OTT News: ಒಟಿಟಿಗೆ ಬಂತು ಮಲಯಾಳಂನ ಕಾಮಿಡಿ ಸಿನಿಮಾ; ಈ ವೇದಿಕೆಯಲ್ಲಿ Grrrr ಚಿತ್ರ ವೀಕ್ಷಣೆಗೆ ಲಭ್ಯ
ಮಲಯಾಳಂನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ Grrr ಒಟಿಟಿ ಅಂಗಳ ಪ್ರವೇಶಿಸಿದೆ. ಮದ್ಯದ ಅಮಲಿನಲ್ಲಿ ಮೃಗಾಲಯದಲ್ಲಿನ ಸಿಂಹದ ಬೋನಿಗೆ ಆಕಸ್ಮಿಕವಾಗಿ ಪ್ರವೇಶಿಸಿದ ವ್ಯಕ್ತಿಯನ್ನು ಹೇಗೆ ರಕ್ಷಣೆ ಮಾಡಲಾಗುತ್ತದೆ ಎಂಬುದೇ ಈ ಸಿನಿಮಾದ ಕಥೆ.
Grrr OTT Release: ಮಲಯಾಳಂ ಚಿತ್ರಗಳ ಕ್ರೇಜ್ ವಿಭಿನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾಲಿವುಡ್‌ನತ್ತ ಹೊರಳಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕೆ ಕಾರಣ; ಅಲ್ಲಿ ನಿರ್ಮಾಣವಾಗುವ ವಿಭಿನ್ನ ಬಗೆಯ ಸಿನಿಮಾಗಳು. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ, ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಇದೀಗ ಅಂಥದ್ದೇ ಇನ್ನೊಂದು ಸಿನಿಮಾ ಚಿತ್ರಮಂದಿರದಲ್ಲಿ ಮೋಡಿ ಮಾಡಿ, ಒಟಿಟಿ ಅಂಗಳ ಪ್ರವೇಶಿಸಿದೆ. ಆ ಸಿನಿಮಾ ಹೆಸರೇ Grrr!
ಒಟಿಟಿಯಲ್ಲಿ ಮಲಯಾಳಂ ಚಿತ್ರಗಳಿಗೆ ಬೇರೆಯದ್ದೇ ಕ್ರೇಜ್ ಇದೆ. ವಾಸ್ತವಕ್ಕೆ ಹತ್ತಿರವಾಗಿರುವುದರಿಂದ, ಹೊಸ ರೀತಿಯ ಪರಿಕಲ್ಪನೆ ಮತ್ತು ನೋಡುಗರನ್ನು ಆಕರ್ಷಿಸುವ ಕಥೆಯ ಜತೆಗೆ ಆಗಮಿಸುತ್ತಿರುತ್ತಾರೆ. ಇದೀಗ Grrr ಸಿನಿಮಾ ಸಹ ಅಷ್ಟೇ ಕುತೂಹಲ ಮೂಡಿಸಿ, ಒಟಿಟಿಗೆ ಆಗಮಿಸಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ಜೂನ್ 14 ರಂದು ಕೇರಳದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು.
ಸಿಂಹಗರ್ಜನೆಯೇ ಸಿನಿಮಾ ಶೀರ್ಷಿಕೆ
ಮಲಯಾಳಂನ ಖ್ಯಾತ ನಟರಾದ ಕುಂಚಕೋ ಬೋಬನ್ ಮತ್ತು ಸೂರಜ್ ವೆಂಜರಾಮ್ ಅವರು 'Grrr' ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿಂಹಗರ್ಜನೆಯ ಶಬ್ದವನ್ನೇ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಜಯ್ ಕೆ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸೂರಜ್ ವೆಂಜರಮೂಡ್, ಕುಂಚಕೋ ಬೋಬನ್, ಶ್ರುತಿ ರಾಮಚಂದ್ರನ್, ಅನಘಾ, ರಾಜೇಶ್ ಮಾಧವನ್, ಮಂಜು ಪಿಳ್ಳೈ, ಶೋಭಿ ತಿಲಕನ್, ಸೆಂಥಿಲ್ ಕೃಷ್ಣ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಏನಿದು Grrr ಕಥೆ?
ಆಗಸ್ಟ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಶಾಜಿ ನಡೇಸನ್ ಮತ್ತು ಆರ್ಯ ನಿರ್ಮಿಸಿರುವ ಈ ಚಿತ್ರಕ್ಕೆ ಡಾನ್ ವಿನ್ಸೆಂಟ್, ಕಾಳಿದಾಸ್ ಮೆನನ್ ಮತ್ತು ಟೋನಿ ತಾರ್ಗೆ ಧ್ವನಿ ನೀಡಿದ್ದಾರೆ. ಜಯೇಶ್ ನಾಯರ್ ಛಾಯಾಗ್ರಾಹಕರಾಗಿ ಮತ್ತು ವಿವೇಕ್ ಹರ್ಷನ್ ಸಂಕಲನವನ್ನು ನಿರ್ವಹಿಸಿದ್ದಾರೆ. ಚಿತ್ರದ ಸಂಪೂರ್ಣ ಕಥೆಯು ಕೇರಳದ ತಿರುವನಂತಪುರಂ ಮೃಗಾಲಯದಲ್ಲಿ ತೆರೆದುಕೊಳ್ಳುತ್ತದೆ. ಮದ್ಯದ ಅಮಲಿನಲ್ಲಿ ಮೃಗಾಲಯದಲ್ಲಿನ ಸಿಂಹದ ಬೋನಿಗೆ ಆಕಸ್ಮಿಕವಾಗಿ ಪ್ರವೇಶಿಸಿದ ವ್ಯಕ್ತಿಯನ್ನು ಹೇಗೆ ರಕ್ಷಣೆ ಮಾಡಲಾಗುತ್ತದ ಎಂಬುದೇ ಈ ಸಿನಿಮಾದ ಕಥೆ.
ಯಾವ ಒಟಿಟಿಯಲ್ಲಿ ವೀಕ್ಷಣೆ?
OTT ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ 'Grrr' ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಅದರಂತೆ ಆಗಸ್ಟ್ 20ರ ಮಂಗಳವಾರ ರಾತ್ರಿಯಿಂದಲೇ ಈ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ಮಲಯಾಳಂ ಜೊತೆಗೆ ತೆಲುಗು, ಕನ್ನಡ, ತಮಿಳು ಭಾಷೆಗಳಲ್ಲಿಯೂ ಸ್ಟ್ರೀಮ್ ಆಗುತ್ತಿದೆ.