Max OTT: ಒಟಿಟಿಯಲ್ಲಿ ಪ್ರಸಾರ ಆರಂಭಿಸಿದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ವೀಕ್ಷಣೆ ಎಲ್ಲಿ?
ಶನಿವಾರವಷ್ಟೇ ಜೀ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿದ್ದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ಇದೀಗ ಅದೇ ದಿನದಿಂದ ಒಟಿಟಿಯಲ್ಲೂ ಸ್ಟ್ರೀಮಿಂಗ್ ಆರಂಭಿಸಿದೆ.

Max OTT: ಕಳೆದ ವರ್ಷದ ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ, ಮೆಚ್ಚುಗೆ ಪಡೆದಿತ್ತು ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಮ್ಯಾಕ್ಸ್ ಸಿನಿಮಾ. ಕಾರ್ತಿಕೇಯನ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ, ಕನ್ನಡ ಮಾತ್ರವಲ್ಲದೆ, ತೆಲುಗು ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ, ಕಿಚ್ಚನ ಅಭಿಮಾನಿಗಳಿಗೂ ಮ್ಯಾಕ್ಸಿಮಮ್ ಇಷ್ಟವಾಗಿತ್ತು. ಹೀಗಿರುವಾಗಲೇ ಇದೇ ಸಿನಿಮಾ ಇದೀಗ ಕಿರುತೆರೆಯ ಬಳಿಕ ಒಟಿಟಿಗೂ ಆಗಮಿಸಿದೆ.
ಒಟಿಟಿ ಬಂದ ಮ್ಯಾಕ್ಸ್
ತಮಿಳಿನ ನಿರ್ಮಾಪಕ ಕಲೈಪುಲಿ ಎಸ್ ದಾನು ನಿರ್ಮಾಣದಲ್ಲಿ ಮೂಡಿಬಂದ ಮ್ಯಾಕ್ಸ್ ಸಿನಿಮಾ, ಕಲೆಕ್ಷನ್ ವಿಚಾರದಲ್ಲಿಯೂ ಡಿಸೆಂಟ್ ಗಳಿಕೆ ಕಂಡಿತ್ತು. ಹತ್ರತ್ರ 50 ಕೋಟಿ ಕಲೆಕ್ಷನ್ ಮಾಡಿತ್ತು ಈ ಸಿನಿಮಾ. ಹೀಗಿರುವಾಗಲೇ ಒಟಿಟಿಗೂ ಮೊದಲೇ ಜೀ ಕನ್ನಡ ವಾಹಿನಿಯಲ್ಲಿ ಫೆ. 15ರ ಶನಿವಾರ ರಾತ್ರಿ 7:30ಕ್ಕೆ ಚೊಚ್ಚಲ ಪ್ರದರ್ಶನ ಕಂಡಿತ್ತು ಈ ಸಿನಿಮಾ. ಇದೀಗ ಇದೇ ಚಿತ್ರ ಅದೇ ದಿನದ ರಾತ್ರಿಯಿಂದ ಜೀ5 ಒಟಿಟಿಯಲ್ಲಿಯೇ ವೀಕ್ಷಣೆಗೆ ಲಭ್ಯವಿದೆ.
ಕಿಚ್ಚ ಸುದೀಪ್ ಜತೆಗೆ ಟಾಲಿವುಡ್ ನಟ ಸುನಿಲ್, ವರಲಕ್ಷ್ಮಿ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮೊದಲು ಫೆ. 22ರಿಂದ ಜೀ5 ಒಟಿಟಿಯಲ್ಲಿ ಮ್ಯಾಕ್ಸ್ ಸಿನಿಮಾ ಪ್ರಸಾರವಾಗಲಿದೆ ಎಂದೇ ಹೇಳಲಾಗಿತ್ತು. ಆದರೆ, ಇದೀಗ ಒಂದು ವಾರ ಮೊದಲೇ ಜೀ5ನಲ್ಲಿ ಈ ಚಿತ್ರ ಸ್ಟ್ರೀಮಿಂಗ್ ಆರಂಭಿಸಿದೆ.
ಏನಿದು ಕಥೆ?
ಈ ಚಿತ್ರದ ಕಥೆಯು ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ (ಸುದೀಪ್) ಸುತ್ತ ಸುತ್ತುತ್ತದೆ. ಅರ್ಜುನ್ ಒಬ್ಬ ಖಡಕ್ ಪೊಲೀಸ್ ಅಧಿಕಾರಿ. ನ್ಯಾಯದ ಪರ ಹೋರಾಡಲು ಹೋಗಿ ಅತೀಹೆಚ್ಚು ಬಾರಿ ಅಮಾನತ್ತುಗೊಂಡಿರುತ್ತಾನೆ. ಈತ ನಟೋರಿಯಸ್ ಗ್ಯಾಂಗ್‌ಗಳಿಗೂ ಮ್ಯಾಕ್ಸ್ ಅಂತಾನೆ ಚಿರಪರಿಚಿತ. ಮ್ಯಾಕ್ಸ್ ಎಂಬ ಹೆಸರು ಕೇಳಿದ್ರೆ ಪುಡಿ ರೌಡಿಗಳಿಂದ ಹಿಡಿದು ಗ್ಯಾಂಗ್‌ಸ್ಟರ್‌ಗಳೂ ಕೂಡ ಭಯ ಬೀಳುತ್ತಾರೆ.
ಹೀಗಿರುವಾಗ ಅಮಾನತ್ತಾದ ಮ್ಯಾಕ್ಸ್ ರಾತ್ರೋರಾತ್ರಿ ಹೊಸ ಸ್ಟೇಷಸ್‌ಗೆ ಟ್ರಾನ್ಸ್‌ಫರ್ ಆಗುತ್ತಾನೆ. ಆ ರಾತ್ರಿ ಒಂದು ನಟೋರಿಯಸ್ ಗ್ಯಾಂಗ್‌ನಿಂದ ಅಲ್ಲಿ ದೊಡ್ಡ ಅವಘಡ ನಡೆಯುತ್ತದೆ. ಆದ ತಪ್ಪಿಗೆ ಕಾರಣರಾದ ಮಿನಿಸ್ಟರ್ ಮಕ್ಕಳಿಬ್ಬರನ್ನು ಅದೇ ರಾತ್ರಿ ಮ್ಯಾಕ್ಸ್ ಅರೆಸ್ಟ್ ಮಾಡುತ್ತಾನೆ. ಆದರೆ ಸ್ಟೇಷನ್ ಒಳಗೆ ಅವರಿಬ್ಬರೂ ಸಾವಿಗೀಡಾಗುತ್ತಾರೆ. ಅಲ್ಲಿಂದ ಮುಂದೆ ಮ್ಯಾಕ್ಸ್ ಈ ಕೇಸ್ ಅನ್ನು ಹೇಗೆ ತೆಗೆದುಕೊಂಡು ಹೋಗ್ತಾನೆ ಅನ್ನೋದೇ ಈ ಚಿತ್ರದ ಹೈಲೈಟ್.
