಸವಾಗಿದೆ, ಯಾವುದೋ ವಿಚಾರವನ್ನು ನೀವು ತುಂಬಾ ಹಚ್ಚಿಕೊಂಡಿದ್ದೀರಿ ಎಂದು ವೈದ್ಯರು ತಿಳಿಸಿ, ಚಿಂತಿಸಬೇಡಿ ಎಂದು ಹೇಳಿ ಹೋಗುತ್ತಾರೆ.

ಇತ್ತ ಮನೆಯಲ್ಲಿ ಜಾಹ್ನವಿಗೆ ಇನ್ನೂ ಗೊಂದಲ ಮುಂದುವರಿದಿದೆ. ಜಯಂತ್‌ನ ನಡೆ ಅವಳಿಗೆ ಇನ್ನಷ್ಟು ನಿಗೂಢವಾಗಿದೆ. ಮನೆಗೆ ಕಳ್ಳ ಬಂದಿರುವ ಬಗ್ಗೆಯೇ ಜಯಂತ್‌ ಚಿಂತೆ ಹೊಂದಿದ್ದಾನೆ, ಮನೆಗೆ ಸೆಕ್ಯುರಿಟಿ ಗಾರ್ಡ್ ಬೇಕು ಎಂದು ಹೇಳುತ್ತಾನೆ. ಅದಕ್ಕೆ ಜಾಹ್ನವಿ, ಅಷ್ಟೆಲ್ಲಾ ಯಾಕೆ ತಲೆಕೆಡಿಸಿಕೊಂಡಿದ್ದೀರಿ, ಸಿಸಿಟಿವಿಯಲ್ಲಿ ಹೇಗೂ ನಿಮಗೆ ಗೊತ್ತಾಗುತ್ತದೆ, ನೀವೇ ನೋಡುತ್ತೀರಲ್ಲಾ ಎಂದು ಹೇಳುತ್ತಾಳೆ. ಅದನ್ನು ಕೇಳಿ ಜಯಂತ್‌ಗೆ ಕಸಿವಿಸಿಯಾಗುತ್ತದೆ. ಅಲ್ಲಿಗೆ ಸೋಮವಾರದ ಸಂಚಿಕೆ ಕೊನೆಗೊಂಡಿದೆ. ಲಕ್ಷ್ಮೀ ನಿವಾಸದಲ್ಲಿ ಮುಂದೇನಾಗುವುದೋ ಎಂದು ಕಾದುನೋಡಬೇಕಿದೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು

ಸಿದ್ದೇಗೌಡ್ರು- ಧನಂಜಯ

ಭಾವನಾ- ದಿಶಾ ಮದನ್

ಲಕ್ಷ್ಮೀ- ನಟಿ ಶ್ವೇತಾ

ಶ್ರೀನಿವಾಸ್‌ - ಅಶೋಕ್ ಜೆಂಬೆ

ಹರೀಶ್‌ - ಅಜಯ್ ರಾಜ್

ಸಿಂಚನ - ರೂಪಶ್ರೀ

ಜಾಹ್ನವಿ - ಚಂದನ ಆನಂತಕೃಷ್ಣ

ಜಯಂತ್‌ - ದೀಪಕ್ ಸುಬ್ರಮಣ್ಯ

ಸಂತೋಷ್‌ - ಮಧು ಹೆಗಡೆ

ವೀಣಾ - ಲಕ್ಷ್ಮೀ ಹೆಗಡೆ

Whats_app_banner