Malayalam Movies 2024: ಮಾಲಿವುಡ್‌ನಲ್ಲಿ ಈ ವರ್ಷ ಬಂಗಾರದ ಬೆಳೆ; ಬಿಡುಗಡೆಯಾದ ಸಿನಿಮಾಗಳೆಲ್ಲ ಚಿನ್ನ! ಆದರೆ..
Malayalam Movies 2024: ಮಲಯಾಳಂ ಚಿತ್ರರಂಗ ಈ ವರ್ಷ ಹೊಸ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ಮಾತ್ರವಲ್ಲದೆ 200 ಕೋಟಿಯ ಗಡಿ ಮುಟ್ಟಿದೆ. 5 ಸಿನಿಮಾಗಳು ಶತ ಶತಕೋಟಿ ಗಳಿಕೆ ಕಂಡರೆ, ಇನ್ನೂ ಕೆಲ ಸಿನಿಮಾಗಳು ಕೋಟಿ ಲೆಕ್ಕದಲ್ಲಿ ಎರಡಂಕಿ ದಾಟಿವೆ. ಒಟಿಟಿಯಲ್ಲಿಯೂ ಮಾಲಿವುಡ್‌ನದ್ದೇ ಸದ್ದು.
![ಮಲಯಾಳಂ ಸಿನಿಮಾಗಳು 2024 ಮಲಯಾಳಂ ಸಿನಿಮಾಗಳು 2024](https://images.hindustantimes.com/kannada/img/2024/12/26/550x309/Mollywood_1735188441789_1735188462952.png)
Malayalam Movies 2024: ಮಲಯಾಳಂ ಚಿತ್ರರಂಗಕ್ಕೆ 2024 ತುಂಬ ವಿಶೇಷವಾದ ವರ್ಷ. ಒಂದಷ್ಟು ಹೊಸ ದಾಖಲೆಗಳು ಈ ವರ್ಷ ನಿರ್ಮಾಣವಾಗಿವೆ. ಬ್ಲಾಕ್‌ಬಸ್ಟರ್ ಸಿನಿಮಾಗಳ ಪಟ್ಟಿ ದೊಡ್ಡದಾಗಿದೆ. ಚಿಕ್ಕ ಇಂಡಸ್ಟ್ರಿಯೆಂದೇ ಕರೆಸಿಕೊಳ್ಳುತ್ತಿದ್ದ ಮಾಲಿವುಡ್‌ಗೂ ಈಗ ಪರ್ವಕಾಲ! ಬಿತ್ತಿದ ಸಿನಿಮಾಗಳು, ಬಂಗಾರದ ಬೆಳೆಯನ್ನೇ ನೀಡಿವೆ. 10 ಕೋಟಿ, 20 ಕೋಟಿ ರೂ ಎಂದು ಎಣಿಸುತ್ತಿದ್ದ ನಿರ್ಮಾಪಕರು, ನೂರು ಕೋಟಿ, 200 ಕೋಟಿ ರೂನ ಗುರಿ ಮುಟ್ಟಿದ್ದಾರೆ. ಒಬ್ಬೊಬ್ಬ ನಾಯಕ ನಟರ ಐದಾರು ಸಿನಿಮಾಗಳು ಈ ವರ್ಷ ಮಲಯಾಳಂನಲ್ಲಿ ತೆರೆಕಂಡಿವೆ. ಒಟ್ಟಾರೆ 2024 ಮಾಲಿವುಡ್ ಪಾಲಿಗೆ ಫಲಪ್ರದ ವರ್ಷ.
ಮಾಲಿವುಡ್ ಸಿನಿಮಾರಂಗ ಈ ವರ್ಷ ಗೆದ್ದು ಬೀಗಿದ ಖುಷಿಯಲ್ಲಿದೆ. ಸ್ಟಾರ್ ನಟರ ಸಿನಿಮಾಗಳು ನಿರ್ಮಾಪಕರ ಕೈ ಹಿಡಿದರೆ, ಅನಿರೀಕ್ಷಿತವಾಗಿ, ಯಾವುದೇ ಹೈಪ್ ಇಲ್ಲದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿವೆ. ಅಂಥ ಕೆಲ ಸಿನಿಮಾಗಳು ನಿರ್ಮಾಪಕರ ಕೈ ಹಿಡಿದಿದ್ದು ಮಾತ್ರವಲ್ಲ, ಜೇಬು ತುಂಬಿಸಿವೆ. ಹಾಗಾದರೆ, 2024ರಲ್ಲಿ ಮಾಲಿವುಡ್‌ನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಪಟ್ಟ ಪಡೆದ ಸಿನಿಮಾಗಳು ಯಾವವು? ಅವುಗಳು ಗಳಿಸಿದ ಕಲೆಕ್ಷನ್ ಎಷ್ಟು? ಒಟಿಟಿಯಲ್ಲಿಯೂ ಹಬ್ಬ ಮಾಡಿದ ಸಿನಿಮಾಗಳ ಲಿಸ್ಟ್ ಸಹ ಇಲ್ಲಿದೆ.
ನೂರು ಕೋಟಿಯ ಐದು ಸಿನಿಮಾಗಳು
ಮಲಯಾಳಂ ಸಿನಿಮಾಗಳು 2024ರಲ್ಲಿ ಧೂಳೆಬ್ಬಿಸಿವೆ. ಈ ವರ್ಷ ಒಟ್ಟು ಐದು ಸಿನಿಮಾಗಳು 100 ಕೋಟಿ ರೂ ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿವೆ. ಈ ವರ್ಷ ಮಾಲಿವುಡ್‌ನಿಂದ ಒಟ್ಟು 207 ಸಿನಿಮಾಗಳು ಬಿಡುಗಡೆಯಾಗಿವೆ. ಆ 207 ಸಿನಿಮಾಗಳ ಪೈಕಿ 22 ಸಿನಿಮಾಗಳು ಹಿಟ್ ಆಗಿವೆ. ಇನ್ನೊಂದಿಷ್ಟು ಸಿನಿಮಾಗಳು ನಿರ್ಮಾಪಕರ ಕೈ ಹಿಡಿದಿವೆ. ಮಗದೊಂದಿಷ್ಟು ಚಿತ್ರಮಂದಿರದಲ್ಲಿ ಗೆಲ್ಲದಿದ್ದರೂ ಒಟಿಟಿಯಲ್ಲಿ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆದಿವೆ. ಒಟ್ಟಾರೆಯಾಗಿ ಇಡೀ ವರ್ಷ ಮಾಲಿವುಡ್ ಸಿನಿಮಾಗಳು ಚಿತ್ರಮಂದಿರಗಳ ಜತೆಗೆ ಒಟಿಟಿಯಲ್ಲಿಯೂ ಸದ್ದು ಮಾಡಿವೆ.
ಅಗ್ರಸ್ಥಾನದಲ್ಲಿ ಮಂಜುಮ್ಮೆಲ್ ಬಾಯ್ಸ್
2024ರ ಆರಂಭದಿಂದಲೂ ಮಾಲಿವುಡ್ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ನೀಡುತ್ತಲೇ ಬಂದಿವೆ. ಆ ಪೈಕಿ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ಚಿತ್ರವು 241 ಕೋಟಿ ರೂ.ಗಳೊಂದಿಗೆ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿ ಇತಿಹಾಸ ಸೃಷ್ಟಿಸಿತು. ಇದಲ್ಲದೆ ಪ್ರೇಮಲು, ಆಡುಜೀವಿತಂ, ಎಆರ್‌ಎಂ ಸಿನಿಮಾಗಳು ಸಹ 100 ಕೋಟಿ ರೂ.ಗಳನ್ನು ಗಳಿಸಿವೆ.
ಇದನ್ನೂ ಓದಿ: ಒಟಿಟಿಯಲ್ಲಿ ಡಿಸ್ಪ್ಯಾಚ್ ಚಿತ್ರಕ್ಕೆ ಮನಸೋತ ವೀಕ್ಷಕರು
ಮಲಯಾಳಂನಲ್ಲಿ 100 ಕೋಟಿ ರೂ.ಗಳ ಗಡಿ ದಾಟುವುದು ಅಪರೂಪ. ಈ ವರ್ಷ ಒಟ್ಟು ಐದು ಚಿತ್ರಗಳು ಆ ಮೈಲಿಗಲ್ಲನ್ನು ದಾಟಿವೆ. 'ಮಂಜುಮೆಲ್ ಬಾಯ್ಸ್' ನಂತರ ಆಡುಜೀವಿತಂ 158.48 ಕೋಟಿ ರೂ, ಆವೇಶಂ156 ಕೋಟಿ ರೂ, ಪ್ರೇಮಲು 135 ಕೋಟಿ ರೂ, ಅಜಯಂತೆ ರಂಡಮ್ ಮೋಶನಂ 106 ಕೋಟಿ ರೂ. ಗಳಿಸಿದೆ. ಇದಲ್ಲದೆ ಗುರುವಾಯೂರು ಅಂಬಲನಾಡಿಯಿಲ್ 90 ಕೋಟಿ ರೂ, ವರ್ಸಂಗಲ್ 83 ಕೋಟಿ ರೂ., ಕಿಷ್ಕಿಂದಾ ಖಾಂಡಂ 77 ಕೋಟಿ, ಟರ್ಬೊ 72 ಕೋಟಿ, ಬ್ರಹ್ಮಯುಗಂ 58 ಕೋಟಿ ಸಂಗ್ರಹಿಸಿದೆ. ಇನ್ನು ಕೇರಳದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಸಾಲಿನಲ್ಲಿ ಆಡುಜೀವಿತಂ 79 ಕೋಟಿ ರೂ ಗಳಿಕೆ ಮಾಡಿದೆ.
ಸದ್ದು ಮಾಡಿದ ಸಿನಿಮಾಗಳು
ಟರ್ಬೊ, ವಾಜಾ, ಅಬ್ರಹಾಂ ಓಜ್ಲರ್, ಅನ್ವೇಶಿಪಿನ್ ಕಂಡೆಟಮ್, ಬೌಗೆನ್ವಿಲ್ಲಾ, ಹಲೋ ಮಮ್ಮಿ, ಪಾನಿ ಮತ್ತು ಆಸ್ಟ್ರಲದರ್ಶಿನಿ ಚಿತ್ರಗಳು ಬ್ಲಾಕ್‌ಬಸ್ಟರ್ ಹಿಟ್ ಅಲ್ಲದೆ ಇದ್ದರೂ ನಿರ್ಮಾಪಕರಿಗೆ ಮೋಸ ಮಾಡಿಲ್ಲ. ಹಾಕಿದ ದುಡ್ಡನ್ನು ಈ ಸಿನಿಮಾಗಳು ಹಿಂದಿರುಗಿಸಿವೆ. ತಲವನ್, ಗೋಲಂ, ನುನಾಕುಳಿ ಮತ್ತು ಉಲ್ಲೋಜುಕ್ಕು ಮುಂತಾದ ಸಿನಿಮಾಗಳು ಮಧ್ಯಮ ಯಶಸ್ಸನ್ನು ಕಂಡಿವೆ.
ಸೋಲೇ ಇಲ್ಲ ಎಂದು ಹೇಳುವುದು ಕಷ್ಟ..
2024 ಮಲಯಾಳಂ ಚಿತ್ರರಂಗಕ್ಕೆ ಸುವರ್ಣ ಯುಗ ಎಂಬುದು ನಿಜ. ಆದರೆ ಇದೇ ಅವಧಿಯಲ್ಲಿ ಶೇ 88 ಸಿನಿಮಾಗಳು ಸೋತಿವೆ ಎಂದರೇ ನಂಬಲೇಬೇಕು! ಈ ವರ್ಷ ಮಲಯಾಳಂನಲ್ಲಿ 207 ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ 22 ಸಿನಿಮಾಗಳು ಮಾತ್ರ ಹಿಟ್ ಪಟ್ಟಿ ಸೇರಿವೆ. ನಿರ್ಮಾಪಕರಿಗೆ ಲಾಭ ತಂದುಕೊಟ್ಟಿವೆ. ಇನ್ನುಳಿದ ಸಿನಿಮಾಗಳು ನಿರಾಸೆ ಮೂಡಿಸಿವೆ. ಒಟ್ಟಾರೆ ಸಿನಿಮಾಗಳ ವಿಚಾರಕ್ಕೆ ಬಂದರೆ, 2023ರಲ್ಲಿ ಮಲಯಾಳಂನಲ್ಲಿ 222 ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ವರ್ಷ ಅದು 207ಕ್ಕೆ ಬಂದು ನಿಂತಿದೆ.
ಒಟಿಟಿಯಲ್ಲೂ ಬ್ಲಾಕ್‌ಬಸ್ಟರ್
- ಮಂಜುಮ್ಮೆಲ್ ಬಾಯ್ಸ್ - ಡಿಸ್ನಿ ಪ್ಲಸ್ ಹಾಟ್ ಸ್ಟಾರ್
- ಪ್ರೇಮಲು - ಹಾಟ್ಸ್ಟಾರ್, ಆಹಾ ವಿಡಿಯೋ
- ಆಡುಜೀವಿತಂ - ನೆಟ್‌ಫ್ಲಿಕ್ಸ್
- ಆವೇಶಂ- ಪ್ರೈಮ್ ವಿಡಿಯೋ
- ಎಆರ್‌ಎಂ- ಡಿಸ್ನಿ ಪ್ಲಸ್ ಹಾಟ್ ಸ್ಟಾರ್
- ಬ್ರಮಯುಗಂ - ಸೋನಿಲೈವ್
- ಕಿಷ್ಕಿಂದಾ ಖಾಂಡಂ- ಡಿಸ್ನಿ ಪ್ಲಸ್ ಹಾಟ್ ಸ್ಟಾರ್
- ಬೌಗೆನ್ವಿಲ್ಲಾ - ಸೋನಿಲೈವ್
- ನುನುಕುಳಿ- ಜೀ5
![Whats_app_banner Whats_app_banner](https://kannada.hindustantimes.com/static-content/1y/wBanner.png)