Max Television Premiere: ಜೀ ಕನ್ನಡದಲ್ಲಿ ಈ ಶನಿವಾರ ಮ್ಯಾಕ್ಸಿಮಮ್ ಮನರಂಜನೆ ನೀಡಲು ಬರ್ತಿದ್ದಾನೆ ಮ್ಯಾಕ್ಸ್
ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ಇದೀಗ ಒಟಿಟಿಗೂ ಮೊದಲೇ ಕಿರುತೆರೆಯಲ್ಲಿ ಪ್ರಸಾರ ಕಾಣಲಿದೆ. ಫೆ. 15ರ ಶನಿವಾರ ಸಂಜೆ ಜೀ ಕನ್ನಡದಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.

Max Television Premiere: ಕನ್ನಡ ಕಿರುತೆರೆಯ ಪ್ರಮುಖ ಮನರಂಜನಾ ವಾಹಿನಿ, ಜೀ ಕನ್ನಡ ಬರೀ ಧಾರಾವಾಹಿಗಳಿಂದ ಮಾತ್ರವಲ್ಲದೇ, ರಿಯಾಲಿಟಿ ಶೋಗಳು, ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳಿಂದಲೂ ಪ್ರೇಕ್ಷಕರ ಮನಗೆದ್ದು ನಂ.1 ಪಟ್ಟದಲ್ಲಿದೆ. ಅಷ್ಟೇ ಅಲ್ಲದೇ ಈಗ ಜೀಕನ್ನಡ ವಾಹಿನಿಯು ಪ್ರೇಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ನಟ ಕಿಚ್ಚ ಸುದೀಪ್ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ಮ್ಯಾಕ್ಸ್ ಇದೇ ಫೆಬ್ರವರಿ 15 ರಂದು 7:30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕಿಚ್ಚ ಸುದೀಪ್ ಮ್ಯಾಕ್ಸ್ ಆಗಿ ನಟಿಸಿರುವ ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗಾಗಿ ಮಾಡಿರುವ ಈ ಸಿನಿಮಾವನ್ನು ಸ್ವತಃ ಕಿಚ್ಚ ಸುದೀಪ್ ಮತ್ತು ಕಲೈಪುಲಿ ಧಾನು ನಿರ್ಮಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಶೇಖರ್ ಚಂದ್ರ ಅವರ ಛಾಯಾಗ್ರಹಣ ಈ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಸಕ್ಕತ್ ಆಕ್ಷನ್, ಖಡಕ್ ಡೈಲಾಗ್, ಮತ್ತು ಹಾಡುಗಳ ಮೂಲಕ ಪ್ರೇಕ್ಷಕರನ್ನು ಅತ್ತಿತ್ತ ಕದಲದಂತೆ ಸೀಟಿನ ತುದಿಗೆ ತಂದು ಕೂರಿಸಿದೆ ಈ ಸಿನಿಮಾ.
ಈ ಚಿತ್ರದ ಕಥೆಯು ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ (ಸುದೀಪ್) ಸುತ್ತ ಸುತ್ತುತ್ತದೆ. ಅರ್ಜುನ್ ಒಬ್ಬ ಖಡಕ್ ಪೊಲೀಸ್ ಅಧಿಕಾರಿ. ನ್ಯಾಯದ ಪರ ಹೋರಾಡಲು ಹೋಗಿ ಅತೀಹೆಚ್ಚು ಬಾರಿ ಅಮಾನತ್ತುಗೊಂಡಿರುತ್ತಾನೆ. ಈತ ನಟೋರಿಯಸ್ ಗ್ಯಾಂಗ್‌ಗಳಿಗೂ ಮ್ಯಾಕ್ಸ್ ಅಂತಾನೆ ಚಿರಪರಿಚಿತ. ಮ್ಯಾಕ್ಸ್ ಎಂಬ ಹೆಸರು ಕೇಳಿದ್ರೆ ಪುಡಿ ರೌಡಿಗಳಿಂದ ಹಿಡಿದು ಗ್ಯಾಂಗ್‌ಸ್ಟರ್‌ಗಳೂ ಕೂಡ ಭಯ ಬೀಳುತ್ತಾರೆ.
ಹೀಗಿರುವಾಗ ಅಮಾನತ್ತಾದ ಮ್ಯಾಕ್ಸ್ ರಾತ್ರೋರಾತ್ರಿ ಹೊಸ ಸ್ಟೇಷಸ್‌ಗೆ ಟ್ರಾನ್ಸ್‌ಫರ್ ಆಗುತ್ತಾನೆ. ಆ ರಾತ್ರಿ ಒಂದು ನಟೋರಿಯಸ್ ಗ್ಯಾಂಗ್‌ನಿಂದ ಅಲ್ಲಿ ದೊಡ್ಡ ಅವಘಡ ನಡೆಯುತ್ತದೆ. ಆದ ತಪ್ಪಿಗೆ ಕಾರಣರಾದ ಮಿನಿಸ್ಟರ್ ಮಕ್ಕಳಿಬ್ಬರನ್ನು ಅದೇ ರಾತ್ರಿ ಮ್ಯಾಕ್ಸ್ ಅರೆಸ್ಟ್ ಮಾಡುತ್ತಾನೆ. ಆದರೆ ಸ್ಟೇಷನ್ ಒಳಗೆ ಅವರಿಬ್ಬರೂ ಸಾವಿಗೀಡಾಗುತ್ತಾರೆ. ಅಲ್ಲಿಂದ ಮುಂದೆ ಮ್ಯಾಕ್ಸ್ ಈ ಕೇಸ್ ಅನ್ನು ಹೇಗೆ ತೆಗೆದುಕೊಂಡು ಹೋಗ್ತಾನೆ ಅನ್ನೋದೇ ಈ ಚಿತ್ರದ ಹೈಲೈಟ್.
ಕಿರುತೆರೆಯಲ್ಲಿ ಯಾವಾಗ ಪ್ರಸಾರ?
ಪಾತ್ರವರ್ಗದ ವಿಚಾರವಾಗಿ ಹೇಳುವುದಾದರೆ, ಇಡೀ ಚಿತ್ರವನ್ನು ಕಿಚ್ಚ ಸುದೀಪ್ ಅವರು ಆವರಿಸಿಕೊಂಡಿದ್ದು ಟಾಲಿವುಡ್ ನಟ ಸುನಿಲ್, ವರಲಕ್ಷ್ಮಿ ಶರತ್ ಕುಮಾರ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಮುಂತಾದ ಕಲಾವಿದರು ಸಾಥ್ ನೀಡಿದ್ದಾರೆ. ಜೀ ಕನ್ನಡದಲ್ಲಿ ಈಗಾಗಲೇ ಸಾಲು ಸಾಲು ಪ್ರೋಮೋಗಳ ಮೂಲಕ ಕಿರುತೆರೆ ವೀಕ್ಷಕರ ಕುತೂಹಲ ಕೆರಳಿಸಿರುವ ಮ್ಯಾಕ್ಸ್ ಸಿನಿಮಾ, ಇದೇ ಫೆಬ್ರವರಿ 15 ರಂದು 7:30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.
