Marco OTT: ಮಲಯಾಳಂ ಬ್ಲಾಕ್‌ಬಸ್ಟರ್ ಮಾರ್ಕೊ ಚಿತ್ರ ಒಟಿಟಿಗೆ ಎಂಟ್ರಿ; ಈ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಕನ್ನಡದಲ್ಲೂ ಕಣ್ತುಂಬಿಕೊಳ್ಳಿ
ಮಲಯಾಳಂ ಆಕ್ಷನ್ ಥ್ರಿಲ್ಲರ್ ಮಾರ್ಕೊ ಚಿತ್ರ ಒಟಿಟಿಗೆ ಪದಾರ್ಪಣೆ ಮಾಡಿದೆ. ಉನ್ನಿ ಮುಕುಂದನ್ ನಾಯಕನಾಗಿ ನಟಿಸಿದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಇದೀಗ ಈ ಚಿತ್ರವನ್ನು ಕನ್ನಡದಲ್ಲೂ ವೀಕ್ಷಣೆ ಮಾಡಬಹುದು.

OTT Malayalam Action Thriller: ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ 115 ಕೋಟಿ ರೂ. ಗಳಿಸಿದ ಮಲಯಾಳಂ ಆಕ್ಷನ್ ಥ್ರಿಲ್ಲರ್ ಮಾರ್ಕೊ ಸಿನಿಮಾ ಇದೀಗ ಒಟಿಟಿಗೆ ಪದಾರ್ಪಣೆ ಮಾಡಿದೆ. ಈ ಸಿನಿಮಾ ಮಲಯಾಳಂ ಜೊತೆಗೆ ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಿಂದಿ ಆವೃತ್ತಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಮಾರ್ಕೊ ಚಿತ್ರವು ಶುಕ್ರವಾರದಿಂದ (ಫೆಬ್ರವರಿ 14) ಪ್ರಸಾರವಾಗಲಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಸೋನಿ ಲಿವ್ ಒಟಿಟಿ ಘೋಷಿಸಿತ್ತು. ಆ ಲೆಕ್ಕಾಚಾರದಂತೆ, ಗುರುವಾರ ಮಧ್ಯರಾತ್ರಿಯ ನಂತರ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ ಎಂದೇ ಹೇಳಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಫೆ. 13ರ ಮಧ್ಯಾಹ್ನದಿಂದಲೇ ಮಾರ್ಕೊ ಸ್ಟ್ರೀಮಿಂಗ್ ಆರಂಭಿಸಿದೆ. ಈ ವಿಚಾರವನ್ನು ಸೋನಿ ಲಿವ್ ಒಟಿಟಿ ತನ್ನ ಎಕ್ಸ್ ಖಾತೆಯ ಮೂಲಕ ಬಹಿರಂಗಪಡಿಸಿದೆ. "ಯುದ್ಧ ಆರಂಭವಾಗಿದೆ. ಮಾರ್ಕೊ ಬಂದಿದ್ದಾನೆ" ಎಂದು ಪೋಸ್ಟ್ ಮಾಡಿ, ಕ್ಯಾಪ್ಶನ್ ನೀಡಿತ್ತು.
ಮಾರ್ಕೊ ಸಿನಿಮಾ ಬಗ್ಗೆ
ಮಾರ್ಕೊ ಮಲಯಾಳಂ ಚಿತ್ರೋದ್ಯಮದ ಅತ್ಯಂತ ವೈಲೆಂಟ್ ಸಿನಿಮಾ ಎಂಬ ಪಟ್ಟಿಗೆ ಸೇರಿದೆ. ಈ ಚಿತ್ರವು ಕಳೆದ ವರ್ಷ ಡಿಸೆಂಬರ್ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 30 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ 115 ಕೋಟಿ ರೂ. ಗಳಿಸಿದೆ. ಮಾರ್ಕೊ ಚಿತ್ರದಲ್ಲಿ ಉನ್ನಿ ಮುಕುಂದನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದೆಂದಿಗಿಂತಲೂ ಸಖತ್ ವೈಲೆಂಟ್ ಆಗಿಯೇ ಕಂಡಿದ್ದಾರೆ.
ಕನ್ನಡದಲ್ಲೂ ಸ್ಟ್ರೀಮಿಂಗ್
ಮಾರ್ಕೊ ಸಿನಿಮಾ ಮೂಲ ಮಲಯಾಳಂನಲ್ಲಿ ನಿರ್ಮಾಣವಾಗಿದೆ. ಈ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದ್ದು, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿಯೂ ವೀಕ್ಷಣೆ ಮಾಡಬಹುದಾಗಿದೆ. ಅಂದಹಾಗೆ, ಮಾಲಿವುಡ್‌ನ ಆಕ್ಷನ್ ಥ್ರಿಲ್ಲರ್ ಮಾರ್ಕೊ ಚಿತ್ರವನ್ನು ಹನೀಫ್ ಅದೇನಿ ನಿರ್ದೇಶನ ಮಾಡಿದ್ದಾರೆ. ಶರೀಫ್ ಮಹಮ್ಮದ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮುಕುಂದನ್ ಜತೆಗೆ ಜಗದೀಶ್, ಸಿದ್ದಿಕ್, ಅನ್ಸನ್ ಪೌಲ್, ಯುಕ್ತಿ ಥರೇಜಾ, ರಿಯಾಜ್ ಖಾನ್, ಜಿನು ಜೋಸೆಫ್, ಶ್ರೀಜಿತ್ ರವಿ ಮತ್ತು ಕಬೀರ್ ದುಹಾನ್ ಸಿಂಗ್ ತಾರಾಗಣದಲ್ಲಿದ್ದಾರೆ.
ಕನ್ನಡದ ರವಿ ಬಸ್ರೂರ್ ಈ ಚಿತ್ರಕ್ಕೆ ಖಡಕ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಚಂದ್ರು ಸೆಲ್ವರಾಜ್ ಮತ್ತು ಶಮೀರ್ ಮುಹಮ್ಮದ್ ನಿರ್ವಹಿಸಿದ್ದಾರೆ. 2019ರಲ್ಲಿ ಮಲಯಾಳಂನಲ್ಲಿ ತೆರೆಗೆ ಬಂದಿದ್ದ ಮೈಕೆಲ್ ಸಿನಿಮಾದ ಮತ್ತೊಂದು ರೂಪಕವಾಗಿ ಮಾರ್ಕೊ ತೆರೆಕಂಡಿದೆ.
