Parakramam Movie: ಒಟಿಟಿ ಬದಲು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಮಲಯಾಳಂನ ಪರಾಕ್ರಮಂ ಸಿನಿಮಾ
ಕಳೆದ ವರ್ಷದ ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಪರಾಕ್ರಮಂ ಸಿನಿಮಾ, ಮೂರು ತಿಂಗಳಾದರೂ ಒಟಿಟಿಗೆ ಆಗಮಿಸಿರಲಿಲ್ಲ. ಇದೀಗ ಯಾವುದೇ ಸುಳಿವು ನೀಡದೇ, ನೇರವಾಗಿ ಒಟಿಟಿಗೆ ಆಗಮಿಸಿದೆ.

Malayalam Movie on Youtube: ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆದ ಬಳಿಕ, ಅದರ ಮುಂದಿನ ಪಯಣ ಡಿಜಿಟಲ್ ಪ್ರೀಮಿಯರ್ ಅಥವಾ ಸ್ಯಾಟಲೈಟ್ ಪ್ರೀಮಿಯರ್. ಅತ್ಯಾಪರೂಪ ಎಂಬಂತೆ ಕೆಲವು ಸಿನಿಮಾಗಳಿಗೆ ಒಟಿಟಿ ಪ್ರಸಾರಕ್ಕೆ ಚಾನ್ಸ್ ಸಿಗದಿದ್ದಾಗ, ಆ ಚಿತ್ರಗಳು ಯೂಟ್ಯೂಬ್ ಮೊರೆ ಹೋಗುತ್ತವೆ. ಇದೀಗ ಮಲಯಾಳಂನ ಪರಾಕ್ರಮ್ ಶೀರ್ಷಿಕೆಯ ಸಿನಿಮಾ ಒಟಿಟಿ ಬದಲು, ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಪರಾಕ್ರಮಂ ಸಿನಿಮಾ, ಮೂರು ತಿಂಗಳಾದರೂ ಒಟಿಟಿಗೆ ಆಗಮಿಸಿರಲಿಲ್ಲ. ಐಎಂಡಿಬಿಯಲ್ಲಿ 7.5 ರೇಟಿಂಗ್ ಪಡೆದ ಈ ಸಿನಿಮಾ ಅದ್ಯಾವಾಗ ಒಟಿಟಿಗೆ ಬರಲಿದೆ ಎಂದೇ ಒಟಿಟಿ ವೀಕ್ಷಕರು ಕಾಯುತ್ತಿದ್ದರು. ಇದೀಗ ಅದೆಲ್ಲದಕ್ಕೂ ಉತ್ತರ ಎಂಬಂತೆ, ಒಟಿಟಿ ಬದಲು ನೇರವಾಗಿ ಯೂಟ್ಯೂಬ್ ಹಾದಿ ಹಿಡಿದಿದೆ ಈ ಸಿನಿಮಾ. ಹಾಗಾದರೆ ಯಾವ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಸಿನಿಮಾದ ವೀಕ್ಷಣೆ? ಇಲ್ಲಿದೆ ಮಾಹಿತಿ.
ಯೂಟ್ಯೂಬ್‌ನಲ್ಲಿ ಪರಾಕ್ರಮ್ ಮೂವಿ
ಮಲಯಾಳಂ ಪರಾಕ್ರಮಂ ಚಿತ್ರ ಕಳೆದ ವರ್ಷದ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ, ಹೆಚ್ಚು ಸದ್ದು ಮಾಡಲಿಲ್ಲ. ಕಲೆಕ್ಷನ್ ವಿಚಾರದಲ್ಲಿಯೂ ಕಮಾಲ್ ಮಾಡಲಿಲ್ಲ. ಇದೀಗ ಮೂರು ತಿಂಗಳ ನಂತರ, ಇದ್ದಕ್ಕಿದ್ದಂತೆ ಯೂಟ್ಯೂಬ್‌ಗೆ ಎಂಟ್ರಿಕೊಟ್ಟಿದೆ. ದೇವ್ ಮೋಹನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು Cinema Villa ಯೂಟ್ಯೂಬ್ ಚಾನೆಲ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಈ ಚಿತ್ರವು ಕೇವಲ ಒಂದು ಗಂಟೆ 35 ನಿಮಿಷಗಳದ್ದಾಗಿದೆ.
ಇಂಗ್ಲಿಷ್ ಸಬ್ ಟೈಟಲ್
ಮಲಯಾಳಂನ ಪರಾಕ್ರಮಂ ಚಿತ್ರವನ್ನು ಅರ್ಜುನ್ ರಮೇಶ್ ನಿರ್ದೇಶಿಸಿದ್ದಾರೆ. ಮಿಲೇನಿಯಲ್ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಿಸಿದೆ. ಚಿತ್ರದಲ್ಲಿ ದೇವ್ ಮೋಹನ್ ಜೊತೆಗೆ ಸಿಜು ಸನ್ನಿ, ಜೋಮೊನ್ ಜ್ಯೋತಿರ್, ಅಮಿತ್ ಮೋಹನ್ ರಾಜೇಶ್ವರಿ ಮತ್ತು ಸಂಗೀತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಲಯಾಳಂ ಭಾಷೆಯಲ್ಲಿ ಇಂಗ್ಲಿಷ್ ಸಬ್ ಟೈಟಲ್‌ನಲ್ಲಿ ಈ ಸಿನಿಮಾ ವೀಕ್ಷಿಸಬಹುದು.
ಏನಿದು ಕಥೆ?
ಕಥೆಯ ಬಗ್ಗೆ ಹೇಳುವುದಾದರೆ, ದೇವ್ ಮೋಹನ್, ವಿಶಾಕ್ ಎಂಬ ಪಾತ್ರದಲ್ಲಿ ನಟಿಸಿದ್ದು, ಸೇನಾ ಮೇಜರ್ ಆಗಬೇಕೆಂಬುದು ಆತನ ಕನಸು. ಆದರೆ, ತನ್ನ ಮೇಲೆ ತನಗೇ ನಂಬಿಕೆ ಇಲ್ಲದ ಆತ, ಇತರರಿಂದ ಗೇಲಿಗೊಳಗಾಗುತ್ತಿರುತ್ತಾನೆ. ಸ್ನೇಹಿತರಿಂದ ಹುಡುಗಿಯ ಪ್ರೀತಿಯಲ್ಲಿಯೂ ಬೀಳುತ್ತಾನೆ. ಕಥೆ ಸಾಗಿದಂತೆ, ತಿರುವುಗಳೂ ಎದುರಾಗುತ್ತವೆ. ಅಂತಿಮವಾಗಿ ಕಥಾನಾಯಕ ತನ್ನ ಗುರಿ ಮುಟ್ಟುತ್ತಾನಾ? ಅದೇ ಈ ಚಿತ್ರದ ಕಥೆ.
