P Jayachandran: ಒಲವಿನ ಉಡುಗೊರೆ ಕೊಡಲೇನು ಹಾಡಿದ ಖ್ಯಾತ ಗಾಯಕ ಪಿ ಜಯಚಂದ್ರನ್ ಇನ್ನಿಲ್ಲ
P Jayachandran Death: ಖ್ಯಾತ ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ಇನ್ನಿಲ್ಲ. ಕನ್ನಡದಲ್ಲಿ ಅಂಬರೀಷ್ ಅಭಿನಯದ ಒಲವಿನ ಉಡುಗೊರೆ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’ ಹಾಡು ಹಾಡಿದ ಗಾಯಕ ಕೆಲಕಾಲದ ಅನಾರೋಗ್ಯದ ಬಳಿಕ ಇಂದು (ಜನವರಿ 9) ವಿಧಿವಶರಾದರು.
P Jayachandran Death: ವಿವಿಧ ಭಾಷೆಗಳಲ್ಲಿ 16000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದ ಖ್ಯಾತ ಗಾಯಕ ಪಿ ಜಯಚಂದ್ರನ್ ಗುರುವಾರ (ಜನವರಿ 9) ವಿಧಿವಶರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪಿ.ಜಯಚಂದ್ರನ್ ಅವರು ವಯೋ ಸಹಜ ಕಾಯಿಲೆಗೆ ತ್ರಿಶೂರ್ ಜಿಲ್ಲೆಯ ಅಮಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. "ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಕಾರಣ ಪಿ ಜಯಚಂದ್ರನ್ ಅವರನ್ನು ಬುಧವಾರ (ಜನವರಿ 8) ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಆದರೆ, ಇಂದು (ಜನವರಿ 9) ಸಂಜೆ ಅವರ ಮನೆಯಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆ ತರಲಾಯಿತು. ಸಂಜೆ 7.54ಕ್ಕೆ ಅವರು ಕೊನೆಯುಸಿರೆಳೆದರು" ಎಂದು ಅಮಲ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಜಯಚಂದ್ರನ್ ಅವರು ಪತ್ನಿ ಲಲಿತಾ, ಮಗಳು ಲಕ್ಷ್ಮಿ ಮತ್ತು ಮಗ ದೀನನಾಥನ್ ಅವರನ್ನು ಅಗಲಿದ್ದಾರೆ.
ಜಯಚಂದ್ರ ಅವರ ಅಂತ್ಯಕ್ರಿಯೆ ಶನಿವಾರ (ಜನವರಿ 11) ಅಪರಾಹ್ನ 3 ಗಂಟೆಗೆ ಚಂದಮಂಗಲದಲ್ಲಿರುವ ಅವರ ನಿವಾಸ ಪಲಿಯಾತ್ ಹೌಸ್‌ನಲ್ಲಿ ನಡೆಯಲಿದೆ. ಶುಕ್ರವಾರ ಬೆಳಗ್ಗೆ 8ರಿಂದ 10ರವರೆಗೆ ಪುನ್‌ಕುನ್ನಂನಲ್ಲಿರುವ ಅವರ ನಿವಾಸದಲ್ಲಿ ಹಾಗೂ 10ರಿಂದ ಮಧ್ಯಾಹ್ನ 12ರವರೆಗೆ ಕೇರಳ ಸಂಗೀತ ನಾಟಕ ಅಕಾಡೆಮಿಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಭಾವ ಗಾಯಕ ಪಿ ಜಯಚಂದ್ರನ್ ಅವರನ್ನು ನೆನಪಿಸುವ ಒಲವಿನ ಉಡುಗೊರೆ ಕೊಡಲೇನು
ಕನ್ನಡದಲ್ಲಿ ಅಂಬರೀಷ್ ಅಭಿನಯದ ಒಲವಿನ ಉಡುಗೊರೆ ಸಿನಿಮಾದ ‘ಒಲವಿನ ಉಡುಗೊರೆ ಕೊಡಲೇನು..’ ಹಾಡು ಹಾಡಿದ ಗಾಯಕ ಕೆಲಕಾಲದ ಅನಾರೋಗ್ಯದ ಬಳಿಕ ತಮ್ಮ ಜೀವನ ಪಯಣ ಕೊನೆಗೊಳಿಸಿದರು. ಮಲೆಯಾಳಿಗಳ ನಡುವೆ ಭಾವ ಗಾಯಕ ಎಂದೇ ಗುರುತಿಸಿಕೊಂಡಿದ್ದ ಪಿ ಜಯಚಂದ್ರನ್ ಕನ್ನಡದಲ್ಲಿ ಒಲವಿನ ಉಡುಗೊರೆ ಕೊಡಲೇನು ಮಾತ್ರವಲ್ಲದೇ, ಅಮೃತ ಘಳಿಗೆ ಸಿನಿಮಾದ “ಹಿಂದೂಸ್ತಾನವು ಎಂದೂ ಮರೆಯದ”, ರಂಗನಾಯಕಿ ಸಿನಮಾದ “ಮಂದಾರ ಪುಷ್ಪವು ನೀನು, ಹಂತಕನ ಸಂಚು ಚಿತ್ರದ ”ಜೀವನ ಸಂಜೀವನ", ಮಾನಸ ಸರೋವರ ಸಿನಿಮಾದ “ಚಂದ… ಚಂದ…”, ಪ್ರಾಯ ಪ್ರಾಯ ಪ್ರಾಯ ಸಿನಿಮಾದ “ಭೂಮಿ ತಾಯಾಣೆ, ನೀ ಇಷ್ಟ ಕಣೆ..” ಮುಂತಾದ ಹಾಡುಗಳನ್ನು ಭಾವ ತುಂಬಿ ಹಾಡಿದ್ದರು.
ಪಿ ಜಯಚಂದ್ರನ್ ಅವರ ಬದುಕಿನ ಹಾದಿ
ಪಿ ಜಯಚಂದ್ರನ್ ಅವರು ಕೇರಳದ ಕೊಚ್ಚಿಯಲ್ಲಿ 1944ರ ಮಾರ್ಚ್ 3 ರಂದು ಜನಿಸಿದರು. ತ್ರಿಪುಣಿತುರ ಕೋವಿಲಕಂನ ರವಿವರ್ಮ ಕೊಚ್ಚನಿಯನ್ ತಂಬುರಾನ್ ಮತ್ತು ಚೆಂದಮಂಗಲಂನ ಪಲಿಯಮ್ ಅರಮನೆಯ ಸುಭದ್ರ ಕುಂಞಮ್ಮ ದಂಪತಿಯ ಮೂರನೇ ಪುತ್ರ. ಈ ಕುಟುಂಬ ಕಾಲಾನುಕ್ರಮದಲ್ಲಿ ಇರಿಂಜಾಲಕುಡದಲ್ಲಿರುವ ಪಲಿಯಮ್ ಮನೆಗೆ ಸ್ಥಳಾಂತರಗೊಂಡಿತು. ಬಾಲ್ಯದಲ್ಲಿ ಸಾಂಪ್ರದಾಯಿಕ ತಾಳವಾದ್ಯ ವಾದನ ಕಲಿತರು. ಚೆಂಡೆ ಬಾರಿಸುವುದನ್ನೂ, ಮೃದಂಗ ವಾದನವನ್ನೂ ಅಭ್ಯಾಸ ಮಾಡಿದರು.
ಸಂಗೀತಾಸಕ್ತರೂ, ಗಾಯಕರೂ ಆಗಿದ್ದ ತಂದೆ ರವಿವರ್ಮ ಅವರು ಜಯಚಂದ್ರ ಅವರಲ್ಲಿ ಸಂಗೀತದ ಮೇಲೆ ಪ್ರೀತಿ ಹುಟ್ಟುವಂತೆ ಮಾಡಿದರು. ಅವರು ಶಾಲೆಯಲ್ಲಿ ಮತ್ತು ಹತ್ತಿರದ ಕ್ರಿಶ್ಚಿಯನ್ ಚರ್ಚ್‌ನಲ್ಲಿ ಆಗಾಗ್ಗೆ ಹಾಡುತ್ತಿದ್ದರು, ಚೆಂದಮಂಗಲಂನಲ್ಲಿರುವ ಪಲಿಯಂ ಸ್ಕೂಲ್, ಆಲುವಾ ಸೇಂಟ್ ಮೇರೀಸ್ ಹೈಸ್ಕೂಲ್ ಮತ್ತು ಇರಿಂಜಾಲಕುಡ ನ್ಯಾಷನಲ್ ಹೈಸ್ಕೂಲ್‌ಗಳಲ್ಲಿ ಶಾಲಾ ಶಿಕ್ಷಣ ಪೂರೈಸಿದರು. 1958 ರ ರಾಜ್ಯಮಟ್ಟ ಉದ್ಘಾಟನಾ ಶಾಲಾ ಯುವಜನೋತ್ಸವದಲ್ಲಿ, ಅವರು ಮೃದಂಗದಲ್ಲಿ ಪ್ರಥಮ ಮತ್ತು ಲಘು ಸಂಗೀತದಲ್ಲಿ ಎರಡನೇ ಸ್ಥಾನವನ್ನು ಪಡೆದರು. ಮಲಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಗಳಲ್ಲಿ 16000ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದರು.
ಅತ್ಯುತ್ತಮ ಹಿನ್ನೆಲೆ ಗಾಯಕ ಎಂಬ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 5 ಸಲ ಕೇರಳ ರಾಜ್ಯ ಚಲನಚಿತ್ರ ಪುರಸ್ಕಾರ, ಜೆಸಿ ಡೇನಿಯಲ್ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದರು.