Meghana Raj Sarja: ಜನಸೇವೆ ಮಾಡಲು ರಾಜಕೀಯ ದೊಡ್ಡ ವೇದಿಕೆಯಾಗಿದೆ.. ಪಾಲಿಟಿಕ್ಸ್ ಎಂಟ್ರಿ ಬಗ್ಗೆ ಮೇಘನಾ ಪ್ರತಿಕ್ರಿಯೆ
ಮೇಘನಾ ರಾಜ್ ಸರ್ಜಾ ಕೂಡಾ ರಾಜಕೀಯ ಸೇರಲಿದ್ದು ಅವರು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಈ ವಿಚಾರದ ಬಗ್ಗೆ ಮೇಘನಾ ರಾಜ್ ಸರ್ಜಾ ಪಬ್ಲಿಕ್ ಮ್ಯೂಸಿಕ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ನಟಿ ಮೇಘನಾ ರಾಜ್ ಸರ್ಜಾ 'ತತ್ಸಮ ತದ್ಭವ' ಸಿನಿಮಾ ಅನೌನ್ಸ್ ಮಾಡಿದ್ದರು. ಚಿತ್ರೀಕರಣದಲ್ಲಿ ಭಾಗಿಯಾಗಿರುವ ಮೇಘನಾ ಸಿನಿಮಾಗಳ ಜೊತೆಗೆ ಹೊಸದಾಗಿ ಯೂಟ್ಯೂಬ್ ಕೂಡಾ ಆರಂಭಿಸಿದ್ದಾರೆ. ಇಷ್ಟು ಬ್ಯುಸಿ ಕೆಲಸಗಳ ನಡುವೆ ಮಗ ರಾಯನ್‌ಗಾಗಿ ಇಂತಿಷ್ಟು ಸಮಯ ಮೀಸಲಿಟ್ಟಿದ್ಧಾರೆ. ಈ ನಡುವೆ ಮೇಘನಾ ತಮ್ಮ ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಮೇಘನಾ ರಾಜ್ ಸರ್ಜಾ ರಾಜಕೀಯಕ್ಕೆ ಸೇರಲಿದ್ದಾರೆ ಎಂಬ ಮಾತುಗಳು ಕೆಲವು ದಿನಗಳಿಂದ ಕೇಳಿ ಬರುತ್ತಿದೆ. ಈ ಸಮಯದಲ್ಲಿ ಅನೇಕರು ರಾಜಕೀಯ ಪಕ್ಷ ಸೇರಿದ್ದಾರೆ. ಅದರಲ್ಲಿ ರಾಜಕೀಯ ಪಕ್ಷಗಳು ಸಿನಿಮಾ ತಾರೆಯರನ್ನು ತಮ್ಮ ಪಕ್ಷಗಳ ಪರ ಪ್ರಚಾರ ಮಾಡಲು ಮನವಿ ಮಾಡುತ್ತಿದ್ದಾರೆ. ಸ್ಟಾರ್ ನಟ ಸುದೀಪ್ ಕೆಲವು ದಿನಗಳ ಹಿಂದಷ್ಟೇ ತಾವು ಬಸವರಾಜ ಬೊಮ್ಮಾಯಿ ಅವರನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದರು. ಮೇಘನಾ ರಾಜ್ ಸರ್ಜಾ ಕೂಡಾ ರಾಜಕೀಯ ಸೇರಲಿದ್ದು ಅವರು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎನ್ನಲಾಗಿತ್ತು. ಪಬ್ಲಿಕ್ ಮ್ಯೂಸಿಕ್‌ಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜಕೀಯ ಎಂಟ್ರಿ ಸುದ್ದಿ ಬಗ್ಗೆ ಮಾತನಾಡಿದ್ದಾರೆ.
''ನಿಜ ಹೇಳಬೇಕೆಂದರೆ ನಾನು ರಾಜಕೀಯದ ಬಗ್ಗೆ ಹೆಚ್ಚು ಯೋಚನೆ ಮಾಡಿಲ್ಲ. ಜನಸೇವೆ ಮಾಡಲು ರಾಜಕೀಯ ಒಂದು ದೊಡ್ಡ ವೇದಿಕೆ ಆಗಿದೆ. ರಾಜಕೀಯಕ್ಕೆ ಬಂದರೆ ನಮಗೆ ಜನಸೇವೆ ಮಾಡಲು ವಿಫುಲ ಅವಕಾಶ ಇದೆ. ಆದರೆ ಅದರ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ'' ಎಂದು ಹೇಳುವುದರ ಮೂಲಕ ಮೇಘನಾ ತಮ್ಮ ರಾಜಕೀಯ ಎಂಟ್ರಿ ಸುದ್ದಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಒಟಿಟಿ ವೇದಿಕೆ, ಮಗ ರಾಯನ್ ರಾಜ್ ಸರ್ಜಾ, ಸೋಷಿಯಲ್ ಮೀಡಿಯಾ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮೇಘನಾ ಮಾತನಾಡಿದ್ದಾರೆ.
ಕೆಲವು ದಿನಗಳ ಹಿಂದೆ ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ದು:ಖದ ದಿನಗಳನ್ನು ನೆನೆದಿದ್ದ ಮೇಘನಾ ರಾಜ್ ಸರ್ಜಾ ಆ ಕ್ಷಣ ತಾವು ಕೈಗೊಂಡಿದ್ದ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದರು. ''ಜೀವನದಲ್ಲಿ ಏನೂ ಬೇಡ ಎಂದು ಸುಮ್ಮನಿದ್ದ ನನಗೆ, ದೊಡ್ಡ ಸಪೋರ್ಟ್ ಸಿಸ್ಟಮ್ ರೀತಿ ಬಂದಿದ್ದು, ಪನ್ನಗಾಭರಣ, ನಿನಗೋಸ್ಕರ ನೀನು ಏನು ಮಾಡ್ಕೋತಿಯಾ ಎಂದಾಗ ನನ್ನ ಬಳಿ ಉತ್ತರ ಇರಲಿಲ್ಲ. ಪನ್ನಗಾಭರಣ ಪ್ರೊಡಕ್ಷನ್ ಹೌಸ್ ತೆರೆಯುತ್ತಿರುವುದು ಮೊದಲೇ ಗೊತ್ತಿತ್ತು. ಬಳಿಕ ವಿಶಾಲ್ ಎಂಬುವವರನ್ನು ಮನೆಗೆ ಕಳಿಸಿ ಕಥೆ ಹೇಳಿಸಿದ. ಕಥೆ ಇಷ್ಟವಾಯ್ತು. ಕೊನೆಗೆ ಆ ಸಿನಿಮಾ ನೀನೇ ಮಾಡಬೇಕು ಎಂದ. ನೀನ್ಯಾರು ಎಂಬುದನ್ನು ತಿಳಿಯುವುದಕ್ಕಾದರೂ ಸಿನಿಮಾ ಮಾಡಬೇಕು ಎಂದ. ಆವತ್ತೇ ಸಿನಿಮಾ ಮಾಡಲೇಬೇಕು ಎಂದು ನಿರ್ಧಾರ ಮಾಡಿದೆ" ಎಂದು ಹೇಳಿದ್ದರು.
"ಎಷ್ಟೇ ಅಡೆತಡೆ ಬರಲಿ, ಫುಲ್‌ಸ್ಟಾಪ್ ಹಾಕಲು ಜೀವನ ಟ್ರೈ ಮಾಡಿದರೆ, ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. ಪ್ರತಿ ಸಲ ಫುಲ್‌ಸ್ಟಾಪ್ ಹಾಕಿದಾಗ, ನಾನು ಅಲ್ಲಿಂದ ಹೊಸ ವಾಕ್ಯ ಬರೆಯುತ್ತೇನೆ. 'ತತ್ಸಮ ತದ್ಬವ' ಸಿನಿಮಾ ಇದೀಗ ಶುರುವಾಗಿದೆ. 2020 ರಲ್ಲಿನ ನನ್ನ ಸಿನಿಮಾ ಕೆರಿಯರ್ ತತ್ಸಮವಾದರೆ ಈಗಿನದ್ದು ತದ್ಬವ" ಎಂದು ಮೇಘನಾ ಹೊಸ ಜರ್ನಿ ಬಗ್ಗೆ ಮಾತನಾಡಿದ್ದರು.