Bazooka review: ಬಜೂಕಾ ಸಿನಿಮಾದ ಕ್ಲೈಮ್ಯಾಕ್ಸ್ ಅದ್ಭುತವೆಂದ ಅಭಿಮಾನಿಗಳು, ಹೇಗಿದೆಯಂತೆ ಮಮ್ಮುಟ್ಟಿ ಸಿನಿಮಾ- ಇಲ್ಲಿದೆ ಆಡಿಯನ್ಸ್ ರಿವ್ಯೂ
Bazooka audience review: ಡೀನೋ ಡೆನ್ನಿಸ್ ನಿರ್ದೇಶನದ, ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಕ್ಷನ್ ಥ್ರಿಲ್ಲರ್ ‘ಬಜೂಕಾ’ ಬಿಡುಗಡೆಯಾಗಿದೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರು ಈ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಹಾಡಿ ಹೊಗಳಿದ್ದಾರೆ.

Bazooka audience review: ಮಲಯಾಳಂ ಸಿನಿಮಾಗಳೆಂದರೆ ಈಗ ಜನರಲ್ಲಿ ಸಾಕಷ್ಟು ನಿರೀಕ್ಷೆಯಿದೆ. ವಿಶೇಷವಾಗಿ ಮಮ್ಮುಟ್ಟಿ ನಟಿಸಿದ ಸಿನಿಮಾಗಳ ಮೇಲೆ ನಿರೀಕ್ಷೆ ತುಸು ಹೆಚ್ಚೇ ಇರುತ್ತದೆ. ಮಮ್ಮುಟ್ಟಿ ನಟಿಸಿರುವ ಬಜೂಕಾ ಸಿನಿಮಾವು ಇಂದು (ಏಪ್ರಿಲ್ 10) ಬಿಡುಗಡೆಯಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರವು ಬಾಸಿಲ್ ಜೋಸೆಫ್ ಅವರ ಹಾಸ್ಯ ಚಿತ್ರ ‘ಮಾರಣಮಸ್’ ಮತ್ತು ನಸ್ಲೆನ್ ಕೆ ಗಫೂರ್ ಅವರ ಹಾಸ್ಯ ಕ್ರೀಡಾ ನಾಟಕ ‘ಆಲಪ್ಪುಳ ಜಿಮ್ಖಾನಾ’ ಜತೆಯಲ್ಲಿಯೇ ಬಿಡುಗಡೆಯಾಗಿದೆ. ಮಲಯಾಳಂ ಬಾಕ್ಸ್ ಆಫೀಸ್‌ನಲ್ಲಿ ಹೀಗೆ ಪ್ರಮುಖ ಸಿನಿಮಾಗಳ ಪೈಪೋಟಿ ನಡುವೆ ಆರಂಭಿಕ ಲೆಕ್ಕಾಚಾರದ ಪ್ರಕಾರ ಬಜೂಕಾ ಗಳಿಕೆ ಸಾಧಾರಣವಾಗಿದೆ. ಇಂದು ಮಧ್ಯಾಹ್ನ 1:50 ಗಂಟೆಯವರೆಗೆ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾ 93 ಲಕ್ಷ ರೂಪಾಯಿ ಗಳಿಸಿತ್ತು. ಈ ಚಿತ್ರದ ಕುರಿತು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಬಜೂಕಾ ಕ್ಲೈಮ್ಯಾಕ್ಸ್ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ.
ಬಜೂಕಾ ಸಿನಿಮಾದ ಕುರಿತು ಪಬ್ಲಿಕ್ ರಿವ್ಯೂ
ಬಜೂಕಾ ಸಿನಿಮಾ ನೋಡಿ ಬಂದ ಜನರು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಕುರಿತಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. "ಮೊದಲಾರ್ಥ ಸಾಧಾರಣವಾಗಿದೆ. ಸಿನಿಮಾದ ಪ್ರಮುಖ ಥೀಮ್ ಮೇಲೆ ಗಮನ ಹರಿಸದೆ ಇರುವುದು ಚಿತ್ರದ ವೈಫಲ್ಯ. ದೊಡ್ಡ ಸದ್ದಿನ ಹಿನ್ನೆಲೆ ಸಂಗೀತ ಕೆಲವೊಮ್ಮೆ ಕಿರಿಕಿರಿ ಉಂಟು ಮಾಡುತ್ತದೆ. ಕ್ಲೈಮ್ಯಾಕ್ಸ್ ತನಕ ಸಿನಿಮಾ ಸರಾಸರಿಗಿಂತಲೂ ಕಡಿಮೆ ಗುಣಮಟ್ಟ ಹೊಂದಿದೆ. ಈ ಸಿನಿಮಾದಲ್ಲಿ ಕಣ್ಣುಮಿಟುಕಿಸದೆ ನೋಡುವಂತಹ ಪ್ರಮುಖ ದೃಶ್ಯಗಳು ಇಲ್ಲ. ಸಿನಿಮಾದಲ್ಲಿ ನಟನೆಯೊಂದಿಗೆ ಸಂಗೀತವೂ ವಿಫಲವೆಂದೇ ಹೇಳಬಹುದು" ಎಂದು ಎಕ್ಸ್ (ಟ್ವಿಟ್ಟರ್) ಬಳಕೆದಾರರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ. "ಮೊದಲಾರ್ಧವು ಉತ್ತಮವಾಗಿದೆ. ಮಧ್ಯಂತರ ಬ್ಲಾಕ್ ಇಂಟ್ರೆಸ್ಟಿಂಗ್. 6 ವರ್ಷಗಳ ನಂತರ ಮೆಗಾಸ್ಟಾರ್ ಟೈಟಲ್ ಕಾರ್ಡ್ ಚಿತ್ರಮಂದಿರಗಳನ್ನು ಚೂರುಚೂರು ಮಾಡಿದೆ. ಸಯೀದ್ ಅಬ್ಬಾಸ್ ಅವರ ಬ್ಯಾಕ್‌ಗ್ರೌಂಡ್ ಸ್ಕೋರ್ ಅತ್ಯುತ್ತಮ" ಎಂದು ಅಭಿಪ್ರಾಯ ತಿಳಿಸಿದ್ದಾರೆ.
ಇನ್ನೊಬ್ಬರು ಹೀಗೆ ವಿಮರ್ಶೆ ಮಾಡಿದ್ದಾರೆ. "ಮೊದಲಾರ್ಥ ಬೆಂಕಿ. ಬಜೂಕಾ ಕೇವಲ ಸಿನಿಮಾವಲ್ಲ, ಅದು ಅನುಭವ. ಮೊದಲಾರ್ಧ ರೋಚಕ. ಮುಮ್ಮೂಟಿ ಬ್ಲಾಸ್ಟ್ ಮೂಡ್‌ನಲ್ಲಿದ್ದಾರೆ" ಎಂದು ಇನ್ನೊಬ್ಬರು ಬರೆದಿದ್ದಾರೆ. "ಬಜೂಕಾ ಸಿನಿಮಾ ವಿನ್ನರ್. ಮೊದಲಾರ್ಧ ಉತ್ತಮವಾಗಿದೆ. ಇಂಟರ್‌ವಲ್ ಬಳಿಕ ಸಿನಿಮಾದ ಕುತೂಹಲ ಹೆಚ್ಚುತ್ತದೆ. ಮಮ್ಮುಟ್ಟಿ ನಟನೆಯ ಅಮೋಘ, ಅದ್ಭುತ.. ಇತರೆ ಕಲಾವಿದರೂ ಉತ್ತಮವಾಗಿ ನಟಿಸಿದ್ದಾರೆ. ತಾಂತ್ರಿಕವಾಗಿಯೂ ಅಮೋಘವಾಗಿದೆ. ಮ್ಯೂಸಿಕ್ ಮತ್ತು ಬಿಜಿಎಂ ಬೆಸ್ಟ್. ಒಟ್ಟಾರೆ ಸಿನಿಮಾ ಅನುಭವ ಅನನ್ಯವಾಗಿದೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರೊಬ್ಬರು ವಿಮರ್ಶೆ ಮಾಡಿದ್ದಾರೆ.
ಸಾಕಷ್ಟು ಜನರು ಈ ಸಿನಿಮಾದ ಕ್ಲೈಮ್ಯಾಕ್ಸ್ ಕುರಿತು ಚರ್ಚಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಪ್ರಮುಖ ಆಕರ್ಷಣೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಅಂತಹ ವಿಶೇಷತೆ ಏನಿದೆ ಎಂದು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಬಜೂಕಾ ಸಿನಿಮಾದ ತಾರಾಗಣ ಮತ್ತು ಕಥೆಯ ಕುರಿತು
ಬಜೂಕಾ ಎಂಬ ಆಕ್ಷನ್ ಥ್ರಿಲ್ಲರ್ ಸಿನಿಮಾವು ಡೀನೋ ಡೆನ್ನಿಸ್ ಅವರ ನಿರ್ದೇಶನದ ಚೊಚ್ಚಲ ಪ್ರಯತ್ನವಾಗಿದೆ. ಈ ಸಿನಿಮಾಕ್ಕೆ ಇವರದ್ದೇ ಚಿತ್ರಕಥೆಯಿದೆ. ಯೂಡ್ಲೀ ಫಿಲ್ಮ್ಸ್ ಮತ್ತು ಥಿಯೇಟರ್ ಆಫ್ ಡ್ರೀಮ್ಸ್ ಜಂಟಿಯಾಗಿ ನಿರ್ಮಿಸಿರುವ ಈ ರೋಮಾಂಚಕಾರಿ ಸಿನಿಮಾದಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಒಬ್ಬ ಉದ್ಯಮಿಯು ಸರಣಿ ಕೊಲೆಗಾರನನ್ನು ಹಿಡಿಯಲು ನಡೆಸುವ ಪ್ರಯತ್ನದ ಕಥೆಯಿದೆ. ಆ ಕೊಲೆಗಾರನನ್ನು ಪತ್ತೆ ಹಚ್ಚಲು ಇವರು ಹಲವು ಸಂಕೀರ್ಣ ಹಾದಿಗಳನ್ನು ಆಯ್ದುಕೊಳ್ಳುತ್ತಾರೆ.
ಈ ಚಿತ್ರದ ನಾಯಕ ಮಮ್ಮುಟ್ಟಿ ಅವರು ಎಥಿಕಲ್ ಹ್ಯಾಕರ್ ಮತ್ತು ಉದ್ಯಮಿ ಆಂಥೋನಿ ಜಾನ್ ಪಾತ್ರದಲ್ಲಿ ನಟಿಸಿದ್ದಾರೆ. ಗೌತಮ್ ವಾಸುದೇವ್ ಮೆನನ್ ಕೊಚ್ಚಿ ನಗರದ ಪೊಲೀಸ್ ಅಧಿಕಾರಿ ಎಸಿಪಿ ಬೆಂಜಮಿನ್ ಜೋಶುವಾ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಬು ಆಂಟನಿ, ನೀತಾ ಪಿಳ್ಳೈ, ಗಾಯತ್ರಿ ಅಯ್ಯರ್ ಮತ್ತು ದಿವ್ಯಾ ಪಿಳ್ಳೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜಗದೀಶ್, ಸಿದ್ಧಾರ್ಥ್ ಭರತನ್, ಐಶ್ವರ್ಯ ಮೆನನ್ ಮತ್ತು ಶೈನ್ ಟಾಮ್ ಚಾಕೊ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
