ಕಾಂತಾರ ಖ್ಯಾತಿಯ ಬಿ ಅಜನೀಶ್ ಲೋಕನಾಥ್ ಮಾಲಿವುಡ್‌ಗೆ ಎಂಟ್ರಿ, ಕಟ್ಟಳನ್ ಸಿನಿಮಾದಲ್ಲಿ ಇವರದ್ದೇ ಸದ್ದು!
ಮಲಯಾಳಂನ ಬಹುನಿರೀಕ್ಷಿತ ಸಿನಿಮಾ ಕಟ್ಟಳನ್‌ಗೆ ಕಾಂತಾರ ಖ್ಯಾತಿಯ ಬಿ ಅಜನೀಶ್ ಲೋಕನಾಥ್ ಸಂಗೀತ ಮತ್ತು ಹಿನ್ನೆಲೆ ಧ್ವನಿ ನೀಡಲಿದ್ದಾರೆ ಎನ್ನುವುದು ಖಚಿತವಾಗಿದೆ. ಇವರು ಬಘೀರಾ, ಕಿರಿಕ್ ಪಾರ್ಟಿ ಮುಂತಾದ ಸಿನಿಮಾಗಳ ಮೂಲಕ ಖ್ಯಾತಿ ಪಡೆದಿದ್ದಾರೆ.

ಮಲಯಾಳಂ ಚಿತ್ತರಂಗದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕಟ್ಟಳನ್' ಸಿನಿಮಾದ ಕುರಿತು ನಿರ್ಮಾಪಕರು ಹೊಸ ಅಪ್‌ಡೇಟ್ ನೀಡಿದ್ದಾರೆ. 'ದಿ ವೈಲ್ಡ್ ಕಾಲ್ಸ್. ದಿ ಫೈರ್ ರೋರ್ಸ್. ದಿ ಮೆಸ್ಟ್ರೋ ಪೋರ್ಟ್' ಎಂಬ ಟ್ಯಾಗ್‌ಲೈನ್ ಜತೆಗೆ ನಿರ್ಮಾಪಕರು ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಸಿನಿಮಾಕ್ಕೆ ಕನ್ನಡದ ಬಿ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡುವುದರ ಕುರಿತು ಖಚಿತವಾಗಿದೆ. ಬಘೀರಾ, ಕಿರಿಕ್ ಪಾರ್ಟಿ ಮತ್ತು ಉಳಿಯವರು ಕಂಡಂತೆ ಸೇರಿದಂತೆ ಕನ್ನಡದ ಹಲವು ಜನಪ್ರಿಯ ಸಿನಿಮಾಗಳಿಗೆ ಅಜನೀಶ್ ಸಂಗೀತ ನೀಡಿದ್ದಾರೆ.
ಕಟ್ಟಳನ್ ಸಿನಿಮಾ
ಇತ್ತೀಚೆಗೆ ಚಿತ್ರತಂಡ ಹಂಚಿಕೊಂಡ ಪೋಸ್ಟರ್‌ನಲ್ಲಿ ಆನೆಯೊಂದು ತನ್ನ ಸೊಂಡಿಲಿನ ಮೂಲಕ ತನ್ನ ದಂತವೊಂದನ್ನು ಕತ್ತರಿಸಿದ ಬೇಟೆಗಾರನನ್ನು ಹಿಡಿಯುತ್ತಿರುವುದರ ಚಿತ್ರಣವಿದೆ. ಈ ಚಿತ್ರವು ಅಧಿಕಾರಕ್ಕಾಗಿ ನಡೆಯುವ ಹೋರಾಟ ಮತ್ತು ದಂತ ಬೇಟೆಯ ಕಥೆಗಳನ್ನು ಹೊಂದಿರುವ ಸುಳಿವು ನೀಡಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಚಿತ್ರತಂಡವು ಸಿನಿಮಾದಲ್ಲಿ ನಟಿಸುವ ಕಲಾವಿದರ ಕುರಿತು ಶೀಘ್ರದಲ್ಲಿ ಮಾಹಿತಿ ನೀಡುವ ಸೂಚನೆಯಿದೆ.
ಆಂಟನಿ ವರ್ಗೀಸ್ ಪೆಪೆ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಕುರಿತು ಚಿತ್ರತಂಡ ಈಗಾಗಲೇ ಅಧಿಕೃತವಾಗಿ ಮಾಹಿತಿ ನೀಡಿದೆ. ಅಜಗಜಾಂತರಂ ತಾರೆ ಈ ಚಿತ್ರದಲ್ಲಿ ಮತ್ತೊಂದು ಶಕ್ತಿಶಾಲಿ ಅಭಿನಯ ನೀಡಲಿದ್ದಾರೆ ಎಂದು ಸಿನಿಮಾ ಪ್ರೇಕ್ಷಕರು ನಿರೀಕ್ಷಿಸುತ್ತಿದ್ದಾರೆ.
ಈ ಚಿತ್ರವನ್ನು ಕ್ಯೂಬ್ಸ್ ಎಂಟರ್‌ಟೈನ್‌ಮೆಂಟ್ಸ್ ಲೇಬಲ್ ಅಡಿಯಲ್ಲಿ ಶರೀಫ್ ಮುಹಮ್ಮದ್ ನಿರ್ಮಿಸುತ್ತಿದ್ದಾರೆ. ಉನ್ನಿ ಮುಕುಂದನ್ ನಿರ್ದೇಶಿಸಿದ ಇತ್ತೀಚಿನ ಚಿತ್ರ ಮಾರ್ಕೊಗೆ ಶರೀಪ್ ಪ್ರೊಡ್ಯುಸರ್ ಆಗಿದ್ರು. ಮಾರ್ಕೊ ಸಿನಿಮಾದಲ್ಲಿ ಇದ್ದ ಅತಿಯಾದ ಹಿಂಸೆ ಟೀಕೆಗೆ ಒಳಗಾಗಿತ್ತು. ಈ ಸಿನಿಮಾ ಸೋನಿ ಲಿವ್ ಒಟಿಟಿಯಲ್ಲಿದೆ. ತಮ್ಮ ಮುಂದಿನ ಸಿನಿಮಾದಲ್ಲಿ ಹಿಂಸೆ ಕಡಿಮೆ ಮಾಡುವುದಾಗಿ ನಿರ್ಮಾಪಕರು ಭರವಸೆ ನೀಡಿದ್ದರು. ಇದೀಗ ಕಟ್ಟಳನ್ ಸಿನಿಮಾ ನಿರ್ಮಿಸಲಾಗುತ್ತಿದೆ. ಈ ಚಿತ್ರವು ಪಾಲ್ ಜಾರ್ಜ್ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಲಿದೆ.
ಅಜನೀಶ್ ಲೋಕನಾಥ್ ಬಗ್ಗೆ
ಬಿ. ಅಜನೀಶ್ ಲೋಕನಾಥ್ ಅವರು ಕನ್ನಡ ಚಿತ್ರರಂಗದ ಜನಪ್ರಿಯ ಸಂಗೀತ ನಿರ್ದೇಶಕರು. ಇವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಅನುಪ್ ಭಂಡಾರಿ ಜತೆ ಹಲವು ಸಿನಿಮಾ ಮಾಡಿದ್ದಾರೆ. 2015ರಲ್ಲಿ ಉಳಿದವರು ಕಂಡಂತೆ ಸಿನಿಮಾಕ್ಕೆ ಸಂಗೀತ ನಿರ್ದೇಶಿಸಿದ್ದರು. ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ್ದಾರೆ. ರಂಗಿತರಂಗ ಸಿನಿಮಾಕ್ಕೂ ಇವರೇ ಸಂಗೀತ ನೀಡಿದ್ದಾರೆ.
ಇತ್ತೀಚೆಗೆ ಇವರು ಕೈವ, ಮಂಗಳವಾರಂ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ವಿರೂಪಾಕ್ಷ, ರಾಘವೇಂದ್ರ ಸ್ಟೋರ್ಸ್, ಗುರುದೇವ ಹೊಯ್ಸಳ, ಸ್ಪೂಕಿ ಕಾಲೇಜ್ ಮುಂತಾದ ಸಿನಿಮಾಗಳಿಗೆ ಸಂಗೀತ ನೀಡಿದ್ದರು. ಬನಾರಸ್, ಗಂಧದ ಗುಡಿ, ಚಾಂಪಿಯನ್, ಕಾಂತಾರ, ಗುರು ಶಿಷ್ಯರು, ವಿಕ್ರಾಂತ್ ರೋಣಾ, ದೃಶ್ಯ, ರತ್ನನ್ ಪ್ರಪಂಚ, ಜಂಟಲ್‌ಮ್ಯಾನ್, ದಿಯಾ ಸೇರಿದಂತೆ ಹಲವು ಸಿನಿಮಾಗಳಿಗೆ ಬಿ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.