Mansore Movie: ನಾಳೆ '19.20.21' ಚಿತ್ರದಲ್ಲಿ ಅನಾವರಣವಾಗಲಿದೆ ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ!
ಕನ್ನಡ ಸುದ್ದಿ  /  ಮನರಂಜನೆ  /  Mansore Movie: ನಾಳೆ '19.20.21' ಚಿತ್ರದಲ್ಲಿ ಅನಾವರಣವಾಗಲಿದೆ ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ!

Mansore Movie: ನಾಳೆ '19.20.21' ಚಿತ್ರದಲ್ಲಿ ಅನಾವರಣವಾಗಲಿದೆ ವಿಠಲ್ ಮಲೆಕುಡಿಯ ಕಾನೂನು ಹೋರಾಟದ ರೋಚಕ ಕಥೆ!

ವಿಠಲ್ ಮಲೆಕುಡಿಯ ಅವರ ಈ ಹೋರಾಟದ ಕಥೆಯೇ ‘19.20.21’ ಸಿನಿಮಾ. ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರ್ತಿದ್ದಾರೆ ಮಂಸೋರೆ.

ನೈಜ ಘಟನೆ ಆಧಾರಿತ '19.20.21'
ನೈಜ ಘಟನೆ ಆಧಾರಿತ '19.20.21'

ಬಹುನಿರೀಕ್ಷಿತ '19.20.21' ಸಿನಿಮಾ ನಾಳೆ ತೆರೆ ಕಾಣುತ್ತಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ನಿರ್ದೇಶನದ ಈ ಸಿನಿಮಾ ನೈಜ ಘಟನೆ ಆಧಾರಿತ ಚಿತ್ರವಾಗಿದ್ದು ಸಿನಿಮಾ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಇದೀಗ ಚಿತ್ರತಂಡ ಸಿನಿಮಾ ಕಥೆಯನ್ನು ರಿವೀಲ್‌ ಮಾಡಿದೆ.

2012 ಮಾರ್ಚ್ 3 ರಂದು ನಕ್ಸಲ್ ನಿಗ್ರಹ ಪಡೆ ಬಂಧಿಸಿದ್ದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟದ ಕಥೆಯೇ ಈ ಸಿನಿಮಾ. ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ ಹಾಗೂ ಮಗನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿಠಲ್, ಮಂಗಳೂರಿನ ವಿವಿಯಲ್ಲಿ ಪತ್ರಿಕೋದ್ಯಮ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡಾ ತೆಗೆದಿರಲಿಲ್ಲ. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ವಿರೋಧಕ್ಕೆ ಕಾರಣವಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ವಿಠಲ್ ಅವರಿಗೆ 2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು.

ವಿಠಲ್‌ ಮಲೆಕುಡಿಯ
ವಿಠಲ್‌ ಮಲೆಕುಡಿಯ

ವಿಠಲ್ ಮಲೆಕುಡಿಯ ಅವರ ಈ ಹೋರಾಟದ ಕಥೆಯೇ ‘19.20.21’ ಸಿನಿಮಾ. ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರ್ತಿದ್ದಾರೆ ಮಂಸೋರೆ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ ನಟಿಸಿದ್ದಾರೆ. ಇತ್ತೀಚೆಗೆ ರಿಲೀಸ್‌ ಆಗಿದ್ದ ಚಿತ್ರದ ಪೋಸ್ಟರ್‌ ಭಾರೀ ಗಮನ ಸೆಳೆದಿತ್ತು.

ಸಿನಿಮಾದಲ್ಲಿ ಶೃಂಗ ಅವರೊಂದಿಗೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರು ನಟಿಸಿದ್ದಾರೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ, ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ. ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.

ತಂದೆ ಲಿಂಗಣ್ಣ ಮಲೆಕುಡಿಯ ಜೊತೆ ವಿಠಲ್ ಮಲೆಕುಡಿಯ
ತಂದೆ ಲಿಂಗಣ್ಣ ಮಲೆಕುಡಿಯ ಜೊತೆ ವಿಠಲ್ ಮಲೆಕುಡಿಯ

ತಮ್ಮ ಸಿನಿಮಾಗೆ ಸ್ಫೂರ್ತಿಯಾದವರಿಗೆ ಚಿತ್ರ ತೋರಿಸಿದ ಮಂಸೋರೆ

ನಿರ್ದೇಶಕ ಮಂಸೋರೆ ಇತ್ತೀಚೆಗೆ ಮಲೆ ಕುಡಿಯರ ಸಮುದಾಯದ ಜನರಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಿದ್ದರು. ನಂತರ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಇದರ ಬಗ್ಗೆ ಬರೆದುಕೊಂಡಿದ್ದರು. "ಇದಕ್ಕಿಂತ ಸಾರ್ಥಕತೆ ಇನ್ನೇನಿದೆ?? ಇಲ್ಲಿಯವರೆಗಿನ ನನ್ನ ಸಿನಿ ಪಯಣದಲ್ಲಿ ಇಂತಹ ಭಾವುಕ ಸಂಗತಿ ಎಂದೂ ಘಟಿಸಿಲ್ಲ. ಹರಿವು ನೈಜ ಘಟನೆ ಆಧರಿಸಿದ ಕತೆಯಾದರೂ, ಮೂಲ ವ್ಯಕ್ತಿಯನ್ನು ಭೇಟಿ ಮಾಡುವ ಅವಕಾಶ ದೊರೆಕಿರಲಿಲ್ಲ. ಆದರೆ ಈ ಬಾರಿ ಸಿನಿಮಾ ಮಾಡುವ ಮೊದಲು ಅವರೊಂದಿಗಿನ ಒಡನಾಟ ಹಾಗೂ ಆ ನಂತರ ಅವರದ್ದೇ ಕತೆಯ ಸಿನಿಮಾ ಅವರಿಗೆ ತೋರಿಸುವ ಅವಕಾಶ ಮೊದಲ ಬಾರಿಗೆ ದಕ್ಕಿತು. ಅದರಲ್ಲೂ ಆ ಸಮುದಾಯದ ಬಹುತೇಕರು ಮೊದಲ ಬಾರಿಗೆ ಚಿತ್ರಮಂದಿರದ ಒಳಗೆ ಪ್ರವೇಶ ಮಾಡಿರುವುದು. ಅವರದ್ದೇ ಬದುಕಿನ ಪುಟ್ಟ ಭಾಗವನ್ನು ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಕಂಡ ನಂತರ ಆ ಮುಗ್ಧ ಕಣ್ಣಲ್ಲಿ ಕಾಣಿಸಿದ್ದನ್ನು ಪದಗಳಲ್ಲಿ ವಿವರಿಸಲು ಸಾಧ್ಯವಾಗದು.

ಆ ಕ್ಷಣಗಳಲ್ಲಿ ಆ ಕಣ್ಣುಗಳ ಮೂಲಕ ಅವರು ದಾಟಿಸಿದ ಪ್ರೀತಿ ಎದೆಯಾಳವನ್ನು ಹೊಕ್ಕು ಶಾಶ್ವತವಾಗಿ ಕೂತುಬಿಟ್ಟಿದೆ. ಅವರು ತಮ್ಮ ಬೆಚ್ಚನೆಯ ಕೈಯಲ್ಲಿ ನನ್ನ ಕೈಹಿಡಿದು ಮಾತೇ ಆಡದೇ ನೀಡಿದ ಮೆಚ್ಚುಗೆಯ ಮುಂದೆ ಇನ್ಯಾವ ಪ್ರಶಸ್ತಿ ಗೌರವಗಳು ಸರಿಗಟ್ಟಲಾರವೇನೋ. ಹೌದು ಇವರು ಅದೇ ಮಲೆಕುಡಿಯರು. ದಶಕಗಳ ಕಾಲ ದೌರ್ಜನ್ಯವನ್ನು ಅನುಭವಿಸುತ್ತಾ, ನ್ಯಾಯಯುತ ಹೋರಾಟದಿಂದಲೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವವರು. ಇದು ಅವರದ್ದೇ ಕತೆ. ಈ ಜೀವಕ್ಕೆ ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕಿದೆ?" ಎಂದು ಮಂಸೋರೆ ಬರೆದುಕೊಂಡಿದ್ದರು.

Whats_app_banner