Max Collection Day 2: ಬಾಕ್ಸ್‌ಆಫೀಸ್‌ನಲ್ಲಿ ಎರಡನೇ ದಿನ ಚೂರು ಡಲ್, ವಾರಾಂತ್ಯಕ್ಕಾದ್ರೂ ಕಮಾಯಿ ಮುಂದುವರಿಸ್ತಾನಾ ಮ್ಯಾಕ್ಸ್?
Max Box Office Collection Day 2: ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿ. 25ರಂದು ಬಿಡುಗಡೆ ಆಗಿದೆ. ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ಎರಡನೇ ದಿನ ಕೊಂಚ ಡಲ್ ಹೊಡೆದಿದೆ. ವಾರಾಂತ್ಯ ಇನ್ನಷ್ಟೇ ಶುರುವಾಗಲಿರುವುದರಿಂದ ಮುಂದಿನ ಮೂರು ದಿನ ಒಳ್ಳೆಯ ಕಮಾಯಿ ಆಗುವ ಸಾಧ್ಯತೆ ಜಾಸ್ತಿ.
Max Box Office Collection Day 2: ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ರಂದು ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಈ ಸಿನಿಮಾ, ಅಷ್ಟೇ ದೊಡ್ಡ ಪ್ರಮಾಣದಲ್ಲಿ ರಿಲೀಸ್ ಆಗಿತ್ತು. ಕಿಚ್ಚನ ಅಭಿಮಾನಿ ಬಳಗವು ಈ ಸಿನಿಮಾ ಕಣ್ತುಂಬಿಕೊಂಡು ಚಿತ್ರಮಂದಿರದ ಮುಂದೆಯೇ ಹಬ್ಬ ಮಾಡಿತ್ತು. ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ ಈಗ, ಕಲೆಕ್ಷನ್ ವಿಚಾರದಲ್ಲಿಯೂ ಮುಂದಡಿ ಇರಿಸಿದೆ.
ಸುದೀಪ್ ಅಭಿನಯದ ಸಿನಿಮಾ ಬಿಡುಗಡೆಯಾಗಿ ಎರಡೂವರೆ ವರ್ಷಗಳೇ ಕಳೆದಿವೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಅವರ ಬೇರಾವ ಸಿನಿಮಾ ಸಹ ತೆರೆಗೆ ಬಂದಿಲ್ಲ. ಆ ಒಂದು ಕುತೂಹಲವೂ ಅವರ ಅಭಿಮಾನಿಗಳಲ್ಲಿತ್ತು. ಆ ಕುತೂಹಲವನ್ನು ಮ್ಯಾಕ್ಸ್ ತಣಿಸಿದೆ. ತಡವಾಗಿ ಬಂದರೂ ಅಷ್ಟೇ ಗ್ರ್ಯಾಂಡ್ ಆಗಿಯೇ ಎಂಟ್ರಿಕೊಟ್ಟಿದ್ದಾರೆ ಕಿಚ್ಚ ಸುದೀಪ್. ಮೊದಲ ದಿನ ಒಳ್ಳೆಯ ಕಮಾಯಿ ಮಾಡಿದ್ದ ಈ ಸಿನಿಮಾ, ಎರಡನೇ ದಿನವಾದ ಗುರುವಾರ ಆ ಮಟ್ಟದ ಕಲೆಕ್ಷನ್ ಮಾಡಿಲ್ಲ. ಆದರೆ, ಮುಂದಿನ ಮೂರು ದಿನ ಮಾತ್ರ ಒಳ್ಳೆಯ ನಂಬರ್ ಅನ್ನೇ ಪಡೆದುಕೊಳ್ಳಲಿದೆ.
ಮಾಸ್ ಮ್ಯಾಕ್ಸಿಮಮ್..
ಸ್ಯಾಂಡಲ್‌ವುಡ್‌ನ ಮ್ಯಾಕ್ಸ್ ಸಿನಿಮಾದಲ್ಲಿ ಅರ್ಜುನ್ ಮಹಾಕ್ಷಯ್ ಹೆಸರಿನ ಪಾತ್ರದಲ್ಲಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಇದಾಗಿದೆ. ಸುದೀಪ್ ಅವರ ಸಿನಿಮಾಗಳೆಂದರೆ, ಅಲ್ಲಿ ಕಲರ್‌ಫುಲ್ ಹಾಡುಗಳು, ನಾಯಕಿ ಜತೆಗಿನ ರೊಮ್ಯಾಂಟಿಕ್ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಮ್ಯಾಕ್ಸ್‌ನಲ್ಲಿಅಂಥ ಯಾವುದೇ ದೃಶ್ಯಗಳು ಕಾಣಿಸುವುದಿಲ್ಲ. ಅದರ ಬದಲಿಗೆ ಮ್ಯಾಕ್ಸಿಮಮ್ ಮಾಸ್ ಸೀನ್‌ಗಳೇ ಅಧಿಕವಾಗಿವೆ. ಹೀಗೆ ಅಬ್ಬರಿಸುತ್ತಿರುವ ಈ ಸಿನಿಮಾದ ಎರಡನೇ ದಿನದ ಗಳಿಕೆ ಎಷ್ಟು? ಇಲ್ಲಿದೆ ಮಾಹಿತಿ.
ಮ್ಯಾಕ್ಸ್ ಮೊದಲ ದಿನದ ಕಲೆಕ್ಷನ್ ಎಷ್ಟು?
ಕಲೈಪುಲಿ ಎಸ್ ದಾನು ನಿರ್ಮಾಣದಲ್ಲಿ ಮೂಡಿಬಂದಿರುವ ಮ್ಯಾಕ್ಸ್ ಸಿನಿಮಾ, ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಾವಿರಾರು ಸ್ಕ್ರೀನ್‌ಗಳ ಮೇಲೆ ಬಿಡುಗಡೆ ಆಗಿದೆ. ಮೊದಲ ದಿನ ಈ ಸಿನಿಮಾ 8.75 ಕೋಟಿ ಕಲೆಕ್ಷನ್ ಮಾಡಿತ್ತು. ವಿತರಕರ ವಲಯದ ಅಂದಾಜಿನ ಪ್ರಕಾರ, 10ರಿಂದ 12 ಕೋಟಿ ಗಳಿಕೆ ಮಾಡಿದೆ ಎಂದು ಅಂದಾಜಿಸಲಾಗಿತ್ತು. ಇದೀಗ ಎರಡನೇ ದಿನವಾದ ಗುರುವಾರ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. ಕೇವಲ 3.85 ಕೋಟಿ ಮಾತ್ರ ಕಲೆಕ್ಷನ್ ಮಾಡಿದೆ. ಮೊದಲ ದಿನದ ಅರ್ಧದಷ್ಟೂ ಎರಡನೇ ದಿನ ಕಲೆಕ್ಷನ್ ಆಗಿಲ್ಲ.
ವಾರಾಂತ್ಯದಷ್ಟೊತ್ತಿಗೆ 25 ಕೋಟಿ?
ಇನ್ನು ವಾರಾಂತ್ಯ ಸಮೀಪಿಸುತ್ತಿದ್ದಂತೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಲಿದೆ. ಹೊಸ ವರ್ಷದ ಸಡಗರವೂ ಆಗಮಿಸುತ್ತಿದೆ. ಮುಂದಿನ ಮೂರು ದಿನಗಳ ಕಾಲ ಮ್ಯಾಕ್ಸ್ ಮ್ಯಾಕ್ಸಿಮಮ್ ಕಲೆಕ್ಷನ್ ಮಾಡಲಿದೆ ಎಂದೇ ಹೇಳಲಾಗುತ್ತಿದೆ. ಎರಡು ದಿನಗಳಲ್ಲಿ 12.55 ಕೋಟಿ ಬಾಚಿಕೊಂಡಿರುವ ಈ ಸಿನಿಮಾ, ಮುಂದಿನ ಮೂರು ದಿನಗಳ ಅವಧಿಯಲ್ಲಿ 25 ಕೋಟಿ ಗಳಿಕೆ ಕಾಣುವ ಸಾಧ್ಯತೆಗಳಿವೆ.