ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ
ಕನ್ನಡ ಸುದ್ದಿ  /  ಮನರಂಜನೆ  /  ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ

ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ

ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ
ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ

ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಂತೋಷ್ ಕುಮಾರ್ ಎ. ಕೆ ಮತ್ತು ವಿದ್ಯಾ ಅವರು ನಿರ್ಮಿಸಿರುವ, ಕೆ.ರಾಮನಾರಾಯಣ್ ನಿರ್ದೇಶನದಲ್ಲಿ "ಕಾಮಿಡಿ ಕಿಲಾಡಿಗಳು" ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ʻಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಯಿತು. ಈ ಚಿತ್ರ ಮೇ 23ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

ನಿರ್ದೇಶಕ ರಾಮ್‌ನಾರಾಯನ್‌ ಮಾತು

ʻಕುಲದಲ್ಲಿ ಕೀಳ್ಯಾವುದೋʼ ಸಾರ್ವಕಾಲಿಕ ಜನಪ್ರಿಯ ಗೀತೆ.‌ ಇಂತಹ ಜನಪ್ರಿಯ ಗೀತೆಯ ಸಾಲನಿಟ್ಟುಕೊಂಡು ಹಾಡು ಬರೆಯುವುದು ಅಷ್ಟು ಸುಲಭದ ಮಾತಲ್ಲ. ಈ ಹಾಡನ್ನು ಯೋಗರಾಜ್ ಭಟ್ ಅವರ ಹತ್ತಿರ ಬರೆಸುವುದು ಅಂತ ನಿರ್ಧಾರವಾಯಿತು. ಆದರೆ ಅವರು ʻಮನದ ಕಡಲುʼ ಚಿತ್ರದ ಬಿಡುಗಡೆಯ ಬ್ಯುಸಿಯಲ್ಲಿದ್ದರು. ಹಾಗಾಗಿ ಅವರೇ ನನಗೆ ಈ ಹಾಡನ್ನು ಬರೆಯುವಂತೆ ಹೇಳಿದರು. ಆನಂತರ ನಾನೇ ಈ ಹಾಡು ಬರೆದೆ. ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಗೂ ಈ ಹಾಡು ಇಷ್ಟವಾಯಿತು. ಚೇತನ್ ಅವರು ಹಾಡಿರುವ ಈ ಶೀರ್ಷಿಕೆ ಗೀತೆಯಲ್ಲಿ ಯೋಗರಾಜ್ ಭಟ್ ಅಭಿನಯಿಸಿದ್ದಾರೆ ಎಂದರು ನಿರ್ದೇಶಕ ರಾಮ್‌‌ ನಾರಾಯಣ್.

ನಿರ್ದೇಶಕ ಯೋಗರಾಜ್‌ ಭಟ್‌ ಹೇಳುವುದೇನು?

ಡಾ. ರಾಜಕುಮಾರ್ ಅವರ ಜನ್ಮದಿನದಂದು ಹಿರಿಯರಾದ ಸಾಲುಮರದ ತಿಮ್ಮಕ್ಕ ಅವರು ಈ ಹಾಡನ್ನು ಬಿಡುಗಡೆ ಮಾಡಿಕೊಟ್ಟಿದ್ದಕ್ಕೆ ಅವರಿಗೆ ವಿಶೇಷ ಧನ್ಯವಾದ ಎಂದು ಮಾತನಾಡಿದ ಯೋಗರಾಜ್ ಭಟ್, ಅಣ್ಣಾವ್ರ ಹುಟ್ಟುಹಬ್ಬದ ದಿನ ಅವರ ಸೂಪರ್ ಹಿಟ್ ಗೀತೆಯನ್ನೇ ಶೀರ್ಷಿಕೆಯಾಗಿ ಹೊಂದಿರುವ ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಯಾಗಿದೆ. ನಾನು ಈ ಹಾಡಿನಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರು ಏನು ಹೇಳಿದಾರೊ ಅದನ್ನು ಮಾಡಿದ್ದೇನೆ. ಇತ್ತೀಚೆಗೆ ಈ ಚಿತ್ರವನ್ನು ನೋಡಿದಾಗ ಎಲ್ಲಾ ಕಲಾವಿದರ ಅಭಿನಯ ಮನಸ್ಸಿಗೆ ಹತ್ತಿರವಾಯಿತು. ರಾಮ್ ನಾರಾಯಣ್ ಅವರ ನಿರ್ದೇಶನದ ಬಗ್ಗೆ ಹೇಳುವ ಹಾಗೆ ಇಲ್ಲ. ಗ್ರಾಮೀಣ ಪ್ರತಿಭೆ ಮಡೆನೂರ್ ಮನು. ಆತನನ್ನು ಈ ಚಿತ್ರದ ಮೂಲಕ ನಾಯಕನನ್ನಾಗಿ ಮಾಡಿರುವ ನಿರ್ಮಾಪಕರಾದ‌ ಸಂತೋಷ್ ಕುಮಾರ್ ಹಾಗೂ ವಿದ್ಯಾ ಅವರಿಗೆ ಧನ್ಯವಾದ ಎಂದರು.

ಇಂದು ನಮ್ಮ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ಚಿತ್ರ ಮೇ 23 ಬಿಡುಗಡೆಯಾಗಲಿದೆ. ಯೋಗರಾಜ್ ಭಟ್ ಹಾಗೂ ನಿರ್ಮಾಪಕರ ಸಂತೋಷ್ ಕುಮಾರ್ ಅವರಿಗೆ ನಾನು ಆಬಾರಿ. ನಿರ್ದೇಶಕ ರಾಮ್ ನಾರಾಯಣ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಮಡೆನೂರ್ ಮನು. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ. ಒಂದೊಳ್ಳೆ ಚಿತ್ರದಲ್ಲಿ ಅಭಿನಯಿಸಿರುವ ಖುಷಿಯಿದೆ ಎಂದರು ನಾಯಕಿ ಮೌನ ಗುಡ್ಡಮನೆ.

ಯೋಗರಾಜ್ ಭಟ್ ಹಾಗೂ ಇಸ್ಲಾಮುದ್ದೀನ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಗೀತರಚನೆಕಾರರಾಗಿ, ನಿರ್ದೇಶಕರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಅವರು ಚಿತ್ರದ ಹಾಡುಗಳನ್ನು ಬರೆದಿದ್ದು ಮನೋಮೂರ್ತಿ ಸಂಗೀತ ನೀಡಿದ್ದಾರೆ. ಮಡೆನೂರ್ ಮನು, ಮೌನ ಗುಡ್ಡೆಮನೆ, ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಕರಿಸುಬ್ಬು, ಡ್ಯಾಗನ್ ಮಂಜು, ಸೀನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.