Max Collection Day 1: ಕಲೆಕ್ಷನ್‌ನಲ್ಲೂ ಕಿಂಗ್ ಆದ್ರಾ ಕಿಚ್ಚ? ಬಾಕ್ಸ್ ಆಫೀಸ್‌ನಲ್ಲಿ ಮ್ಯಾಕ್ಸ್ ಮೊದಲ ದಿನದ ಗಳಿಕೆ ಮ್ಯಾಕ್ಸಿಮಮ್!
Max Box Office Collection Day 1: ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ಮ್ಯಾಕ್ಸ್ ಸಿನಿಮಾ ಇಂದು (ಡಿ. 25) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಎಲ್ಲೆಡೆಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಈ ಸಿನಿಮಾ, ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು? ಹೀಗಿದೆ ಉತ್ತರ.
Max Box office Collection Day 1: ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ಮ್ಯಾಕ್ಸ್ ಸಿನಿಮಾ ಚಿತ್ರಮಂದಿರಗಳಿಗೆ (ಡಿ. 25) ಲಗ್ಗೆ ಇಟ್ಟಿದೆ. ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಮಟ್ಟದ ಈ ಸಿನಿಮಾ, ಒಂದಷ್ಟು ವಿಚಾರಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಅದರಂತೆ, ಮ್ಯಾಕ್ಸ್‌ನಲ್ಲಿ ಮ್ಯಾಕ್ಸಿಮಮ್ ಆಕ್ಷನ್ ಕಣ್ತುಂಬಿಕೊಂಡ ಕಿಚ್ಚ ಸುದೀಪ್ ಫ್ಯಾನ್ಸ್ ಸದ್ಯ ಹಬ್ಬದ ಮೂಡ್‌ನಲ್ಲಿದ್ದಾರೆ. ರಾಜ್ಯಾದ್ಯಂತ ಮ್ಯಾಕ್ಸ್ ಸಿನಿಮಾಕ್ಕೆ ಹೌಸ್‌ಫುಲ್ ಪ್ರದರ್ಶನಗಳು ಪ್ರಾಪ್ತವಾಗಿದ್ದು, ಗ್ರ್ಯಾಂಡ್ ಆಗಿಯೇ ಈ ಚಿತ್ರವನ್ನು ವೆಲ್‌ಕಮ್ ಮಾಡಿಕೊಂಡಿದ್ದಾರೆ. ಮುಂಗಡ ಬುಕ್ಕಿಂಗ್‌ನಿಂದಲೂ ಸದ್ದು ಮಾಡಿದ್ದ ಈ ಸಿನಿಮಾ, ಬಾಕ್ಸ್‌ಆಫೀಸ್‌ನಲ್ಲಿ ಮೊದಲ ದಿನ ಎಷ್ಟು ಕೋಟಿ ಬಾಚಿಕೊಳ್ಳಬಹುದು?
ಕಿಚ್ಚ ಸುದೀಪ್ ಅಭಿನಯದ ಸಿನಿಮಾವೊಂದು ಬಿಡುಗಡೆಯಾಗಿ ಸರಿ ಸುಮಾರು ಎರಡೂವರೆ ವರ್ಷಗಳೇ ಆಗಿವೆ. ಅವರು ಪೂರ್ಣಪ್ರಮಾಣದಲ್ಲಿ ನಾಯಕನಾಗಿ ಅಭಿನಯಿಸಿದ ಕೊನೆಯ ಚಿತ್ರ ವಿಕ್ರಾಂತ್ ರೋಣ. ಅದರ ನಂತರ ಕಿಚ್ಚ ಯಾವಾಗ ಹೊಸ ಚಿತ್ರದೊಂದಿಗೆ ಬರುತ್ತಾರೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಸುದೀಪ್ ಈಗ ಮ್ಯಾಕ್ಸ್ ಮೂಲಕ ಎಂಟ್ರಿಕೊಟ್ಟಿದ್ದಾರೆ. ಕೊಂಚ ಲೇಟ್ ಆದರೂ ಲೇಟೆಸ್ಟ್ ಆಗಿ ಅವರ ಆಗಮನವಾಗಿದೆ.
ಮ್ಯಾಕ್ಸ್ ಸಿನಿಮಾದಲ್ಲಿ ಅರ್ಜುನ್ ಮಹಾಕ್ಷಯ್ ಹೆಸರಿನ ಪಾತ್ರದಲ್ಲಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಇದಾಗಿರೋದ್ರಿಂದ ಸಿನಿಮಾದಲ್ಲಿ, ನಾಯಕ ನಾಯಕಿ ಅನ್ನೋ ಪರಿಕಲ್ಪನೆಯೇ ಇಲ್ಲ. ಈ ಹಿಂದಿನ ಸುದೀಪ್ ಅವರ ಸಿನಿಮಾಗಳೆಂದರೆ, ಅಲ್ಲಿ ಕಲರ್‌ಫುಲ್ ಹಾಡುಗಳು, ನಾಯಕಿ ಜತೆಗಿನ ರೊಮ್ಯಾಂಟಿಕ್ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಮ್ಯಾಕ್ಸ್‌ನಲ್ಲಿ ಸಾಹಸವೇ ಮ್ಯಾಕ್ಸಿಮಮ್! ಇಡೀ ಸಿನಿಮಾವೇ ಆಕ್ಷನ್ ಅವತಾರದಲ್ಲಿದೆ. ಆ ಆ ಮಟ್ಟಿಗೆ ಆಕ್ಷನ್‌ಗೆ ಒತ್ತು ನೀಡಲಾಗಿದೆ.
ಮ್ಯಾಕ್ಸ್ ಮೊದಲ ದಿನದ ಕಲೆಕ್ಷನ್ ಎಷ್ಟು?
ಕಲೈಪುಲಿ ಎಸ್ ದಾನು ನಿರ್ಮಾಣದಲ್ಲಿ ಮೂಡಿಬಂದಿರುವ ಮ್ಯಾಕ್ಸ್ ಸಿನಿಮಾ, ಮುಂಗಡ ಬುಕ್ಕಿಂಗ್‌ನಲ್ಲೂ ಸದ್ದು ಮಾಡುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ಇನ್ನುಳಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಾವಿರಾರು ಸ್ಕ್ರೀನ್‌ಗಳ ಮೇಲೆ ಈ ಸಿನಿಮಾ ಬಿಡುಗಡೆ ಆಗಿದ್ದು, ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿಯೂ ಕೋಟಿ ಕೋಟಿ ಬಾಚಿಕೊಳ್ಳಲಿದೆ ಎಂದೇ ಅಂದಾಜಿಸಲಾಗಿದೆ. ಮುಂಗಡ ಬುಕ್ಕಿಂಗ್‌ನಿಂದಲೇ ಈ ಸಿನಿಮಾ 3 ಕೋಟಿಗೂ ಅಧಿಕ ಬಾಚಿಕೊಂಡಿದೆ ಎನ್ನಲಾಗುತ್ತಿದೆ.
7ರಿಂದ 9 ಕೋಟಿ ಗಳಿಕೆ
ಅದರಂತೆ, ಮೊದಲ ದಿನವಾದ ಇಂದು (ಡಿ. 25) ಮ್ಯಾಕ್ಸ್ ಸಿನಿಮಾಕ್ಕೆ 62.34% ಆಕ್ಯುಪೆನ್ಸಿ ಸಿಕ್ಕಿದೆ. ಕಲೆಕ್ಷನ್ ಲೆಕ್ಕಾಚಾರ ನೋಡುವುದಾದರೆ, 3.42 ಕೋಟಿ (ಡಿ. 25ರ ಮಧ್ಯಾಹ್ನ 3:45ರ ಪ್ರಕಾರ) ಗಳಿಕೆ ಕಾಣಲಿದೆ ಎಂದು ಟ್ರೇಡ್ ಅನಲಿಸಿಸ್ ಮಾಹಿತಿ ನೀಡುವ ಸ್ಯಾಕ್ನಿಲ್ ವರದಿ ಮಾಡಿದೆ. ಇತ್ತ ವಿತರಕರ ವಲಯದಿಂದ ಈ ಸಿನಿಮಾ ಮೊದಲ ದಿನ 7ರಿಂದ 9 ಕೋಟಿ ರೂಪಾಯಿ ಗಳಿಕೆ ಕಾಣಲಿದೆ. ಈ ಪೈಕಿ ಕನ್ನಡದಿಂದಲೇ ಅತಿ ಹೆಚ್ಚು ಗಳಿಕೆ ಹರಿದುಬಂದಿದೆ.