ಹೊಸ ಮನೆಯಲ್ಲಿ ಹತ್ತಿರವಾಗ್ತಿದ್ದಾರೆ ಸಿದ್ದೇಗೌಡ-ಭಾವನಾ; ಹೆಂಡತಿ ಮಾಡಿದ ಅಡುಗೆ ತಿಂದು ಖುಷಿ ಪಟ್ಟ ಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 23ರ ಎಪಿಸೋಡ್‌ನಲ್ಲಿ ಸಿದ್ದು, ಕೂಲಿ ಕೆಲಸ ಮಾಡವುದನ್ನು ಶ್ರೀನಿವಾಸ್ ನೋಡುತ್ತಾನೆ. ತನ್ನ ಮನೆಗೆ ಬರುವಂತೆ ಮಗಳು-ಅಳಿಯನಿಗೆ ಕರೆಯುತ್ತಾನೆ. ಅದರೆ ಭಾವನಾ ಅದಕ್ಕೆ ಒಪ್ಪುವುದಿಲ್ಲ. ಅವರಿಬ್ಬರೂ ಹತ್ತಿರವಾಗುತ್ತಿದ್ದಾರೆ ಎಂದು ತಿಳಿದು ಸಮಾಧಾನಗೊಳ್ಳುತ್ತಾನೆ.

Lakshmi Nivasa Serial: ಮನೆ ಬಿಟ್ಟು ಬಂದ ನಂತರ ಸ್ನೇಹಿತನ ಮನೆಯಲ್ಲಿ ಸಿದ್ದೇಗೌಡ ಹಾಗೂ ಭಾವನಾ ಹೊಸ ಜೀವನ ಶುರು ಮಾಡಿದ್ದಾರೆ. ಭಾವನಾ ಮಾಡಿದ ಅಡುಗೆ ತಿಂದು ಖುಷಿಯಾಗುತ್ತಾನೆ. ಮನೆಗೆ ರೇಷನ್ ತರುವಂತೆ ಭಾವನಾ, ತನ್ನ ಗಂಡ ಸಿದ್ದೇಗೌಡನಿಗೆ ಹೇಳುತ್ತಾಳೆ. ಸರಿ ಎಂದು ಹೇಳಿ ಹೊರಡುವ ಸಿದ್ದೇಗೌಡನಿಗೆ ನಂತರ ತನ್ನ ಬಳಿ ದುಡ್ಡು ಇಲ್ಲ ಎಂಬುದು ಅರಿವಾಗುತ್ತದೆ, ನನ್ನ ಬಳಿ ದುಡ್ಡಿಲ್ಲದಿದ್ದರೆ ಮೊದಲೆಲ್ಲಾ ಮನೆಯಲ್ಲಿ ರಾಜಾರೋಷವಾಗಿ ತೆಗೆದುಕೊಳ್ಳುತ್ತಿದ್ದೆ, ಆದರೆ ಈಗ ಪರಿಸ್ಥಿರಿ ಆ ರೀತಿ ಇಲ್ಲ, ನಾನು ಏನಾದರೂ ಕೆಲಸ ಮಾಡಲೇಬೇಕು ಎಂದು ನಿರ್ಧರಿಸುತ್ತಾನೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೂಲಿ ಕೆಲಸ ಮಾಡುವ ಸಿದ್ದೇಗೌಡ
ಸಿದ್ದು ಯಾರ ಬಳಿ ಹೋಗಿ ಕೇಳಿದರೂ ಕೆಲಸ ದೊರೆಯುವುದಿಲ್ಲ. ನೀವು ಎಮ್‌ಎಲ್‌ಎ ಮಗ. ನಿಮಗೆ ಕೆಲಸದ ಅವಶ್ಯಕತೆ ಏನಿದೆ? ನಿಮಗೆ ಕೆಲಸ ಕೊಟ್ಟರೆ ನಮ್ಮ ಕೆಲಸಕ್ಕೆ ತೊಂದರೆ ಆಗುತ್ತದೆ, ದಯವಿಟ್ಟು ನಮಗೆ ಮುಜುಗರ ಮಾಡಬೇಡಿ ಎಂದೇ ಎಲ್ಲರಿಂದ ಉತ್ತರ ಬರುತ್ತದೆ. ಕೊನೆಗೆ ವಿಧಿ ಇಲ್ಲದೆ ಸಿದ್ದೇಗೌಡ, ತನ್ನ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಮೂಟೆ ಹೊರುವ ಕೆಲಸ ಮಾಡುತ್ತಾನೆ. ಸಿದ್ದು, ಕೂಲಿ ಕೆಲಸ ಮಾಡುವುದನ್ನು ಶ್ರೀನಿವಾಸ್ ನೋಡುತ್ತಾನೆ. ಸಿದ್ದು ಎಂಥ ಒಳ್ಳೆ ಮನುಷ್ಯ, ಬೇರೆ ಯಾರಿಗೋ ಸಹಾಯ ಮಾಡಲು ಈ ಕೆಲಸ ಮಾಡುತ್ತಿದ್ದಾನೆ ಎಂದುಕೊಳ್ಳುತ್ತಾನೆ. ಆದರೆ ಸಿದ್ದು ಕೂಲಿ ಪಡೆಯುವುದನ್ನು ನೋಡಿ ಬೇಸರಗೊಳ್ಳುತ್ತಾನೆ.
ಸಿದ್ದುವನ್ನು ಹಿಂಬಾಲಿಸಿಕೊಂಡು ಶ್ರೀನಿವಾಸ್ ಮನೆಗೆ ಬರುತ್ತಾನೆ. ಅಲ್ಲಿ ಭಾವನಾ ಇರುವುದನ್ನು ನೋಡಿ ಶಾಕ್ ಆಗುತ್ತಾನೆ. ಇದ್ದಕ್ಕಿಂದಂತೆ ಅಪ್ಪ, ಮನೆಗೆ ಬಂದಿದ್ದನ್ನು ನೋಡಿ ಭಾವನಾ ಕೂಡಾ ಗಾಬರಿ ಆಗುತ್ತಾಳೆ. ಮಗಳು ಅಳಿಯ ಇಬ್ಬರೂ ಮನೆ ಬಿಟ್ಟು ಬಂದಿದ್ದಾರೆ ಎಂದು ತಿಳಿದು ಶ್ರೀನಿವಾಸ್ ಬೇಸರಗೊಳ್ಳುತ್ತಾನೆ. ನೀವು ನಮ್ಮ ಮನೆಗೆ ಬರಬಹುದಿತ್ತು, ನಿನಗಾಗಿ ಸಿದ್ದು ಕೂಲಿ ಕೆಲಸ ಮಾಡುತ್ತಿದ್ದಾನೆ ಎಂದು ಮಗಳಿಗೆ ಹೇಳುತ್ತಾನೆ. ನಾವು ಯಾರಿಗೂ ಹೊರೆಯಾಗಲು ಇಷ್ಟಪಡುವುದಿಲ್ಲ. ಕಷ್ಟವೋ ಸುಖವೋ ನಾನು ಸಿದ್ದು ಜೊತೆ ಬಾಳುತ್ತೇನೆ ಎನ್ನುತ್ತಾಳೆ. ಅದನ್ನು ಕೇಳಿ ಶ್ರೀನಿವಾಸ್‌ಗೆ ಖುಷಿ ಆದರೂ, ಮಗಳು ಅಳಿಯನಿಗೆ ಈ ಸ್ಥಿತಿ ಬಂತಲ್ಲಾ ಎಂಬ ಯೋಚನೆಯಲ್ಲೇ ಅಲ್ಲಿಂದ ಹೊರಡುತ್ತಾನೆ.
ವೆಂಕಿ-ಚೆಲ್ವಿಯನ್ನು ನೋಡಿ ಗಾಬರಿಯಾದ ಜಯಂತ್
ಮತ್ತೊಂದೆಡೆ ವೆಂಕಿ ಹಾಗೂ ಚೆಲ್ವಿ ಇಬ್ಬರೂ ಅಜ್ಜಿಯನ್ನು ನೋಡಲು ಜಾನು ಮನೆಗೆ ಬರುತ್ತಾರೆ. ಇದ್ದಕ್ಕಿದ್ದಂತೆ ಅವರಿಬ್ಬರೂ ಬಂದಿದ್ದನ್ನು ನೋಡಿ ಜಯಂತ್ ಗಾಬರಿಯಾಗುತ್ತಾನೆ. ಅಣ್ಣ-ಅತ್ತಿಗೆಯನ್ನು ನೋಡಿ ಜಾನು ಖುಷಿಯಾಗುತ್ತಾಳೆ. ಚೆಲ್ವಿ-ವೆಂಕಿ, ಮನೆಯಿಂದ ಜಾನುಗಾಗಿ ತಿಂಡಿಗಳನ್ನು ತರುತ್ತಾರೆ. ಅವಳಿಗಾಗಿ ಹೊಸ ಸೀರೆಯನ್ನೂ ಕೊಂಡು ತರುತ್ತಾರೆ. ಅಜ್ಜಿ ಮೆಡಿಕಲ್ ಖರ್ಚಿಗೆ ಆಗಲಿ ಎಂದು ಸ್ವಲ್ಪ ದುಡ್ಡನ್ನು ಜಯಂತ್‌ಗೆ ಕೊಡುತ್ತಾರೆ. ಅಣ್ಣ-ಅತ್ತಿಗೆಯನ್ನು ನೋಡಿ ಜಾನು ಖುಷಿಯಲ್ಲಿದ್ದರೆ, ಜಯಂತ್ ಮಾತ್ರ ಅವರನ್ನ ಆದಷ್ಟು ಇಲ್ಲಿಂದ ಯಾವಾಗ ಹೊರಡುವರೋ ಎಂದು ಕಾಯುತ್ತಿದ್ದಾನೆ.
ಭಾವನಾ-ಸಿದ್ದು ನಡುವೆ ಪ್ರೀತಿ ಅರಳುವುದಾ? ಅಜ್ಜಿಗೆ ಪ್ರಜ್ಞೆ ಬರುತ್ತಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ

ವಿಭಾಗ