Marco OTT: ಕೆಜಿಎಫ್, ಅನಿಮಲ್‌ಗೂ ಮೀರಿದ ಆಕ್ಷನ್ ವೈಭವ; ವೈಲೆಂಟ್ ಬ್ಲಾಕ್ ಬಸ್ಟರ್ ಪಟ್ಟ ಪಡೆದ ಚಿತ್ರವೀಗ ಒಟಿಟಿಗೆ ಬರಲು ರೆಡಿ
Marco OTT: ಮಲಯಾಳಿ ನಟ ಉನ್ನಿ ಮುಕುಂದನ್ ನಾಯಕನಾಗಿ ನಟಿಸಿದ ಮಾರ್ಕೊ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿದೆ. ಇದೇ ತಿಂಗಳ 14ರಿಂದ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

Marco OTT: ಮಲಯಾಳಂ ಚಿತ್ರೋದ್ಯಮದಲ್ಲಿ ಪಕ್ಕಾ ಮಾಸ್ ಸಿನಿಮಾಗಳ ಆಗಮನ ಕೊಂಚ ಕಡಿಮೆ. ಆದರೆ, ಇತ್ತೀಚೆಗಷ್ಟೇ ಆ ಮಾಸ್‌ಗೆ ಮತ್ತಷ್ಟು ಮಸಾಲೆ ಹಾಕಿ ಪ್ರೇಕ್ಷಕರ ಮನತಣಿಸಿತ್ತು ಮಾರ್ಕೊ ಸಿನಿಮಾ. ಚಿತ್ರಮಂದಿರಗಳಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಸಿನಿಮಾ, ಮಾಲಿವುಡ್‌ನಲ್ಲಿ ಹಿಟ್ ಆದ ಬಳಿಕ, ಸೌತ್‌ನ ಇತರ ಭಾಷೆಗಳಲ್ಲಿಯೂ ಬಿಡುಗಡೆ ಆಗಿತ್ತು. ಪರಭಾಷಿಕರಿಂದಲೂ ಮೆಚ್ಚುಗೆ ಪಡೆದಿದ್ದ ಸಿನಿಮಾವನ್ನು ಹಿಂದಿ ಭಾಷಿಕರೂ ಎತ್ತಿ ಮೆರೆಸಿದ್ದರು. ಈಗ ಇದೇ ಮಾರ್ಕೊ ಸಿನಿಮಾದ ಒಟಿಟಿ ಆಗಮನದ ದಿನಾಂಕ ಫಿಕ್ಸ್ ಆಗಿದೆ.
ವೈಲೆಂಟ್ ಆಕ್ಷನ್ ಸಿನಿಮಾ
ಕಳೆದ ವರ್ಷದ ಡಿಸೆಂಬರ್ 20ರಂದು ತೆರೆಗೆ ಬಂದಿದ್ದ ಮಾರ್ಕೊ ಸಿನಿಮಾ, ಅತ್ಯುತ್ತಮ ಆಕ್ಷನ್ ಸಿನಿಮಾ ಎಂಬ ವಿಶೇಷಣ ಪಡೆದಿತ್ತು. ಕೆಜಿಎಫ್, ಅನಿಮಲ್, ಕಿಲ್ ಸಿನಿಮಾಗಳಿಗೂ ಅಧಿಕ ವೈಲೆಂಟ್ ಸಿನಿಮಾ ಎಂದು ಕರೆಸಿಕೊಂಡಿತ್ತು. ಉನ್ನಿ ಮುಕುಂದನ್ ಅಕ್ಷರಶಃ ರಗಡ್ ಅವತಾರದಲ್ಲಿ ತೆರೆಮೇಲೆ ಜೀವಿಸಿದ್ದರು. ಸರಿ ಸುಮಾರು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಶತಕೋಟಿ ಕ್ಲಬ್ ಮುಟ್ಟಿತ್ತು. ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗೂ ಡಬ್ ಆಗಿ ಒಳ್ಳೆಯ ಕಮಾಯಿ ಮಾಡಿತ್ತು .
ಯಾವ ಒಟಿಟಿ, ಯಾವಾಗಿನಿಂದ ಮಾರ್ಕೊ?
ಅದರಲ್ಲೂ ಮಾರ್ಕೊ ಸಿನಿಮಾ ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರ ಎಂದೂ ಕರೆಸಿಕೊಂಡಿದೆ. ಇಂತಿಪ್ಪ ಸಿನಿಮಾ ಇದೀಗ, ಒಟಿಟಿ ಪ್ರೇಕ್ಷಕರನ್ನೂ ರಂಜಿಸಲು ಸಜ್ಜಾಗಿದೆ. ಸಿನಿಮಾ ತೆರೆಕಂಡ ತಿಂಗಳ ಮೇಲಾದರೂ ಯಾವ ಒಟಿಟಿಯಲ್ಲಿ ಮಾರ್ಕೊ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದು ಕಾಯುತ್ತಿದ್ದವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಈಗ ಅಧಿಕೃತವಾಗಿ ಘೋಷಣೆ ಆಗಿದೆ. ಸೋನಿ ಲೀವ್ ಮಾರ್ಕೊ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಅದರಂತೆ, ಪ್ರೇಮಿಗಳ ದಿನ ಫೆ. 14 ರಂದು ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ರವಿ ಬಸ್ರೂರು ಸಂಗೀತ ನಿರ್ದೇಶನ
ಮಾಲಿವುಡ್‌ನ ಆಕ್ಷನ್ ಥ್ರಿಲ್ಲರ್ ಮಾರ್ಕೊ ಚಿತ್ರವನ್ನು ಹನೀಫ್ ಅದೇನಿ ನಿರ್ದೇಶನ ಮಾಡಿದ್ದಾರೆ. ಶರೀಫ್ ಮಹಮ್ಮದ್ ನಿರ್ಮಾಣ ಮಾಡಿದ್ದಾರೆ. ಉನ್ನಿ ಮುಕುಂದನ್ ಜತೆಗೆ ಜಗದೀಶ್, ಸಿದ್ದಿಕ್, ಅನ್ಸನ್ ಪೌಲ್, ಯುಕ್ತಿ ಥರೇಜಾ, ರಿಯಾಜ್ ಖಾನ್, ಜಿನು ಜೋಸೆಫ್, ಶ್ರೀಜಿತ್ ರವಿ ಮತ್ತು ಕಬೀರ್ ದುಹಾನ್ ಸಿಂಗ್ ತಾರಾಗಣದಲ್ಲಿದ್ದಾರೆ. ಕನ್ನಡದ ರವಿ ಬಸ್ರೂರ್ ಈ ಚಿತ್ರಕ್ಕೆ ಖಡಕ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಚಂದ್ರು ಸೆಲ್ವರಾಜ್ ಮತ್ತು ಶಮೀರ್ ಮುಹಮ್ಮದ್ ನಿರ್ವಹಿಸಿದ್ದಾರೆ.
