Theatrical Releases: ಚಿತ್ರಮಂದಿರಗಳಲ್ಲಿ ಈ ವಾರ ಸೂಪರ್‌ಸ್ಟಾರ್‌ಗಳ ಸಿನಿಮಾ ಹಬ್ಬ; ಇಲ್ಲಿವೆ ಟಾಪ್ 5 ಚಿತ್ರಗಳ ವಿವರ
Theatrical Releases: ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಸಿಕಂದರ್, ಕನ್ನಡದಲ್ಲಿ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು, ತಮಿಳಿನ ವೀರ ಧೀರ ಸೂರನ್, ಮಲಯಾಳಂನ ಎಂಪುರಾನ್, ತೆಲುಗಿನ ರಾಬಿನ್ ಹುಡ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ಚಿತ್ರಗಳ ರಿಲೀಸ್ ಕುರಿತ ವಿವರ ಇಲ್ಲಿದೆ.

Theatrical Releases this week: ಮುಂದಿನ ಮೂರು ದಿನಗಳ ಅವಧಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 5 ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರದತ್ತ ಆಗಮಿಸುತ್ತಿವೆ. ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್ ಸಿಕಂದರ್, ಕನ್ನಡದಲ್ಲಿ ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು, ತಮಿಳಿನ ವೀರ ಧೀರ ಸೂರನ್ ಮತ್ತು ಮಲಯಾಳಂನ ಎಂಪುರಾನ್, ತೆಲುಗಿನ ರಾಬಿನ್ ಹುಡ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ಚಿತ್ರಗಳ ರಿಲೀಸ್ ಕುರಿತ ವಿವರ ಇಲ್ಲಿದೆ.
ಕನ್ನಡದಲ್ಲಿ ಭಟ್ಟರ ಮನದ ಕಡಲು
ಯೋಗರಾಜ್ ಭಟ್ ನಿರ್ದೇಶನದ ಮನದ ಕಡಲು ಸಿನಿಮಾ ಇದೇ ಮಾರ್ಚ್ 28ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಮತ್ತೆ ಹೊಸ ಮುಖಗಳ ಜತೆಗೆ ಹೊಸ ಕಥೆಯೊಂದಿಗೆ ಆಗಮಿಸಿದ ಭಟ್ರು, ಮತ್ತೊಂದು ಯುವ ಪೀಳಿಗೆಗೆ ಹತ್ತಿರ ಎನಿಸುವ ಕಥೆಯ ಜತೆಗೆ ಆಗಮಿಸಿದ್ದಾರೆ. ಇ.ಕೆ ಎಂಟರ್ಟೈನರ್ಸ್ ಬ್ಯಾನರ್‌ನಲ್ಲಿ ಇ.ಕೃಷ್ಣಪ್ಪ ಮತ್ತು ಜಿ ಗಂಗಾಧರ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾ, ಈಗಾಗಲೇ ಹಲವು ವಿಚಾರಕ್ಕೆ ಕುತೂಹಲ ಮೂಡಿಸಿದೆ.
ಈಗಾಗಲೇ ಟ್ರೇಲರ್ ಮೂಲಕ ಗಮನ ಸೆಳೆದ ಈ ಸಿನಿಮಾದಲ್ಲಿ ನಾಯಕನಾಗಿ ಸುಮುಖ ಅಭಿನಯಿಸಿದರೆ, ನಾಯಕಿಯರಾಗಿ ರಾಶಿಕಾ ಶೆಟ್ಟಿ ಹಾಗೂ ಅಂಜಲಿ ಅನೀಶ್ ನಟಿಸಿದ್ದಾರೆ. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ವಿ.ಹರಿಕೃಷ್ಣ ಸಂಗೀತ, ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನ, ವಿನೋದ್ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ.
ಮಲಯಾಳಂನ ಎಲ್ 2: ಎಂಪುರನ್
ಮಲಯಾಳಂ ನಟ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ಎಲ್-2: ಎಂಪುರಾನ್. ಲೂಸಿಫರ್ ಮೊದಲ ಭಾಗದ ಮುಂದುವರೆದ ಅಧ್ಯಾಯವಾಗಿರುವ ಎಲ್-2: ಎಂಪುರಾನ್ ಸಿನಿಮಾ ನಾಳೆ (ಮಾರ್ಚ್ 27) ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಸ್ಟೀಫನ್ ನೆಡುಂಪಲ್ಲಿ ಪಾತ್ರದಲ್ಲಿ ಮೋಹನ್ ಲಾಲ್ ಅಬ್ಬರಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ತಾರಾಬಳಗದಲ್ಲಿದ್ದಾರೆ.
ಬಾಲಿವುಡ್‌ನ ಸಿಕಂದರ್
ಬಾಲಿವುಡ್‌ನ ಬಹುನಿರೀಕ್ಷಿತ ಸಿಕಂದರ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಾಯಕ ನಾಯಕಿಯಾಗಿರುವ ಈ ಸಿನಿಮಾ, ಮಾರ್ಚ್ 30ರ ಈದ್ ಹಬ್ಬದ ಪ್ರಯುಕ್ತ ಚಿತ್ರಮಂದಿರಗಳಿಗೆ ಎಂಟ್ರಿಕೊಡಲಿದ್ದಾರೆ. ಸಿಕಂದರ್ ಚಿತ್ರವನ್ನು ಸೌತ್‌ನ ಗಜನಿ ಸಿನಿಮಾ ಖ್ಯಾತಿಯ ಎ.ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಾಣ ಮಾಡಿದ್ದಾರೆ. ಕನ್ನಡದ ನಟ ಕಿಶೋರ್, ಪೊಲೀಸ್ ಅಧಿಕಾರಿಯಾಗಿ ಕಂಡರೆ, ಇನ್ನುಳಿದಂತೆ ಸತ್ಯರಾಜ್, ಕಾಜಲ್ ಅಗರ್ವಾಲ್ ಮತ್ತು ಶರ್ಮನ್ ಜೋಶಿ ಪಾತ್ರವರ್ಗದಲ್ಲಿದ್ದಾರೆ.
ತೆಲುಗಿನ ರಾಬಿನ್ ಹುಡ್
ಟಾಲಿವುಡ್ ನಟ ನಿತಿನ್ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʻರಾಬಿನ್ ಹುಡ್ʼ ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಮಾರ್ಚ್ 28ರಂದು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವ ಈ ಸಿನಿಮಾವನ್ನು ವೆಂಕಿ ಕುಡುಮುಲ ನಿರ್ದೇಶನ ಮಾಡಿದ್ದಾರೆ. ರಾಜೇಂದ್ರ ಪ್ರಸಾದ್, ವೆನ್ನೆಲಾ ಕಿಶೋರ್ ಮತ್ತು ಬ್ರಹ್ಮಾಜಿ ಸೇರಿದಂತೆ ಘಟಾನುಘಟಿ ಪೋಷಕ ಪಾತ್ರಧಾರಿಗಳು ಚಿತ್ರದಲ್ಲಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಸಾಯಿ ಶ್ರೀರಾಮ್ ಛಾಯಾಗ್ರಹಣ ಮತ್ತು ಪ್ರವೀಣ್ ಪುಡಿ ಅವರ ಸಂಕಲನ ಚಿತ್ರಕ್ಕಿದೆ. ಕರ್ನಾಟಕದಲ್ಲಿ ಈ ಚಿತ್ರವನ್ನು ವಿಕೆ ಫಿಲಂಸ್ ವಿತರಣೆ ಮಾಡುತ್ತಿದೆ.
ತಮಿಳಿನ ವೀರ ಧೀರ ಸೂರನ್
ಕಾಲಿವುಡ್‌ನ ಖ್ಯಾತ ನಟ ವಿಕ್ರಮ್ ಅಭಿನಯದ ‘ವೀರ ಧೀರ ಸೂರನ್ - ಭಾಗ 2’ ಸಿನಿಮಾ ಮಾರ್ಚ್ 27ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ‘ವೀರ ಧೀರ ಸೂರನ್’ ಮೂಲ ತಮಿಳಿನ ಜತೆಗೆ ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಬಿಡುಗಡೆ ಆಗಲಿದೆ. ಅರುಣ್ ಕುಮಾರ್ ನಿರ್ದೇಶನ ಈ ಚಿತ್ರವನ್ನು, ಎಚ್.ಆರ್. ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಿಯಾ ಶಿಭು ನಿರ್ಮಾಣ ಮಾಡಿದ್ದಾರೆ. ವಿಕ್ರಮ್, ಎಸ್.ಜೆ. ಸೂರ್ಯ, ಮಲಯಾಳಿ ನಟ ಸೂರಜ್ ವೆಂಜಾರಮೂಡು, ಸಿದ್ಧಿಖ್, ದುಶಾರಾ ವಿಜಯನ್ ಮುಂತಾದವರು ಅಭಿನಯಿಸಿದ್ದಾರೆ. ಜಿ.ವಿ. ಪ್ರಕಾಶ್ ಸಂಗೀತ ನೀಡಿದ್ದಾರೆ.

ವಿಭಾಗ