Gurthunda Seethakalam flopped: ಕನ್ನಡದಲ್ಲಿ ಹಿಟ್, ತೆಲುಗಿನಲ್ಲಿ ಫ್ಲಾಪ್...ಹಾಕಿದ ಬಂಡವಾಳವನ್ನೂ ಗಳಿಸುವಲ್ಲಿ ವಿಫಲವಾಯ್ತಾ ಸಿನಿಮಾ?
'ಗುರ್ತುಂದಾ ಶೀತಕಾಲಂ' ಸಿನಿಮಾ ಒಂದೇ ವಾರದಲ್ಲಿ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದೆ. ಅಷ್ಟೇ ಅಲ್ಲ ಹಾಕಿದ ಬಂಡವಾಳ ಕಲೆಕ್ಷನ್ ಮಾಡುವಲ್ಲಿ ಕೂಡಾ ವಿಫಲವಾಗಿದೆ ಎನ್ನಲಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ತಯಾರಾಗಿದ್ದ ಸಿನಿಮಾ 39 ಲಕ್ಷ ಮಾತ್ರ ಗಳಿಸಿದ್ದು ನಿರ್ಮಾಪಕರಿಗೆ ವಿತರಕರಿಗೆ ದೊಡ್ಡ ನಷ್ಟವಾಗಿದೆ ಎಂದು ಟಾಲಿವುಡ್ ಸಿನಿಮಾ ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಕನ್ನಡದಿಂದ ಪರಭಾಷೆಗೆ, ಬೇರೆ ಭಾಷೆಗಳಿಂದ ಪರಭಾಷೆಗೆ ಅನೇಕ ಸಿನಿಮಾಗಳು ರೀಮೇಕ್ ಆಗಿವೆ. ಆಯಾ ಭಾಷೆಯಲ್ಲಿ ಹಿಟ್ ಆಗುವ ಸಿನಿಮಾಗಳನ್ನು ಪರಭಾಷೆಯವರು ಕೋಟಿಗಟ್ಟಲೆ ಹಣ ನೀಡಿ ರೈಟ್ ಖರೀದಿಸುತ್ತಾರೆ. ಆದರೆ ಹೀಗೆ ರೀಮೇಕ್ ಮಾಡಿದ ಸಿನಿಮಾಗಳಲ್ಲಿ ಕೆಲವು ಮೂಲ ಸಿನಿಮಾಗಿಂತ ದೊಡ್ಡ ಮಟ್ಟಿನ ಸದ್ದು ಮಾಡಿದರೆ, ಕೆಲವೇ ಕೆಲವು ಚಿತ್ರಗಳು ಫ್ಲಾಪ್ ಆಗುತ್ತವೆ. ಇದೀಗ 'ಲವ್ ಮಾಕ್ಟೇಲ್' ವಿಚಾರಲ್ಲಿ ಕೂಡಾ ಆಗಿರೋದು ಇದೇ.
ಕೃಷ್ಣ ಹಾಗೂ ಮಿಲನ ಅಭಿನಯದ ಕನ್ನಡದ 'ಲವ್ ಮಾಕ್ಟೇಲ್' ಸಿನಿಮಾ ಸಖತ್ ಹಿಟ್ ಆಗಿತ್ತು. 2020 ರಲ್ಲಿ ತೆರೆ ಕಂಡ ಈ ಸಿನಿಮಾವನ್ನು ಕೃಷ್ಣ ಟಾಕೀಸ್ ಬ್ಯಾನರ್ ಅಡಿ ಡಾರ್ಲಿಂಗ್ ಹಾಗೂ ಮಿಲನಾ ನಾಗರಾಜ್ ಜೊತೆ ಸೇರಿ ನಿರ್ಮಿಸಿದ್ದರು. ಚಿತ್ರಕ್ಕೆ ಕಥೆ ಬರೆದಿದ್ದ ಕೃಷ್ಣ ತಾವೇ ಈ ಸಿನಿಮಾವನ್ನು ನಿರ್ದೇಶಿಸಿ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದರು. ಆದಿ, ನಿಧಿ, ಜೋತಿ, ಅದಿತಿ, ವಿಜಯ್, ಸುಷ್ಮಾ ಪಾತ್ರಗಳು ಜನರಿಗೆ ಬಹಳ ಇಷ್ಟವಾಗಿತ್ತು. ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ರಚನಾ ಇಂದರ್, ಖುಷಿ ಆಚಾರ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಸಕ್ಸಸ್ ಆದ ಖುಷಿಯಲ್ಲಿ ಭಾಗ 2 ಕೂಡಾ ರಿಲೀಸ್ ಆಯ್ತು. ಆದರೆ ತೆಲುಗಿನಲ್ಲಿ ರೀಮೇಕ್ ಆದ ಆ ಸಿನಿಮಾ, ಸಿನಿಪ್ರಿಯರನ್ನು ಸೆಳೆಯುವನ್ನು ವಿಫಲವಾಗಿದೆ.
ಕನ್ನಡದ ಲವ್ ಮಾಕ್ಟೇಲ್, ತೆಲುಗಿನಲ್ಲಿ 'ಗುರ್ತುಂದಾ ಶೀತಕಾಲಂ' ಹೆಸರಿನಲ್ಲಿ ತಯಾರಾಗಿತ್ತು. ಈ ಚಿತ್ರವನ್ನು ನಾಗಶೇಖರ್ ಮೂವೀಸ್, ಮಣಿಕಂಠ ಎಂಟರ್‌ಟೈನ್ಮೆಂಟ್, ಶ್ರೀ ವೇದಾಕ್ಷರ ಮೂವೀಸ್ ಬ್ಯಾನರ್ ಅಡಿಯಲ್ಲಿ ಭಾವನಾ ರವಿ, ನಾಗಶೇಖರ್, ರಾಮಾರಾವ್ ಚಿಂತಪಲ್ಲಿ ಜೊತೆ ಸೇರಿ ನಿರ್ಮಿಸಿದ್ದರು. ಚಿತ್ರಕ್ಕೆ ಕನ್ನಡದ ನಾಗಶೇಖರ್ ನಿರ್ದೇಶನವಿತ್ತು. 'ಗುರ್ತುಂದಾ ಶೀತಕಾಲಂ' ಚಿತ್ರದಲ್ಲಿ ಸತ್ಯದೇವ್, ತಮನ್ನಾ, ಮೇಘಾ ಆಕಾಶ್, ಕಾವ್ಯ ಶೆಟ್ಟಿ, ಸುಹಾಸಿನಿ ಮಣಿರತ್ನಂ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಡಿಸೆಂಬರ್ 9 ರಂದು ಈ ಸಿನಿಮಾ ತೆರೆ ಕಂಡಿತ್ತು. ಆದರೆ ಈ ಸಿನಿಮಾ ತೆಲುಗು ಸಿನಿಪ್ರಿಯರನ್ನು ಸೆಳೆಯುವಲ್ಲಿ ವಿಫಲವಾಗಿದೆ.
'ಗುರ್ತುಂದಾ ಶೀತಕಾಲಂ' ಸಿನಿಮಾ ಒಂದೇ ವಾರದಲ್ಲಿ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದೆ. ಅಷ್ಟೇ ಅಲ್ಲ ಹಾಕಿದ ಬಂಡವಾಳ ಕಲೆಕ್ಷನ್ ಮಾಡುವಲ್ಲಿ ಕೂಡಾ ವಿಫಲವಾಗಿದೆ ಎನ್ನಲಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ತಯಾರಾಗಿದ್ದ ಸಿನಿಮಾ 39 ಲಕ್ಷ ಮಾತ್ರ ಗಳಿಸಿದ್ದು ನಿರ್ಮಾಪಕರಿಗೆ ವಿತರಕರಿಗೆ ದೊಡ್ಡ ನಷ್ಟವಾಗಿದೆ ಎಂದು ಟಾಲಿವುಡ್ ಸಿನಿಮಾ ತಜ್ಞರು ಲೆಕ್ಕಾಚಾರ ಹಾಕುತ್ತಿದ್ದಾರೆ. ಕನ್ನಡದಲ್ಲಿ ಹಿಟ್ ಆಗಿದ್ದ ಸಿನಿಮಾ ತೆಲುಗಿನಲ್ಲಿ ಫ್ಲಾಪ್ ಆಗಿದ್ದು ಏಕೆ ಎಂಬ ಚರ್ಚೆ ಶುರುವಾಗಿದೆ.