ಐಎಂಡಿಬಿಯಲ್ಲಿ 8.5 ರೇಟಿಂಗ್ ಪಡೆದ ಹಾರರ್ ಥ್ರಿಲ್ಲರ್ ಚಿತ್ರವೀಗ ಒಟಿಟಿಗೆ; ಮೊದಲ ದಿನವೇ ಟಾಪ್ 10 ಟ್ರೆಂಡಿಂಗ್ ಪಟ್ಟಿಯಲ್ಲಿ ಸ್ಥಾನ
ಐಎಂಡಿಬಿಯಲ್ಲಿ 8.5 ರೇಟಿಂಗ್ ಪಡೆದ ಮಲಯಾಳಂ ಹಾರರ್ ಥ್ರಿಲ್ಲರ್ ಚಿತ್ರವೊಂದು ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ನಂತರ ಈ ಚಿತ್ರ ಡಿಜಿಟಲ್ ಪ್ರದರ್ಶನ ಕಂಡಿದೆ. ಯಾವುದಾ ಚಿತ್ರ? ಇಲ್ಲಿದೆ ವಿವರ.

ಈ ವಾರಾಂತ್ಯದಲ್ಲಿ ಒಂದು ಉತ್ತಮ ಹಾರರ್ ಥ್ರಿಲ್ಲರ್ ನೋಡಬೇಕೆಂದುಕೊಂಡಿದ್ದೀರಾ? ಹಾಗಾದರೆ ನಿಮಗಾಗಿ ಒಂದು ಮಲಯಾಳಂ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಆ ಚಿತ್ರದ ಹೆಸರು ʻವಡಕ್ಕನ್ʼ. ಎರಡು ತಿಂಗಳ ಹಿಂದೆ ಅಂದರೆ ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಈಗ ಡಿಜಿಟಲ್ ಪ್ರದರ್ಶನ ಕಂಡಿದೆ. ಅಷ್ಟೇ ಅಲ್ಲ, ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ದಿನವೇ ಟಾಪ್ 10 ಟ್ರೆಂಡಿಂಗ್ ಸಿನಿಮಾ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದಿದೆ.
ಮಲಯಾಳಂ ಹಾರರ್ ಥ್ರಿಲ್ಲರ್ ಚಿತ್ರ ವಡಕ್ಕನ್ ಶುಕ್ರವಾರ (ಮೇ 9) ದಿಂದ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸ್ಯಾಂಡಲ್‌ವುಡ್ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಕೇವಲ 1 ಗಂಟೆ 50 ನಿಮಿಷಗಳ ಅವಧಿಯದ್ದಾಗಿದೆ. ಮಾರ್ಚ್ 7 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಇದೀಗ ಒಟಿಟಿಗೆ ಆಗಮಿಸಿದೆ.
ಹಾರರ್ ಥ್ರಿಲ್ಲರ್ ಜಾನರ್‌ನ ಈ ಸಿನಿಮಾಕ್ಕೆ ಚಿತ್ರಮಂದಿರಗಳಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಂತೆ, ಒಟಿಟಿಯಲ್ಲಿಯೂ ಅದೇ ರೆಸ್ಪಾನ್ಸ್ ವ್ಯಕ್ತವಾಗಿದೆ. ಅಮೆಜಾನ್ ಪ್ರೈಂ ವಿಡಿಯೋದ ಟಾಪ್ 10 ಟ್ರೆಂಡಿಂಗ್ ಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿಯಲ್ಲಿ ʻವಡಕ್ಕನ್ʼ ಸಿನಿಮಾ 10ನೇ ಸ್ಥಾನದಲ್ಲಿರುವುದು ವಿಶೇಷ.
ಏನಿದು ವಡಕ್ಕನ್?
ವಡಕ್ಕನ್ ಚಿತ್ರವನ್ನು ಸಾಜಿದ್ ನಿರ್ದೇಶಿಸಿದ್ದಾರೆ. ಉನ್ನಿ ಆರ್ ಜೊತೆಗೆ ಅವರೇ ಕಥೆಯನ್ನು ಬರೆದಿದ್ದಾರೆ. ಕಿಶೋರ್ ಕುಮಾರ್ ಜೊತೆಗೆ ಗ್ರೀಷ್ಮ ಅಲೆಕ್ಸ್, ಗಾರ್ಗಿ ಅನಂತನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಒಂದು ದ್ವೀಪದಲ್ಲಿ ನಡೆಯುವ ಕಥೆ. ಅಲೌಕಿಕ ಶಕ್ತಿಗಳ ಬಗ್ಗೆ ಸಂಶೋಧನೆ ನಡೆಸುವ ವ್ಯಕ್ತಿ, ಹೆಲ್ಸಿಂಕಿಯಿಂದ ಕೇರಳದ ನಿಗೂಢ ದ್ವೀಪಕ್ಕೆ ಬರುತ್ತಾರೆ. ಆ ದ್ವೀಪದಲ್ಲಿ ನಡೆಯುವ ಕಥೆಯೇ ವಡಕ್ಕನ್.
ಆ ದ್ವೀಪದಲ್ಲಿ ನಡೆಯುವ ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಒಬ್ಬೊಬ್ಬರಾಗಿ ಕೊಲೆಯಾಗುತ್ತಾರೆ. ಆ ಬಗ್ಗೆ ತಿಳಿದುಕೊಂಡು ಅದರ ಹಿಂದಿನ ರಹಸ್ಯವನ್ನು ಬಯಲು ಮಾಡಲು ಕಥಾನಾಯಕ ಅಲ್ಲಿಗೆ ಎಂಟ್ರಿಯಾಗುತ್ತಾನೆ. ಆ ಪ್ರಯತ್ನದಲ್ಲಿ ಅವರಿಗೂ ಆ ಅಲೌಕಿಕ ಶಕ್ತಿಯಿಂದ ಕೆಲವು ಸವಾಲುಗಳು ಎದುರಾಗುತ್ತವೆ. ಆ ಶಕ್ತಿ ಏನು? ಅದರಿಂದ ಅವರು ಸುರಕ್ಷಿತವಾಗಿ ಪಾರಾಗುತ್ತಾರೋ ಇಲ್ಲವೋ ಎಂಬುದೇ ಈ ವಡಕ್ಕನ್ ಚಿತ್ರದ ಕಥಾವಸ್ತು.
ವಡಕ್ಕನ್ ಎಂದರೆ ಉತ್ತರ ದಿಕ್ಕಿನಿಂದ ಬಂದದ್ದು ಎಂದರ್ಥ. ಕೇರಳದ ಉತ್ತರ ಭಾಗದ ಜಾನಪದ ಕಥೆಗಳನ್ನು ಆಧರಿಸಿ ಈ ವಡಕ್ಕನ್ ಚಿತ್ರವನ್ನು ನಿರ್ಮಿಸಲಾಗಿದೆ. ಈ ಚಿತ್ರ ಪ್ರಸ್ತುತ ಅಮೆಜಾನ್ ಪ್ರೈಂ ಒಟಿಟಿಯಲ್ಲಿ ಮಲಯಾಳಂ ಆಡಿಯೋ ಮತ್ತು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಮಾತ್ರ ಲಭ್ಯವಿದೆ.