Ma Naana Superhero: ಅಪ್ಪ-ಮಗನ ಸಂಬಂಧದ ಭಾವುಕ ಸಿನಿಮಾ ಮಾ ನಾನಾ ಸೂಪರ್‌ಹೀರೋದಲ್ಲಿ ನೆಗೆಟಿವ್ ಅಂದ್ರೆ ಇದೊಂದೇ ಅಂಶ-ಡಾ ರೂಪಾ ರಾವ್ ಬರಹ
ತಂದೆಯಿಂದ ಬೇರ್ಪಟ್ಟ ಮಗ, ಅವನನ್ನು ಹುಡುಕಿಕೊಂಡು ಬರುವ ತಂದೆ. ದತ್ತು ಪಡೆದ ಮೇಲೆ ಮಗನನ್ನು ನಖಶಿಖಾಂತ ದ್ವೇಷಿಸುವ ಸಾಕು ತಂದೆ. ಆದರೂ ತನ್ನ ಸಾಕು ತಂದೆಯನ್ನೇ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗ. ಈ ಮೂರು ಪಾತ್ರಗಳಲ್ಲಿ ಕಲಾವಿದರು ತಮ್ಮ ನಟನೆಯಿಂದ ಕಣ್ಣೀರು ತರಿಸುತ್ತಾರೆ. ಡಾ ರೂಪಾ ರಾವ್ ಬರಹ
2024 ರಲ್ಲಿ ತೆರೆಕಂಡ ಕೌಟುಂಬಿಕ ಫ್ಯಾಮಿಲಿ ಡ್ರಾಮಾ ಸಿನಿಮಾ ಮಾ ನಾನಾ ಸೂಪರ್‌ಹೀರೋ ಸಿನಿಮಾ ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಭಿಲಾಷ್ ರೆಡ್ಡಿ ಕಂಕರ ಅವರು ನಿರ್ದೇಶಿಸಿ ಸಹ ಬರವಣಿಗೆಗಾರರಾಗಿಯೂ ಈ ಚಲನಚಿತ್ರಕ್ಕೆ ಕೆಲಸ ಮಾಡಿದ್ದರು. ಸುಧೀರ್ ಬಾಬು, ಸಯಾಜಿ ಶಿಂಧೆ, ಸಾಯಿ ಚಂದ್ ಮತ್ತು ಅರ್ನಾ ನಟನೆಯ ಈ ಸಿನಿಮಾ ವೀಕ್ಷಕರ ಮನಸಿನಾಳಲ್ಲಿ ಭಾವುಕ ಲೋಕವನ್ನೇ ಸೃಷ್ಟಿಸಿತ್ತು. ಮಾ ನಾನಾ ಸೂಪರ್‌ಹೀರೋ ಸಿನಿಮಾ ಕುರಿತು HT ಕನ್ನಡ ಅಂಕಣಕಾರ್ತಿ ರೂಪಾ ರಾವ್ ಅವರು ಬರೆದ ಈ ಅನನ್ಯ ಬರಹ ನಿಮ್ಮ ಮನಮುಟ್ಟದಿರದು.
ಮಾ ನಾನಾ ಸೂಪರ್ ಹೀರೋ
ಇತ್ತೀಚೆಗೆ ಫ್ಯಾಮಿಲಿ ಡ್ರಾಮಾಗಳನ್ನು ನೋಡುವುದೇ ಇಲ್ಲ ಎಂಬಷ್ಟು ಸಸ್ಪೆನ್ಸ್ ಥ್ರಿಲ್ಲರ್, ಸೈಫೈ ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದೆ. ಈ ಸಿನಿಮಾ ನೋಡಬೇಕನಿಸಿದ್ದು ಸುಧೀರ್ ಬಾಬುಗೋಸ್ಕರ ಅಷ್ಟೇ ಹೊರತು, ಯಾವುದೇ ನಿರೀಕ್ಷೆ ಇಟ್ಟಿರಲಿಲ್ಲ. ಆದ್ದರಿಂದಲೋ ಏನೋ ಬಹಳಷ್ಟು ಬೋನಸ್‌ನಂತೆ ಮಾ ನಾನಾ ಸೂಪರ್‌ಹೀರೋ ಸಿಕ್ಕಿತು. ಸಿನಿಮಾ ಕಥೆ ನಾವೆಲ್ಲಾ ನೋಡಿದ್ದೇನಲ್ಲ, ಆ ಕಾಲದಲ್ಲಿ ಬೇಕಾದಷ್ಟು ಬಂದು ಹೋಗಿವೆ. ತಂದೆಯಿಂದ ಬೇರ್ಪಟ್ಟ ಮಗ, ಅವನನ್ನು ಹುಡುಕಿಕೊಂಡು ಬರುವ ತಂದೆ. ದತ್ತು ಪಡೆದ ಮೇಲೆ ಮಗನನ್ನು ನಖಶಿಖಾಂತ ದ್ವೇಷಿಸುವ ಸಾಕು ತಂದೆ. ಆದರೂ ತನ್ನ ಸಾಕು ತಂದೆಯನ್ನೇ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗ. ಈ ಮೂರು ಪಾತ್ರಗಳಲ್ಲಿ ಕಲಾವಿದರು ತಮ್ಮ ನಟನೆಯಿಂದ ಕಣ್ಣೀರು ತರಿಸುತ್ತಾರೆ.
ಸುಧೀರ್ ಬಾಬು ಆಕ್ಷನ್ ಹೀರೋ ಆಗಿ ಗೊತ್ತಿತ್ತು. ಆದರೆ ಎಮೋಷನಲ್ ಆಗಿ ನಟಿಸುವುದನ್ನು ನೋಡುವುದೇ ಒಂದು ಬೇರೆಯೇ ಅನುಭವ. ತಂದೆಯ ಮೇಲಿನ ಪ್ರೀತಿ, ಅವನಿಂದ ನೋವು, ಅವಮಾನಗಳನ್ನು ಭರಿಸುತ್ತಲೇ ತನ್ನ ಸಾಕು ತಂದೆಯನ್ನು ಕಾಪಾಡಲು ಸ್ವಂತ ತಂದೆಯ ಹಣವನ್ನೇ ದರೋಡೆ ಮಾಡಲು ಮುಂದಾಗುವಾಗ ಅಪರಾಧಿ ಪ್ರಜ್ಞೆ ಇವೆಲ್ಲವೂ ಸೂಪರ್.
ಎಲ್ಲೋ ಅಲ್ಲಲ್ಲಿ ನಾಣಿಯ ನಟನೆ ಅನುಸರಿಸುತ್ತಿದ್ದಾರೇನೋ ಅನಿಸುವುದಾದರೂ ಅದರ ಪ್ರಮಾಣ ಜಾಸ್ತಿ ಅಲ್ಲ. ಇನ್ನು ಹಾಡುಗಳು ಮನಸನ್ನು ಅರಳಿಸುವುದರಲ್ಲಿ, ಕಲಕುವುದರಲ್ಲಿ ಗೆಲ್ಲುತ್ತವೆ. ಈ ಮೇಲಿನ ಮೂರು ಜನರನ್ನು ಬಿಟ್ಟು ಹೀರೋಯಿನ್ ಅನ್ನೂ ಸೇರಿಸಿ ಬೇರೆಯವರಿಗೆ ಸಿನಿಮಾದಲ್ಲಿ ಯಾವ ಕೆಲಸವೂ ಇಲ್ಲ.
ಅದೆಲ್ಲ ಇರಲಿ, ತೆಲುಗು ಚಿತ್ರದಲ್ಲಿ ಸಾಮಾನ್ಯವಾದ ಹೀರೋಗಿರಿ, ಹೊಡೆದಾಟ ಇಲ್ಲಿಲ್ಲ. ಇಲ್ಲಿ ಹೀರೋ ಸಾಮಾನ್ಯನಂತೆ ಹೊಡೆಸಿಕೊಳ್ಳುತ್ತಾನೆ. ಸರಿ ಅಂದರೆ ಯಾವಾಗಲೂ ಸರಿ. ಇಲ್ಲ, ತಪ್ಪೆಂದರೆ ಯಾವಾಗಲೂ ತಪ್ಪೇ ಮಾಡುವ ಹೀರೋನಲ್ಲಿ ಇಸಂ ಗಿಸಂ ಮಾತು ಏನೂ ಇಲ್ಲ .
ಸರಿ ತಪ್ಪುಗಳ ನಡುವೆ ಹೊಯ್ದಾಟ
ಚಿಕ್ಕ ವಯಸ್ಸಿನಿಂದ ತಂದೆಯನ್ನೋ ತಾಯಿಯನ್ನೋ ಅಥವಾ ಇಬ್ಬರನ್ನೂ ಕಳೆದುಕೊಂಡು ಬೆಳೆದವರಿಗೆ ಆಳವಾಗಿ ಮನ ಮುಟ್ಟುವ ಸಿನಿಮಾ ಇದು. ಜೊತೆಗೊಂದು ಸಣ್ಣ ಅಡ್ವೆಂಚರಸ್ ರಸ್ತೆ ಪ್ರಯಾಣವೂ ಇದೆ. ಅದನ್ನು ಸಿನಿಮಾ ನೋಡುತ್ತಲೇ ಸವಿಯಬೇಕು.
ಸಿನಿಮಾ ನೋಡುತ್ತಾ ಕೊನೆಕೊನೆಗೆ ಎಂದೋ ಗತದಲ್ಲಿ ಹೂತುಹೋದ ನನ್ನ ತಂದೆಯೂ 'ಮಗಳೇ ಬಾ ನಿನಗಾಗಿ ನಾನೇನೂ ಕೊಡಲಿಲ್ಲ, ಈಗ ಇದೋ ಎಲ್ಲವನ್ನೂ ಮರಳಿ ಹೊತ್ತು ತಂದಿದ್ದೇನೆ'' ಎಂದು ಬರಬಾರದೇ ಎನ್ನುವ ಹಂಬಲ ಕಾಡಿದ್ದೂ ನಿಜ. ಅದು ಖಂಡಿತಾ ಆಗುವುದಿಲ್ಲ ಎಂದು ಗೊತ್ತಿದ್ದರೂ..
ಈ ಸಿನಿಮಾ ಬಹುಶಃ ಎಲ್ಲವನ್ನೂ ಹೊಂದಿರುವವರಿಗೆ ಕನೆಕ್ಟ್ ಆಗುವುದಿಲ್ಲವೇನೋ. ಆದರೂ ಎಲ್ಲರೂ ಒಮ್ಮೆ ನೋಡಬಹುದಾದ ಸಿನಿಮಾ . ಅಮೇಜಾನ್ ಪ್ರೈಮ್‌ನಲ್ಲಿದೆ. ಜೊತೆಗೆ ಜೀ5 ನಲ್ಲಿಯೂ ಇದೆ.
ಮಾ ನಾನಾ ಸೂಪರ್‌ಹೀರೋ ಸಿನಿಮಾಕ್ಕೆ ನನ್ನ ರೇಟಿಂಗ್ 5ಕ್ಕೆ 4.5 ಸ್ಟಾರ್. ಇದರಲ್ಲಿ ಅರ್ಧ ಸ್ಟಾರ್ ಕಟ್ ಆಗಲು ತೆಲುಗು ಸಿನಿಮಾಗಳ ಸಾಮಾನ್ಯವಾದ ಕಾಕತಾಳೀಯ ದೃಶ್ಯಗಳು ಇಲ್ಲೂ ಇರೋದಷ್ಟೇ ಕಾರಣ.
ಡಾ ರೂಪಾ ರಾವ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.