ನಾ ನಿನ್ನ ಬಿಡಲಾರೆ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಪುಟಾಣಿ ಹಿತಾ ಬಾಯಲ್ಲಿ ಕೇಳೋದೇ ಚೆಂದ.. ನೀವೂ ಕೇಳಿ
ನಾ ನಿನ್ನ ಬಿಡಲಾರೆ ಸೀರಿಯಲ್‌ನ ಹಿತಾ ಪಾತ್ರಧಾರಿ ಮಹಿತಾ, ಇದೇ ಸೀರಿಯಲ್‌ನ ಶೀರ್ಷಿಕೆ ಗೀತೆಯನ್ನ ಅಷ್ಟೇ ಸುಶ್ರಾವ್ಯವಾಗಿ ಹಾಡಿದ್ದಾಳೆ. ಆ ಹಾಡಿನ ಝಲಕ್ ಇಲ್ಲಿದೆ ನೀವೂ ನೋಡಿ.

Naa Ninna Bidalaare Serial: ಜನವರಿ 27ರಿಂದ ಜೀ ಕನ್ನಡದಲ್ಲಿ ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಪ್ರಸಾರ ಆರಂಭಿಸಿದೆ. ಪ್ರಸಾರ ಆರಂಭಿಸಿದ ಮೊದಲ ವಾರವೇ ದಾಖಲೆಯ ಟಿಆರ್‌ಪಿ ಗಿಟ್ಟಿಸಿಕೊಳ್ಳುವ ಮೂಲಕ ಕರುನಾಡಿನ ಮನೆ ಮಂದಿಯ ಇಷ್ಟದ ಧಾರಾವಾಹಿಯಾಗಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ಈ ಸೀರಿಯಲ್ ಪ್ರಸಾರವಾಗುತ್ತಿದ್ದು, ಮೊದಲ ವಾರವೇ 7.8 ಟಿವಿಆರ್ ಪಡೆದುಕೊಂಡಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪುಟಾಣಿ ಹಿತಾ ಪಾತ್ರವೂ ವೀಕ್ಷಕರಿಗೆ ಇಷ್ಟವಾಗಿದೆ.
ನಾ ನಿನ್ನ ಬಿಡಲಾರೆ ಸೀರಿಯಲ್ ಮೇಕಿಂಗ್‌ನಿಂದ ಮಾತ್ರವಲ್ಲದೆ, ಶೀರ್ಷಿಕೆ ಗೀತೆಯಿಂದಲೂ ವೀಕ್ಷಕರ ಗಮನ ಸೆಳೆದಿದೆ. ಈ ಶೀರ್ಷಿಕೆ ಗೀತೆಯನ್ನು ಹಿತಾ ಪಾತ್ರಧಾರಿ ಮಹಿತಾ ಅಷ್ಟೇ ಚೆಂದವಾಗಿ ಸೀರಿಯಲ್ ಅಮ್ಮನ ಮಡಿಲಲ್ಲಿ ಕೂತು ಹಾಡಿದ್ದಾಳೆ. ಆ ಪುಟ್ಟ ಹುಡುಗಿಯ ಧ್ವನಿಗೆ ಆ ಹಾಡಿನ ಮೆರುಗು ಮತ್ತಷ್ಟು ಹೆಚ್ಚಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡನ್ನು ಮಹಿತಾ ಹಂಚಿಕೊಂಡಿದ್ದೇ ತಡ, ಸಾಲು ಸಾಲು ಮೆಚ್ಚುಗೆಯ ಕಾಮೆಂಟ್‌ಗಳು ಹರಿದುಬಂದಿವೆ. ಸರಿಗಮಪ ಶೋಗೆ ಹೋದರೆ ಖಂಡಿತ ಸೆಲೆಕ್ಟ್ ಆಗ್ತೀಯಾ ಎಂದೂ ಮೆಚ್ಚಿದ್ದಾರೆ. ಹಾಗಾದರೆ, ಆ ಪುಟಾಣಿ ಹಾಡಿದ ವಿಡಿಯೋ ಜತೆಗೆ ಹಾಡಿನ ಸಾಹಿತ್ಯವೂ ಇಲ್ಲಿದೆ.
ನಾ ನಿನ್ನ ಬಿಡಲಾರೆ ಸೀರಿಯಲ್‌ನ ಶೀರ್ಷಿಕೆ ಗೀತೆ ಸಾಹಿತ್ಯ..
ಲಾಲಿ.. ಲಾಲಿ... ಜೋ ಲಾಲಿ..
ತಾಯ್ತನವ ಕೊಟ್ಟ ಜೀವಕೆ ಜೋ.. ಲಾಲಿ
ತಾಯೊಡಲ ಪುಟ್ಟ ದೇವಿಗೆ ಜೋ... ಜೋ ಲಾಲಿ
ಚಂದ ಮಾಮ ಕನಸಲಿ ಬಂದು.. ಹಾಲುಣಿಸಿ ಹೋಗಲಿ..
ತಾರೆಗಳು ಜೋಗುಳ ಹಾಡಿ.. ನಿನ್ನ ತೂಗಲಿ..
ಜೋ ಜೋ ಲಾಲಿ..
ಕನಸೊಂದು ಮಡಲ ಸೇರಿದೆ.. ಜೋ ಲಾಲಿ
ಬೆಳಕೊಂದು ಮನೆಯ ತುಂಬಿದೆ.. ಜೋ ಜೋ ಜೋ ..ಲಾಲಿ
ಈ ತಾಯಿಯ ಕರುಳು ಕೂಗಿದೆ.. ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ ಕಥೆ ಏನು?
ಶರತ್- ಅಂಬಿಕಾ ದಂಪತಿಗೆ ಮಗಳು ಹಿತಾನೇ ಪ್ರಪಂಚ. ಆದರೆ ಈ ಪುಟ್ಟ ಸಂಸಾರಕ್ಕೆ ಮಾಯಾ ಎಂಬ ಹೆಣ್ಣಿನ ಕೆಟ್ಟ ದೃಷ್ಟಿ ಬೀಳುತ್ತದೆ. ಶರತ್‌ನನ್ನು ಪಡೆದೇ ತೀರಬೇಕು ಎಂಬ ದುರಾಸೆಗೆ ಬಿದ್ದ ಮಾಯಾ ಅಂಬಿಕಾಳನ್ನು ಸಾಯಿಸುತ್ತಾಳೆ. ಇತ್ತ ತನ್ನ ದಾರಿಗೆ ಹಿತ ಅಡ್ಡವಾಗಿದ್ದಾಳೆ ಎಂದು ಆ ಪುಟ್ಟ ಕೂಸನ್ನು ಮುಗಿಸಲು ಮಾಯಾ ಸಂಚು ರೂಪಿಸುತ್ತಾಳೆ. ತನ್ನ ಮಗಳಿಗೆ ತೊಂದರೆ ಇದೆ ಎಂದು ಗೊತ್ತಾದ ಅಂಬಿಕಾ ಸತ್ತು ಹೋಗಿದ್ದರೂ ಮತ್ತೆ ಹೇಗೆ ಮರಳಿ ಬಂದು ಮಗಳನ್ನು ರಕ್ಷಿಸುತ್ತಾಳೆ ಎಂಬುದೂ ಕುತೂಹಲ ಮೂಡಿಸಿದೆ.
ಚಿಕ್ಕಂದಿನಲ್ಲಿಯೇ ಅಕ್ಕ ಅಂಬಿಕಾಳನ್ನು ಕಳೆದುಕೊಂಡ ದುರ್ಗಾ, ಆಕೆಯ ಬರುವಿಕೆಯನ್ನೇ ಎದುರು ನೋಡುತ್ತಿರುತ್ತಾಳೆ. ಅಕ್ಕನ ಬಾರದ ಹಿನ್ನೆಲೆಯಲ್ಲಿ ತಂಗಿ ದೇವರ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾಳೆ. ಈ ಅಕ್ಕ-ತಂಗಿಯ ಬದುಕು ಮತ್ತೆ ಸರಿಹೊಗೋದು ಹೇಗೆ? ಅಮ್ಮ ಮಗಳನ್ನು ಕೆಟ್ಟ ಹೆಂಗಸಿನ ಮಾಯೆಯಿಂದ ಹೇಗೆ ಕಾಪಾಡಿಕೊಳ್ತಾಳೆ? ಅಪ್ಪನ ಮೇಲಿನ ಮಗಳ ಕೋಪ ಯಾವಾಗ ಕಡಿಮೆ ಆಗುತ್ತೆ? ಇವೆಲ್ಲದರ ಸುತ್ತ ನಡೆಯುವ ಕಥೆಯೇ 'ನಾ ನಿನ್ನ ಬಿಡಲಾರೆ'!
ಪಾತ್ರಧಾರಿಗಳು ಯಾರ್ಯಾರು?
ಚಿತ್ರದಲ್ಲಿ ನಾಯಕಿಯಾಗಿ ನಟಿ ನೀತಾ ಅಶೋಕ್ ಕಿರುತೆರೆಗೆ ಮರಳಿದ್ದಾರೆ. ಪಾರು ಧಾರಾವಾಹಿಯ ಶರತ್ ಪದ್ಮನಾಭ್ ನೀತಾ ಅಶೋಕ್ ಅವರಿಗೆ ಜೋಡಿಯಾಗಿದ್ದಾರೆ. ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ಸದ್ದು ಮಾಡುತ್ತಿರುವ ಚೂಟಿ ಬೇಬಿ ಮಹಿತಾ ಈ ಜೋಡಿಯ ಮಗಳಾಗಿ ಹಿತಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾಳೆ. ಹಿರಿಯ ನಟಿ ವೀಣಾ ಸುಂದರ್, ಹಳ್ಳಿ ಹುಡುಗಿಯ ಪಾತ್ರದಲ್ಲಿರುವ ರಿಷಿಕಾ ಈ ಧಾರಾವಾಹಿಯ ಮತ್ತೋರ್ವ ನಾಯಕನಟಿ. ಹಿರಿಯ ನಟ, ರಂಗಭೂಮಿ ಕಲಾವಿದ ಬಾಬು ಹಿರಣ್ಣಯ್ಯ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಸಿನಿಮಾಗಳಲ್ಲಿ ನಟಿಸಿದ್ದ ನಟಿ ರುಹಾನಿ ಶೆಟ್ಟಿ ಈ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿದ್ದಾರೆ. ಜಯದುರ್ಗ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ಸತೀಶ್ ಕೃಷ್ಣ ಹೊತ್ತಿದ್ದಾರೆ.

ವಿಭಾಗ