OTT Crime Thriller: ಕನ್ನಡದಲ್ಲೂ ನೋಡಿ ಮಲಯಾಳಂನ ಸೂಪರ್ ಹಿಟ್ ಕ್ರೈಮ್ ಥ್ರಿಲ್ಲರ್ ಗೋಲಂ; ಈ ಒಟಿಟಿಯಲ್ಲಿ ಸ್ಟ್ರೀಮಿಂಗ್
Golam Movie: ಮಲಯಾಳಂನ ಗೋಲಂ ಸಿನಿಮಾವನ್ನೂ ನೀವೀಗ ಕನ್ನಡದಲ್ಲಿಯೂ ನೋಡಬಹುದು. ಈ ಹಿಂದೆಯೇ ಕೇವಲ ಮಲಯಾಳಿಯಲ್ಲಿ ಮಾತ್ರ ಸ್ಟ್ರೀಮಿಂಗ್ ಆರಂಭಿಸಿದ್ದ ಈ ಸಿನಿಮಾ, ವೀಕ್ಷಕರಿಂದ ಮೆಚ್ಚುಗೆ ಸಿಗುತ್ತಿದ್ದಂತೆ, ಇದೀಗ ಇತರೆ ನಾಲ್ಕು ಭಾಷೆಗಳಿಗೂ ಡಬ್ ಆಗಿದೆ.
OTT Crime Thriller: ಮಲಯಾಳಂ ಕ್ರೈಮ್ ಥ್ರಿಲ್ಲರ್ ಗೋಲಂ ಸಿನಿಮಾ ಈ ವರ್ಷದ ಜೂನ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ನೋಡುಗರಿಂದ ಮತ್ತು ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. ಪಾಸಿಟಿವ್ ಟಾಕ್ ಪಡೆದಿರುವ ಈ ಸಿನಿಮಾದಲ್ಲಿ ರಂಜಿತ್ ಸಂಜೀವ್ ಮತ್ತು ದಿಲೀಶ್ ಪೋತನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಜಾದ್ ನಿರ್ದೇಶನದ ಈ ಸಿನಿಮಾಕ್ಕೆ ಒಟಿಟಿಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಇದೇ ಸಿನಿಮಾ ಮೂಲ ಭಾಷೆಯ ಜತೆಗೆ ಕನ್ನಡದಲ್ಲಿಯೂ ಸ್ಟ್ರೀಮಿಂಗ್ ಆರಂಭಿಸಿದೆ.
ಸ್ಟ್ರೀಮಿಂಗ್ ಎಲ್ಲಿ?
ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಗೋಲಂ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಈ ಮಲಯಾಳಂ ಚಿತ್ರ ಕನ್ನಡ, ತೆಲುಗು, ತಮಿಳು, ಮತ್ತು ಹಿಂದಿಯಲ್ಲೂ ಇಂದಿನಿಂದ ವೀಕ್ಷಣೆಗೆ ಲಭ್ಯವಿದೆ. ಈ ಮೂಲಕ ಒಟ್ಟು ಐದು ಭಾಷೆಗಳಲ್ಲಿ ಗೋಲಂ ಸ್ಟ್ರೀಮಿಂಗ್ ಆರಂಭಿಸಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಗೋಲಂ ಸಿನಿಮಾ ಬಿಡುಗಡೆಯಾಗಿತ್ತು. ಕೇವಲ ಮಲಯಾಳಂನಲ್ಲಿ ಮಾತ್ರ ಸ್ಟ್ರೀಮಿಂಗ್ ಆರಂಭಿಸಿದ್ದರೂ, ಉತ್ತಮ ವೀವ್ಸ್ ಪಡೆದಿತ್ತು. ಇದೀಗ ಇದೇ ಸಿನಿಮಾ ಹೆಚ್ಚಿನ ವೀಕ್ಷಕರನ್ನು ತಲುಪಲು ನಾಲ್ಕು ಭಾಷೆಗಳಲ್ಲಿ ಡಬ್ ಮಾಡಲಾಗಿದೆ.
ಗೋಲಂ ಸಿನಿಮಾ ಕೊಲೆ ಪ್ರಕರಣದ ತನಿಖೆಯ ಸುತ್ತ ಸುತ್ತುತ್ತದೆ. ನಿರ್ದೇಶಕ ಸಂಜದ್ ಈ ಚಿತ್ರವನ್ನು ಹಿಡಿತದ ನಿರೂಪಣೆಯೊಂದಿಗೆ ನಿರ್ದೇಶಿಸಿದ್ದಾರೆ. ರಂಜಿತ್ ಸಂಜೀವ್, ದಿಲೀಶ್ ಜೊತೆಗೆ ಸನ್ನಿ ವೈನ್, ಅಲೆನ್ಸಿಯರ್ ಲೆ ಲೋಪೆಜ್, ಸಿದ್ದಿಕಿ, ಚಿನ್ನು ಚಾಂದಿನಿ, ಶ್ರೀಕಾಂತ್ ಮುರಳಿ, ಅನ್ಸಲ್ ಪಲ್ಲರುಟಿ, ಸುಧಿ ಕೋಝಿಕ್ಕೋಡ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಗೋಲಂ ಚಿತ್ರವನ್ನು ಫ್ರಾಗ್ರಾಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನ್ನೆ ಸಂಜೀವ್ ಮತ್ತು ಸಂಜೀವ್ ಪಿಕೆ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅಭಿ ಸಾಲ್ವಿನ್ ಥಾಮಸ್ ಸಂಗೀತ ಸಂಯೋಜಿಸಿದ್ದು, ವಿಜಯ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರ ಥಿಯೇಟರ್‌ಗಳಲ್ಲಿ ಪಾಸಿಟಿವ್ ಟಾಕ್ ಪಡೆದು ಉತ್ತಮ ಕಲೆಕ್ಷನ್ ಸಹ ಮಾಡಿದೆ.
ಗೋಲಂ ಕಥೆ ಏನು?
ವಿಟೆಕ್ ಕಂಪನಿ ಎಂಡಿ ಐಸಾಕ್ ಜಾನ್ (ದಿಲೀಶ್ ಪೋತನ್) ತನ್ನ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಾನೆ. ಬಾಗಿಲು ಒಳಗಿನಿಂದ ಲಾಕ್ ಆಗಿದೆ. ಇಸಾಕ್ ಆಕಸ್ಮಿಕವಾಗಿ ಬಿದ್ದು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ಹಂತದಲ್ಲಿ ವರದಿ ಮಾಡಿದ್ದಾರೆ. ಆದರೆ, ಎಎಸ್‌ಪಿ ಸಂದೀಪ್ (ರಂಜಿತ್ ಸಂಜೀವ್) ಇದು ಅಪಘಾತವಲ್ಲ ಕೊಲೆ ಎಂದು ಭಾವಿಸುತ್ತಾರೆ. ಯಾರೋ ಪ್ಲಾನ್ ಮಾಡಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತದೆ. ಇದರೊಂದಿಗೆ ತನಿಖೆ ಪ್ರಾರಂಭವಾಗುತ್ತದೆ. ಐಸಾಕ್ ಸಾವಿಗೆ ಕಾರಣವೇನು? ಆತನನ್ನು ಕೊಲೆ ಮಾಡಲಾಗಿದೆಯೇ? ಈ ವಿಷಯಗಳು ಗೋಲಂ ಸಿನಿಮಾದ ಕಥೆಯ ಕೇಂದ್ರವಾಗಿದೆ.