ಕೆಜಿಎಫ್ ಚಾಪ್ಟರ್ 2 ಅಲ್ಲ, ಅನಿಮಲ್ ಅಲ್ವೇ ಅಲ್ಲ.. ಭಾರತದ ಮೋಸ್ಟ್ ವೈಲೆಂಟ್ ಸಿನಿಮಾ ಎಂಬ ಪಟ್ಟ ಪಡೆದ ಸೌತ್ ಚಿತ್ರವಿದು
ಡಿ. 20ರಂದು ತೆರೆಕಂಡಿದ್ದ ಮಾರ್ಕೊ ಸಿನಿಮಾ ಪ್ರೇಕ್ಷಕರ ಎದೆ ನಡುಗಿಸಿದೆ. ಮಾಸ್ ಆಕ್ಷನ್ ಸೀನ್‌ಗಳಿಂದಲೇ ಈ ಚಿತ್ರ ಹೆಚ್ಚೆಚ್ಚು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ. ಹಿಂಸೆಯ ವೈಭವೀಕರಣವನ್ನು ಅತಿಯಾಗಿ ತೋರಿಸಿರುವ ಈ ಚಿತ್ರ ಸದ್ಯ ಭಾರತದ ಮೋಸ್ಟ್ ವೈಲೆಂಟ್ ಸಿನಿಮಾ ಎಂದು ಕರೆಸಿಕೊಳ್ಳುತ್ತಿದೆ. ಅನಿಮಲ್, ಕೆಜಿಎಫ್‌ಅನ್ನೂ ಮಾರ್ಕೊ ಚಿತ್ರ ಮೀರಿಸಿದೆ.
Marco Malayalam Movie: ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸರಣಿಯ ಎರಡು ಚಿತ್ರಗಳು ಮೋಸ್ಟ್ ವೈಲೆಂಟ್ ಸಿನಿಮಾಗಳೆಂಬ ಪಟ್ಟ ಪಡೆದುಕೊಂಡಿದ್ದವು. ಝಳಪಿಸುವ ಕತ್ತಿ, ಗನ್ ಸದ್ದಿನ ಆರ್ಭಟ ಪ್ರೇಕ್ಷಕನ ಎದೆ ನಡುಗಿಸಿತ್ತು. ಕೆಜಿಎಫ್ ಚಾಪ್ಟರ್ 2 ಬಳಿಕ ಬಂದ ಬಾಲಿವುಡ್‌ನ ಅನಿಮಲ್ ಸಿನಿಮಾದಲ್ಲಿಯೂ ರಕ್ತದ ಹೊಳೆಯೇ ಹರಿದಿತ್ತು. ಹಿಂಸೆಯೇ ಪ್ರಧಾನ, ಹಿಂಸೆಯ ವೈಭವೀಕರಣವಾಗಿತ್ತು. ಈಗ ಈ ಎರಡೂ ಸಿನಿಮಾಗಳನ್ನೂ ಮೀರಿಸುವಂಥ ಇನ್ನೊಂದು ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಆ ಸಿನಿಮಾ ಹೆಸರು ಮಾರ್ಕೊ!
ಮಾರ್ಕೊ.. ಮೂಲ ಮಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ. ತನ್ನ ಹೈ ಆಕ್ಟೇನ್ ಆಕ್ಷನ್ ಮತ್ತು ಹೊಡಿ ಬಡಿ ಸಾಹಸ ದೃಶ್ಯಗಳಿಂದಲೇ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ನಟ ಉನ್ನಿ ಮುಕುಂದನ್ ಹೊಸ ಅವತಾರದಲ್ಲಿ ಎದುರಾಗಿ, ಆಕ್ಷನ್ ಪ್ರಿಯರಿಗೆ ಹಬ್ಬದೂಟ ಹಾಕಿಸಿದ್ದರು. ಅದರಂತೆ, ಡಿ. 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಹೊಸ ದಾಖಲೆ ಬರೆದಿದೆ. ಅದ್ಯಾವ ಮಟ್ಟಿಗೆ ಎಂದರೆ, ಕೇರಳದಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಚಿತ್ರದ ಗಳಿಕೆಯ ರೆಕಾರ್ಡ್ ಅನ್ನೇ ಪುಡಿಗಟ್ಟಿದೆ ಈ ಮಾರ್ಕೊ.
ಪುಷ್ಪ 2 ದಾಖಲೆ ಮುರಿದ ಮಾರ್ಕೊ
ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಮಾರ್ಕೊ ಸಿನಿಮಾ ರಿಲೀಸ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಯಶಸ್ಸು ಗಳಿಸಿದೆ. ಬಿಡುಗಡೆಯಾದ ಮೊದಲ ಆರು ದಿನಗಳಲ್ಲಿ ಕೇರಳದಲ್ಲಿಯೇ 25 ಕೋಟಿ ರೂ.ಗಳನ್ನು ಬಾಚಿಕೊಂಡಿದೆ. ವಿಶ್ವಾದ್ಯಂತ 50 ಕೋಟಿ ರೂ. ಗಳಿಕೆ ಕಂಡಿದೆ. ಇನ್ನೊಂದು ವಿಚಾರ ಏನೆಂದರೆ, ಕೇರಳದಲ್ಲಿ ಮೂರು ವಾರಗಳಲ್ಲಿ ಪುಷ್ಪ 2 ಸಿನಿಮಾ ಗಳಿಕೆಯನ್ನು ಕೇವಲ ಆರೇ ದಿನಗಳಲ್ಲಿ ಹಿಂದಿಕ್ಕಿದೆ ಈ ಸಿನಿಮಾ. 30 ಕೋಟಿ ಬಜೆಟ್‌ನಲ್ಲಿ ಮಾರ್ಕೊ ಸಿನಿಮಾ ಮೂಡಿಬಂದಿದ್ದು, ಅತಿ ಹೆಚ್ಚು ಗಳಿಕೆ ಕಂಡ ಮಲಯಾಳಂನ A ರೇಟೆಡ್ ಸಿನಿಮಾ ಎಂಬ ಹೆಗ್ಗಳಿಕೆಗೂ ಈ ಸಿನಿಮಾ ಪಾತ್ರವಾಗಿದೆ.
ಜ. 1ರಿಂದ ತೆಲುಗಿನಲ್ಲಿ ತೆರೆಗೆ
ಅತಿಯಾದ ಹಿಂಸೆ, ರಕ್ತ, ಮೈನವಿರೇಳಿಸುವ ಆಕ್ಷನ್‌ನಿಂದಲೇ ಈ ಸಿನಿಮಾ ಸದ್ಯ ಸಖತ್ ಸೌಂಡ್ ಮಾಡುತ್ತಿದೆ. ಹಾಲಿವುಡ್‌ನ ಜಾನ್ ವಿಕ್ ಮತ್ತು ಸಿನ್ ಸಿಟಿಯಂತಹ ಆಕ್ಷನ್ ಚಿತ್ರಗಳಿಗೆ ಮಾರ್ಕೊ ಸಿನಿಮಾವನ್ನು ಹೋಲಿಕೆ ಮಾಡಲಾಗುತ್ತಿದೆ. ಡಿ 20ರಂದು ಕೇವಲ ಮಲಯಾಳಂನಲ್ಲಿ ಮಾತ್ರ ತೆರೆಕಂಡಿದ್ದ ಈ ಸಿನಿಮಾ, ಜ 1ರಿಂದ ತೆಲುಗಿನಲ್ಲಿಯೂ ಅಬ್ಬರಿಸಲಿದೆ. ಈಗಾಗಲೇ ತೆಲುಗು ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಅಲ್ಲಿನ ಪ್ರೇಕ್ಷಕರ ಗಮನ ಸೆಳೆದಿದೆ ಈ ಸಿನಿಮಾ. ಇದರ ಜತೆಗೆ ಕನ್ನಡಕ್ಕೂ ಡಬ್ ಆಗಿದೆ ಈ ಚಿತ್ರ.
ಮಾಲಿವುಡ್‌ನ ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾರ್ಕೊ ಚಿತ್ರವನ್ನು ಹನೀಫ್ ಅದೇನಿ ನಿರ್ದೇಶನ ಮಾಡಿದ್ದಾರೆ. ಶರೀಫ್ ಮಹಮ್ಮದ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಕುಂದನ್ ಜತೆಗೆ ಜಗದೀಶ್, ಸಿದ್ದಿಕ್, ಅನ್ಸನ್ ಪೌಲ್, ಯುಕ್ತಿ ಥರೇಜಾ, ರಿಯಾಜ್ ಖಾನ್, ಜಿನು ಜೋಸೆಫ್, ಶ್ರೀಜಿತ್ ರವಿ ಮತ್ತು ಕಬೀರ್ ದುಹಾನ್ ಸಿಂಗ್ ತಾರಾಗಣದಲ್ಲಿದ್ದಾರೆ. ಕನ್ನಡದ ರವಿ ಬಸ್ರೂರ್ ಈ ಚಿತ್ರಕ್ಕೆ ಖಡಕ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಚಂದ್ರು ಸೆಲ್ವರಾಜ್ ಮತ್ತು ಶಮೀರ್ ಮುಹಮ್ಮದ್ ನಿರ್ವಹಿಸಿದ್ದಾರೆ. 2019ರಲ್ಲಿ ಮಲಯಾಳಂನಲ್ಲಿ ತೆರೆಗೆ ಬಂದಿದ್ದ ಮೈಕೆಲ್ ಸಿನಿಮಾದ ಮತ್ತೊಂದು ರೂಪಕವಾಗಿ ಮಾರ್ಕೊ ತೆರೆಕಂಡಿದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope