ತಾಯವ್ವನ ಕೋಪಕ್ಕೆ ಬಲಿಯಾದ ಜೋಡಿ, ಹೆಂಡತಿ ಭಾವನಾ ಜೊತೆ ಮನೆ ಬಿಟ್ಟು ಹೊರಟ ಸಿದ್ದೇಗೌಡ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 20ರ ಎಪಿಸೋಡ್‌ನಲ್ಲಿ ಪೊಲೀಸ್ ಸ್ಟೇಷನ್‌ನಿಂದ ಮನೆಗೆ ಬಂದ ಭಾವಳಾನ್ನು ತಾಯವ್ವ ಮನೆ ಬಿಟ್ಟು ಹೋಗುವಂತೆ ಹೇಳುತ್ತಾಳೆ. ಹೆಂಡತಿಗೆ ಜಾಗ ಇಲ್ಲದ ಕಡೆ ನಾನೂ ಇರುವುದಿಲ್ಲ ಎಂದು ಸಿದ್ದು, ಭಾವನಾ ಜೊತೆ ಮನೆಬಿಟ್ಟು ಹೋಗುತ್ತಾನೆ.

Lakshmi Nivasa Serial: ತಾನು ಮದುವೆ ಆಗಬೇಕು ಎಂದುಕೊಂಡಿದ್ದ ಶ್ರೀಕಾಂತ್ ಹಾಗೂ ಅವರ ಅಮ್ಮನ ಸಾವಿಗೆ ಕಾರಣರಾದವರು ಯಾರೆಂಬುದು ಗೊತ್ತಾಗಬೇಕು, ಖುಷಿಯಗೆ ನ್ಯಾಯ ಒದಗಿಸಬೇಕು ಎಂದು ಭಾವನಾ ಪೊಲೀಸರಿಗೆ ದೂರು ನೀಡುತ್ತಾಳೆ. ಪೊಲೀಸರು ಕಂಪ್ಲೇಂಟ್ ತೆಗೆದುಕೊಳ್ಳಲು ಹಿಂಜರಿದಾಗ ಧೈರ್ಯವಾಗಿ ಒಬ್ಬಳೇ ಧರಣಿ ಕೂರುತ್ತಾಳೆ. ಅವಳಿಗೆ ಸಿದ್ದೇಗೌಡ ಸಾಥ್ ನೀಡುತ್ತಾನೆ. ಭಾವನಾ ವಿಚಾರ ದೊಡ್ಡ ಸುದ್ದಿಯಾಗುತ್ತದೆ, ಅವಳನ್ನು ಟಿವಿಯಲ್ಲಿ ನೋಡಿ ಸಿದ್ದು ಅಜ್ಜಿ ತಾಯವ್ವ ಕೋಪಗೊಳ್ಳುತ್ತಾಳೆ.
ಭಾವನಾ ಕುಟುಂಬದಲ್ಲಿ ಅವಳ ಹೋರಾಟದ ವಿಚಾರ ಚರ್ಚೆ
ಸದ್ಯಕ್ಕೆ ಅವಳ ನಾಟಕ ಮುಗಿದರೆ ಸಾಕು, ಅವಳು ಕೊಟ್ಟ ದೂರನ್ನು ತೆಗೆದುಕೋ, ಮುಂದೆ ನೋಡೋಣ ಎಂದು ತಾಯವ್ವ, ಇನ್ಸ್‌ಪೆಕ್ಟರ್‌ಗೆ ಸೂಚಿಸುತ್ತಾಳೆ. ಅದರಂತೆ ಭಾವನಾ ಕೊಟ್ಟ ದೂರಿನ ಪ್ರತಿಯನ್ನು ಇನ್ಸ್‌ಪೆಕ್ಟರ್ ಪಡೆಯುತ್ತಾರೆ, ಅವರಿಗೆ ಧನ್ಯವಾದ ಹೇಳಿ ಇಬ್ಬರೂ ಅಲ್ಲಿಂದ ಹೊರಡುತ್ತಾರೆ. ಭಾವನಾ ಮಾಡಿದ ಹೋರಾಟ ಅವಳ ಕುಟುಂಬದಲ್ಲಿ ಸದ್ದು ಮಾಡಲು ಶುರುವಾಗಿದೆ, ಜಯಂತ್ ಕೂಡಾ ಅವಳನ್ನು ಟಿವಿಯಲ್ಲಿ ನೋಡಿ, ಭಾವನಾಗೆ ಇದು ಬೇಕಿತ್ತಾ ಎಂದು ಜಾನು ಬಳಿ ಕೇಳುತ್ತಾನೆ, ಹೌದು ಖಂಡಿತ ಬೇಕು, ಅವಳು ಆ ಮಗುವಿಗೆ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾಳೆ. ನನಗೆ ಹುಟ್ಟುವ ಮಗು ಕೂಡಾ ಧೈರ್ಯವಂತನಾಗಬೇಕು, ಯಾವುದನ್ನೂ ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳಬಾರದು ಎನ್ನುತ್ತಾಳೆ. ಇವಳು ನನ್ನ ಬಗ್ಗೆಯೇ ಹೇಳುತ್ತಿರಬಹುದಾ ಎಂದು ಜಯಂತ್ ಮನಸ್ಸಿನಲ್ಲಿ ಯೋಚಿಸುತ್ತಾನೆ.
ಶ್ರೀನಿವಾಸ್ ಮನೆಯಲ್ಲಿ ಸಂತೋಷ್ ಕೂಡಾ, ಭಾವನಾ ಹೋರಾಟ ಕಂಡು ಕೋಪಗೊಳ್ಳುತ್ತಾನೆ. ಇದು ಇವಳಿಗೆ ಬೇಕಿತ್ತಾ? ಆ ಖುಷಿ ಯಾರು? ಇವಳು ಹೆತ್ತ ಮಗುವಲ್ಲ, ಶ್ರೀಕಾಂತ್ ಜೊತೆ ಇವಳು ಮದುವೆ ಕೂಡಾ ಆಗಲಿಲ್ಲ, ಮತ್ತೊಬ್ಬರ ಮನೆ ಉಸಾಬರಿ ಇವಳಿಗೆ ಏಕೆ? ಮದುವೆ ಆಗಿ ಗಂಡನ ಮನೆಯಲ್ಲಿ ಸುಮ್ಮನಿರುವ ಬದಲಿಗೆ ಇದೆಲ್ಲಾ ಇವಳಿಗೆ ಏಕೆ ಬೇಕು? ನಮ್ಮೆಲ್ಲರ ಮಾನ ಮರ್ಯಾದೆ ಹರಾಜು ಹಾಕಿಬಿಟ್ಟಳು ಎಂದು ಅರಚಾಡುತ್ತಾನೆ,ದಯವಿಟ್ಟು ಹಾಗೆಲ್ಲಾ ಮಾತನಾಡಬೇಡ, ಅವಳು ಮಾಡುತ್ತಿರುವುದು ಸರಿ ಇದೆ, ಆ ಮಗುವಿಗೆ ನ್ಯಾಯ ಸಿಗಲು ಅವಳು ಹೋರಾಡುತ್ತಿದ್ದಾಳೆ, ನಿನಗೆ ಸಪೋರ್ಟ್ ಮಾಡಲು ಆಗದಿದ್ದರೆ ಸುಮ್ಮನಿದ್ದುಬಿಡು ಈ ರೀತಿ, ಭಾವನಾ ಬಗ್ಗೆ ಮಾತನಾಡಬೇಡ ಎಂದು ಶ್ರೀನಿವಾಸ್ , ಮಗನಿಗೆ ಬುದ್ಧಿ ಹೇಳುತ್ತಾನೆ.
ಭಾವನಾ ಜೊತೆ ಮನೆ ಬಿಟ್ಟು ಹೊರಟ ಸಿದ್ದು
ಇತ್ತ ಸಿದ್ದೇಗೌಡ ಹಾಗೂ ಭಾವನಾ ಪೊಲೀಸ್ ಸ್ಟೇಷನ್‌ನಿಂದ ಮನೆಗೆ ಬರುತ್ತಾರೆ. ಇಬ್ಬರನ್ನೂ ನೋಡುತ್ತಿದ್ದಂತೆ ತಾಯವ್ವ , ಬೈಯ್ಯಲು ಶುರು ಮಾಡುತ್ತಾಳೆ. ನಮ್ಮ ಮನೆ ಮಾನ ಮರ್ಯಾದೆ ಹರಾಜು ಹಾಕಿದವಳಿಗೆ ಇಲ್ಲಿ ಜಾಗ ಇಲ್ಲ, ಮನೆ ಬಿಟ್ಟು ಹೋಗು ಎನ್ನುತ್ತಾಳೆ. ಅವರು ಈ ಸಮಯದಲ್ಲಿ ಎಲ್ಲಿ ಹೋಗುತ್ತಾರೆ ಎಂದು ಸಿದ್ದು ಕೇಳುತ್ತಾನೆ, ಎಲ್ಲಿ ಬೇಕಾದರೂ ಹೋಗಲಿ ನೀನು ಒಳಗೆ ಬಾ ಎಂದು ತಾಯವ್ವ ಹೇಳುತ್ತಾಳೆ. ಇಲ್ಲ, ಅವರಿಗೆ ಜಾಗ ಇರದ ಮನೆಯಲ್ಲಿ ನಾನೂ ಇರುವುದಿಲ್ಲ. ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಭಾವನಾಳನ್ನು ಕರೆದುಕೊಂಡು ಮನೆಬಿಟ್ಟು ಹೋಗುತ್ತಾನೆ, ರೇಣುಕಾ, ಮರೀಗೌಡ ಎಷ್ಟು ಹೇಳಿದರೂ ಸಿದ್ದು ನಿಲ್ಲುವುದಿಲ್ಲ.
ಮಗ ಸೊಸೆ ಮನೆ ಬಿಟ್ಟು ಹೋದ ವಿಚಾರ ತಿಳಿದ ಜವರೇಗೌಡ ಏನು ಮಾಡುತ್ತಾನೆ? ಗುರುಗಳು ಹೇಳಿದಂತೆ ಭಾವನಾ ಮನೆ ಬಿಟ್ಟು ಹೋಗುತ್ತಿದ್ದಂತೆ ಜವರೇಗೌಡನಿಗೆ ಕೆಟ್ಟ ಕಾಲ ಶುರು ಆಗುತ್ತಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ