Max OTT: ಈ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾ; ನಿರೀಕ್ಷಿತ ದಿನಾಂಕವೂ ಹೀಗಿದೆ
Max Movie OTT Update: ಡಿ 25ರಂದು ತೆರೆಗೆ ಬಂದ ಮ್ಯಾಕ್ಸ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಕಿಚ್ಚ ಸುದೀಪ್ ನಟಿಸಿರುವ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಯಾವ ಒಟಿಟಿಯಲ್ಲಿ, ಯಾವಾಗಿನಿಂದ ಬಿಡುಗಡೆ ಆಗಲಿದೆ? ಇಲ್ಲಿದೆ ನಿರೀಕ್ಷಿತ ದಿನಾಂಕ.
Max Movie OTT Update: ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಡಿಸೆಂಬರ್ 25ರ ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಪಾಸಿಟಿವ್ ಪ್ರತಿಕ್ರಿಯೆ ಪಡೆದು, ಪ್ರೇಕ್ಷಕರನ್ನು ಸೆಳೆಯುತ್ತಿದೆ. ಕಲೆಕ್ಷನ್ ವಿಚಾರದಲ್ಲಿಯೂ ಈ ಸಿನಿಮಾ ಮುಂದಡಿ ಇರಿಸಿದೆ. ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಿದೆ. ಇದೀಗ 10 ದಿನಗಳ ಬಳಿಕ ಈ ಸಿನಿಮಾದ ಒಟಿಟಿ ಪ್ರಸಾರ ಬಗ್ಗೆಯೂ ಅಪ್‌ಡೇಟ್ ಸಿಕ್ಕಿದೆ.
ಯಾವ ಒಟಿಟಿಯಲ್ಲಿ ಮ್ಯಾಕ್ಸ್?
ಜೀ5 ಒಟಿಟಿ ಫ್ಲಾಟ್‌ಫಾರ್ಮ್ ಮ್ಯಾಕ್ಸ್ ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಪಡೆದುಕೊಂಡಿದೆ. ಸ್ಯಾಟಲೈಟ್ ಹಕ್ಕುಗಳನ್ನೂ ಸಹ ಜೀ ಕನ್ನಡ ಪಡೆದುಕೊಂಡಿದೆ. ಸದ್ಯ ಚಿತ್ರಮಂದಿರಗಳಲ್ಲಿ 12 ದಿನಗಳನ್ನು ಪೂರೈಸಿರುವ ಈ ಸಿನಿಮಾ, ಥಿಯೇಟ್ರಿಕಲ್ ಓಟ ಮುಗಿದ ಬಳಿಕ ಒಟಿಟಿಯತ್ತ ಮುಖಮಾಡಲಿದೆ.
ಯಾವಾಗ ಬರಬಹುದು?
ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಮ್ಯಾಕ್ಸ್ ಸಿನಿಮಾ, ಒಳ್ಳೆಯ ಕಮಾಯಿ ಸಹ ಮುಂದುವರಿಸಿದೆ. ಇನ್ನು ಒಟಿಟಿ ಬಗ್ಗೆ ನೋಡುವುದಾದರೆ, ಜನವರಿ ಕೊನೆಯ ವಾರದಲ್ಲಿ ಜೀ 5ನಲ್ಲಿ ಮ್ಯಾಕ್ಸ್ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ. ಜನವರಿ 31 ರಂದು ಜೀ5 ಮ್ಯಾಕ್ಸ್ ಚಿತ್ರವನ್ನು ಸ್ಟ್ರೀಮಿಂಗ್ ಮಾಡಲು ಸಜ್ಜಾಗುತ್ತಿದೆ ಎಂಬ ವರದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ವಿಷಯದ ಬಗ್ಗೆ ಜೀ5 ಒಟಿಟಿ ಅಧಿಕೃತ ಘೋಷಣೆ ಮಾಡಬೇಕಿದೆ.
ಆಕ್ಷನ್ ಥ್ರಿಲ್ಲರ್ ಸಿನಿಮಾ
ವಿಜಯ್ ಕಾರ್ತಿಕೇಯ್ ನಿರ್ದೇಶನದ ಮ್ಯಾಕ್ಸ್ ಸಿನಿಮಾ, ಆಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ಮ್ಯಾಕ್ಸಿಮಮ್ ಸಾಹಸ ದೃಶ್ಯಗಳೇ ಮ್ಯಾಕ್ಸ್ ಸಿನಿಮಾದಲ್ಲಿವೆ. ಇನ್‌ಸ್ಪೆಕ್ಟರ್ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಪಾತ್ರದಲ್ಲಿ ಸುದೀಪ್ ಆಕ್ಷನ್ ಮೂಲಕವೇ ಮೈ ಜುಂ ಎನಿಸಿದ್ದಾರೆ.
ಕಿಚ್ಚನ ಜೊತೆಗೆ ತಮಿಳಿನ ವರಲಕ್ಷ್ಮಿ ಶರತ್ ಕುಮಾರ್, ಟಾಲಿವುಡ್ ನಟ ಸುನಿಲ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇಳವರಸು, ಉಗ್ರಂ ಮಂಜು, ಸಂಯುಕ್ತಾ ಹೊರನಾಡ್, ಸುಧಾ ಬೆಳವಾಡಿ, ಸುಕೃತಾ ಮತ್ತು ಶರತ್ ಲೋಹಿತಾಶ್ವ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಮ್ಯಾಕ್ಸ್ ಮೂವಿ ಕಲೆಕ್ಷನ್ಸ್
ಕಲೆಕ್ಷನ್ ವಿಚಾರದಲ್ಲಿಯೂ ಮ್ಯಾಕ್ಸ್ ಸಿನಿಮಾ ಸದ್ದು ಮಾಡುತ್ತಿದೆ. ಮೊದಲ ವಾರಾಂತ್ಯ 37.95 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಕಲೆಕ್ಷನ್ ವಿವರ ನೀಡುವ ಸ್ಯಾಕ್ನಿಲ್ ತಾಣ ಮಾಹಿತಿ ನೀಡಿದೆ. ಇದೀಗ ಮೊದಲ ದಿನದಿಂದ ಈಗಿನವರೆಗಿನ ಲೆಕ್ಕಾಚಾರ ನೋಡಿದರೆ, 50 ಪ್ಲಸ್ ಕೋಟಿ ಗಳಿಕೆ ಕಂಡಿದೆ ಎಂದು ವಿತರಕರ ವಲಯ ಅಂದಾಜಿಸಿದೆ. ಮೂರನೇ ವಾರದಷ್ಟೊತ್ತಿಗೆ ಮ್ಯಾಕ್ಸ್ ಸಿನಿಮಾ ಒಳ್ಳೆಯ ಕಲೆಕ್ಷನ್ ಗಡಿ ತಲುಪುವ ಸಾಧ್ಯತೆಯೂ ಇದೆ.
ಮ್ಯಾಕ್ಸ್ ಚಿತ್ರವನ್ನು ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್ ದಾನು ಮತ್ತು ಸುದೀಪ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಶೇಖರ್ ಚಂದ್ರ ನಿರ್ವಹಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ನೀಡಿದ ಹಿನ್ನೆಲೆ ಸಂಗೀತವೂ ಮೆಚ್ಚುಗೆಗೆ ಪಾತ್ರವಾಗಿದೆ.