ಒಟಿಟಿಗೆ ಆಗಮಿಸಲಿವೆ ಮಲಯಾಳಂನ ಎರಡು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳು; ಒಂದು ಹಾಸ್ಯ ಪ್ರಧಾನ, ಇನ್ನೊಂದು ಥ್ರಿಲ್ಲರ್
ಈ ತಿಂಗಳಲ್ಲಿ ಎರಡು ಬ್ಲಾಕ್ಬಸ್ಟರ್ ಮಲಯಾಳಂ ಚಿತ್ರಗಳು ಒಟಿಟಿಗೆ ಆಗಮಿಸಲಿವೆ. ಒಂದು ಚಿತ್ರದ ಸ್ಟ್ರೀಮಿಂಗ್ ದಿನಾಂಕ ಈಗಾಗಲೇ ನಿಗದಿಯಾಗಿದೆ. ಈ ಎರಡರಲ್ಲಿ ಒಂದು ಹಾಸ್ಯಪ್ರಧಾನ ಚಿತ್ರವಾಗಿದ್ದರೆ, ಇನ್ನೊಂದು ಥ್ರಿಲ್ಲರ್ ಪ್ರಕಾರದ ಚಿತ್ರವಾಗಿದೆ. ಹೀಗಿದೆ ನೋಡಿ ಆ ಎರಡು ಸಿನಿಮಾಗಳ ಕುರಿತ ಮಾಹಿತಿ.

ಒಟಿಟಿಯಲ್ಲಿ ಮಲಯಾಳಂ ಸಿನಿಮಾಗಳಿಗೆ ಬೇಡಿಕೆ ಹೆಚ್ಚು. ವಾರ ವಾರ ಹೊಸ ಹೊಸ ಚಿತ್ರಗಳು ಸ್ಟ್ರೀಮಿಂಗ್ ಆಗುತ್ತಲೇ ಇರುತ್ತವೆ. ಅಂಥ ಸಿನಿಮಾಗಳು ಕನ್ನಡ ಸಹಿತ ದಕ್ಷಿಣದ ಇನ್ನುಳಿದ ಭಾಷೆಗಳಿಗೂ ಡಬ್ ಆಗಿ, ಹೆಚ್ಚೆಚ್ಚು ವೀಕ್ಷಣೆ ಕಾಣುತ್ತವೆ. ಇದೀಗ ಕಳೆದ ತಿಂಗಳಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಹಿಟ್ ಪಟ್ಟ ಪಡೆದ ʻಮರಣಮಾಸ್ʼ ಮತ್ತು ʻತುಡರುಮ್ʼ ಸಿನಿಮಾಗಳೀಗ ಒಟಿಟಿಗೆ ಆಗಮಿಸಲಿವೆ.
ಮರಣಮಾಸ್
ಮಲಯಾಳಂ ನಟ ಬಾಸಿಲ್ ಜೋಸೆಫ್ ಕನ್ನಡ ಸಿನಿಮಾಪ್ರಿಯರಿಗೂ ಗೊತ್ತಿರುವ ಮುಖ. ಒಟಿಟಿಯಲ್ಲಿ ಜೋಸೆಫ್ ನಟಿಸಿರುವ ಚಿತ್ರಗಳಿಗೆ ಉತ್ತಮ ಬೇಡಿಕೆ ಇದೆ. ಬ್ಯಾಕ್ ಟು ಬ್ಯಾಕ್ ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗುವುದರ ಜತೆಗೆ, ಒಟಿಟಿಯಲ್ಲಿಯೂ ಮೋಡಿ ಮಾಡಿವೆ. ಇದೀಗ ಇದೇ ಬಾಸಿಲ್ ನಟಿಸಿರುವ ʻಮರಣಮಾಸ್ʼ ಸಿನಿಮಾ ಮೇ 15ರಿಂದ ಸೋನಿಲೀವ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸದಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಚಿತ್ರಮಂದಿರಗಳಲ್ಲಿ ಮಲಯಾಳಂನಲ್ಲಿ ಮಾತ್ರ ಬಿಡುಗಡೆಯಾದರೂ, ಒಟಿಟಿಯಲ್ಲಿ ಐದು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.
ಡಾರ್ಕ್ ಕಾಮಿಡಿ ಜಾನರ್ನ 'ಮರಣಮಾಸ್' ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರಕ್ಕೆ ಶಿವಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಒಬ್ಬ ಸೀರಿಯಲ್ ಕಿಲ್ಲರ್ ಸುತ್ತ ಈ ಸಿನಿಮಾ ಸಾಗುತ್ತದೆ. ಸುಮಾರು 8 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾದ ಈ ಸಿನಿಮಾ, 18 ಕೋಟಿ ರೂಪಾಯಿಗಳಷ್ಟು ಗಳಿಕೆ ಕಂಡು ಸೂಪರ್ ಹಿಟ್ ಆಗಿದೆ.
ಮರಣಮಾಸ್ ಚಿತ್ರವನ್ನು ನಟ ಟೊನಿನೊ ಥಾಮಸ್, ಟಂಗಸ್ಟನ್ ಥಾಮಸ್, ರಫೇಲ್ ಮತ್ತು ತಂಜೀರ್ ಸಲಾಂ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕ್ಲೈಮ್ಯಾಕ್ಸ್ ಕೂಡ ವಿಶೇಷವಾಗಿದೆ ಎಂಬ ಪ್ರತಿಕ್ರಿಯೆಗಳು ಬಂದಿವೆ.
ತುಡರುಮ್
ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ನಟಿಸಿರುವ 'ತುಡರುಮ್' ಸಿನಿಮಾ ಏಪ್ರಿಲ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಕ್ರೈಮ್ ಥ್ರಿಲ್ಲರ್ ಚಿತ್ರ ಉತ್ತಮ ಪ್ರತಿಕ್ರಿಯೆಯೊಂದಿಗೆ ಗಳಿಕೆಯಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಈಗಾಗಲೇ ಈ ಸಿನಿಮಾ 150 ಕೋಟಿ ರೂಪಾಯಿಗಳ ಗಳಿಕೆಯ ಗಡಿ ದಾಟಿದೆ. ಇನ್ನೂ ಉತ್ತಮ ಪ್ರದರ್ಶನ ಮುಂದುವರಿಸಿದೆ.
ಇದೀಗ 'ತುಡರುಮ್' ಸಿನಿಮಾ ಮೇ ತಿಂಗಳ ಕೊನೆಯಲ್ಲಿ ಜಿಯೋಹಾಟ್ಸ್ಟಾರ್ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ, ಒಟಿಟಿಗೆ ಆಗಮಿಸುವುದು ಕೊಂಚ ತಡವಾಗಲಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ ಇದೇ ಮಾಸಾಂತ್ಯಕ್ಕೆ ಈ ಸಿನಿಮಾ ಒಟಿಟಿಗೆ ಆಗಮಿಸಲಿದೆ ಎನ್ನಲಾಗುತ್ತಿದೆ.
'ತುಡರುಮ್' ಸಿನಿಮಾದಲ್ಲಿ ಮೋಹನ್ ಲಾಲ್ ಜೊತೆಗೆ ಶೋಭನಾ, ಪ್ರಕಾಶ್ ವರ್ಮಾ, ಥಾಮಸ್ ಮ್ಯಾಥ್ಯೂ, ಬಿನು ಪಪ್ಪು ಮತ್ತು ಅಮೃತ ವರ್ಷಿಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ತರುಣ್ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಸುಮಾರು 30 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಈಗಾಗಲೇ 150 ಕೋಟಿ ರೂಪಾಯಿಗಳನ್ನು ದಾಟಿ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಈ ಚಿತ್ರವನ್ನು ರಾಜಪುತ್ರ ವಿಷುವಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ರಂಜಿತ್ ನಿರ್ಮಿಸಿದ್ದಾರೆ. ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸಿದ್ದಾರೆ.
ಮಲಯಾಳಂ ಚಿತ್ರ 'ಬ್ರೋಮ್ಯಾನ್ಸ್' ಕಳೆದ ವಾರ ಸೋನಿಲೀವ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಮಲಯಾಳಂ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಮ್ಯಾಥ್ಯೂ ಥಾಮಸ್ ಮತ್ತು ಅರ್ಜುನ್ ಅಶೋಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾವನ್ನು ನಿರ್ದೇಶಕ ಅರುಣ್ ಡಿ ಜೋಸ್ ನಿರ್ದೇಶಿಸಿದ್ದಾರೆ.