ಬಾಸಿಸಂ ಕಾಲ ಮುಗೀತು, ಮ್ಯಾಕ್ಸಿಮಮ್‌ ಮಾಸ್‌ ಕಾಲ ಶುರುವಾಯ್ತು; ಕಿಚ್ಚನ ಬಳಗದಿಂದ ಪರೋಕ್ಷವಾಗಿ ದರ್ಶನ್‌ ಹೆಸರು ಮುನ್ನೆಲೆಗೆ!
ಕನ್ನಡ ಸುದ್ದಿ  /  ಮನರಂಜನೆ  /  ಬಾಸಿಸಂ ಕಾಲ ಮುಗೀತು, ಮ್ಯಾಕ್ಸಿಮಮ್‌ ಮಾಸ್‌ ಕಾಲ ಶುರುವಾಯ್ತು; ಕಿಚ್ಚನ ಬಳಗದಿಂದ ಪರೋಕ್ಷವಾಗಿ ದರ್ಶನ್‌ ಹೆಸರು ಮುನ್ನೆಲೆಗೆ!

ಬಾಸಿಸಂ ಕಾಲ ಮುಗೀತು, ಮ್ಯಾಕ್ಸಿಮಮ್‌ ಮಾಸ್‌ ಕಾಲ ಶುರುವಾಯ್ತು; ಕಿಚ್ಚನ ಬಳಗದಿಂದ ಪರೋಕ್ಷವಾಗಿ ದರ್ಶನ್‌ ಹೆಸರು ಮುನ್ನೆಲೆಗೆ!

ಕಿಚ್ಚ ಸುದೀಪ್‌ ಮ್ಯಾಕ್ಸ್‌ ಸಿನಿಮಾ ಡಿ. 25ರಂದು ಬಿಡುಗಡೆ ಆಗಿ, ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ನಡುವೆ ಕಿಚ್ಚನ ಆಪ್ತ ಬಳಗ ಕೇಕ್‌ ಕತ್ತರಿಸಿ ಸಂಭ್ರಮಿಸಿದೆ. ಆ ಕೇಕ್‌ ಫೋಟೋ ಇದೀಗ ವೈರಲ್‌ ಆಗಿದ್ದು, ಕೇಕ್‌ ಮೇಲೆ ಬಾಸಿಸಂ ಕಾಲ ಮುಗೀತು, ಮ್ಯಾಕ್ಸಿಮಮ್‌ ಮಾಸ್‌ ಕಾಲ ಶುರುವಾಯ್ತು ಎಂದು ಬರೆದಿದೆ. ಈ ಮೂಲಕ ದರ್ಶನ್‌ ಹೆಸರು ಮುನ್ನೆಲೆಗೆ ಬಂದಿದೆ.

ಮ್ಯಾಕ್ಸ್‌ ಸಿನಿಮಾ ಬಿಡುಗಡೆ: ಕಿಚ್ಚ ಸುದೀಪ್‌ ಆಪ್ತ ಬಳಗದಿಂದ ಕೇಕ್‌ ಕತ್ತರಿಸಿ ಸಂಭ್ರಮ
ಮ್ಯಾಕ್ಸ್‌ ಸಿನಿಮಾ ಬಿಡುಗಡೆ: ಕಿಚ್ಚ ಸುದೀಪ್‌ ಆಪ್ತ ಬಳಗದಿಂದ ಕೇಕ್‌ ಕತ್ತರಿಸಿ ಸಂಭ್ರಮ

Max Movie: ಕಿಚ್ಚ ಸುದೀಪ್‌ ನಾಯಕನಾಗಿ ನಟಿಸಿರುವ ಮ್ಯಾಕ್ಸ್‌ ಸಿನಿಮಾ ಡಿಸೆಂಬರ್‌ 25ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ದೇಶದ ವಿವಿಧೆಡೆಯೂ ಈ ಸಿನಿಮಾ ಅಬ್ಬರಿಸುತ್ತಿದೆ. ಪಕ್ಕದ ತೆಲುಗು, ತಮಿಳು ರಾಜ್ಯಗಳಲ್ಲೂ ಮತ್ತು ಹಿಂದಿ ಭಾಷಿಕ ರಾಜ್ಯಗಳಲ್ಲೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಮೊದಲ ದಿನ 8.5 ಕೋಟಿ ಕಲೆಕ್ಷನ್‌ (Max Box office collection day 1) ಮಾಡಿದ ಈ ಸಿನಿಮಾ, ಮುಂದಿನ ದಿನಗಳ ಕ್ರಿಸ್‌ಮಸ್‌ ರಜಾದಿನಗಳನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಲಿದೆ. ಇದೆಲ್ಲದರ ನಡುವೆ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದೇ ತಡ, ಸುದೀಪ್‌ ಅವರ ಆಪ್ತರು ಕೇಕ್‌ ತಂದು ಈ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ಆ ಕೇಕ್‌ ಮೇಲೆ ಬಾಸಿಸಂ ಮುಗೀತು ಎಂಬ ಬರಹ ಬರೆದಿದ್ದು, ಆ ಫೋಟೋ ಇದೀಗ ವೈರಲ್‌ ಪಟ್ಟ ಪಡೆದಿದೆ.

ಕಿಚ್ಚ ಸುದೀಪ್‌ ಮತ್ತು ದರ್ಶನ್‌ ಸ್ನೇಹವನ್ನು ಕಡಿದುಕೊಂಡು ದೂರವಾಗಿ ಕೆಲ ವರ್ಷಗಳೇ ಕಳೆದಿವೆ. ಇಂದಿಗೂ ಇವರಿಬ್ಬರ ನಡುವೆ ಮಾತಿಲ್ಲ, ಕಥೆಯಿಲ್ಲ! ಆದಷ್ಟು ಬೇಗ ಇವರಿಬ್ಬರೂ ಒಂದಾಗಲಿ ಎಂದು ಫ್ಯಾನ್ಸ್‌ ವಲಯ ಕಾಯುತ್ತಿದ್ದರೆ, ಅದು ಅಸಾಧ್ಯವಾದ ಮಾತು ಎಂದು ಈ ಹಿಂದೆ ನಟ ದರ್ಶನ್‌ ಸೋಷಿಯಲ್‌ ಮೀಡಿಯಾದಲ್ಲಿ ಇದೇ ವಿಚಾರವಾಗಿ ಪರೋಕ್ಷವಾಗಿ ಪೋಸ್ಟ್‌ ಹಂಚಿಕೊಂಡಿದ್ದರು. ದರ್ಶನ್‌ ಮೇಲೆ ಚಪ್ಪಲಿ ಎಸೆತ ನಡೆದಾಗ ಉದ್ಯಮದ ಒಬ್ಬ ನಟನಾಗಿ, ದರ್ಶನ್‌ ಪರವಾಗಿ ಮಾತನಾಡಿದ್ದರು. ಆವತ್ತು ಸುದೀಪ್‌ ಬೆಂಬಲದ ಮಾತಿಗೆ ದರ್ಶನ್‌ ಸಹ ಧನ್ಯವಾದ ತಿಳಿಸಿದ್ದರು. ಆದರೆ, ಅದು ಅಷ್ಟಕ್ಕೇ ಮುಕ್ತಾಯವಾಯ್ತು.

ಇದೀಗ ಮ್ಯಾಕ್ಸ್‌ ಸಿನಿಮಾ ಬಿಡುಗಡೆಯಾಗಿ, ಪ್ರೇಕ್ಷಕ ವಲಯದಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಕಲೆಕ್ಷನ್‌ ವಿಚಾರವಾಗಿಯೂ ಮುಂದಡಿ ಇರಿಸಿದೆ. ಸುದೀಪ್‌ ಆಕ್ಷನ್‌ ಅಬ್ಬರವೂ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೇ ಖುಷಿಗೆ ಸುದೀಪ್‌ ಅವರ ಆಪ್ತ ಬಳಗ ಮ್ಯಾಕ್ಸ್‌ ಗೆದ್ದ ಖುಷಿಯನ್ನು ಸೆಲೆಬ್ರೇಟ್‌ ಮಾಡಿದೆ. ಆ ಸೆಲೆಬ್ರೇಷನ್‌ ಸಮಯದಲ್ಲಿ ಕೇಕ್‌ ಮೇಲೆ ಬರೆದ ಸಾಲುಗಳು ಇದೀಗ ದರ್ಶನ್‌ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿವೆ. ಅಷ್ಟಕ್ಕೂ ಆ ಕೇಕ್‌ ಮೇಲೆ ಬರೆದಿದ್ದು ಏನು? ‘ಬಾಸಿಸಮ್ ಕಾಲ ಮುಗೀತು, ಮ್ಯಾಕ್ಸಿಮಮ್ ಮಾಸ್‌ ಕಾಲ ಶುರುವಾಯ್ತು’ ಎಂದಿದೆ.

ದರ್ಶನ್‌ ಅಭಿಮಾನಿಗಳ ಕೆಂಗಣ್ಣು

ಸುದೀಪ್‌ ಆಪ್ತ ಬಳಗದಲ್ಲಿ ತುಂಬ ಹತ್ತಿರವಾದವರು ಪ್ರದೀಪ್‌ ಬೋಗಾದಿ ಸಹ ಒಬ್ಬರು. ಸಿನಿಮಾ, ಕ್ರಿಕೆಟ್‌ ಸೇರಿ ಸುದೀಪ್‌ ಅವರ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿಯೂ ಇವರ ಹಾಜರಿ ಇದ್ದೇ ಇರುತ್ತೆ. ಇದೀಗ ಮ್ಯಾಕ್ಸ್‌ ಸಿನಿಮಾ ಬಿಡುಗಡೆ ಆಗಿ, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುದೀಪ್‌ ಮನೆಗೆ ಆಗಮಿಸಿದ ಪ್ರದೀಪ್‌, ಕಿಚ್ಚನ ಕೈಯಿಂದ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ಈ ಫೋಟೋಗಳನ್ನು ಸ್ವತಃ ಪ್ರದೀಪ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿಯೂ ಶೇರ್‌ ಮಾಡಿದ್ದು, ದರ್ಶನ್‌ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕಟು ಟೀಕೆಗಳು ಕೇಳಿ ಬರುತ್ತಿವೆ.

ದರ್ಶನ್‌ ಡೆವಿಲ್‌ ಬಾರದಿದ್ದಕ್ಕೆ ಈ ಸೆಲೆಬ್ರೇಷನ್ನಾ?

ಎಲ್ಲ ಅಂದುಕೊಂಡಂತೆ ಆಗಿದ್ದರೆ ನಟ ದರ್ಶನ್‌ ಅವರ ಡೆವಿಲ್‌ ಸಿನಿಮಾ, ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಬರೋಬ್ಬರಿ ಆರು ತಿಂಗಳ ಕಾಲ ಜೈಲಲ್ಲಿದ್ದು ಬಂದರು ದರ್ಶನ್.‌ ಈ ಹಿನ್ನೆಲೆಯಲ್ಲಿ ಡೆವಿಲ್‌ ಸಿನಿಮಾ ಶೂಟಿಂಗ್‌ ನಡೆಯಲಿಲ್ಲ. ಸಿನಿಮಾ ಬಿಡುಗಡೆಯೂ ಬಹುಶಃ ಮುಂದಿನ ವರ್ಷಕ್ಕೆ ಸರಿಯಿತು. ಇದನ್ನೇ ಟಾರ್ಗೆಟ್‌ ಮಾಡಿ ಕೇಕ್‌ ಮೇಲೆ ಬಾಸಿಸಂ ಕಾಲ ಮುಗೀತು, ಇನ್ನೇನಿದ್ದರೂ ಮ್ಯಾಕ್ಸ್‌ ಮಾಸ್‌ ಕಾಲ ಶುರು ಎಂದು ಬರೆದಿದ್ದಾರೆ ಎಂದೂ ಚರ್ಚೆಗಳು ನಡೆಯುತ್ತಿವೆ. ಈ ಕೇಕ್‌ ಮೂಲಕ ಮತ್ತೆ ಸುದೀಪ್‌ ಫ್ಯಾನ್ಸ್‌ ವರ್ಸಸ್‌ ದರ್ಶನ್‌ ಫ್ಯಾನ್ಸ್‌ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ವಾಕ್ಸಮರ ನಡೆಯುತ್ತದೆ.

ಮ್ಯಾಕ್ಸ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಮ್ಯಾಕ್ಸ್‌ ಸಿನಿಮಾ ಒಳ್ಳೆಯ ಕಮಾಯಿ ಮಾಡಿದೆ. 8.5 ಕೋಟಿ ಬಾಚಿಕೊಂಡಿರುವ ಸುದೀಪ್‌ ಅವರ ಮ್ಯಾಕ್ಸ್‌ ಚಿತ್ರ, ಎರಡನೇ ದಿನವೂ ಅಷ್ಟೇ ಮೊತ್ತ ಗಳಿಸಲಿದೆ ಎಂದೇ ಹೇಳಲಾಗುತ್ತಿದೆ. ಈ ಗಳಿಕೆಯಲ್ಲಿ ಕರ್ನಾಟಕದ ಆದಾಯವೇ ಬಹುಪಾಲಿದ್ದು, ಪಕ್ಕದ ರಾಜ್ಯಗಳು ಮತ್ತು ಹಿಂದಿ ಬೆಲ್ಟ್‌ನಿಂದಲೂ ಕಲೆಕ್ಷನ್‌ ಹರಿದುಬರುತ್ತಿದೆ.

Whats_app_banner