ನಕಲಿ ಒಡವೆ ಕಂಡು ಕೂಗಾಡಿದ ಸಿಂಚನ; ಮನೆಯಲ್ಲಿ ಮತ್ತೊಂದು ರಹಸ್ಯ ಕ್ಯಾಮೆರಾ ಹುಡುಕಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಸಿಂಚನಾಗೆ ತನ್ನ ಒಡವೆಗಳು ಬದಲಾಗಿರುವುದು ಗೊತ್ತಾಗಿದೆ. ಮತ್ತೊಂದೆಡೆ ಮನೆಯಲ್ಲಿ ಇನ್ನೊಂದು ಕ್ಯಾಮೆರಾ ಇರುವುದನ್ನು ಕಂಡು ಜಾಹ್ನವಿ ಹೆದರಿದ್ದಾಳೆ. ಆ ಬಗ್ಗೆ ಅಮ್ಮನಿಗೆ ಫೋನ್ ಮಾಡಿ ಹೇಳಬೇಕು ಎಂದುಕೊಂಡಿದ್ದಾಳೆ.

Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಮನೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸುವಾಗ, ಹರೀಶ್ ಮತ್ತು ಸಂತೋಷ್, ಶ್ರೀನಿವಾಸ್ ಅವರಲ್ಲಿ ರಾತ್ರಿ ಪಾಳಿಯ ವಿಚಾರ ತೆಗೆದಿದ್ದಾರೆ. ಅಪ್ಪ ಯಾಕೆ ರಾತ್ರಿ ಪಾಳಿ ಕೆಲಸ ಮಾಡಬೇಕು? ಅದರಲ್ಲೂ ಸೆಕ್ಯುರಿಟಿ ಗಾರ್ಡ್ ಕೆಲಸ ಯಾಕೆ ಬೇಕಿತ್ತು? ನಮ್ಮ ಮನೆಯ ಮತ್ತು ನಮ್ಮೆಲ್ಲರ ಮಾನ ಹರಾಜು ಹಾಕುತ್ತಿದ್ದೀರಿ, ಆಟೋ ಓಡಿಸಿದರೆ ಸಾಕಾಗುವುದಿಲ್ಲವೇ ಎಂದು ಕೇಳಿದ್ದಾರೆ. ಹರೀಶ್ ಕೂಡ, ಅಪ್ಪ ಹಾಗೆಲ್ಲಾ ರಾತ್ರಿ ಪಾಳಿ ಸೆಕ್ಯುರಿಟಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ, ನಮ್ಮ ಬೀಗರಿಗೆ ಗೊತ್ತಾದರೆ ಇನ್ನಷ್ಟು ಸಮಸ್ಯೆಯಾಗುತ್ತದೆ, ಅದಕ್ಕೆ ಅವಕಾಶ ಕೊಡಬೇಡಿ, ಬೇರೆ ಏನಾದರೂ ಕೆಲಸ ಮಾಡಿ ಎಂದು ಹೇಳಿ ಹೋಗುತ್ತಾನೆ. ಮಕ್ಕಳ ಮಾತು ಕೇಳಿ ಬೆಸರಪಟ್ಟುಕೊಂಡ ಶ್ರೀನಿವಾಸ್, ತಿಂಡಿ ತಿನ್ನದೇ ಹೊರಟುಹೋಗುತ್ತಾರೆ.
ಮತ್ತೊಂದು ಕ್ಯಾಮೆರಾ ಕಂಡ ಜಾಹ್ನವಿ
ಮನೆಯಲ್ಲಿ ಈಗಾಗಲೇ ಗೊಂಬೆಯಲ್ಲಿ ಕ್ಯಾಮೆರಾ ಕಂಡ ಜಾಹ್ನವಿ, ಹೆದರಿದ್ದಾಳೆ. ಜತೆಗೆ ಜಯಂತ್ ಮೊಬೈಲ್ ತೆಗೆದು ನೋಡಿದಾಗ, ಅದಕ್ಕೆ ಪಾಸ್‌ವರ್ಡ್ ಲಾಕ್ ಇದ್ದಿದ್ದರಿಂದ ನೋಡಲಾಗಲಿಲ್ಲ. ಹೀಗಾಗಿ ತಾನೇ ಮನೆಯಲ್ಲಿ ಹುಡುಕುತ್ತಾ ನೋಡಿದಾಗ, ಹಾಲ್‌ನಲ್ಲಿರುವ ಟಿವಿಯ ಮೇಲ್ಭಾಗದಲ್ಲಿ ಒಂದು ಕ್ಯಾಮೆರಾ ನೋಡಿದ್ದಾಳೆ. ಹೆದರಿಕೊಂಡ ಅವಳಿಗೆ, ಹೇಗೆ ಜಯಂತ್‌ಗೆ ನನ್ನ ಎಲ್ಲ ಆಗುಹೋಗುಗಳು ತಿಳಿಯುತ್ತದೆ ಎಂದು ಕಂಡುಕೊಳ್ಳುತ್ತಾಳೆ. ಆದರೆ ಅದನ್ನು ಕೇಳುವ ಧೈರ್ಯ ಅವಳಲ್ಲಿ ಇರುವುದಿಲ್ಲ. ಹೀಗಾಗಿ ಅಮ್ಮನಿಗೆ ಕರೆ ಮಾಡಿ ಈ ಸಂಗತಿಯನ್ನು ಹೇಳುವ ಪ್ರಯತ್ನವನ್ನು ಮಾಡುತ್ತಾಳೆ, ಆದರೆ ಅದಕ್ಕೆ ಸೂಕ್ತ ಅವಕಾಶ ದೊರಕುವುದಿಲ್ಲ. ಕರೆ ಮಾಡಿದಾಗ, ಅಲ್ಲೇ ಪಕ್ಕದಲ್ಲಿ ಜಯಂತ್ ಇದ್ದಿದ್ದರಿಂದ ಅಮ್ಮನಲ್ಲಿ ಈ ವಿಚಾರ ಹೇಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ಕನ್ನಿಕಾಗೆ ಚಾಲೆಂಜ್ ಮಾಡಿ ಹೊರಟ ಭಾಗ್ಯ; ಸೂರ್ಯವಂಶಿ ಕುಟುಂಬದಲ್ಲಿ ಕೋಲಾಹಲ: ಭಾಗ್ಯಲಕ್ಷ್ಮೀ ಧಾರಾವಾಹಿ
ನಕಲಿ ಒಡವೆ ಪತ್ತೆಹಚ್ಚಿದ ಸಿಂಚನ
ಕಾರ್ಯಕ್ರಮಕ್ಕೆ ಹೊರಡುವುದರ ಮೊದಲು ಸಿಂಚನ ಮನೆಯಲ್ಲಿದ್ದ ಒಡವೆ ಧರಿಸಿಕೊಂಡು ಹೋಗಿದ್ದಳು, ಆದರೆ ಮತ್ತೆ ಅವಳಿಗೆ ಸಂಶಯ ಬಂದು ಪರಿಶೀಲಿಸಿದಾಗ, ಅವೆಲ್ಲವೂ ನಕಲಿ ಎಂದು ಗೊತ್ತಾಗಿದೆ. ಅಳುತ್ತಾ ಬಂದು ಇವೆಲ್ಲವೂ ನಕಲಿ ಒಡವೆಗಳು, ಒಡವೆ ಎಲ್ಲವೂ ಬದಲಾಗಿದೆ. ಇದು ನಾನು ಖರೀದಿಸಿದ ಒಡವೆ ಅಲ್ಲ, ಅಂಗಡಿಯಲ್ಲೂ ಪರಿಶೀಲಿಸಿದ್ದೇನೆ, ಮನೆಯಲ್ಲೂ ಕೇಳಿದ್ದೇನೆ, ಆದರೆ ಈಗ ಒಡವೆ ಬದಲಾಗಿದೆ, ಇದಕ್ಕೆಲ್ಲಾ ನೀವೇ ಕಾರಣ, ನಿಮ್ಮ ಮನೆಯವರೇ ಇದನ್ನು ತೆಗೆದು ಬದಲಿಸಿದ್ದಾರೆ ಎಂದು ಆರೋಪ ಮಾಡುತ್ತಾಳೆ. ಆಗ ಹರೀಶ್‌ಗೆ ಹೆದರಿಕೆ ಉಂಟಾಗುತ್ತದೆ. ಅದು ಹಾಗೆ, ಹೀಗೆ, ಪೊಲೀಸ್ ದೂರು ಎಲ್ಲ ಬೇಡ, ಇನ್ನೊಮ್ಮೆ ಸರಿಯಾಗಿ ಪರಿಶೀಲಿಸಿ ನೋಡೋಣ ಎಂದು ಹೇಳುತ್ತಾನೆ. ಆದರೆ ಸಿಂಚನಾಗೆ ಸಮಾಧಾನವಾಗುವುದಿಲ್ಲ.
ಇದನ್ನೂ ಓದಿ: ಕೆಲಸಕ್ಕೆ ರಿಸೈನ್ ಮಾಡಿ ಹೊರನಡೆದ ಭಾಗ್ಯ; ಶ್ರೇಷ್ಠಾಗೆ ಶಹಬ್ಬಾಸ್ ಎಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
ಸಿದ್ದೇಗೌಡ್ರನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೊರಟ ಭಾವನಾ
ಇತ್ತೀಚೆಗೆ ತುಂಬಾ ಡಲ್ ಆಗಿರುವ ಸಿದ್ಧೇಗೌಡ್ರನ್ನು ಭಾವನಾ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲು ಮುಂದಾಗಿದ್ದಾಳೆ. ಸಿದ್ದೇಗೌಡ ಮನಸ್ಸಿನಲ್ಲಿಯೇ ಕೊರಗುತ್ತಿದ್ದು, ಭಾವನಾ ಮುಂದೆ ಆಕ್ಸಿಡೆಂಟ್ ಸಂಗತಿಯನ್ನು ಬಾಯಿಬಿಡುತ್ತಾನೆಯೇ ಎಂದು ಕಾದುನೋಡಬೇಕಿದೆ.
ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರಧಾರಿಗಳು
ಸಿದ್ದೇಗೌಡ್ರು- ಧನಂಜಯ
ಭಾವನಾ- ದಿಶಾ ಮದನ್
ಲಕ್ಷ್ಮೀ- ನಟಿ ಶ್ವೇತಾ
ಶ್ರೀನಿವಾಸ್ - ಅಶೋಕ್ ಜೆಂಬೆ
ಹರೀಶ್ - ಅಜಯ್ ರಾಜ್
ಸಿಂಚನ - ರೂಪಶ್ರೀ
ಜಾಹ್ನವಿ - ಚಂದನ ಆನಂತಕೃಷ್ಣ
ಜಯಂತ್ - ದೀಪಕ್ ಸುಬ್ರಮಣ್ಯ
ಸಂತೋಷ್ - ಮಧು ಹೆಗಡೆ
ವೀಣಾ - ಲಕ್ಷ್ಮೀ ಹೆಗಡೆ
