ಎಲ್ಲರೂ ಸೇರಿದರೆ ಮಾತ್ರ ಚಿತ್ರರಂಗ, ಹೀಗಿರುವಾಗ ನಾನ್ಯಾಕೆ ದರ್ಶನ್‌ಗೆ ಟಾಂಟ್ ಕೊಡಲಿ, ನಾವೇನು ಛತ್ರಪತಿಗಳಾ? ಚಕ್ರವರ್ತಿಗಳಾ?; ಸುದೀಪ್
ಬಾಸಿಸಂ ಕೇಕ್ ವಿವಾದದ ಬಗ್ಗೆ ಮ್ಯಾಕ್ಸ್ ಸಿನಿಮಾ ಸಂತೋಷಕೂಟದಲ್ಲಿ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ನಾವ್ಯಾರೂ ಇಲ್ಲಿ ಟಾಂಟ್ ಕೊಟ್ಟಿಲ್ಲ. ಅಷ್ಟಕ್ಕೂ ನಾವೇನು ಛತ್ರಪತಿಗಳಾ, ಚಕ್ರವರ್ತಿಗಳಾ? ಯಶ್, ದರ್ಶನ್, ಧ್ರುವ, ಶಿವಣ್ಣ, ಉಪ್ಪಿ ಸರ್.. ಎಲ್ಲರೂ ಸೇರಿದರೆ ಮಾತ್ರ ಚಿತ್ರರಂಗ ಎಂದಿದ್ದಾರೆ.
Bossism Cake Controversy: ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾಕ್ಕೆ ಮ್ಯಾಕ್ಸಿಮಮ್ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ನೋಡಿದವರು, ಕಿಚ್ಚನ ಆಕ್ಷನ್‌ಗೆ ಮನಸೋತಿದ್ದಾರೆ. ಪ್ರೇಕ್ಷಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಂದಾಯವಾಗುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿಯೂ ಈ ಸಿನಿಮಾ ಒಳ್ಳೆಯ ಕಮಾಯಿ ಮುಂದುವರಿಸಿದೆ. ಲೇಟ್ ಆಗಿ ಬಂದರೂ ಕಿಚ್ಚ ಲೇಟೆಸ್ಟ್ ಆಗಿಯೇ ಮ್ಯಾಕ್ಸ್ ಮೂಲಕ ಅಬ್ಬರಿಸುತ್ತಿದ್ದಾರೆ. ಚಿತ್ರದ ಯಶಸ್ಸಿನ ಬಗ್ಗೆ ಆಯೋಜಿಸಿದ್ದ ಸಂತೋಷ ಕೂಟದಲ್ಲಿ ಮನಸ್ಸು ಬಿಚ್ಚಿ ಸುದೀಪ್ ಮಾತನಾಡಿದ್ದಾರೆ. ಇದೇ ವೇಳೆ ಬಾಸಿಸಂ ಕೇಕ್ ವಿವಾದದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ಮ್ಯಾಕ್ಸ್ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಬೆನ್ನಲ್ಲೇ ನಟ ಪ್ರದೀಪ್ ಬೋಗಾಡಿ ಕಿಚ್ಚ ಸುದೀಪ್ ಅವರ ಮನೆಗೆ ಕೇಕ್ ತಂದಿದ್ದರು. ಅದರ ಮೇಲೆ "ಬಾಸಿಸಂ ಕಾಲ ಮುಗೀತು, ಮ್ಯಾಕ್ಸ್ ಮ್ಯಾಕ್ಸಿಮಮ್ ಕಾಲ ಶುರುವಾಯ್ತು" ಎಂದು ಬರೆಯಲಾಗಿತ್ತು. ಈ ಕೇಕ್ ದರ್ಶನ್ ಅಭಿಮಾನಿಗಳ ಕೆಂಗೆಣ್ಣಿಗೆ ಗುರಿಯಾಗಿತ್ತು. ಈಗ ಇದೇ ಕೇಕ್ ವಿವಾದದ ಬಗ್ಗೆ ಮಾತನಾಡಿರುವ ಸುದೀಪ್, “ನಾವು ಯಾಕೆ ಟಾಂಟ್ ಕೊಡಬೇಕು? ಅದರಿಂದ ಏನು ಸಿಗುತ್ತೆ ನಮಗೆ ? ನಾವೇನು ಛತ್ರಪತಿಗಳ? ಚಕ್ರವರ್ತಿಗಳಾ? ಚಿತ್ರರಂಗದಲ್ಲಿ ಯಶ್, ದರ್ಶನ್, ಧ್ರುವ, ಉಪ್ಪಿ ಸರ್, ಶಿವಣ್ಣ ಪ್ರತಿಯೊಬ್ಬರೂ ಸೇರಿದರೇ ಕನ್ನಡ ಚಿತ್ರರಂಗ” ಎಂದೂ ಹೇಳಿದ್ದಾರೆ.
ಟಾಂಟ್ ಕೊಡಲು ನಾವೇನು ಛತ್ರಪತಿಗಳಾ?
ಬಾಸಿಸಂ ಕೇಕ್ ಮೂಲಕ ದರ್ಶನ್ ಮತ್ತವರ ಫ್ಯಾನ್ಸ್‌ಗೆ ಟಾಂಟ್ ಕೊಟ್ರಾ ಎಂಬ ಪ್ರಶ್ನೆ ಕಿಚ್ಚ ಸುದೀಪ್‌ಗೆ ಎದುರಾಗಿದೆ. ಇದಕ್ಕೆ ಉತ್ತರ ನೀಡಿದ ಅವರು, “ಅಷ್ಟಕ್ಕೂ ನಾನ್ಯಾಕೆ ಟಾಂಟ್ ಕೊಡಲಿ. ನಾವೇನು ಛತ್ರಪತಿಗಳಾ? ಚಕ್ರವರ್ತಿಗಳಾ? ವಯಸ್ಸಾಗಿ ನಾವು ಕೂಡ ಒಂದು ದಿನ ಹೋಗವವರೇ. ಬದುಕಿರುವಾಗ, ಒಂದು ಸಿನಿಮಾ ಕೈ ಹಿಡಿದಿರುವಾಗ, ಬೆಳೆಯೋಣ, ಇನ್ನೊಂದಿಷ್ಟು ಒಳ್ಳೆಯ ಸಿನಿಮಾ ಮಾಡೋಣ. ಎಲ್ಲರೂ ನನ್ನ ಸಹೋದರ ಥರ ಇದ್ದವರು ಸರ್” ಎಂದಿದ್ದಾರೆ ಸುದೀಪ್.
ಚಿತ್ರರಂಗ ನೋವಿನಲ್ಲಿದೆ, ವಿವಾದ ಬೇಡ!
ಮುಂದುವರಿದು ಮಾತನಾಡಿದ ಸುದೀಪ್, “ಈಗ ಅಭಿಮಾನಿಗಳು ಯಶ್‌ಗೆ ಯಶ್ ಬಾಸ್ ಅನ್ನಲ್ವಾ? ಧ್ರುವಾಗೆ ಧ್ರುವ ಬಾಸ್ ಅನ್ನಲ್ವಾ?, ಶಿವಣ್ಣಗೆ ಶಿವಣ್ಣ ಬಾಸ್ ಅಂತ ಕರೆಯಲ್ವಾ? ಉಪ್ಪಿ ಬಾಸ್ ಅನ್ನಲ್ವಾ? ನನಗೂ ದರ್ಶನ್‌ಗೂ ಏನಿಲ್ಲ. ಬಹಳ ಕಷ್ಟಪಟ್ಟು ಅವರೂ ಮೇಲೆ ಬಂದಿದ್ದಾರೆ. ಪ್ರತಿ ಕಲಾವಿದರೂ ಬಂದಿದ್ದಾರೆ. ಚಿತ್ರರಂಗ ನೋವಿನಲ್ಲಿದೆ. ಅದು ಬೆಳೆಯಬೇಕು ಅಂದರೆ, ವಿವಾದ ಬೇಡ.” ಎಂಬುದು ಸುದೀಪ್ ಮಾತು.
ಎಲ್ಲರೂ ಸೇರಿದರೆ ಮಾತ್ರ ಚಿತ್ರರಂಗ..
“ಚಿತ್ರೋದ್ಯಮದಲ್ಲಿ ಯಶ್, ದರ್ಶನ್, ಧ್ರುವ, ಉಪ್ಪಿ ಸರ್, ಶಿವಣ್ಣ ಪ್ರತಿಯೊಬ್ಬರೂ ಸೇರಿದರೇ ಕನ್ನಡ ಚಿತ್ರರಂಗ. ಸಂದರ್ಶನದಲ್ಲಿ ಇದೇ ದರ್ಶನ್ ಅವರ ಫ್ಯಾನ್ಸ್ ಬಗ್ಗೆ ಬಂದಾಗ ನಾನೇ ಹೇಳಿದ್ದೆ, ಫ್ಯಾನ್ಸ್ ಬಗ್ಗೆ ಬೈಯ್ಯುವುದಕ್ಕೆ ಹೋಗಬೇಡಿ. ಅವರಿಗೆ ಗೊತ್ತಾಗುತ್ತಿಲ್ಲ ಏನು ಮಾಡಬೇಕು ಅಂತ. ಅವರು ನೋವಿನಲ್ಲಿ ಇದ್ದಾರೆ ಅಂದಿದ್ದೆ. ನಾವೆಲ್ಲ ಬಹಳ ಚಿಕ್ಕವರು. ಇಂದು ಚಿತ್ರರಂಗ ಕೊರಗುತ್ತಿದೆ. ನಾವೆಲ್ಲ ಸಿನಿಮಾವನ್ನು ಉಳಿಸೋಕೆ ಹೋಗೋಣವೋ ಅಥವಾ ಈ ಥರದ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕೂರೋಣವಾ ಹೇಳಿ. ನಮ್ಮ ಹಿರಿಯರು ಚಿತ್ರರಂಗವನ್ನು ತಮ್ಮ ಭುಜದ ಮೇಲೆ ಹೊತ್ತು ಬೆಳೆಸಿ. ಇಂದು ನಮ್ಮ ಕೈಗಿಟ್ಟಿದ್ದಾರೆ. ನಾನು ಇನ್ನಷ್ಟು ಬೆಳೆಸಿ ಮುಂದಿನ ತಲೆಮಾರಿಗೆ ಕೊಟ್ಟು ಹೋಗಬೇಕು” ಎಂಬುದು ಸುದೀಪ್ ಮಾತು.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope