ಯುಗಾದಿ ಪ್ರಯುಕ್ತ ಮಜಾ ಟಾಕೀಸ್ ಮಹಾ ಸಂಚಿಕೆಯಲ್ಲಿ ʻಮನದ ಕಡಲುʼ, ʻಮುಂಗಾರು ಮಳೆʼ ಕಲಾವಿದರ ಸಮಾಗಮ
Majaa Talkies Maha Sanchike: ಈ ಶನಿವಾರ (ಮಾ. 29) ರಾತ್ರಿ 7:30ಕ್ಕೆ ಕಲರ್ಸ್ ಕನ್ನಡದಲ್ಲಿ, 'ಮಜಾ ಟಾಕೀಸ್'ನ ಮಹಾ ಸಂಚಿಕೆ ಪ್ರಸಾರವಾಗಲಿದ್ದು, ಯೋಗರಾಜ್ ಭಟ್ಟರ ಹೊಸ ಸಿನಿಮಾ 'ಮನದ ಕಡಲು' ಜೊತೆ 'ಮುಂಗಾರು ಮಳೆ'ಯ ಫ್ಯಾಮಿಲಿಯ ಮಹಾ ಸಮ್ಮಿಲನ ಆಗ ಲಿದೆ.

Majaa Talkies: ಯೋಗರಾಜ್ ಭಟ್ 'ಮುಂಗಾರು ಮಳೆ' ಕನ್ನಡ ಚಿತ್ರರಂಗಕ್ಕೆ ಬಂಗಾರ ಬೆಳೆದು ಕೊಟ್ಟ ಚಿತ್ರ. ಬಿಡುಗಡೆಯಾಗಿ ದಶಕಗಳೇ ಕಳೆದು ಹೋಗಿದ್ದರೂ ಮಳೆಯ ಮೆಮೊರಿ ಅಳಿಸಿ ಹೋಗುವಂಥದ್ದಲ್ಲ. ಮತ್ತೆ ಮಳೆ ಹುಯ್ಯುತ್ತಿದೆ ಎಲ್ಲ ನೆನಪಾಗುತಿದೆ ಅನ್ನುವ ಹಾಗೆ ಮತ್ತೆ 'ಮುಂಗಾರು ಮಳೆ'ಯ ನೆನಪು ಅಪ್ಪಳಿಸಿ ಬರುತ್ತಿರೋದು ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ 'ಮಜಾ ಟಾಕೀಸ್'ನಲ್ಲಿ. ಹಾಗೆ ಅಪ್ಪಳಿಸೋದಕ್ಕೆ ಇನ್ನೊಂದು ಕಾರಣವೂ ಇದೆ ಅದೇ, ಭಟ್ಟರ ಹೊಸ ಸಿನಿಮಾ 'ಮನದ ಕಡಲು'.
ಹೌದು, ಭಟ್ಟರ ಹೊಸ ಸಿನಿಮಾ 'ಮನದ ಕಡಲು' ಜೊತೆ 'ಮುಂಗಾರು ಮಳೆ'ಯ ಫ್ಯಾಮಿಲಿ 'ಮಜಾ ಟಾಕೀಸ್'ಗೆ ಆಗಮಿಸಿದೆ. ಈ ಮನರಂಜನೆಯ ಮಹಾ ಸಮ್ಮಿಲನ ಯುಗಾದಿ ಹಬ್ಬದ ಸ್ಪೆಷಲ್ ಆಗಿದ್ದು, ಶನಿವಾರ ರಾತ್ರಿ 7:30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಮೂರು ಗಂಟೆಗಳ ಈ 'ಮಹಾ ಸಂಚಿಕೆ' ಮನೆಮಂದಿಗೆ ಮನರಂಜನೆಯ ಮಳೆಯನ್ನೇ ಹರಿಸಲಿದೆ.
ಮುಂಗಾರು ಮಳೆ, ಮನದ ಕಡಲು ಸಮಾಗಮ
'ಮನದ ಕಡಲು' ಚಿತ್ರದ ತಾರಾಬಳಗ - ಸುಮುಖ್, ಅಂಜಲಿ ಅನೀಶ್, ರಿಷಿಕಾ ಶೆಟ್ಟಿ ಜತೆಗೆ 'ಮುಂಗಾರು ಮಳೆ'ಯ ಪೂಜಾ ಗಾಂಧಿ, ದಿಗಂತ್, ನೀನಾಸಂ ಅಶ್ವಥ್, ಸುಧಾ ಬೆಳವಾಡಿ, ಪದ್ಮಜಾ ರಾವ್, ಸಂಚಿತಾ ಶೆಟ್ಟಿಯವರು ಈ ಮಹಾ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ. ಎರಡೂ ಚಿತ್ರಗಳಲ್ಲಿ ತಮ್ಮ ಅಭಿನಯದ ಕಾಣಿಕೆ ನೀಡಿರುವ 'ರಸಮಯ ಚಕ್ರವರ್ತಿ' ರಂಗಾಯಣ ರಘು, ನಿರ್ಮಾಪಕ ಈ ಕೃಷ್ಣಪ್ಪ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಂಗಾಧರ್ ಈ ಮಹಾ ಸಂಚಿಕೆಯಲ್ಲಿರುವುದು ವಿಶೇಷ.
ಎರಡೂ ಚಿತ್ರಗಳ ಸೂತ್ರಧಾರ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಎಂದಿನ ಪಂಚ್ ರಂಗಿ ಮಾತುಗಳಿಂದ ಇಡೀ ಕಾರ್ಯಕ್ರಮ ಆನಂದದ ಕಡಲಾಗುವಂತೆ ನೋಡಿಕೊಂಡಿದ್ದಾರೆ. ಕನ್ನಡದ ಯೋಗ ಬದಲಾದದ್ದು ಮನದ ಕಡಲಾದದ್ದು ಕಂಡದ್ದು ಕಾಣದ್ದು ಎಲ್ಲವೂ ಇಲ್ಲಿ ಜೋಗದ ಜಲಪಾತದಂತೆ ಹರಿದು ಬಂದಿದೆ. 'ಏನು ನಿನ್ನ ಹನಿಗಳ ಲೀಲೆ' ಎಂದ ಕವಿ ಯೋಗರಾಜರಿಂದ 'ಹನಿ ಹನಿ ಪ್ರೇಮ್ ಕಹಾನಿ' ಇಲ್ಲಿ ತೆರೆದುಕೊಳ್ಳಲಿದೆ. ಅವರ ಯೋಗಾಯೋಗವನ್ನು ತಮ್ಮ ಸೃಜನಶೀಲತೆಯೊಂದಿಗೆ ಎಂದಿನಂತೆ ನಡೆಸಿಕೊಂಡು ಹೋಗಿರುವುದು 'ಮಜಾ ಟಾಕೀಸ್'ನ ರೂವಾರಿ ಸೃಜನ್.
ರಂಗಾಯಣ ರಘು ರಸಮಯ ಕ್ಷಣ
'ರಸಮಯ ಚಕ್ರವರ್ತಿ' ರಂಗಾಯಣ ರಘು ಈ ಎರಡು ಚಿತ್ರಗಳ ರಸಮಯ ಕ್ಷಣಗಳನ್ನು ಹಂಚಿಕೊಂಡಿರುವುದು ಮಜಾ ಟಾಕೀಸ್‌ನ ಮಹಾ ಸಂಚಿಕೆಯ ಹೈಲೈಟ್. ಒಬ್ಬ ಕಲಾವಿದನಾಗಿ ಅವರು ತಮ್ಮ ಸುತ್ತಮುತ್ತಲಿನ ಜಗತ್ತನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾರೆ ಅನ್ನುವುದನ್ನು ಇಲ್ಲಿ ಯೋಗರಾಜ್ ಭಟ್ ರಸವತ್ತಾಗಿ ವಿವರಿಸಿದ್ದಾರೆ. ಹಾಗೆಯೇ ಮಿಮಿಕ್ರಿ ಗೋಪಿ ರಂಗಾಯಣ ರಘು ಅವರನ್ನು ಮಿಮಿಕ್ ಮಾಡಿ ಅವರಿಂದ ಶಭಾಷ್‌ಗಿರಿ ಪಡೆದಿರುವುದು, ಗೋಪಿಯವರು ನಟ ದತ್ತಣ್ಣ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದನಿಯನ್ನು ಅನುಕರಣೆ ಮಾಡಿ ಹಾಸ್ಯದ ಹೊನಲನ್ನು ಹರಿಸಿರುವುದು ಮಜವಾಗಿದೆ. ಒಟ್ಟಿನಲ್ಲಿ ಯುಗಾದಿ ಹಬ್ಬದ ಮನರಂಜನೆಯ ಮಜಾ ಟಾಕೀಸ್ ಮಹಾ ಸಂಚಿಕೆಯನ್ನು ಈ ಶನಿವಾರ ರಾತ್ರಿ 7:30 ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

ವಿಭಾಗ